ಬಿಜೆಪಿ ಹಿರಿಯ ಕಾರ್ಯಕರ್ತರ ಶ್ರೀಧರ್ ಶೆಟ್ಟಿ ಅವರ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಜನ ಸಂಘದ ಕಾಲದಿಂದಲೂ ಬಿಜೆಪಿಯ ಸೈದ್ದಾಂತಿಕ ವಿಚಾರಗಳಿಗೋಸ್ಕರ ದುಡಿಯುತ್ತಿದ್ದು, ಇದೀಗ ವೃದ್ಧಾಪ್ಯದ ಅಂಚಿನಲ್ಲಿರುವ ಬಿಜೆಪಿ ಹಿರಿಯ ಕಾರ್ಯಕರ್ತರಾದ ಚೇರ್ಕಾಡಿ ಕುಶಲ್ ಶೆಟ್ಟಿ ಮತ್ತು ಕೊಕ್ಕರ್ಣೆ ಹಳ್ಳಿ ಶ್ರೀಧರ್ ಶೆಟ್ಟಿ ಅವರ ಮನೆಗೆ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಇತ್ತು ಹಿರಿಯರಿಬ್ಬರ ಆರೋಗ್ಯ ವಿಚಾರಿಸಿದರು. 

ತೀವ್ರ ಅನಾರೋಗ್ಯ ಪೀಡಿತರಾಗಿದ್ದು, ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಚೇರ್ಕಾಡಿ ಕುಶಲ್ ಶೆಟ್ಟಿ ತಮ್ಮ ಪರಿಶ್ರಮದಿಂದ ಅಧಿಕಾರವಿಲ್ಲದ ಸಮಯದಲ್ಲೂ ವಾಜಪೇಯಿ ನಗರ ಎಂದು ವಸತಿ ನಿವೇಶನಕ್ಕೆ ನಾಮಕರಣ ಮಾಡಲು ಶ್ರಮಿಸಿದ್ದರು ಮಾತ್ರವಲ್ಲ, ಅಟಲ್ ಜಿ ಅನಾರೋಗ್ಯ ಪೀಡಿತರಾಗಿದ್ದ ದಿನಗಳಲ್ಲಿ ಅವರ ಅಂಗಾಂಗ ಕಸಿಗೆ ತಾನು ತನ್ನ ಅಂಗಾಂಗ ದಾನ ಮಾಡಲು ಸಿದ್ಧನಿದ್ದೇನೆ ಎಂದು ಸಂದೇಶ ನೀಡಿದ್ದರು. ಇಂದು ಸಹ ಕುಶಲ್ ಶೆಟ್ಟಿಯವರು ಅಟಲ್ ಜೀ ಪುಣ್ಯ ದಿನದಂದು ಉಪವಾಸ ಆಚರಣೆ ಮಾಡುತ್ತಿದ್ದಾರೆ. 

ಹಳ್ಳಿ ಶ್ರೀಧರ್ ಶೆಟ್ಟಿ ಅವರಿಗೆ ಪ್ರಾಯ 90 ಮೀರಿದ್ದು, ಕಿವಿ ಕೇಳಿಸುತ್ತಿಲ್ಲವಾದರೂ ಇಂದಿಗೂ ಬಿಜೆಪಿ ಒಳಿತನ್ನು ಹಾರೈಸಿ ಬದುಕುತ್ತಿದ್ದು, ತನ್ನ ಎಳೆಯ ದಿನಗಳನ್ನು ಜನಸಂಘ ಮತ್ತು ಬಿಜೆಪಿಯ ಜನಪರ ಹೋರಾಟಕ್ಕೆ ಮೀಸಲಿರಿಸಿದ್ದರು. ಇಂಥ ಹಿರಿಯರ ಪರಿಶ್ರಮದ ದುಡಿಮೆಯಿಂದಲೇ ಇಂದಿನ ದಿನಗಳಲ್ಲಿ ಬಿಜೆಪಿ ದೇಶ ಆಳಲು ಸಾಧ್ಯವಾಯಿತು ಎಂದು ತಿಳಿಸಿದ ಸಚಿವ ಕೋಟ ಇಬ್ಬರು ಹಿರಿಯರನ್ನು ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚೇರ್ಕಾಡಿ ಗ್ರಾಮದ ಬಿಜೆಪಿ ಪ್ರಮುಖರಾದ ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಭಟ್, ಉಪಾಧ್ಯಕ್ಷರಾದ ಕಿಟ್ಟಪ್ಪ ಅಮೀನ್, ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಕಾರ್ಯದರ್ಶಿ ಪೇತ್ರಿ ಸುರೇಶ್ ಪೂಜಾರಿ, ಪ್ರಮುಖರಾದ ರಾಧಾಕೃಷ್ಣ ಸಾಮಂತ್, ಶ್ಯಾಮ್ ಪ್ರಸಾದ್ ಭಟ್, ರಾಜು ಮಡಿವಾಳ, ನವೀನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply