| ಶಿವರಾತ್ರಿ| ||ಶರ್ವನಿಗೆ ಶರಣಾರ್ಥಿಯ ಶರಣು||~• ಕೆ.ಎಲ್.ಕುಂಡಂತಾಯ

ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆ ವಿಶಿಷ್ಟವಾದುದುಜಗವು ಶಿವನೊಳಗುಂಟು
ಜಗದೊಳು ಶಿವನಿಲ್ಲ
ಜಗವು ಶಿವನಿಂದ ಬೇರಿಲ್ಲ ಈ ಬೆಡಗ
ಅಘಹರನೇ ಬಲ್ಲ ಸರ್ವಜ್ಞ’
‘ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ’.

‌‌‌’ರಾತ್ರಿಯೊಳು ಶಿವರಾತ್ರಿ’ ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ .
ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ .ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ .ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು.

ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು’, ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ.
‌‌‌ ——————-
ಮಾನವ ಚಿಂತನೆಗೆ ಸುಲಭ ಗ್ರಹ್ಯವಾಗಬಲ್ಲ ಮನುಕುಲಕ್ಕೆ ಸಮೀಪವರ್ತಿಯಾಗಿ ಬಹುಮುಖ ವ್ಯಕ್ತಿತ್ವದಿಂದ ಬಹುಮಾನ್ಯ ನಾದ ದೇವರು ’ಶಿವ’. ಈ ಜನಪ್ರಿಯ ದೇವರ ಆರಾಧನಾ ಪರ್ವವೇ ’ಶಿವರಾತ್ರಿ’. ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಸನ್ನಿಹಿತವಾಗುತ್ತದೆ ಈ ಶುಭ ದಿನ.

‘ಪರ್ವ’ ಎಂದಾಗ ‘ಹಬ್ಬ’ವೆಂದು ಆಚರಿಸುವ, ಆ ಮೂಲಕ ಸಂಭ್ರಮಿಸುವ ಅವಕಾಶ ’ಶಿವರಾತ್ರಿ’ ಸಂದರ್ಭದಲ್ಲಿಲ್ಲ. ಉಪವಾಸ, ರಾತ್ರಿ ಜಾಗರಣೆ, ಶಿವಧ್ಯಾನದಲ್ಲಿ ತೊಡಗಿ ಅಭಿಷಾಕಾದಿಗಳಿಂದ, ಅರ್ಚನೆಗಳಿಂದ ಶಿವ ಸಾಮೀಪ್ಯ ಸಾಧಿಸುವ ವ್ರತವಾಗಿ ಶಿವರಾತ್ರಿ ಸ್ವೀಕರಿಸಲ್ಪಟ್ಟಿದೆ. ಆದರೆ ಅರ್ಚನೆ ಪೂಜೆ, ಪ್ರದಕ್ಷಿಣೆ ಅಲಂಕಾರಗಳೆಲ್ಲ ಶಿವರಾತ್ರಿಯ ಅಂಗವೇ ಆಗಿರುವುದರಿಂದ ಶ್ರದ್ಧೆ ಇರುವ ಹಬ್ಬವಾಗಿಯೂ ಆಚರಿಸಬಹುದೆಂಬುದು ಶಾಸ್ತ್ರ ಸೂಚನೆ.

ತ್ರಿಮೂರ್ತಿಗಳಲ್ಲಿ ಒಬ್ಬನೆನಿಸಿ,ಲಯಕರ್ತನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ’ಶಿವ’ನದ್ದೆಂದು ಪುರಾಣಗಳು ವಿವರಿಸುತ್ತವೆ. ಇಲ್ಲೆ ಇರುವುದು, ಸಮಗ್ರ ಸೃಷ್ಟಿ ಲಯವಾಗಿ ಮುಂದಿನ ನೂತನ ಸೃಷ್ಟಿಯ ನಿರ್ಮಾಣಕ್ಕೆ ಸಿದ್ಧ ಗೊಳ್ಳುವಲ್ಲಿಯವರೆಗೆ ಅವುಗಳಿಗೆ ಲಯಾಧಿಕಾರಿಯಾದರೂ ಶಿವನೇ ಆಶ್ರಯಸ್ಥಾನ. ಸೃಷ್ಟಿ-ಸ್ಥಿತಿ-ಲಯಗಳ ನಿರಂತರ ಪ್ರಕ್ರಿಯೆಯಲ್ಲಿ ಲಯವೂ ಪ್ರಧಾನವಾದುದೇ. ಆದುದರಿಂದ ಲಯದಲ್ಲಿ ಒಂದು ತಡೆ ಇದೆ, ನಿಂತು ಮುಂದುವರಿಯುವ ಸಂಕೇತವಿದೆ. ಒಂದು ಮುಕ್ತಾಯದ ಸಂಜ್ಞೆ ಇದೆ.

