ಉಡುಪಿ ಶ್ರೀಪುತ್ತಿಗೆ ಪರ್ಯಾಯದ ಪೂರ್ವಾಭಾವಿ ಮುಹೂರ್ತಗಳು.~* ಜನಾರ್ದನ್ ಕೊಡವೂರು

06.12.2023 ಗುರುವಾರ ಬೆಳಿಗ್ಗೆ ಗಂಟೆ 8.20ರ ಧನುರ್ಲಗ್ನ ಸುಮೂಹೂರ್ತದಲ್ಲಿ ಧಾನ್ಯ ಮಹೂರ್ತ
ಕಡತ ಚಿತ್ರಗಳು: ಅನಂತಕೃಷ್ಣ ಭಾಗವತ್

ವಿಶ್ವವಿಖ್ಯಾತ ಉಡುಪಿಯ ಪರ್ಯಾಯ 2024 ಜನವರಿ 18ರಂದು ನಡೆಯಲಿದೆ. ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠ ಪರ್ಯಾಯೋತ್ಸವಕ್ಕೆ ಅಣಿಯಾಗುತ್ತಿದೆ. ಸ್ವಾಗತ ಸಮಿತಿ ಸಂಪನ್ಮೂಲದ ಕ್ರೂಢೀಕರಣ ಹಾಗು ಪರ್ಯಾಯದ ಯಶಸ್ವಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಪುತ್ತಿಗೆ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗು ಶಿಷ್ಯ ಶ್ರೀಶ್ರೀ ಸುಶ್ರೀ೦ದ್ರತೀರ್ಥ ಶ್ರೀ ಪಾದರೊಂದಿಗೆ ಜನವರಿ ಜನವರಿ 08ರಂದು ಪುರಪ್ರವೇಶಗೆಯ್ಯಲಿದ್ದಾರೆ. ಶ್ರೀಪಾದರು ಸರ್ವಜ್ಞ ಪೀಠಾರೂಢಾರಾಗುವ ಮೊದಲ ನಾಲ್ಕು ಮೂಹೂರ್ತಗಳು ಇಲ್ಲಿ ಪ್ರಾಮುಖ್ಯ

ಶ್ರೀಕೃಷ್ಣನ ಪೂಜೆಯ ಕೈಂಕರ್ಯದ ದೀಕ್ಷೆಯ ಸರದಿ ಬರುವ ಸ್ವಾಮಿಗಳ ಮಠ, ಪರ್ಯಾಯ ಮಠ ಮತ್ತು ಪರ್ಯಾಯ ಮಠದ ಸ್ವಾಮಿಗಳನ್ನು ಎರಡು ವರ್ಷಗಳ ಅವಧಿಗೆ ಪರ್ಯಾಯ ಸ್ವಾಮಿಗಳೆಂದು ಕರೆಯುವುದು ವಾಡಿಕೆ. 2ತಿಂಗಳಿಗೊಮ್ಮೆ ಇದ್ದ ಪರ್ಯಾಯವನ್ನು ಶ್ರೀ ವಾದಿರಾಜರು ಎರಡು ವರ್ಷಗಳ ಪದ್ಧತಿಗೆ ನಾಂದಿ ಹಾಡಿದರು. ಪರ್ಯಾಯದ ಒಂದು ವರ್ಷ ಮೊದಲೇ ಪೂರ್ವಭಾವಿ ಮುಹೂರ್ತಗಳು ಪ್ರಾರಂಭವಾಗುವುದು. ಅದರಲ್ಲಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆೆ ಮುಹೂರ್ತ ಮತ್ತು ಧಾನ್ಯ (ಭತ್ತ)ಮುಹೂರ್ತ ಬಹು ಮುಖ್ಯವಾದುವು.

 

ಬಾಳೆ ಮುಹೂರ್ತ: ಪರ್ಯಾಯ ಮಠದ ಪುರೋಹಿತರು ಮತ್ತು ಮಠದ ದಿವಾನರ ನೇತೃತ್ವದಲ್ಲಿ ಚಂಡೆ, ವಾದ್ಯ ಹಾಗು ಬಿರುದಾವಳಿಗಳೊಂದಿಗೆ ಅದ್ದೂರಿ ಮೆರವಣಿಗೆ ಶ್ರೀಕೃಷ್ಣ ಮಠಕ್ಕೆ ಬಂದು ಚಂದ್ರೇಶ್ವರ, ಅನಂತೇಶ್ವರ, ಶ್ರೀಕ್ರಷ್ಣ ಮಠ, ಮುಖ್ಯಪ್ರಾಣ ಹಾಗು ಆಚಾರ್ಯ ಮಧ್ವರ ಪ್ರತಿಮೆ ಬಳಿ ಪ್ರಾರ್ಥನೆ ಸಲ್ಲಿಸಿ ಪುತ್ತಿಗೆ ಪರ್ಯಾಯ ಮಠದ ತೋಟದಲ್ಲಿ ತುಳಸಿ ಹಾಗು ಬಾಳೆಯ ಗಿಡಗಳನ್ನು ನೆಟ್ಟು ಮುಹೂರ್ತ ನೆರವೇರಿಸುವರು.

 

ಅಕ್ಕಿ ಮುಹೂರ್ತ: ಸಾವಿರಾರು ಜನರಿಗೆ ದಿನನಿತ್ಯ ನಡೆಯುವ ಅನ್ನಸಂತರ್ಪಣೆಗೊಸ್ಕರ ಬೇಕಾದಷ್ಟು ಅಕ್ಕಿಯನ್ನು ದಾಸ್ತಾನು ಮಾಡುವ ಕ್ರಮಕ್ಕೆ ಅಕ್ಕಿ ಮುಹೂರ್ತ ಎನ್ನುವರು. ಅಕ್ಕಿಮುಡಿಯನ್ನು ಅಲಂಕರಿಸಿ ಚಿನ್ನದ ಪಾಲಕಿಯಲ್ಲಿರಿಸಿ ಮೆರವಣಿಗೆಯಲ್ಲಿ ಬಮದು ಶ್ರೀಕೃಷ್ಣಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಪರ್ಯಾಯ ಮಠಕ್ಕೆ ಮರಳುತ್ತಾರೆ. ಅಕ್ಕಿ ಮುಹೂರ್ತಕ್ಕೆ ವಿಶೇಷವೆಂದರೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಠದಲ್ಲಿದ್ದು ಕಾರ್ಯಕ್ರಮಗಳನ್ನು ನೆರವೇರಿ ಸುತ್ತಾರೆ. ಅಂದು ಉಳಿದ ಮಠಾಧಿಪತಿಗಳನ್ನು ಕರೆದು ಮಾಲಿಕೆ ಮಂಗಳಾರತಿ, ಕಾಣಿಕೆಗಳಿಂದ ಸತ್ಕರಿಸಲಾಗುತ್ತದೆ

 

ಕಟ್ಟಿಗೆ-ಮುಹೂರ್ತ: ಕಟ್ಟಿಗೆಯ ಹೊರೆಯನ್ನು ಹೊತ್ತ ಮಠದ ಸಿಬ್ಬಂದಿಗಳು ಮೆರವಣಿಗೆಯಲ್ಲಿ ಸಾಗಿ ಬಂದು ಉರುವಲನ್ನು ಸಂಗ್ರಹಿಸಿಡಲು ಕಟ್ಟಿಗೆಯ ತುಂಡುಗಳನ್ನು ವಿಶಿಷ್ಠ ರೀತಿಯಲ್ಲಿ ರಥದಂತೆ ಜೋಡಿಸುತ್ತಾರೆ. ಸುಮಾರು ಐವತ್ತು ಅಡಿ ಎತ್ತರದ ಈ ‘ಕಟ್ಟಿಗೆ ರಥ’ ಭೋಜನಶಾಲೆಯ ಹಿಂದೆ ಇದ್ದು ನೋಡುಗರ ಮನ ಸೂರೆಗೊಳ್ಳುತ್ತದೆ. ಪರ್ಯಾಯದ ಕೊನೆಯ ಹಂತದಲ್ಲಿ ಈ ಕಟ್ಟಿಗೆಯನ್ನು ಅಡುಗೆಗೆ ಉಪಯೋಗಿಸುತ್ತಾರೆ.

 

ಭತ್ತ-ಮುಹೂರ್ತ: ಮುಹೂರ್ತದಲ್ಲಿ ಕೊನೆಯದಾದ ಭತ್ತ ಮುಹೂರ್ತದ ವಿಧಿವಿಧಾನಗಳು ಬಡಗುಮಾಳಿಗೆಯಲ್ಲಿ ಪ್ರಾರಂಭವಾಗುತ್ತವೆ. ನಾಳೆ 06.12.2023 ಗುರುವಾರ ಬೆಳಿಗ್ಗೆ ಗಂಟೆ 8.20ರ ಧನುರ್ಲಗ್ನ ಸುಮೂಹೂರ್ತದಲ್ಲಿ ಭತ್ತದ ಚೀಲವನ್ನು ಸಿಂಗರಿಸಿ ಶ್ರೀ ಮಠದ ಪುರೋಹಿತರು ಪೂಜೆ ನಡೆಸಿ ಅಷ್ಠಮಠದ ವಿದ್ವಾಂಸರಿಗೆ, ದಿವಾನರಿಗೆ ಗೌರವ ಸಲ್ಲಿಸುತ್ತಾರೆ. ಎಲ್ಲ ಮುಹೂರ್ತಗಳು ನಿರಂತರ ಅನ್ನದಾನದ ಪೂರಕ ವ್ಯವಸ್ಥೆಗಾಗಿಯೆ ಮಾಡಲಾಗುತ್ತದೆ. ಇದೇ ದಿವಸ ಕಟ್ಟಿಗೆ ರಥದ ಶಿಖರದಲ್ಲಿ ಮುಕುಟವನ್ನು ಇರಿಸುವ ಕಾರ್ಯಕ್ರಮದೊಂದಿಗೆ ಪರ್ಯಾಯ ಪೂರ್ವಭಾವಿ ಮುಹೂರ್ತಗಳೆಲ್ಲ ಮುಕ್ತಾಯ ಹಂತಕ್ಕೆ ಬರುವುದು.

ಈವರೆಗೆ ಪ್ರತಿಯೊಂದು ಮುಹೂರ್ತವು ಅತ್ಯಂತ ಯಶಸ್ವಿಯಾಗಿ, ಪರ್ಯಾಯ ಸ್ವಾಮಿಗಳ ಸಂಕಲ್ಪದ೦ತೆ ನಡೆಯುತ್ತಿದೆ. ಎರಡು ವರ್ಷದ ವಿಶ್ವ ಗೀತಾ ಪರ್ಯಾಯದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಶ್ರೀಗಳು ಹಮ್ಮಿಕೊಂಡಿದ್ದಾರೆ. ಶ್ರೀಮಠದ ವಿಶೇಷ ಅಭಿಮಾನಿಗಳು, ಸ್ವಾಗತ ಸಮಿತಿಯ ಸರ್ವ ಸದಸ್ಯರು, ಶ್ರೀಗಳ ಶಿಷ್ಯವರ್ಗ ಹಾಗು ಉಡುಪಿಯು ಜನತೆ ಈ ಎಲ್ಲಾ ಸತ್ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದಾರೆ.
ಪ್ರಸನ್ನ ಆಚಾರ್ಯ
ಶ್ರೀ ಪುತ್ತಿಗೆ ಮಠ, ಉಡುಪಿ

 
 
 
 
 
 
 
 
 
 
 

Leave a Reply