ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವ

ಮೂರು ದಿನ ವಿಶೇಷ ಕಾರ್ಯಕ್ರಮ
ಮೈಸೂರಿನ ಉತ್ತರಾದಿ ಮಠದಲ್ಲಿ ಆಯೋಜನೆ
ಸಾವಿರಾರು ಭಕ್ತರ ಸಂಗಮ

ಮೈಸೂರು: ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಾನದಲ್ಲಿ ಶ್ರೀಸತ್ಯ ಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಮಾ.20ರಿಂದ 22ರವರೆಗೆ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ.20ರ ಬೆಳಗ್ಗೆ 7ಕ್ಕೆ ಧಾನ್ಯಪೂಜೆ ಮತ್ತು ಗೋಪೂಜೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಬೆಳಗ್ಗೆ 8ಕ್ಕೆ 108 ಭಕ್ತರಿಂದ 108ಬಾರಿ ಗುರುಗಳ ಸ್ತೋತ್ರ ಪಾರಾಯಣ, ಶ್ರೀಸೂಕ್ತ ಹೋಮ, ವಿದ್ವಾಂಸರಿಂದ ವಿಶೇಷ ಪ್ರವಚನ, 11.30ಕ್ಕೆ ಗುರುಗಳ ಪಾದುಕೆಗಳ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ.

 

ಸಂಜೆ 6.30ಕ್ಕೆ ಪಂಡಿತ ಫಣೀಂದ್ರಾಚಾರ್ಯ ಮಲಪನಗುಡಿ ಅವರಿಂದ ಅಖಲ ಭಾರತ ಮಟ್ಟದ ಭಗವದ್ಗೀತೆ ಪ್ರವಚನ ಅಭಿಯಾನ ಉಪನ್ಯಾಸ 4ನೇ ಸರಣಿ ಮಂಗಳ ಮಹೋತ್ಸವವಿದೆ. 21ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 8.30ಕ್ಕೆ ಶ್ರೀಸತ್ಯಸಂತುಷ್ಟ ತೀರ್ಥರ ಮೂಲ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಲಕ್ಷ ಪುಷ್ಪಾರ್ಚನೆ, ವಿಶೇಷ ಪೂಜೆ, 10ಕ್ಕೆ ಗಣಹೋಮ, ರಜತ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಸಂಗಮಿಸಲಿದ್ದಾರೆ. ಸಂಜೆ 6ಕ್ಕೆ ವಿವಿಧ ವಿದ್ವಾಂಸರಿಂದ ದಾಸವಾಣಿ ಆಯೋಜನೆಗೊಂಡಿದೆ.

22ರಂದು ಯುಗಾದಿ ಮತ್ತು ಉತ್ತರಾರಾಧನೆ ನಿಮಿತ್ತ ಬೆಳಗ್ಗೆ 5.30ಕ್ಕೆ ಗುರುಗಳ ವೃಂದಾವನಕ್ಕೆ ತೈಲ ಸಮರ್ಪಣೆ, ಅಭ್ಯಂಗ ಸೇವೆ, 9.30ಕ್ಕೆ ಚೈತ್ರ ಮಾಸದ ಪರ್ವಕಾಲದ ಸಂದರ್ಭ ಮನ್ಯುಸೂಕ್ತ ಪುನಶ್ಚರಣ ಹೋಮ, ಯುಗಾದಿ ಮಹತ್ವ ಕುರಿತು ಪಂಡಿತರಿಂದ ಪ್ರವಚನ, 11.30ಕ್ಕೆ ರಥೋತ್ಸವ ಸಂಪನ್ನಗೊಳ್ಳಲಿದೆ. ಸಂಜೆ 6.30ಕ್ಕೆ ಪಂಚಾಂಗ ಶ್ರವಣ, ಸ್ವಸ್ತಿವಾಚನ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply