ಯೋಗದ ಮೇಲೆ ಪರಿಸರದ ಪ್ರಭಾವ~ • ಡಾ.ಶ್ರೀಕಾಂತ್ ಸಿದ್ದಾಪುರ

ಯೋಗವು ನಮ್ಮ ದೇಶದ ಪ್ರಾಚೀನ ವಿದ್ಯೆ. ಇಲ್ಲಿ ಬರುವ ಆಸನಗಳ ಹೆಸರುಗಳಲ್ಲಿ ನಮ್ಮ ಸುತ್ತಲಿನ ಮರ, ಪ್ರಾಣಿ, ಪಕ್ಷಿ ಪ್ರಪಂಚವಿದೆ. ಇಲ್ಲಿನ ಉಸಿರಾಟದ ವ್ಯಾಯಾಮದಲ್ಲಿ ವಿವಿಧ ಪ್ರಾಣಿಗಳ ಉಸಿರಾಟದ ಉಲ್ಲೇಖವಿದೆ. ಹಾಗಾಗಿ ಯೋಗದ ಅಧ್ಯಯನ ಹಾಗೂ ಅಭ್ಯಾಸದ ನಡುವೆ ಪ್ರಕೃತಿಯೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಆಸನಗಳು: ಯೋಗದ ಕುರಿತು ವಿಸ್ತಾರವಾದ ಗ್ರಂಥವನ್ನು ಬರೆದವರು ಪತಂಜಲಿ ಮುನಿಗಳು. ಪತಂಜಲಿ ಮುನಿಗಳ ಪ್ರಕಾರ ಯೋಗದಿಂದ ಚಿತ್ತಶುದ್ಧಿ. ಯೋಗಸೂತ್ರದಲ್ಲಿ ಪತಂಜಲಿ ಮುನಿಗಳು ಯೋಗ ಎಂದರೆ ಚಿತ್ತವೃತ್ತಿ ನಿರೋಧಃ ಎನ್ನುತ್ತಾರೆ. ಅಷ್ಟಾಂಗಯೋಗದಲ್ಲಿ ಬರುವ ಯಮ ಹಾಗೂ ನಿಯಮಗಳು ನಮ್ಮ ಅಂತರ೦ಗದ ಶುದ್ಧಿಗೆ ಸಹಕರಿಸುತ್ತವೆ.  ಯಮ ಹಾಗೂ ನಿಯಮದೊಂದಿಗೆ ಚಿತ್ತ ಶುದ್ಧಿಗೆ ದೇಹದ ಸಹಕಾರವೂ ಅಗತ್ಯ. 
ಹಾಗಾಗಿ ಆಸನಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪತಂಜಲಿ ಮುನಿಗಳ ಪ್ರಕಾರ ಸ್ಥಿರಸುಖಮಾಸನಂ. ಅಂದರೆ ಆಸನವು ಸ್ಥಿರವೂ, ಸುಖವೂ ಆಗಿರಬೇಕು. ಆಸನಗಳನ್ನು ಮಾಡುವಾಗ ಯಾವುದೇ ಬಿಗುತನಗಳಿರಬಾರದು. ದೇಹವು ಸಡಿಲವಾಗಿ, ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುವ೦ತಿರಬೇಕು. ಮನಸ್ಸೂ ಆನಂದದಲ್ಲಿ ನೆಲೆಸಿರಬೇಕು. ಯೋಗದಲ್ಲಿ ಬರುವ ಆಸನಗಳ ಹೆಸರುಗಳನ್ನು ಗಮನಿಸಿದಾಗ ನಮ್ಮ ಸುತ್ತಲಿನ ಪ್ರಾಣಿ, ಪಕ್ಷಿ, ಮರಗಳ ನೆನಪಾಗುತ್ತದೆ. ಆಸನದ ಹೆಸರು ಹಾಗೂ ಆ ಪ್ರಾಣಿ, ಪಕ್ಷಿ ಅಥವಾ ಮರಗಳ ನಡುವೆ ಒಂದು ವಿಶೇಷ ಸಾಮ್ಯವೂ ಇದೆ. 
ಉದಾಹರಣೆಗೆ ತಾಡಾಸನ. ನಿಂತು ಮಾಡುವ ಆಸನಗಳಲ್ಲಿ ಒಂದು.  ತಾಡಾಸನದಲ್ಲಿ ತಾಳೆಯ ಮರದಂತೆ ನೇರವಾದ ನಿಲುವನ್ನು ಗುರುತಿಸಬಹುದು. ಪದ್ಮಾಸನ ಎಂದ ಕೂಡಲೇ ತಾವರೆ ಹೂವಿನ ನೆನಪಾಗುತ್ತದೆ. ಭುಜಂಗಾಸನದಲ್ಲಿ ಹಾವಿನಂತೆ ಹೆಡೆ ಎತ್ತುವ ಚಿತ್ರಣವಿದೆ. ಮಕರಾಸನದಲ್ಲಿ ಮೊಸಳೆಯ ವಿಶ್ರಾಂತಿಯಿದೆ. ಬಕಾಸನ, ಉಷ್ಟಾçಸನ, ಹಂಸಾಸನ, ಪರ್ವತಾಸನ, ಶಲಭಾಸನ ಹೀಗೆ ಹೆಸರಿಸುತ್ತಾ ಹೋಗಬಹುದು.  

ಪ್ರಾಣಾಯಾಮ: 
ಪ್ರಾಣಾಯಾಮ ಎಂದರೆ ದೀರ್ಘ ಉಸಿರಾಟ. ಉಸಿರಿನ ಮೇಲಿನ ಹಿಡಿತ. ಈ ಮೂಲಕ ಚಂಚಲ ಸ್ವಭಾವದ ಮನಸ್ಸನ್ನು ಕಟ್ಟುವ ಕೆಲಸ. ಮನಸ್ಸಿನ ಹರಿದಾಡುವ ಗುಣದಿಂದಾಗಿ ಅದರ ನಿಯಂತ್ರಣ ಸಾಧಕನಿಗೊಂದು ಸವಾಲು. ಹರಿವ ಮನಸ್ಸನ್ನು ನಿಯಂತ್ರಣಕ್ಕೆ ತಂದು ಅದನ್ನು ಪರಿಣಾಮಕಾರಿ ಯಾದ ಮಾರ್ಗದಲ್ಲಿ ತೊಡಗಿಸಿಕೊಂಡರೆ ಏನನ್ನೂ ಸಾಧಿಸಬಹುದು. ಇದಕ್ಕೆ ಅಗತ್ಯವಾದ ಉಸಿರಾಟದ ಮೇಲಿನ ಹಿಡಿತ ಸಾಧಿಸುವಲ್ಲಿಯೂ ಎಚ್ಚರ ಅಗತ್ಯ. ಬಿ.ಕೆ.ಎಸ್ ಐಯ್ಯಂಗಾರ್ ಅವರು ಹಠಯೋಗ ಪ್ರದೀಪಿಕೆಯಲ್ಲಿ ಬರುವ ಶ್ಲೋಕವೊಂದನ್ನು ತಮ್ಮ ಯೋಗ ದೀಪಿಕಾ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. 
ಈ ಶ್ಲೋಕದ ಆಶಯ ಹೀಗಿದೆ. ಹೇಗೆ ಸಿಂಹಗಳನ್ನೂ, ಆನೆಗಳನ್ನೂ, ಹುಲಿಗಳನ್ನೂ ಮೆಲ್ಲಮೆಲ್ಲಗೆ ಪಳಗಿಸಲು ಸಾಧ್ಯವೋ ಹಾಗೆಯೇ ನಮ್ಮ ಪ್ರಾಣವನ್ನು ನಿಧಾನವಾಗಿ, ಹಂತ ಹಂತವಾಗಿ ನಮ್ಮ ದೈಹಿಕ ಶಕ್ತಿಯ ಸಾಮರ್ಥ್ಯಕ್ಕನುಗುಣವಾಗಿ ಹತೋಟಿಗೆ ತರಬೇಕು. ಹುಲಿ, ಸಿಂಹ ಮತ್ತು ಆನೆಗಳನ್ನು ಪಳಗಿಸುವಲ್ಲಿ ಎಡವಿದರೆ ಅವುಗಳು ನಮಗೆ ತಿರುಗಿ ಬೀಳಬಹುದು. ನಮ್ಮ ಪ್ರಾಣಕ್ಕೇ ಅಪಾಯ ತರಬಹುದು. 
ಉಸಿರಾಟದ ನಿಯಂತ್ರಣದ ಅಭ್ಯಾಸದಲ್ಲೂ ಇದೇ ವಿಧದ ಎಚ್ಚರ ಅಗತ್ಯ.  ತಾಳ್ಮೆಯೊಂದಿಗೆ ಸತತವಾದ ಪ್ರಯತ್ನವೂ ಬೇಕು.  ಯೋಗದಲ್ಲಿ ಇದಕ್ಕಾಗಿ ಉಸಿರಾಟಕ್ಕೆ ಸಂಬ೦ಧಿಸಿದ ವಿವಿಧ ವ್ಯಾಯಾಮಗಳಿವೆ. ಬೇರೆ ಬೇರೆ ಪ್ರಾಣಿಗಳ ಉಸಿರಾಟದ ಅನುಕರಣೆಗಳಿವೆ. ಶ್ವಾನಶ್ವಾಸ ಎಂದರೆ ನಾಯಿಯಂತೆ ಉಸಿರಾ ಡುವುದು (Dog breathing). ಶಶಶ್ವಾಸ ಎಂದರೆ ಮೊಲದಂತೆ ಉಸಿರಾಡುವುದು  (Rabit breathing). ವ್ಯಾಘ್ರಶ್ವಾಸ ಎಂದರೆ ಹುಲಿಯಂತೆ ಉಸಿರಾಡುವುದು  (Tiger breathing).     ಈ ಪ್ರಾಣಿಗಳ ಹೆಸರಿನ ಉಸಿರಾಟದ ವ್ಯಾಯಾಮಗಳ ಅಭ್ಯಾಸದಿಂದ ನಮ್ಮ ಶ್ವಾಸಕೋಶವನ್ನು ಸಂಪೂರ್ಣವಾಗಿ ಉಸಿರಾಟದ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು.
 
