ಜೋಮ್ಲು ಫಾಲ್ಸ್ ಪ್ರಕೃತಿ ಪ್ರಿಯರಿಗೆ ಸ್ವರ್ಗ ~ ಜನಾರ್ದನ್ ಕೊಡವೂರು

ಪಶ್ಚಿಮ ಘಟ್ಟದ ತಪ್ಪಲಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಕೆಲವೊಂದು ಸುಂದರ ಪ್ರಕೃತಿ ರಮಣೀಯ ತಾಣಗಳು ಉಡುಪಿ ಜಿಲ್ಲೆಯಲ್ಲಿದ್ದು ಹೆಬ್ರಿ ಸಂತೆಕಟ್ಟೆ ಸಮೀಪದ ಜೋಮ್ಲು ಫಾಲ್ಸ್ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು. ಹರಿಯುವ ನೀರ ತೊರೆಗಳು, ಝರಿಗಳು, ಜಲಪಾತಗಳು ತಮ್ಮ ನೈಜ ಸೌಂದರ್ಯ ದಿ೦ದ ಪ್ರವಾಸಿಗರನ್ನು ಮೋಡಿ ಮಾಡುತ್ತಿವೆ.

ಬ್ರಹ್ಮಾವರ ಹೆಬ್ರಿ ರಸ್ತೆಯಲ್ಲಿ ಬ್ರಹ್ಮಾವರದಿಂದ 21ಕಿಲೋ ಮೀಟರ್ ಅಂತರದಲ್ಲಿ ಹೆಬ್ರಿಯಿಂದ 6ಕಿ.ಮೀ. ಅಂತರದಲ್ಲಿ ಸಿಗುವ ಸಂತೆಕಟ್ಟೆ ಸಣ್ಣ ಪೇಟೆಯಿಂದ ಉತ್ತರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ೫ಕಿ.ಮೀ. ಸಾಗಿದರೆ ಜೋಮ್ಲುವಿಗೆ ಹೋಗುವ ಮಣ್ಣಿನ ರಸ್ತೆಯ ಕಾಡುದಾರಿ ಸಿಗುತ್ತದೆ.

ಆ ಮಣ್ಣಿನ ರಸ್ತೆಯಲ್ಲಿ 1.5 ಕಿ.ಮೀ. ದಟ್ಟ ಅಭಯಾರಣ್ಯದಲ್ಲಿ ಸಾಗಿದರೆ ಕಾಣ ಸಿಗುವ ತಾಣವೇ ಜೋಮ್ಲು. ಒಂದು ಕಡೆ ನೀರು ಹರಿಯುವ ಭೋರ್ಗರೆತ ಮತ್ತೊಂದೆಡೆ ಅಭಯಾರಣ್ಯದಲ್ಲಿ ಹಕ್ಕಿಗಳ ಇಂಚರ ಒಟ್ಟಾರೆಯಾಗಿ ಪ್ರಾಕೃತಿಕ ದತ್ತವಾದ ಸುಂದರ ತಾಣ. ನಿರ್ಜನ ಪ್ರದೇಶವಾದ್ದರಿಂದ ತಂಡವಾಗಿ ತೆರಳುವುದು ಉತ್ತಮ.

ನದಿ ದಡದಲ್ಲಿ ಭಕ್ತರು ನಂಬಿಕೊ೦ಡು ಬಂದ ಬೊಬ್ಬರ್ಯ ಸಾನ್ನಿಧ್ಯವಿರುವುದರಿಂದ ಇಲ್ಲಿಗೆ ಧಾರ್ಮಿಕ ರೂಪ ನೀಡಿ ಜೋಮ್ಲು ತೀರ್ಥ ಎನ್ನುತ್ತಾರೆ. ಡಿಸೆಂಬರ್ ಜನವರಿಯ ಧನುರ್‌ಮಾಸದಲ್ಲಿ ಬರುವ ಎಳ್ಳಮಾವಾಸ್ಯೆಯಂದು  ವಿಶೇಷ ತೀರ್ಥ ಸ್ನಾನಕ್ಕಾಗಿ ಜನ ಜಾತ್ರೆ ಇಲ್ಲಿ ಸೇರುತ್ತದೆ. ಮಳೆಗಾಲದಲ್ಲಿ ಸೀತಾನದಿಯು ಈ ಭಾಗದಲ್ಲಿ ರಮಣೀಯವಾಗಿ ಹರಿಯುತ್ತಾಳೆ.

