ಕೃಷ್ಣಾಷ್ಟಮಿಯ ಖುಷಿಯನ್ನು ಕಸಿದುಕೊಂಡ ಕೋವಿಡ್-ಪೂರ್ಣಿಮಾ ಜನಾರ್ದನ್

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿಭಿನ್ನ..  ಹರಡುತ್ತಿರುವ ಕೊರೋನಾ ವೈರಸ್ ಕಾರಣ..

ರಜತಪೀಠಪುರ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂದರೆ ದೇವರ ದರುಶನ, ಪೂಜೆ ಪುನಸ್ಕಾರ, ಉಪವಾಸ, ಅರ್ಘ್ಯ ಪ್ರದಾನ, ವಿಧ ವಿಧ ಉಂಡೆ ಚಕ್ಕುಲಿಗಳ ನೈವೇದ್ಯ ಹೀಗೆ ಧಾರ್ಮಿಕ ವಿಧಿ ವಿಧಾನಗಳು ಒಂದೆಡೆ. ಮತ್ತೆ ಮನೆ ಮನೆಗಳಲ್ಲಿ ವಿಧ ವಿಧ ಉಂಡೆ ಚಕ್ಕುಲಿಗಳ ಭರಾಟೆ ಮತ್ತೊಂದೆಡೆ. ಮಕ್ಕಳಿಗೆ ರಸ್ತೆಯಲ್ಲಿ ‌ತಿರುಗುವ ಹುಲಿ ವೇಷ, ಸಿಂಹ ವೇಷ, ಡ್ಯಾನ್ಸ್‌ವೇಷಗಳಲ್ಲೇ ಆಸಕ್ತಿ.

ಅದರಲ್ಲೂ ಇತ್ತೀಚಿನ ಕೆಲ ವರುಷಗಳಿಂದ ಹೊಸ ಟ್ರೆಂಡ್ ಆರಂಭ. ಪುಟ್ಟ ಪುಟ್ಟ ಮಕ್ಕಳಿಗೆ ಅವರ ಅಮ್ಮ,ಅಪ್ಪ,ಅಜ್ಜ ಅಜ್ಜಿ ,ಇಲ್ಲವೇ ಆಸಕ್ತಿ ಇದ್ದ‌ ಮನೆ ಮಂದಿ ಚೆಂದದ ಕೃಷ್ಣನ ವೇಷ ಹಾಕಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇದೀಗ ಮಾಮೂಲು. ಅಬ್ಬಾ ಆ ಕೃಷ್ಣ ವೇಷಧಾರಿಗಳ ಚಿತ್ರ ವಿಚಿತ್ರ ತುಂಟಾಟ, ಹಟ, ಖುಷಿ, ಅಚ್ಚರಿ, ಉದಾಸೀನ, ಅಳು, ನಗು, ನಾಟ್ಯ, ಓಟ, ಇವೆಲ್ಲದಕ್ಕೂ ಇದೊಂದು ವೇದಿಕೆ. ಕೃಷ್ಣ ವೇ಼ಷಧಾರಿಗಳನ್ನು ನೋಡುವುದೇ ಒಂದು ಹಬ್ಬ. ಅದರಲ್ಲೂ ಸ್ಪರ್ಧೆ ನಡೆಯುವಾಗ ಮಕ್ಕಳ ಅಮ್ಮಂದಿರ ಹಾವಭಾವಗಳ ಗಮ್ಮತ್ತೇ ಬೇರೆ‌.

