ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿಯ ಸಮಾಲೋಚನಾ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ, ಭಜನಾ ತರಬೇತಿ, ಭಜನಾ ಮಂದಿರಗಳಿಗೆ ಸಹಾಯ ಹಸ್ತದ ಜೊತೆಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯಕ್ರಮಗಳು ಭಜನಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ(ರಿ.) ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ಇದರ ಜಿಲ್ಲಾ ಕಛೇರಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ತಾಲೂಕು ಭಜನಾ ಪರಿಷತ್ ಸಮಾಲೋಚನಾ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತಾಡಿದರು.

ಶ್ರೀ ಕೃಷ್ಣನ ನೆಲೆವೀಡು ಉಡುಪಿ ಹಾಗೂ ತಾಲೂಕಿನಾದ್ಯಂತ ಪಸರಿಸಿರುವ ಗರಿಷ್ಠ ಭಜನಾ ಮಂಡಳಿಗಳನ್ನು ಒಗ್ಗೂಡಿಸಿ ಉಡುಪಿ ತಾಲೂಕು ಭಜನಾ ಪರಿಷತ್ತಿನಲ್ಲಿ ನೊಂದಾವಣೆಗೊಳಿಸುವ ಜೊತೆಗೆ ವಿನೂತನ ಕಾರ್ಯಕ್ರಮಗಳ ಮೂಲಕ ಭಜನಾ ಪರಿಷತ್ತನ್ನು ಸದೃಢವಾಗಿ ಬೆಳೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.

ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ ಪ್ರಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಾದ್ಯoತ ಭಜನಾ ಮಂಡಳಿಗಳನ್ನು ಭಜನಾ ಪರಿಷತ್ ಜೊತೆಗೆ ಸಂಘಟಿಸುವ ಮೂಲಕ ಸಮಾಜದಲ್ಲಿ ಭಜನೆಯನ್ನು ಇನ್ನಷ್ಟು ಪ್ರಚಲಿತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.

ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ವಲಯ ಮಟ್ಟದಿಂದ ಭಜನಾ ಪರಿಷತ್ತನ್ನು ಸಂಘಟಿಸುವ ಅಗತ್ಯತೆಯ ಬಗ್ಗೆ ವಿವರಿಸಿ, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ಭಜನಾ ಪರಿಷತ್ ನೇತೃತ್ವದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿ, ಭಜನಾ ಪರಿಷತ್ತಿನ ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗಳ ಯಶಸ್ವಿಗೆ ಎಲ್ಲರ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ತಾಲೂಕು ಯೋಜನಾಧಿಕಾರಿ ರಾಮ ಎಮ್., ತಾಲೂಕು ಭಜನಾ ಪರಿಷತ್ತಿನ ಉಪಾಧ್ಯಕ್ಷರುಗಳಾದ ವಜ್ರಾಕ್ಷಿ ಪಿ. ದಾಸ್, ಸುಮಿತ್ರ ನಾಯ್ಕ್, ಸತೀಶ್ ಕುಮಾರ್ ಕೇದಾರ್, ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ವಲಯ ಸಂಯೋಜಕಿಯರಾದ ಗೀತಾ, ಯಶೋದಾ, ಲಲಿತಾ, ಯೋಜನೆಯ ವಲಯ ಮೇಲ್ವಿಚಾರಕರುಗಳಾದ ಸುಜಾತ ಉಡುಪಿ, ಮಂಜುಳಾ ಮಣಿಪಾಲ, ಸುಜಾತ ಮಲ್ಪೆ, ಪವಿತ್ರ ಅಂಬಾಗಿಲು, ಮನೋರಮ ಪೆರ್ಡೂರು, ಕೃಷಿ ಮೇಲ್ವಿಚಾರಕ ಮಂಜುನಾಥ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್ ಸ್ವಾಗತಿಸಿದರು. ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ಉಪ್ಪೂರು ವಲಯ ಮೇಲ್ವಿಚಾರಕ ಮನೀಶ್ ವಂದಿಸಿದರು.

 
 
 
 
 
 
 
 
 
 
 

Leave a Reply