ಏಕ ಸಂಸ್ಕೃತಿ ಎನ್ನುವುದು ವಿಕೃತಿ~ ರಂಗಕರ್ಮಿ ಜನ್ನಿ

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬ ಉದ್ಘಾಟಿಸಿದ ರಂಗಕರ್ಮಿ ಜನ್ನಿ.

ಉಡುಪಿ: ವಿಶ್ವದಲ್ಲಿ ಭಾರತ ಭವ್ಯವಾಗಿರುವುದು ತನ್ನ ಬಹುತ್ವದ ಕಾರಣವೆ ಹೊರತು ಏಕ ಸಂಸ್ಕೃತಿಯಿಂದಲ್ಲ ಎಂದು ರಂಗಾಯಣದ ಮಾಜಿ ನಿರ್ದೇಶಕ, ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ಹೇಳಿದರು.

ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಆರಂಭವಾಗಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟ ನೆಯ 12ನೇ ವರ್ಷದ ರಂಗಹಬ್ಬವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ಭಾಷೆ, ಪ್ರದೇಶ ಜನಾಂಗ ಒಟ್ಟಿಗೆ ಸಾಗುವುದೇ ಸಂಸ್ಕೃತಿ ಎಂದು ಪ್ರತಿಪಾದಿಸಿದರು.

ಕಲಾವಿದ ಮಾತುಗಳನ್ನು ಪ್ರೇಕ್ಷಕನೆಡೆಗೆ ದಾಟಿಸುತ್ತಾನೆ. ಅದು ಅಲ್ಲಿ ಕರಾಗತವಾಗಬೇಕು. ಅದುವೇ ರಂಗಕ್ರಿಯೆ. ಆಡುವ ಮಾತು ಹಾಡು ಆಗಬೇಕು. ಹಾಡು ಮಾತಾಗಬೇಕು. ಈ ಪ್ರಕ್ರಿಯೆಯಲ್ಲಿ ಅರ್ಥ, ಭಾವ ಇರಬೇಕು ಎಂದು ತಿಳಿಸಿದರು.

ರಂಗಭೂಮಿ ಎನ್ನುವುದು ಮನುಷ್ಯ ಸಂಬಂಧ ಬೆಸೆಯುವ ವೇದಿಕೆ. ಸತ್ಯ, ಸುಳ್ಳು, ನೋವು ನಲಿವು, ಸುಖ, ದುಃಖ ಎಲ್ಲವು ಸಮಾಜದಲ್ಲಿ, ಮನುಷ್ಯನಲ್ಲಿ ಇರುತ್ತವೆ. ಅದೆಲ್ಲವನ್ನು ತೋರಿಸುತ್ತಾ ಸುಖ, ಉಲ್ಲಾಸ, ಸತ್ಯ ಹಂಚುವ ಕೆಲಸವನ್ನು ನಾಟಕಗಳು ಮಾಡುತ್ತವೆ ಹಾಗಾಗಿಯೇ ರಂಗಭೂಮಿ ಎನ್ನುವುದು ಧರ್ಮ. ನಾಟಕಗಳು ಧರ್ಮಕಾರ್ಯ. ಮೇಲು ಕೀಳು ಎಂಬ ಭೇದ ಇಲ್ಲದೆ ಎಲ್ಲವೂ ಚೇತನಗಳು ಎಂದು ಸಾರುವ ಮಾನವ ಧರ್ಮವೇ ರಂಗಭೂಮಿ ಎಂದು ಹೇಳಿದರು.

ರಂಗಸಾಧಕ ಸನ್ಮಾನ ಸ್ವೀಕರಿಸಿದ ಕಲಾವಿದೆ ಗೀತಾ ಸುರತ್ಕಲ್ ಮಾತನಾಡಿ, ‘ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರನ್ನು ಒಳಗೊಂಡಿರುವ ಸುಮನಸಾವೇ ಒಂದು ರಂಗ ಶಿಕ್ಷಣ ಸಂಸ್ಥೆ. ಕಲಾವಿದರು, ಹಿನ್ನೆಲೆಯಲ್ಲಿರುವವರು, ಪ್ರೇಕ್ಷಕರು ಮತ್ತು ಪ್ರೋತ್ಸಾಹಕರು ಸೇರಿದರೆ ರಂಗ ಚಟುವಟಿಕೆ ಪೂರ್ಣಗೊಳ್ಳುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ‘ ಯಶಸ್ವಿ’ ಉದ್ಯಮಿ ಸಾಧು ಸಾಲ್ಯಾನ್, ಕೊಡಂಕೂರು ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದಮನೆ, ಉದ್ಯಮಿ ನವೀನ್ ಅಮೀನ್ ಶಂಕರಪುರ, ನೂತನ್ ಕ್ರೆಡಿಟ್ ಕಾಫಿ ಆಪರೇಟಿವ್ ಸೊಸೈಟಿ ಮಹಾ ಪ್ರಬಂಧಕ ಗಣೇಶ್ ಶೇರಿಗಾರ್, ‘ಸುಮನಸಾ’ದ ಗೌರವಾಧ್ಯಕ್ಷ ಎಂ. ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.

ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು.

 
 
 
 
 
 
 
 
 
 
 

Leave a Reply