ದೀರ್ಘಾಯುಷ್ಯ: ಮನುಷ್ಯ ಹಾಗೂ ಪ್ರಾಣಿಗಳ ಉಸಿರಾಟದ ವೇಗಗಳ ಅಧ್ಯಯನ ಇನ್ನೊಂದು ಅಚ್ಚರಿಯ ಸಂಗತಿ. ಪ್ರತಿ ನಿಮಿಷಕ್ಕೆ ಮನುಷ್ಯರನ್ನೂ ಒಳಗೊಂಡ೦ತೆ ವಿವಿಧ ಪ್ರಾಣಿಗಳ ಉಸಿರಾಟದ ಲೆಕ್ಕಾಚಾರದ ಅಧ್ಯಯನಕ್ಕೆ ನಮ್ಮ ಯೋಗಿಗಳು ಮುಂದಾದರು. ಈ ಅಧ್ಯಯನ ಮೂಲಕ ಆಯುಷ್ಯ ವೃದ್ಧಿಯ ರಹಸ್ಯವನ್ನು ಕಂಡು ಕೊಂಡರು. ಉಸಿರಾಟದ ವೇಗ ಕಡಿಮೆಯಾದಷ್ಟೂ ಆಯುಷ್ಯ ಜಾಸ್ತಿ. ಆಮೆಯ ಉಸಿರಾಟ ಪ್ರತಿ ನಿಮಿಷಕ್ಕೆ ಐದು. ಹಾಗಾಗಿ ಅದು 150-200 ವರ್ಷಗಳ ಕಾಲ ಬದುಕುತ್ತದೆ. ಮನುಷ್ಯನ ಉಸಿರಾಟ ನಿಮಿಷಕ್ಕೆ 15. ಅಂದರೆ ಒಂದು ಗಂಟೆಗೆ 900. ಒಂದು ದಿನಕ್ಕೆ 21,600
ಧ್ಯಾನ: ಯೋಗದ ಇನ್ನೊಂದು ಅಂಗ ಧ್ಯಾನ.  ಅಷ್ಟಾಂಗ ಯೋಗದಲ್ಲಿ ಏಳನೆಯ ಅಂಗ. ಧ್ಯಾನ ಎಂದರೆ ಒಳ್ಳೆಯ ವಿಚಾರಗಳತ್ತ ಮನಸ್ಸಿನ ಪ್ರಯಾಣ. ಪಾಳಿ ಭಾಷೆಯಲ್ಲಿ ಝಾನ. ಈ ಮನಸ್ಸಿನ ಯಾನಕ್ಕೆ ಶ್ರೀ ಕೃಷ್ಣ ಹೇಳಿದಂತೆ ಅಭ್ಯಾಸ ಹಾಗೂ ವೈರಾಗ್ಯಗಳು ಮುಖ್ಯ. ಅದರೊಂದಿಗೆ ಮನಸ್ಸಿಗೆ ಮುದ ಕೊಡುವ ಶುಚಿಯಾದ ಪರಿಸರವೂ ಅಗತ್ಯ. ಹಾಗಾಗಿ ಇಂಥ ಪರಿಸರವನ್ನು ನಮ್ಮ ಹಿರಿಯರು ಪ್ರೀತಿಸಿದರು. ಅದರ ನಡುವೆ ಖುಷಿ ಕಂಡರು.
 
ಅ೦ತರ೦ಗದ ಸ್ವಚ್ಛತೆ ಯೋಗದ ಉದ್ದೇಶಗಳಲ್ಲಿ ಒಂದು. ಈ ಮೂಲಕ ಪ್ರತಿ ವ್ಯಕ್ತಿಯ ವಿಕಸನ. ಆರೋಗ್ಯಪೂರ್ಣ ಸಮಾಜ ನಿರ್ಮಾಣ. ಮನುಷ್ಯನ ಮನಸ್ಸು ಶುದ್ಧವಾದಷ್ಟೂ ಪರಿಸರವೂ ಶುದ್ಧವಾಗುತ್ತದೆ. ನಮ್ಮ ಸುತ್ತಲಿನ ಪರಿಸರವೂ ಉಳಿಯಲಿ. ಇದರೊಂದಿಗೆ ಮನುಷ್ಯನ ಆರೋಗ್ಯವೂ ಉತ್ತಮವಾಗಲಿ. ಉತ್ತಮ ಮಾನಸಿಕ ಪರಿಸರದೊಂದಿಗೆ ಸಮಾಜದಲ್ಲಿಯೂ ನೆಮ್ಮದಿಯ ವಾತಾವರಣ ಮೂಡಲಿ.
• ಡಾ.ಶ್ರೀಕಾಂತ್ ಸಿದ್ದಾಪುರ
 
 
 
 
 
 
 
 
 
 
 

Leave a Reply