ಆದರೆ ಈ ಮುಕ್ತಾಯವೇ ಸೃಷ್ಟಿಗೆ ಪ್ರೇರಣೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಅಂತಹ ಮಹಾದೇವನಿಗೆ ಶಿವರಾತ್ರಿಯ ನಮೋ ನಮಃ ಎಂಬ ಪ್ರಣಾಮ. ಶರಣಾರ್ಥಿಯಾದವನ ಶರಣು (ನಮಸ್ಕಾರ) ಸ್ವೀಕರಿಸುವ ಭಗವಾನ್ ಶರ್ವನು ಸರ್ವಮಂಗಲಕರನು. ಮಂಗಲ ಎಲ್ಲಿದೆಯೋ ಅಲ್ಲಿ ಅಶುಭಗಳಿಲ್ಲದ ಆನಂದವಿರುತ್ತದೆ. ಭರ್ಗನ ಆರಾಧನೆಯಿಂದ ನಿರ್ಮಲಚಿತ್ತದೊಂದಿಗೆ ಹೃದಯದ ಔದಾರ್ಯವೂ ಸಿದ್ಧಿಸುವುದು. ಆ ಮೂಲಕ ಲೋಕಮುಖಿ ಮನೋಧರ್ಮವು ಬೆಳೆದು ಮಾನವ ಉದಾತ್ತ ಚರಿತನಾಗುತ್ತಾನೆ. ಈ ಭಾವಸ್ಫುರಣೆಗೆ ಶಿವನ ಹೊರತಾಗಿ ಬೇರೆ ದೇವರಿಲ್ಲ.

ಆಧ್ಯಾತ್ಮ ತಿಳಿಯಾಗಿದ್ದಾಗ, ಸುಲಭ ಗ್ರಾಹ್ಯವಾಗಿದ್ದಾಗ ಬಹುಜನ ಪ್ರೀತವಾಗುತ್ತದೆ. ಅಂತೆಯೇ ಆರಾಧನಾ ಮೂರ್ತಿಯೂ ನಮ್ಮ ಹೃದಯಸ್ಪರ್ಶಿ ಗುಣಗಳಿಂದ ಆಲಂಕೃತನಾಗಿದ್ದರೆ ಸಹಜವಾಗಿ ದೇವ-ಜೀವ ಸಂಬಂಧ ಸಾಧ್ಯ ವಾಗುತ್ತದೆ. ಇಂತಹ ಕ್ಲಿಷ್ಟ, ಆದರೆ ಅನುಭವ ವೇದ್ಯವಾದ ಆನಂದಕ್ಕೆ ಮಹಾರುದ್ರನು ಕಾರಣನಾಗುತ್ತಾನೆ.

ಭೂತನಾಥನಾಗಿ ಈ ಮಣ್ಣಿನ ಸತ್ಯಗಳ ಅಧಿದೈವವಾಗಿ ನಮ್ಮ ಮುಂದೆ ಒಡೆಯನಾಗಿ ಶೋಭಿಸುವ ದೇವರು ಅಂತರ ಬೇರ್ಪಡುವ ವ್ಯಕ್ತಿತ್ವ ಪ್ರದರ್ಶಿಸುವುದೇ ಇಲ್ಲ. ಆಸಕ್ತಿ-ವಿರಕ್ತಿ, ಸರಸ ವಿನೋದ, ಮಾನವರ ಕಷ್ಟಗಳಿಗೆ ಪರಿಹಾರ , ಸುಖದ ಅನುಗ್ರಹ ಮುಂತಾದುವುಗಳಲ್ಲಿ ಮನುಕುಲಕ್ಕೆ ಸಮೀಪವಾಗುವ ದೇವರು ಸುಲಭನಾಗಿ ಜನಪ್ರಿಯನಾಗುವುದು ಶಿವದೇವರ ವೈಶಿಷ್ಟ್ತ.