ಆದರೀಗ ಕೋವಿಡ್ 19 ಈ ಎಲ್ಲ ಖುಷಿಯನ್ನು ಕಸಿದುಕೊಂಡಿದೆ. ವೇದಿಕೆಗಳಲ್ಲಿ‌ನಡೆಯುವ ಸ್ಪರ್ಧೆಗಳು ಇದೀಗ ಮನೆಯೊಳಗೆ,ಸುಂದರ ಪರಿಸರದಲ್ಲಿ ಇಲ್ಲವೇ ಸ್ಟುಡಿಯೋದೊಳಗೆ ಬಂದಿಯಾಗಿ ಅಲ್ಲಿ ಹರಸಾಹಸ ಪಟ್ಟು ಹತ್ತು ಹಲವು ಫೋಟೋ ಹೊಡೆಸಿ ವಿಶೇಷ ಛಾಯಾಚಿತ್ರ ಗಳಿಗೆ ಮಾತ್ರ ವೇದಿಕೆ ಒದಗಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ಸ್ಪರ್ಧಿಗಳಿಗೆ ಅವರ ಮನೆಯವರಿಗೆ ಒಂದು ರೀತಿಯಲ್ಲಿ ನೋಡಿದರೆ ಸ್ವಲ್ಪ ಒತ್ತಡ ಕಡಿಮೆ. ಏನಿದ್ದರೂ ಫೋಟೋ ಗ್ರಾಫರ್ ನವರ ಕೈಚಳಕ,ಅವರ ತಾಳ್ಮೆ, ಅವರ ಕ್ರಿಯಾಶೀಲತೆ, ಅವರ ಹೊಸತನದ ಕಲ್ಪನೆಗೆ ಇದೀಗ ಒಂದು ಸುವರ್ಣಾವಕಾಶ.ಅದಕ್ಕೆ ಕೃಷ್ಣವೇಷಧಾರಿ ಮಕ್ಕಳು ಮತ್ತು ಅವರ ಅಮ್ಮಂದಿರ ಹುರುಪು ಸಹಕಾರದ ಕೂಡಾಟ ಜೊತೆಯಾಗಿದ್ದಲ್ಲಿ ಎಲ್ಲರ ಮನಸೆಳೆಯುವ ಕೃಷ್ಣನಂತೆ ಕೃಷ್ಣವೇಷಧಾರಿ ಮಕ್ಕಳೂ ಬಲು ಬೇಗ ವಿಖ್ಯಾತರಾಗುತ್ತಾರೆ. ಅದರೊಂದಿಗೆ ಅಂತಹ ಮುಗ್ಧ ವೈಶಿಷ್ಟ್ಯ ಭಾವನೆಗಳನ್ನು ಸೆರೆಹಿಡಿದ ಛಾಯಾಗ್ರಾಹಕರೂ ಕೂಡಾ. ಎಷ್ಟೋ ಸಂಘ ಸಂಸ್ಥೆಗಳು, ಪ್ರಸಿದ್ಧ ಕಲಾ ಸಂಘ ಸಂಘಟನೆಗಳು. ಮಠ ಸಂಸ್ಥಾನಗಳು ಆನ್ ಲೈನ್ ಛಾಯಾಚಿತ್ರ ಸ್ಪರ್ಧೆ, ಆನ್ ಲೈನ್ ವೀಡಿಯೋ ಸ್ಪರ್ಧೆ ಏರ್ಪಡಿಸಿ ಛಾಯಾಚಿತ್ರಗಳಿಗೆ, ಛಾಯಾಚಿತ್ರಗಾರರಿಗೆ, ಕೃಷ್ಣ ವೇಷಧಾರಿಗಳಿಗೆ ಹೊಸ ರೀತಿಯಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ಒಂದು ರೀತಿಯಲ್ಲಿ ಮನೆಯೊಳಗೇ ಕುಳಿತು ವಿಶ್ವದಾದ್ಯಂತ ಇರುವ ಇಂತಹ ಮನ ಸೆಳೆವ ಕೃಷ್ಣನನ್ನು ಮನಸಾರೆ ನೋಡಿ ಖುಷಿ ಪಡುವ ಮನಸ್ಸು ನಮ್ಮದಾಗಲಿ‌. ಈ ಕಷ್ಟಕರ ಪರಿಸ್ಥಿತಿ ಯಲ್ಲಿ ನಮ್ಮಿಷ್ಟದ ಕಾಯಕ ಮಾಡುತ್ತ ಕೋವಿಡ್ ಮಹಾ ಮಾರಿಯನ್ನು ದೂರವಿರಿಸೋಣ, ಮನೆಯೊಳಗೇ ಇರೋಣ ಮುದ್ದು ಕೃಷ್ಣನ ತುಂಟಾಟವನ್ನು ನಮ್ಮ ಮೊಬೈಲ್, ಕಂಪ್ಯೂಟರ್ ಗಳಲ್ಲೇ ಆಸ್ವಾದಿಸೋಣ , ಮನದ ಒತ್ತಡವನ್ನು ಸ್ವಲ್ಪ ಹಗುರಾಗಿಸೋಣ.ಎಲ್ಲರಿಗೂ ಶ್ರೀ ಕೃಷ್ಣ ಒಳಿತನ್ನು ಮಾಡಲಿ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply