ಬ್ರಹ್ಮಾವರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ, ಉಡುಪಿ, ರಕ್ತನಿ ಕೆ.ಎಂ.ಸಿ. ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶುಕ್ರವಾರ ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ನಡೆಯಿತು.

ನಾಡೋಜ ಜಿ.ಶಂಕರ್ ಪುತ್ರಿ ಶ್ಯಾಮಿಲಿ ನವೀನ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ರಕ್ತದಾನ ಶಿಬಿರ ಕೇವಲ ಸಾಮಾಜಿಕ ಕಾರ್ಯ ಆಗದೆ ಪುಣ್ಯದ ಕಾರ್ಯವಾಗಿದೆ. ಸಮಾಜದ ಒಳಿತಿಗೆ ಇಂತಹ ಶಿಬಿರ ಹೆಚ್ಚು ಹೆಚ್ಚು ಆಗಬೇಕಿದೆ ಎಂದರು. ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೇ ದಾನ ಮಾಡುವುದಿದ್ದರೆ ಅದು ರಕ್ತದಾನ ಮಾತ್ರ ಎಂದರು. ಮೊಗವೀರ ಸಂಘಟನೆಯು ಉಡುಪಿ, ದ.ಕ ಜಿಲ್ಲೆಯಲ್ಲಿ ರಕ್ತದಾನದ ಅರಿವು ಮೂಡಿಸಿದೆ ಎಂದರು.

ಕೆ.ಎಂ.ಸಿ. ಮಣಿಪಾಲದ ರಕ್ತನಿಧಿ ಮುಖ್ಯಸ್ಥೆ ಡಾ.ಶಮ್ಮೀ ಶಾಶಾಸ್ತ್ರಿ ಮಾಹಿತಿ ನೀಡಿ ರಕ್ತದಾನಿಗಳಿಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆಯ ವಿಶೇಷ ಸೌಲಭ್ಯ ಸದ್ಯದಲ್ಲಿ ಪ್ರಾರಂಭವಾಗಲಿದೆ ಎಂದರು.  ಕೋಟಾ ಗೀತಾನಂದ ಫೌಂಡೇಶನ್‌ನ  ಪ್ರವರ್ತಕ ಆನಂದ ಸಿ.ಕುಂದರ್, ದ.ಕ ಮೊಗವೀರ ಸಂಘಟನೆಯ ಅಧ್ಯಕ್ಷ ಜಯ.ಸಿ.ಕೊಟ್ಯಾನ್, ಬಾರಕೂರು ಮೊಗವೀರ ಸಂಘಟನೆಯ ಅಧ್ಯಕ್ಷ ಸತೀಶ್ ಅಮೀನ್ ಉಪಸ್ಥಿತರಿದ್ದರು.

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಸುವರ್ಣ ಸ್ವಾಗತಿಸಿ, ಪ್ರಾಸ್ತಾವಿಸಿದರು. ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಮೊಗವೀರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್  ವಂದಿಸಿದರು.

 
 
 
 
 
 
 
 
 
 
 

Leave a Reply