ಸಂಗೀತ ಸಾರ್ವಭೌಮ ಎಸ್. ಪಿ.  ಬಾಲಸುಬ್ರಹ್ಮಣ್ಯಂ~3

ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಂಸಲೇಖಾ ಕ್ರಾಂತಿಯನ್ನೇ ಮಾಡಿದರು. ಹಂಸಲೇಖಾ ತಮ್ಮ ಪ್ರತೀ  ಸಿನೆಮಾದಲ್ಲಿ ಕೂಡ ಬಾಲು ಸರ್ ಹಾಡಬೇಕು ಎಂಬ ಹಠಕ್ಕೆ ಬಿದ್ದವರಂತೆ ಅವರನ್ನು ಕರೆದು ಹಾಡಿಸಿದರು. ಬಾಲು ಅವರಿಗಾಗಿ ಹಂಸಲೇಖಾ ಹಲವು ತಿಂಗಳ ಕಾಲ ಕಾಯಲು ಸಿದ್ಧರಾದರು. ಪ್ರೇಮಲೋಕ, ರಣಧೀರ, ಸಿಬಿಐ ಶಂಕರ್, ಚೈತ್ರದ ಪ್ರೇಮಾಂಜಲಿ, ನಾನು ನನ್ನ ಹೆಂಡತಿ, ದಿಗ್ಗಜರು, ಯುದ್ಧ ಕಾಂಡ, ಶ್ರೀ ರಾಮಚಂದ್ರ ಮೊದಲಾದ ಸಿನೆಮಾದ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಹಂಸಲೇಖಾ ಅವರ ಅದ್ಭುತ ಸಂಯೋಜನೆ  ಮತ್ತು ಬಾಲು ಸರ್  ಅವರ ಗೋಲ್ಡನ್ ವಾಯ್ಸ್! ಹಂಸಲೇಖ ಮಾತ್ರವಲ್ಲದೆ ಕನ್ನಡದ ಇತರ ಸಂಗೀತ ನಿರ್ದೇಶಕರಾದ ಸತ್ಯಂ, ಜಿ. ಕೆ. ವೆಂಕಟೇಶ್, ಕೋಟಿ, ವಿಜಯಭಾಸ್ಕರ್, ಉಪೇಂದ್ರ ಕುಮಾರ್, ರಾಜನ್ ನಾಗೇಂದ್ರ, ಅರ್ಜುನ್ ಜನ್ಯ, ಮನೋಮೂರ್ತಿ, ಎಂ. ರಂಗರಾವ್ ಅವರ ಸಂಯೋಜನೆಯ ಅದ್ಭುತ ಹಾಡುಗಳಿಗೆ ಸುವರ್ಣ ಸ್ಪರ್ಶ ನೀಡಿದರು.
       ಎಂಬತ್ತರ ದಶಕದಲ್ಲಿ  ತಮಿಳು ಮತ್ತು ಹಿಂದಿಯಲ್ಲಿ  ಕಣ್ಣು ಬಿಡುತ್ತಿದ್ದ  ಎ.ಆರ್. ರೆಹಮಾನ್ ಎಂಬ ಮ್ಯಾಜಿಕಲ್ ಕಂಪೋಸರ್ ತಮ್ಮ ರೋಜಾ ಸಿನೆಮಾದ ಮೂರು ಹಾಡುಗಳನ್ನು ಬಾಲು ಮೂಲಕ ಹಾಡಿಸಿದರು. ಎಲ್ಲವೂ ಸೂಪರ್ ಹಿಟ್ ಆದವು. “ನನ್ನ ಪ್ರತೀ ಸಿನೆಮಾದಲ್ಲಿ ನೀವು ಒಂದಾದರೂ ಹಾಡು ಹಾಡಬೇಕು” ಎಂದು ರೆಹಮಾನ್ ಬಾಲು ಸರ್ ಅವರಲ್ಲಿ ವಿನಂತಿ ಮಾಡಿದರು, ಮತ್ತು ಬಾಲು ಸರ್ ರೆಹಮಾನ್ ಅವರ ಕೋರಿಕೆಯನ್ನು ನೆರವೇರಿಸಿದರು.
       ಬಾಲು ಸರ್ ಅವರ ಹಿಂದಿ ಜರ್ನಿ ಬಗ್ಗೆ ನಾನು ಒಂದಿಷ್ಟು  ಬರೆಯಬೇಕು. ಕೆ. ಬಾಲಚಂದರ್ ಎಂಬ ಮಹೋನ್ನತ ಸಿನೆಮಾ ನಿರ್ದೇಶಕ ಹಿಂದಿಯಲ್ಲಿ ಮೊದಲ ಬಾರಿಗೆ  ‘ಏಕ್ ದೂಜೆ ಕೇಲೀಯೇ ‘ ಸಿನೆಮಾ ಮಾಡಲು ತೊಡಗಿದಾಗ ಬಾಲು ಸರ್ ಅವರನ್ನು ಕರೆದು ಹಾಡಿಸಬೇಕು ಎಂದು ಆಸೆ ಪಟ್ಟರು. ಆದರೆ ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರು ” ಬೇಡವೇ ಬೇಡ. ಅವರಲ್ಲಿ ತಮಿಳು ಎಸ್ಸೆಂಟ್ ಇದೆ!” ಅಂದರಂತೆ. ಆಗ ಕೆ. ಬಾಲಚಂದರ್ ಹಟ ಹಿಡಿದು “ಪರವಾಗಿಲ್ಲ. ನಮ್ಮ ಹೀರೋ ತಮಿಳು ಮೂಲದವನು. ಆದ್ದರಿಂದ ಬಾಲು ಹಾಡಲಿ ” ಎಂದು ಗಟ್ಟಿಯಾಗಿ ಹೇಳಿದರು. ಹಾಡು ರೆಕಾರ್ಡ್ ಆಯಿತು. ಸಿನೆಮಾ ಸೂಪರ್ ಹಿಟ್ ಆಯಿತು. ಬಾಲು ಸರ್ ಹಿಂದಿಯಲ್ಲಿ ಹಾಡಿದ ಮೊದಲ ಹಾಡಾದ “ತೇರೆ ಮೇರೆ ಬೀಚಮೆ”. ಹಾಡಿಗೆ ಬೆಸ್ಟ್ ಸಿಂಗರ್ ರಾಷ್ಟ್ರ ಪ್ರಶಸ್ತಿ ದೊರೆಯಿತು! ಲಕ್ಷ್ಮಿ ಪ್ಯಾರೆ ಜೋಡಿ ಮುಂದೆ ಬಾಲು ಅವರಲ್ಲಿ ಕ್ಷಮೆ ಕೇಳಿತು ಮತ್ತು ಹಲವಾರು ಹಾಡುಗಳನ್ನು ಬಾಲು ಮೂಲಕ ಹಾಡಿಸಿತು.
ತೊಂಬತ್ತರ ದಶಕದಲ್ಲಿ ನದೀಮ್ ಶ್ರವಣ್, ಆನಂದ್ ಮಿಲಿಂದ್, ರಾಮ ಲಕ್ಷ್ಮಣ ಸಂಗೀತ ನಿರ್ದೇಶಕ ಜೋಡಿ  ಉತ್ತಮ ಹಾಡುಗಳನ್ನು ಹಿಂದಿಯಲ್ಲಿ ಕೊಟ್ಟವರು. ಅವರ ಸಂಯೋಜನೆಯಲ್ಲಿ  ಬಾಲು ಸರ್ ಒಂದಕ್ಕಿಂತ ಒಂದು ಅದ್ಭುತ ಹಾಡುಗಳನ್ನು ಹಾಡಿದರು. ಸಲ್ಮಾನ್ ಖಾನ್ ಬಾಲು ಸರ್ ಅವರನ್ನು ‘ನನ್ನ ವಾಯ್ಸ್’ ಎಂದು ಕರೆದ. ಮೈನೆ ಪ್ಯಾರ್ ಕಿಯಾ, ಸಾಜನ್, ಹಮ್ ಆಪ ಹೈ ಕೌನ್ ಸಿನೆಮಾದ ಹಾಡುಗಳಿಗೆ ಎಂದಿಗೂ ಸಾವಿಲ್ಲ. ದೇಖಾ ಹೈ ಪೇಹಲೀ ಬಾರ್, ತುಂಸೆ ಮಿಲ್ನೆ ಕೀ ತಮನ್ನ ( ಸಾಜನ್), ದಿಲ್ ದಿವಾನ ಬಿನ್ ಸಜನಾ ಕೆ, ಆಜಾ ಶ್ಯಾಮ್ ಹೊನೆ ಆಯಿ( ಮೈನೆ ಪ್ಯಾರ್ ಕಿಯಾ) ದೀದಿ ತೇರಾ ದೇವರ್ ದೀವಾನಾ( ಹಮ್ ಆಪ್ಕೆ ಹೈ ಕೌನ್) ಇಂತಹ ಸುಮಧುರ ಗೀತೆಗಳನ್ನು ಹಿಂದಿಯಲ್ಲಿ ಕೊಟ್ಟ ಬಾಲು ಸರ್ ಮುಂದೆ ಯಾವುದೋ ಕಾರಣಕ್ಕೆ ನೊಂದುಕೊಂಡರು.  ಮತ್ತೆ ನೂರಾರು ಅವಕಾಶಗಳು ಹರಿದು ಬಂದರೂ ಹಿಂದಿಯಲ್ಲಿ ಹಾಡಲು ನಿರಾಕರಿಸಿದರು. ಬಾಲಿವುಡ್ಡಿನ ಮಂದಿಯ ತಾರತಮ್ಯ ಧೋರಣೆ, ಗುಂಪು ಗಾರಿಕೆ ಮತ್ತು ಲಾಬಿಗಳು ಅವರ ಮನಸ್ಸನ್ನು ನೋಯಿಸಿದ್ದವು.
      ಕನ್ನಡದಲ್ಲಿ ವರ್ಷಗಳ ಕಾಲ ನಡೆದ  ‘ಎದೆ ತುಂಬಿ ಹಾಡಿದೆನು’ ಟಿವಿ ರಿಯಾಲಿಟಿ ಶೋದಲ್ಲಿ  ಸೆಲೆಬ್ರಿಟಿ ಆಂಕರ್ ಮತ್ತು ನಿರ್ಣಾಯಕರಾಗಿ ಬಾಲು ಸರ್ ಕನ್ನಡಿಗರ ಮನೆ ಮಾತಾದರು. ಅವರು ಸ್ಪರ್ಧಿಗಳನ್ನು ಪ್ರೋತ್ಸಾಹಿಸುವ ರೀತಿ, ಎಳೆಯರ ಮನಸ್ಸನ್ನು ಒಂದಿಷ್ಟೂ ನೋಯಿಸದೆ  ತಪ್ಪನ್ನು ತಿದ್ದುವುದು, ಮಕ್ಕಳನ್ನು ಬಹುವಚನದಲ್ಲಿ ಪ್ರೀತಿಯಿಂದ ಮಾತನಾಡಿಸುವುದು, ನಗು, ಕೀಟಲೆ, ಹಾಸ್ಯ… ಎಲ್ಲವೂ ಅದ್ಭುತ! ಮಕ್ಕಳಿಗೆ ಅವರು ಹೇಳುತ್ತಿದ್ದ ಮಾತುಗಳು “ನೀವು ನನಗಿಂತ ಪ್ರತಿಭಾವಂತರು. ಯಾರನ್ನೂ ಅನುಕರಣೆ ಮಾಡಬೇಡಿ. ನನ್ನ ಹಾಗೆ ಹಾಡಲು ಆಗುವುದಿಲ್ಲ ಎಂದು ಯಾಕೆ ದುಃಖ ಪಡುತ್ತೀರಿ. ನಿಮ್ಮ ಹಾಗೆ ಹಾಡಲು ನನಗೂ ಸಾಧ್ಯವಿಲ್ಲ!”. ಇಡೀ ಒಂದು ಟಿವಿ ಶೋ ಜಗಮಗ ಆಗುತ್ತಿದ್ದದ್ದೆ ಬಾಲು ಸರ್ ಅವರಿಂದ!
      ತೆಲುಗು ಬಾಲು ಸರ್ ಅವರ  ಮಾತೃಭಾಷೆ ಆದರೂ ಅವರ ಕನ್ನಡದ ಮೇಲಿನ ಪ್ರೀತಿ ಮತ್ತು ಗೌರವ ನಿಜಕ್ಕೂ ಅನನ್ಯ ಮತ್ತು ಅನುಕರಣೀಯ. “ನನಗೆ ತೆಲುಗು ಮತ್ತು ಕನ್ನಡ ಎಂಬ ಎರಡು ತಾಯಂದಿರು. ತೆಲುಗು ಜನ್ಮ ಕೊಟ್ಟ ತಾಯಿ. ಕನ್ನಡ ಎದೆ ಹಾಲು ಕೊಟ್ಟು  ಬೆಳೆಸಿದ ತಾಯಿ.” ಎಂದು ಅವರು ಪ್ರತೀ ವೇದಿಕೆಯಲ್ಲಿ ಭಾವುಕರಾಗಿ ಹೇಳುತ್ತಿದ್ದರು. ಅದೇ ಪ್ರೀತಿಯಿಂದ ಅವರು ಕನ್ನಡದ ಹಿರಿಮೆಯ ಶ್ರೇಷ್ಟ ಹಾಡುಗಳನ್ನು ಹಾಡಿದರು. ಕರ್ನಾಟಕದ ಇತಿಹಾಸದಲೀ ( ಕೃಷ್ಣ ರುಕ್ಮಿಣಿ), ಇದೇ ನಾಡು ಇದೇ ಭಾಷೆ( ತಿರುಗು ಬಾಣ), ಕರುನಾಡ ತಾಯಿ ಸದಾ ಚಿನ್ಮಯಿ ( ನಾನು ನನ್ನ ಹೆಂಡ್ತಿ), ಕನ್ನಡ ನಾಡಿನ ಜೀವನದಿ( ಜೀವ ನದಿ), ಕಲ್ಲಾದರೆ ನಾನು( ಸಿಂಹಾದ್ರಿಯ ಸಿಂಹ) ಇಂತಹ ಹಾಡುಗಳು ಅಮರತ್ವವನ್ನು ಪಡೆಯಲು ಕಾರಣ ಬಾಲು ಸರ್ ಅವರ ಕನ್ನಡದ ಪ್ರೀತಿ.
ಬಾಲು ಸರ್ ಅವರ ಇನ್ನೊಂದು ವಿಶೇಷತೆ ಅಂದರೆ ಧ್ವನಿಯಲ್ಲಿ ಇದ್ದ ವೈವಿಧ್ಯ ಮತ್ತು ಮಿಮಿಕ್ ಸಾಮರ್ಥ್ಯ! ಈ ಸಾಮರ್ಥ್ಯವು ಬೇರೆ ಯಾವ ಗಾಯಕರಲ್ಲಿ ಇಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಬೇರೆ ಬೇರೆ ನಟರ ಹಾಡುಗಳಿಗೆ ಅನುಗುಣವಾಗಿ ತಮ್ಮ ಧ್ವನಿಯನ್ನು ಬದಲಿಸುವ ಶಕ್ತಿ ಅವರಿಗಿತ್ತು. ಲೆಜೆಂಡ್ ನಟರಾದ  MGR, NTR, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ರಜನಿಕಾಂತ್, ಕಮಲಹಾಸನ್, ವಿಕ್ರಮ್,  ಶ್ರೀನಾಥ್, ಸುದೀಪ್, ದರ್ಶನ್, ಗಣೇಶ್, ಜಗ್ಗೇಶ್,  ವಿಷ್ಣುವರ್ಧನ, ಅನಂತ ನಾಗ್, ಶಂಕರ ನಾಗ್, ರವಿಚಂದ್ರನ್, ಅಂಬರೀಷ್, ಸಲ್ಮಾನ್ ಖಾನ್….ಇವರಿಗೆ ಹಾಡುವಾಗ  ವೈವಿಧ್ಯಮಯವಾಗಿ ಅವರ ಧ್ವನಿ ಬದಲಾಗುತ್ತಿತ್ತು. ಹಾಗೆಯೇ ಅವರ ಮಿಮಿಕ್ ಸಾಮರ್ಥ್ಯ ಕೂಡ ಅದ್ಭುತವೇ ಆಗಿದೆ. ತಾಳಿ ಕಟ್ಟುವ ಶುಭ ವೇಳೆ( ಬೆಂಕಿಯಲ್ಲಿ ಅರಳಿದ ಹೂವು) ಹಾಡಲ್ಲಿ ಬರುವ ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿಗಳ ಮಿಮಿಕ್ರಿ ಕೇವಲ ಬಾಲು ಸರ್ ಅವರಿಗೆ ಮಾತ್ರ  ಸಾಧ್ಯ! ಅದೇ ರೀತಿ ಸುಂದರಿ ಸುಂದರಿ ( ಶ್ರೀ ರಾಮಚಂದ್ರ), ತರಿಕೆರಿ ಏರಿ ಮೇಲೆ( ದೇವರ ದುಡ್ಡು)…ಈ ರೀತಿಯ ಅಸಂಖ್ಯಾತ ಹಾಡುಗಳಲ್ಲಿ ಅವರ ಮಿಮಿಕ್ ಸಾಮರ್ಥ್ಯ ಎದ್ದು ಕಂಡಿದೆ.
ಅವರು ಡಬ್ಬಿಂಗ್ ಮತ್ತು ವಾಯ್ಸ್ ಓವರ್ ಕಲಾವಿದರಾಗಿ ಕೂಡ ಮಿಂಚಿದ್ದಾರೆ. ಕಮಲ್ ಹಾಸನ್, ರಜನೀಕಾಂತ್, ವಿಷ್ಣುವರ್ಧನ್. ಗಿರೀಶ್ ಕಾರ್ನಾಡ, ಅನಿಲ್ ಕಪೂರ್ ಮೊದಲಾದವರಿಗೆ ತೆಲುಗಿನಲ್ಲಿ ಧ್ವನಿ ನೀಡಿದ್ದಾರೆ. ಅವರಿಗೆ ಬೆಸ್ಟ್ ಡಬ್ಬಿಂಗ್ ಆರ್ಟಿಸ್ಟ್ ಎಂಬ ರಾಜ್ಯಪ್ರಶಸ್ತಿ ತೆಲುಗಿನಲ್ಲಿ ದೊರೆತಿದೆ! ಅದೇ ರೀತಿ ಅವರು ನಟರಾಗಿ, ನಿರ್ಮಾಪಕರಾಗಿ, ಸಂಗೀತ ನಿರ್ದೇಶಕರಾಗಿ ಕೂಡ ಮಿಂಚಿದ್ದಾರೆ. ನಾಲ್ಕು ವಿವಿಧ ಭಾಷೆಗಳಲ್ಲಿ ಒಟ್ಟು ಆರು ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಗಾಯಕ ಬಾಲು ಸರ್! ಅವರಿಗೆ ಕರ್ಣಾಟಕ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳ ರಾಜ್ಯ ಪ್ರಶಸ್ತಿಗಳು ದೊರೆತಿದೆ.  2016ರಲ್ಲೀ ಬಾಲು ಅವರಿಗೆ “ಇಂಡಿಯನ್ ಫಿಲಂ ಪರ್ಸನಾಲಿಟಿ ಆಫ್ ದೀ  ಇಯರ್ ” ಎಂಬ ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿಯು  ದೊರೆಯಿತು. ಭಾರತ ಸರಕಾರವು ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ  ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. NTR ರಾಷ್ಟ್ರ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ.
ಬಾಲು ಸರ್ ಈ ವರ್ಷದ  ಮೇ ತಿಂಗಳಿನಲ್ಲಿ ಇಳಯರಾಜ ಸಂಗೀತ ನೀಡಿದ ವಿಡಿಯೋ ಸಾಂಗ್ ‘ ಭಾರತ ಭೂಮಿ ‘  ಹಾಡಿದ್ದರು. ಅದು ಕೊವಿಡ ವಾರಿಯರಗಳಿಗೆ ಗೌರವ ಸಲ್ಲಿಸುವ ಹಾಡು. ಆನಂತರ ಅವರಿಗೆ ಕೋವಿಡ ಆರೋಗ್ಯ  ಸಮಸ್ಯೆ ತೀವ್ರವಾಗಿ ಆಸ್ಪತ್ರೆಗೆ ಸೇರಬೇಕಾಯಿತು. ಇಂದಿಗೂ ಅವರು ಕೃತಕ  ಉಸಿರಾಟದಲ್ಲಿ ಇದ್ದಾರೆ. ವೈದ್ಯರು ಅವರಿಗೆ ಸಂಗೀತ ಚಿಕಿತ್ಸೆ ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಬಾಲು ಸರ್ ಮತ್ತೆ ಮರಳಿ ಬರುತ್ತಾರೆ ಮತ್ತು ಹಾಡುತ್ತಾರೆ ಎಂಬ ನಂಬಿಕೆ  ನನಗಂತೂ ಇದೆ. ಪ್ರತೀ ದಿನದ ನಿಮ್ಮ ಪ್ರಾರ್ಥನೆಯಲ್ಲಿ ಬಾಲು ಸರ್ ಅವರಿಗೆ ಸ್ವಲ್ಪ ಜಾಗ ಕೊಡಿ ಆಯ್ತಾ.
 
 
 
 
 
 
 
 
 
 
 

Leave a Reply