ಇಲ್ಲಿ ಹರಿಯುವ ನೀರು ಸ್ವಲ್ಪ ಕಡಿಮೆಯಾದ ಮೇಲೆ ನದಿಯ ಒಡಲಲ್ಲಿ ಕೆಲವು ಸುಂದರ ಜಲಪಾತಗಳು ಗೋಚರವಾಗುತ್ತವೆ. ಹೀಗಾಗಿಯೇ ಈ ಸ್ಥಳಕ್ಕೆ ಜೋಮ್ಲು ಫಾಲ್ಸ್ ಎನ್ನುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಹಾಗೂ  ನಾಲ್ಕೂರು ಗ್ರಾ.ಪಂ.  ಮತ್ತು ಚಾರಾ ವಿವೇಕಾನಂದ ಯುವ ವೇದಿಕೆ ಇವರ ಸಹಯೋಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಜಲಪಾತಕ್ಕೆ ತೆರಳುವ ದಾರಿಯನ್ನು ಸುಗಮಗೊಳಿಸಿ, ಸ್ವಚ್ಚತೆಗೆ ಆಧ್ಯತೆ ನೀಡಲಾಗಿದೆ.

ಪರಿಸರ ಸಂರಕ್ಷಣೆಯ ಬಗ್ಗೆ ಅಲ್ಲಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ಒಳಪಟ್ಟ ಜೋಮ್ಲು ತೀರ್ಥದಲ್ಲಿ ಸುರಕ್ಷತೆಗೆ  ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ  ಸಾರ್ವಜನಿಕರಿಗೆ ಇಲ್ಲಿ ಸೂಕ್ತ ಮಾಹಿತಿ ನೀಡಲಾಗುವುದು.

ತಿನ್ನಲು, ಕುಡಿಯಲು ಏನು ಬೇಕಿದ್ದರೂ ಸುಮಾರು 6 ಕಿ.ಮೀ. ದೂರದ ಸಂತೆಕಟ್ಟೆ ಅಥವಾ ಮುದ್ದೂರಿಗೆ ತೆರಳಬೇಕು. ಆದ್ದರಿಂದ ಜೋಮ್ಲು ತಾಣಕ್ಕೆ ಹೋಗುವುದಾದರೆ ಆಹಾರ ವಸ್ತುಗಳನ್ನು ಕೊಂಡೊಯ್ಯಲು ಮರೆಯಬಾರದು.

ಸಂತೆಕಟ್ಟೆಯಿ೦ದ ಬಹುತೇಕ ಕಾಡು ದಾರಿಯಲ್ಲೇ ಸಾಗಬೇಕಿದೆ. ಕಾಡುಕೋಣ, ಜಿಂಕೆ ಮೊದಲಾದ ಪ್ರಾಣಿಗಳು ಸಂಚರಿಸುವ ಸ್ಥಳವಾದ್ದರಿಂದ ಜಾಗರೂಕರಾಗಿಬೇಕು. ನದಿಯಲ್ಲಿ ಹರಿಯುವ ನೀರಿನಿಂದ ಮೊನಚಾದ ಕಲ್ಲು ಬಂಡೆಗಳು ಮತ್ತು ನೀರಿನಲ್ಲಿ ಇಳಿದರೆ ಜೀವಕ್ಕೆ ಅಪಾಯ ತರುವಂತಹ ಸುಳಿಗಳು, ಮೇಲ್ನೋಟಕ್ಕೆ ಗೋಚರವಾಗದ ದೊಡ್ಡ ಹೊಂಡಗಳು ಅಪಾಯಕಾರಿಯಾಗಿವೆ. ಪೋಷಕರು ಮಕ್ಕಳನ್ನು ಇಂತಹ ಸ್ಥಳಗಳಿಗೆ ಕಳುಹಿಸಿ ಕೊಡುವಾಗ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕು.

 
 
 
 
 
 
 
 
 
 
 

Leave a Reply