ಅಮೇರಿಕಾದ “ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕ” ವತಿಯಿಂದ ಯುಗಾದಿ ಸಂಭ್ರಮಾಚರಣೆ

ಕಳೆದ ಪ್ಲವ  ಸಂವತ್ಸರದ ಸೌರ ಯುಗಾದಿಯಂದು ಅಮೇರಿಕಾದಲ್ಲಿ ಉದ್ಘಾಟನೆಗೊಂಡ “ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕ”, ಈ ವರುಷದ ಏಪ್ರಿಲ್ ೧೬ರಂದು ಶುಭಕೃತ್ ಸಂವತ್ಸರದ  ಸೌರ ಯುಗಾದಿ ಹಬ್ಬದ ಸಂಭ್ರಮಾಚರಣೆಯನ್ನು ಸಡಗರದಿಂದ ಆಚರಿಸುವುದರೊಂದಿಗೆ ಎರಡನೇ ವರುಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿತು.
ಕಳೆದ ವರುಷ ಉದ್ಘಾಟನಾ ಸಮಯದಲ್ಲಿ ನೂರರ ಆಸುಪಾಸಿನಲ್ಲಿದ್ದ ಶಿವಳ್ಳಿ ಕುಟುಂಬದ ಸದಸ್ಯತ್ವವು ಇಂದು ಆರುನೂರಕ್ಕೂ ಮಿಕ್ಕಿ ಬೆಳೆಯುತ್ತಿರುವುದು ಕುಟುಂಬದ ಸಂಘಟನಾ ಶಕ್ತಿಗೆ ಸಾಕ್ಷಿ ಎಂದೇ ಹೇಳಬೇಕು. ಭಾರತದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ನಡೆ-ನುಡಿ ಇವೆಲ್ಲವನ್ನೂ ಇಲ್ಲಿಯೇ ಹುಟ್ಟಿ ಬೆಳೆಯುತ್ತಿರುವ ಮುಂದಿನ ಜನಾಂಗಕ್ಕೆ ಆದಷ್ಟೂ ಕಲಿಸಿ, ಮನವರಿಕೆ ಮಾಡಿ ಕೊಡುವ ಮತ್ತು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲ ಉದ್ದೇಶದಿಂದ ಸಂಸ್ಥಾಪಿಸಲ್ಪಟ್ಟ ಶಿವಳ್ಳಿ ಕುಟುಂಬ ಎನ್ನುವ ಸಂಘಟನೆ ಮುಂದಿನ ವರುಷಗಳಲ್ಲಿ ಇನ್ನೂ ಅನೇಕ ಸಮಾಜಮುಖೀ ಚಟುವಟಿಕೆಗಳನ್ನು ನಡೆಸುವ ಧ್ಯೇಯವನ್ನೂ ಹೊಂದಿದೆ.    

೨೦೨೦ರಲ್ಲಿ ಜಗತ್ತಿಗೆ ಬಂದೆರಗಿದ ಕೊರೋನಾ ಮಹಾಮಾರಿಯ ದೆಸೆಯಿಂದ ಕೇವಲ ಅಂತರ್ಜಾಲದಲ್ಲಷ್ಟೇ ಪ್ರಸಾರಗೊಂಡ ಈ ವರುಷದ ಯುಗಾದಿಯ ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದವರು ವೀಣಾ ಬನ್ನಂಜೆ. ತನ್ನ ಅದ್ಭುತವಾದ ವಿಚಾರಧಾರೆಯಿಂದ ಕುಟುಂಬದ ಸದಸ್ಯರಿಗೆಲ್ಲ “ಯುಗಾದಿ ಹಬ್ಬದ ಆಚರಣೆ, ವೈಶಿಷ್ಟ್ಯ” ಇದರ ಬಗ್ಗೆ ಅಪರೂಪದ ವಿಚಾರಗಳನ್ನು ತಿಳಿಸುವುದರ ಮೂಲಕ ಕುಟುಂಬದ ಹಿರಿ-ಕಿರಿಯ ಮತ್ತು ಎಳೆಯ ಮನಸುಗಳಿಗೆ ಶುಭ ಹಾರೈಸಿದರು. ಮೊದಲಿಗೆ ಕುಟುಂಬದ ಯುವ ಸ್ಯಾಕ್ಸೋಫೋನ್ ಕಲಾವಿದ ಚಿಕಾಗೋದ ಸಿದ್ದಾರ್ಥ್ ರಾವ್ ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಗಳಿಗೆ  ನಾಂದಿ ಹಾಡಿದರು.
 

ಮುಂದಿನ ಸುಮಾರು ಐದು  ಘಂಟೆಗಳಿಗೂ ಮಿಕ್ಕಿ ಕುಟುಂಬದ ವಿವಿಧ ತಂಡಗಳಿಂದ ನಡೆದ ನೃತ್ಯ, ಗಾಯನ ಮತ್ತಿನ್ನಿತರ ಕಾರ್ಯಕ್ರಮಗಳು ಎರಡನೇ ವರುಷದ ಸಂಭ್ರಮಾಚರಣೆಯನ್ನು ಒಂದು ನೆನಪಿನಲ್ಲಿರಿಸಿಕೊಳ್ಳುವಂಥಾ ದಿನವನ್ನಾಗಿಸಿತು. ಕುಟುಂಬದ ಸದಸ್ಯರಷ್ಟೇ ಅಲ್ಲದೇ ಉಡುಪಿ ಮತ್ತು ಮಂಗಳೂರಿನ ಅನೇಕ ಕಲಾವಿದರು ತಾವಿದ್ದಲ್ಲಿಂದಲೇ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟು ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಇನ್ನಷ್ಟೂ ಕಳೆ ಮೂಡಿಸುವುದರಲ್ಲಿ ಯಶಸ್ವಿಯಾದರು.

ಶ್ರೀ ನಿತ್ಯಾನಂದ ರಾವ್ ಇವರ ನೇತೃತ್ವದಲ್ಲಿ ಆಯೋಜನೆಗೊಂಡ  ಕೆಮ್ಮಣ್ಣು ಸಹೋದರಿಯರ ಶಾಸ್ತ್ರೀಯ  ಸಂಗೀತ ಮತ್ತು ಕೃಷ್ಣ ಪವನ ಕುಮಾರ್ ಅವರ ಕೊಳಲು ವಾದನ  ನಿಕ್ಷಿತ್ ಪುತ್ತೂರು (ಮೃದಂಗ), ವಿಶ್ವಜಿತ್ ಮತ್ತೂರು (ಪಿಟೀಲು), ಕಾರ್ತಿಕ್ ಭಟ್ ಇನ್ನಂಜೆ (ಖಂಜೀರ) ಇವರ ಸಹವಾದನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮೂಡಿ ಬಂದಿತು.
 

ಜಗತ್ತಿನೆಲ್ಲೆಡೆಯಿಂದ ಹರಿದು ಬಂದ ಅನೇಕ ಗಣ್ಯರ ಮತ್ತು ಕುಟುಂಬದ ಆಡಳಿತ ಮಂಡಳಿಯಿಂದ ಕಾರ್ಯಕ್ರಮದುದ್ದಕ್ಕೂ ಆಗಾಗ್ಗೆ ಮೂಡಿ ಬರುತ್ತಿದ್ದ ಶುಭಸಂದೇಶ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿದ್ದ ಕುಟುಂಬದ ಸುಮಾರು ಐದುನೂರರಷ್ಟು ವೀಕ್ಷಕ ಸದಸ್ಯರಿಗೆ ತಾವೇ ನೀರೆರೆದು ನೆಟ್ಟ ಚಿಕ್ಕದಾದ  ಗಿಡವೊಂದು ಶೀಘ್ರದಲ್ಲಿಯೇ ಬೆಳೆದು ಹೆಮ್ಮರವಾಗಿ ನಿಲ್ಲುವ ಕುರುಹನ್ನು ಕೇವಲ ಒಂದೇ ವರುಷದಲ್ಲಿ ನೀಡಿದ್ದು ಆಶ್ಚರ್ಯವಲ್ಲ.  

ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಸುಮಾರು ನಾಲ್ಕು ವಾರಕ್ಕೂ ಅಧಿಕವಾಗಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿಯು ಯಶಸ್ವೀ ಪ್ರಸಾರಗೊಳ್ಳುವುದರೊಂದಿಗೆ ಎಲ್ಲರ ಮನ್ನಣೆಗೆ ಪಾತ್ರವಾಯಿತು. ಇದುವರೆಗೆ ಯೂಟ್ಯೂಬಿನಲ್ಲಿ ಅಂದಿನ ಕಾರ್ಯಕ್ರಮವನ್ನು ಸುಮಾರು ಒಂದು ಸಾವಿರದ ಮುನ್ನೂರಕ್ಕೂ  ಹೆಚ್ಚು ವೀಕ್ಷಕರು ವೀಕ್ಷಿದ್ದಾರೆ.   ವರದಿ~ ಶ್ರೀವತ್ಸ ಬಲ್ಲಾಳ, ಹಿರಿಯರ ಚಾವಡಿ ಮತ್ತು ಯುವ ವೇದಿಕೆ, ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕಾ

 
 
 
 
 
 
 
 
 
 
 

Leave a Reply