ಮಣ್ಣಿನ ಸತ್ಯಗಳು-ಶಿವ: ನಮ್ಮ ಆರಾಧನಾ ವಿಧಾನಗಳಲ್ಲಿ ಮಣ್ಣಿನ ಸತ್ಯಗಳ ಸಾಮ್ರಾಜ್ಯದಲ್ಲಿ, ನಾವು ಪ್ರತ್ಯಕ್ಷ – ಪರೋಕ್ಷವಾಗಿ ನಿರ್ದೇಶಿಸಲ್ಪಡುವ ಶಕ್ತಿಗಳಾದ ದೈವಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿ ಅವುಗಳ ಹುಟ್ಟಿಗೆ ಕಾರಣವಾಗುತ್ತಾ ಈ ಮಣ್ಣಿನ ಜನಮಾನಸವನ್ನು ಬೆಳಗುವ ಶಿವದೇವರು, ಈ ಮೂಲಕವೂ ನಮಗೆ ಪ್ರಿಯನಾದ ದೇವರು.

ಪಾಪಿಗಳನ್ನು ಮರ್ದಿಸಲು ಸಾವಿರದೊಂದು ’ಗಂಡಗಣ’ಗಳನ್ನು ಸೃಷ್ಟಿಸಿದ ರುದ್ರ ದೇವರು ಸಾವಿರದೊಂದು ಭೂತಗಳನ್ನು ಅಷ್ಟೇ ಸಂಖ್ಯೆಯ ರೋಗಗಳನ್ನು ನಿರ್ಮಿಸಿ ಪಾಪಿಗಳನ್ನು ಶಿಕ್ಷಿಸಿದರೆಂದು ಆ ಮುಲಕ ಭೂತನಾಥರಾದರೆಂದು ಜನಪದ ಕಥೆಗಳು ವಿವರ ನೀಡುತ್ತವೆ. ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವದ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ಹೇಳುತ್ತದೆ. ಮುಂಡತ್ತಾಯ ದೈವವು ಶಿವದೇವರ ಹಣೆಯಿಂದ ಜನಿಸಿತಂತೆ.

ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ. ಗುಳಿಗ ದೈವವೂ ಶಿವಾಂಶವೆಂಬ ವರ್ಣನೆ ಇದೆ. ಗಣಪತಿಯ ಜನನದ ಕುರಿತಾದ ಪಾಡ್ದನವೊಂದರಲ್ಲಿ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ. ಬಾಮಕುಮಾರನೇ ಗಣಪತಿ, ಶಿವಪಾರ್ವತಿಯರು ಬೇಡರಾಗಿಯೋ ಕೊರವಂಜಿಗಳಾಗಿಯೋ ’ಮೇಗಿ’ ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ. ಶಿವಪಾರ್ವತಿಯರ ಲೋಕ ಸಂಚಾರ ಸಾಮಾನ್ಯ ಘಟನೆಯಾಗಿದೆ.

ಈ ಮೇಲಿನ ವಿವರಣೆಗಳಿಂದ ಶಿವ, ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ, ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ.

ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯವರೆಗೆ ವಿವಿಧ ರೂಪಗಳಿಂದ, ಅನುಸಂಧಾನ ವಿಧಾನಗಳಿಂದ ಸ್ವೀಕರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು. ಅಂತಹ ಶರ್ವಾಣಿ ಸಹಿತನಾದ ಶರ್ವನಿಗೆ ಲೋಕದ ತಾಯಿ-ತಂದೆಯರೆಂದು ಭಾವಿಸಿ ಶಿವರಾತ್ರಿಯ ಪರ್ವದಿನದಲ್ಲಿ ’ಶರಣಾರ್ಥಿಗಳಾಗಿ ಶರಣು ಎನ್ನೋಣ.

{ಮಾಘ ಮಾಸದಲ್ಲಿ‌ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು “ಶಿವರಾತ್ರಿ” . ಇದು ಹಬ್ಬವಲ್ಲ ವ್ರತ. ಅಭಿಷೇಕ – ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.}

 
 
 
 
 
 
 
 
 
 
 

Leave a Reply