“ಅಪೂರ್ವ ಸಾಧನೆ” ಎಂಬ ಪದಗಳಿಗೆ ಅನ್ವರ್ಥನಾಮ ಈ ಯುವಕ

ಸಾಮಾನ್ಯವಾಗಿ ಇಂದಿನ ಯುವಕರು ಬಯಸುವ ದೈಹಿಕ ಪರಿಶ್ರಮವಿಲ್ಲದೆ ಕಾಂಚಾಣ ಎಣಿಸುವ ತಂತ್ರಾಂಶ ಇಂಜಿನಿಯರ್ ನೌಕರಿ ತ್ಯಜಿಸಿ ದೇಶ ಸೇವೆ ಮಾಡುವ ತನ್ನ ಬಾಲ್ಯದ ಕನಸನ್ನು ನನಸಾಗಿಸಿದಾತ. ಈ ಯುವಕ ನಮ್ಮೂರಿನ ಎಂಬುದು ನಮ್ಮ ಹೆಮ್ಮೆ. ಎಲ್ಲರಿಗೂ ಮಾದರಿಯಾಗಿರುವ ಈತನ ಹೆಸರು ಯು. ಆದರ್ಶ ವೈದ್ಯ. ಉಪ್ಪುಂದದ ವೈದ್ಯರ ಮನೆಯ ಕುಡಿ. 28ರ ಪ್ರಾಯದ ಈತ ಈಗ ಭಾರತ ಸೇನೆಯಲ್ಲಿ ಕ್ಯಾಪ್ಟನ್. ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

ಈ ಬಾಲಕ ಬೆಳೆದು ತಂತ್ರಾಂಶ ಇಂಜಿನಿಯರ್ ಆಗಿ, ಉತ್ತಮ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ. ಎರಡು ವರ್ಷ ಕೆಲಸ ಮಾಡಿದ. ಬಿಡುವಿನ ವೇಳೆಯನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಕಳೆಯುತ್ತಿದ್ದ, ಸ್ನೇಹಿತರೊಂದಿಗೆ ಕಾಲ್ಚೆಂಡಾಟವಾಡುತ್ತಿದ್ದ. ಇವನು ಜೀವನದಲ್ಲಿ ನೆಲೆಗೊಂಡನೆಂದು ಹೆತ್ತವರು ಭಾವಿಸಿದರು. ಅಷ್ಟರಲ್ಲಿ ವಿಶ್ವಕ್ಕೆ ಕೋವಿಡ್ ರೋಗ ಅಪ್ಪಳಿಸಿತು. ಎಲ್ಲಾ ಕಂಪನಿಯವರೂ ಮನೆಯಿಂದ ಕೆಲಸ ಮಾಡುವ ಸ್ಥಿತಿ ಬಂದು, ಕೆಲಸಕ್ಕೆ ನಿಗದಿತ ವೇಳೆ, ಹೊತ್ತು-ಗೊತ್ತು ಇಲ್ಲದೆ, ದಿನಚರಿ ಹಳಿ ತಪ್ಪಿತು. ಇವನಿಗೆ ದೀರ್ಘಕಾಲ ಒಂದೆಡೆ ಕುಳಿತು ಕೆಲಸ ಮಾಡುವುದು ಇಷ್ಟವಿಲ್ಲ. ಸಣ್ಣ ಹುಡುಗನಾಗಿದ್ದಾಗಿಂದಲೂ, “ಬರಿಯ ಪಾಠ ಒಳ್ಳೆಯದಲ್ಲ, ಶಾಲೆಗಳಲ್ಲಿ ಆಟಕ್ಕೂ ಸಮಾನ ಮಹತ್ವ ಕೊಡಬೇಕು, ಆಟ-ಪಾಠ ಸಮ್ಮಿಳಿತವಾಗಿದ್ದರೆ ಕಲಿಕೆ ಸುಲಭವಾಗುತ್ತದೆ”, ಎನ್ನುವುದು ಇವನ ಅಭಿಮತ. ಕೆಲಸದಲ್ಲಿ ಆಸಕ್ತಿ ಕುಂದಲು ಇದೂ ಒಂದು ನೆಪವಾಯಿತು. ಒಂದು ದಿನ ತಂದೆಯ ಬಳಿ ಬಂದು, “ಅಪ್ಪ ನನಗೆ ಈ ರೀತಿಯ ಕೆಲಸ ಇಷ್ಟವಿಲ್ಲ, ನಾನು ರಾಜೀನಾಮೆ ಕೊಡುತ್ತೇನೆ”, ಎಂದು ಹೇಳಿದ. ಬೇರೆ ಕೆಲಸ ಸಿಕ್ಕಿದ ನಂತರ ರಾಜೀನಾಮೆ ನೀಡು, ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವುದು ಕಷ್ಟವಾಗಬಹುದು, ಇಂಥ ನೌಕರಿ ಹಿಡಿಸದಿದ್ದರೆ ಯುಪಿಎಸ್ಸಿ ಪರೀಕ್ಷೆಗಳನ್ನು ಬರೆದು ಬೇರೆ ರೀತಿಯ ಉದ್ಯೋಗಕ್ಕೆ ಪ್ರಯತ್ನಿಸು”, ಎಂದು ಅವನ ಸಾಮರ್ಥ್ಯ, ಜ್ಞಾನದ ಬಗ್ಗೆ ಅರಿವಿದ್ದ ತಂದೆ ಕಾಳಜಿಯಿಂದ ಉಪದೇಶ ಮಾಡಿದರು. ತಾನು ಸೇನೆಗೆ ಸೇರಲು ಇಚ್ಛೆ ಹೊಂದಿರುವ ವಿಷಯವನ್ನು ಆಗಲೂ ಅವನು ಹೆತ್ತವರಿಗೆ ಬಹಿರಂಗ ಪಡಿಸಲಿಲ್ಲ. ನೌಕರಿಯಲ್ಲಿ ಮುಂದುವರೆದುಕೊಂಡೇ ತೆರೆ ಮರೆಯಲ್ಲಿ ಸೇನೆ ಸೇರುವ ಪ್ರಯತ್ನ ಮಾಡುತ್ತಿದ್ದ. ಕೆಲವು ದಿನಗಳ ನಂತರ ತಾನು ಸೇನೆಗೆ ಸೇರಲು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆಂದು ಹೇಳಿದ. ಕಾಲೇಜು ದಿನಗಳಿಂದ ಕಾಲ್ಚೆಂಡು ಆಡುತ್ತಿದ್ದನ್ನು ಬಿಟ್ಟರೆ, ದೈಹಿಕ ಚಟುವಟಿಕೆಗಳು ಅಷ್ಟಕಷ್ಟೇ ಇದ್ದಿತ್ತು. ಕೋವಿಡ್‌ನಿಂದ ಅದೂ ತಪ್ಪಿಹೋಗಿತ್ತು. ಲಿಖಿತ ಪರೀಕ್ಷೆಯ ನಂತರ ಸೇನೆಗೆ ಸೇರಲು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆ ಅತಿಕಠಿಣ ಮತ್ತು ಆಯ್ಕೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಿಮೆ ಎಂದು ತಿಳಿದಿದ್ದ ಇವನ ತಂದೆ-ತಾಯಿ ಇವನು ಮುಂದಿನ ಹಲವು ಹಂತಗಳ ದೈಹಿಕ-ಮಾನಸಿಕ ಸದೃಢತೆಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದಿಲ್ಲವೆಂದು ದೃಢವಾಗಿ ನಂಬಿದ್ದರು. ಆದರೆ, ಇವರ ನಂಬಿಕೆಯನ್ನು ಹುಸಿ ಮಾಡಿ, ಸುಧೀರ್ಘ ಎರಡು ವಾರ ನಡೆದ ಬಹು ಹಂತದ ದೈಹಿಕ, ಮಾನಸಿಕ, ಸರ್ವತೋಮುಖ ಸಾಮರ್ಥ್ಯ ಅಳೆಯುವ ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಬಂದ. ಎಲ್ಲರಿಗೂ ಇವನು ನಿಜಕ್ಕೂ ನೂರಕ್ಕೊಬ್ಬ ಸಾಧಕ, ನಿಜ ಜೀವನದ ನಾಯಕ (ಹೀರೋ) ಅನ್ನಿಸಿತು. ಮನಸಿದ್ದರೆ ಮಾರ್ಗ ಎಂಬುದಕ್ಕೆ ಇವನು ಉತ್ತಮ ನಿರ್ದೇಶನ, ಎಲ್ಲರಿಗೂ ಸ್ಪೂರ್ತಿ, ಮಾದರಿ.

ಭಾರತೀಯ ಸೇನೆಯ ನೇಮಕಾತಿ ಪತ್ರ ಕೈ ಸೇರಿದ ಬಳಿಕ ತಂತ್ರಾಂಶದ ನೌಕರಿಗೆ ರಾಜೀನಾಮೆ ನೀಡಿ, ಸೇನಾ ತರಬೇತಿಗೆ ಚೆನ್ನೈಗೆ ತೆರಳಿದ. ಬಿಡುವಿಲ್ಲದ ಒಂದು ವರ್ಷದ ಕಠಿಣ ತರಬೇತಿಯನ್ನು ಮುಗಿಸಿದ. ಲೆಫ್ಟಿನೆಂಟ್ ಆಗಿ ಪದಗ್ರಹಣ ಮಾಡಿದ. ಆರ್ಮಿ ಏವಿಯೇಷನ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪೈಲಟ್ ತರಬೇತಿಗೆ ಆಯ್ಕೆಯಾದ. ಮೊದಲಿಗೆ 15ನೆಯ ಆರ್ಮರ್ಡ್ ರೆಜಿಮೆಂಟ್‌ಗೆ ಸೇರಿ, ಪಂಜಾಬಿನಲ್ಲಿ ಕೆಲಸ ಮಾಡಿದ. ನಂತರ ಆರ್ಮಿ ಏವಿಯೇಷನ್‌ನ ಒಂದು ವರ್ಷದ ಕಷ್ಟಕರ ಪೈಲೆಟ್ ತರಬೇತಿ ಮುಗಿಸಿ, ಹೆಲಿಕ್ಯಾಪ್ಟರ್ ಪೈಲಟ್ ಆಗಿ 22.05.2024ರಂದು ನಾಸಿಕ್‌ನಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ಎ.ಕೆ. ಸೂರಿ ಅವರಿಂದ ತೇರ್ಗಡೆಯ ಪ್ರಮಾಣ ಪತ್ರ ಪಡೆದ. ಈ ಬಾರಿ ತರಬೇತಿ ಪೂರ್ಣಗೊಳಿಸಿದ ಕರ್ನಾಟಕದ ಏಕೈಕ ಅಧಿಕಾರಿ ಈತ. ಒಂದು ವರ್ಷದ ಪೈಲಟ್ ತರಬೇತಿಯಲ್ಲಿ ನಿರಂತರವಾಗಿ ಸಿದ್ದಾಂತ (ಥಿಯರಿ)/ಪ್ರಾಯೋಗಿಕ ತರಗತಿಗಳು ಮತ್ತು ಪರೀಕ್ಷೆಗಳಿದ್ದು, ಪ್ರತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯ. 34 ಮಂದಿ ತರಬೇತಿಗೆ ಆಯ್ಕೆಯಾಗಿದ್ದರೂ ಕಡೆಯವರೆಗಿದ್ದು ಮುಗಿಸಿದವರು 23 ಮಂದಿ ಮಾತ್ರ. ಇನ್ನುಳಿದವರು ಮಧ್ಯದಲ್ಲಿಯೇ ಬಿಟ್ಟು ಹೋಗಲು ಕಾರಣ, ಪೈಲಟ್ ಕೆಲಸದ ಕಾಠಿಣ್ಯತೆ, ಸವಾಲುಗಳು ಮತ್ತು ನಿರ್ಬಂಧಗಳು. ಹೆಲಿಕ್ಯಾಪ್ಟರ್ ಚಾಲನೆ ವಿಮಾನ ಹಾರಾಟಕ್ಕಿಂತ ಕ್ಲಿಷ್ಟಕರ. ಒತ್ತಡ ನಿಗ್ರಹಣೆ, ಏಕಾಗ್ರತೆ, ಸಮಚಿತ್ತತೆ, ದೈಹಿಕ ಸಾಮರ್ಥ್ಯ ಇವೆಲ್ಲ ಹೆಲಿಕ್ಯಾಪ್ಟರ್ ಪೈಲಟ್‌ಗೆ ಸದಾ ಕಾಲ ಅವಶ್ಯಕ.

ತಂತ್ರಾಂಶ ಕ್ಷೇತ್ರದ ನೌಕರಿಯನ್ನು ತ್ಯಜಿಸಿ, ದೇಶ ಸೇವೆಗೆ ತನ್ನ ಜೀವನವನ್ನು ಮುಡುಪಾಗಿಟ್ಟ ಈ ಯುವಕ ಬೈಂದೂರು ತಾಲ್ಲೂಕಿನ ಉಪ್ಪುಂದ ವೈದ್ಯರ ಮನೆಯ ಶ್ರೀ ಗೋಪಾಲ ವೈದ್ಯ ಮತ್ತು ಶ್ರೀಮತಿ ಕಲ್ಪನಾ ಇವರ ಮಗ. ಇವನ ಸಾಧನೆಗೆ ಎತ್ತವರದ್ದಲ್ಲದೆ, ಈತನ ತಂಗಿ ಅಪೂರ್ವ, ಪತ್ನಿ ರಕ್ಷಿತಾ ಮತ್ತು ಎಲ್ಲಾ ಬಂಧು ಮಿತ್ರರ ಬೆಂಬಲವಿದೆ. ಇವನ ಸಾಧನೆಯನ್ನು ಶ್ಲಾಘಿಸೋಣ. ಭಗವಂತನ ಮತ್ತು ಹಿರಿಯರ ಆಶೀರ್ವಾದ, ಬಂಧು-ಮಿತ್ರರ ಪ್ರೋತ್ಸಾಹದಿಂದ ಇವನು, ಇವನ ಕಾರ್ಯಕ್ಷೇತ್ರದಲ್ಲಿ ಉತ್ತುಂಗಕ್ಕೇರಲಿ, ಇವನಿಗೆ ಭಗವಂತ ಆಯುರಾರೋಗ್ಯ, ಸಕಲ ಸೌಭಾಗ್ಯಗಳನ್ನು ಕರುಣಿಸಿ ಕಾಪಾಡಲೆಂದು ಹಾರೈಸೋಣ. ಹೆಸರಿಗೆ ತಕ್ಕಂತೆ ಈ ಯುವಕ ಎಲ್ಲರಿಗೂ ಆದರ್ಶಪ್ರಾಯವಾಗುವಂತೆ ಯಶಸ್ಸು, ಶ್ರೇಯಸ್ಸು ಪಡೆಯಲಿ. ಹೆತ್ತವರಿಗೆ ಕೀರ್ತಿ ತರಲಿ. ಇವನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರೋಣ.

 
 
 
 
 
 
 
 
 
 
 

Leave a Reply