Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಶ್ರೀಕೃಷ್ಣನ ಸ್ತ್ರೀಪ್ರೇಮ~ಪಿ.ಲಾತವ್ಯ ಆಚಾರ್ಯ

ಜಗತ್ತಿನ ವಿವಿಧ ಧರ್ಮಗಳ ಪ್ರಮುಖ ದೇವರುಗಳ ಮಹಿಮೆ, ಸಾಧನೆ, ಸಂದೇಶ, ಪ್ರೀತಿ, ನೀತಿ ವೈವಿಧ್ಯತೆ ಗಳನ್ನು ಅವಲೋಕಿಸುತ್ತಾ ಸಾಗುವಾಗ ಭಾಗವತದ ಶ್ರೀಕೃಷ್ಣನ ಪಾತ್ರ ಅನೇಕ ಕಾರಣಗಳಿಗಾಗಿ ಮನದಾಳದಲ್ಲಿ ಅಚ್ಚೊತ್ತಿ ಬಿಡುತ್ತದೆ.ಸೌಂದರ್ಯ, ಪರಾಕ್ರಮ, ತಂತ್ರಗಾರಿಕೆ, ಧರ್ಮ, ನೀತಿ ಎಲ್ಲದರಲ್ಲೂ ಅಗ್ರಮಾನ್ಯನೆನಿಸಿ ಕೊಂಡ ಶ್ರೀಕೃಷ್ಣ ಸರ್ವರಿಗೂ ಕರುಣಾಮಯಿಯಾಗಿದ್ದು ಎಲ್ಲಾ ವರ್ಗದವರ ಪ್ರೀತಿ ಪ್ರೇಮಕ್ಕೆ ಪಾತ್ರನಾಗುತ್ತಾನೆ.
ಅದರಲ್ಲೂ ಶ್ರೀಕೃಷ್ಣನಿಗೆ ಸ್ತ್ರೀಯರ ಮೇಲಿದ್ದ ಪ್ರೀತಿ, ಮಾತೃವಾತ್ಸಲ್ಯ ಸಹೋದರತೆ, ವಚನಬದ್ಧತೆ ಅಬಲೆಯರಿಗೆ ಅಭಯ ನೀಡುವ ಅಂತ:ಕರಣ, ಕರುಣೆ ಬೇರಾವ ಕಥಾ ನಾಯಕರುಗಳಲ್ಲಿ ಕಾಣಸಿಗದ ಉತ್ಕೃಷ್ಟಗುಣ. ಶ್ರೀಕೃಷ್ಣನ ಅವತಾರದಿಂದ ಅಂತರ್ಧಾನದವರೆಗೆ ಪ್ರತೀ ಹಂತದಲ್ಲೂ ಸ್ತ್ರೀಪರ ವಿಶೇಷ ಕಾಳಜಿ ಗೋಚರವಾಗುತ್ತದೆ.

ಮಾತೃದೇವೋಭವ ಎಂಬ ವೇದ ವಾಕ್ಯಾನುಸಾರ ಶ್ರೀ ಕೃಷ್ಣನ ಮಾತೃವಾತ್ಸಲ್ಯಕ್ಕೆ ಎಣೆಯೇ ಇಲ್ಲ .ಕಂಸನ ಸೆರೆಯಲ್ಲಿದ್ದ ದೇವಕಿಗೆ ಶ್ರೀಕೃಷ್ಣನ ಪ್ರಸವವಾದಾಗ ಪ್ರಸವ ವೇದನೆಯೇ ಅರಿವಾಗಲಿಲ್ಲವಂತೆ. ಅಂದ ಮೇಲೆ ಶ್ರೀಕೃಷ್ಣನ ಮಾತೃಭಕ್ತಿಗೆ ಬೇರೆ ಮಾತು ಬೇಕೆ. ಇಲ್ಲಿಂದ ಆರಂಭವಾಗುವ ಸ್ತ್ರೀಪ್ರೇಮ ಪ್ರತೀ ಹಂತದಲ್ಲೂ ಪ್ರಕಟಗೊಳ್ಳುತ್ತಾ ಹೋಗುತ್ತದೆ.  ಕಾರಾಗ್ರಹದಿಂದ ಗೌಪ್ಯವಾಗಿ ಯಶೋಧೆಯ ಮಡಿಲನ್ನು ನಡುರಾತ್ರಿಯಲ್ಲಿ ಸೇರುವ ಕೃಷ್ಣ ಕ್ಷಣಕ್ಷಣವೂ ತನ್ನ ಮಹಿಮೆಯಿಂದ ನಂದಗೋಕುಲವನ್ನು ಭಕ್ತಿಜ್ಞಾನದ ಬೃಂದಾವನವನ್ನಾಗಿಸುತ್ತಾನೆ.

ಒಮ್ಮೆ ಮನೆಯ ಮುಂಭಾಗದಲ್ಲಿ ಅಂಬೆಗಾಲಿಕ್ಕುತ್ತಾ ಆಟವಾಡುತ್ತಿದ್ದ ಕೃಷ್ಣನು ಅಂಗಳದಲ್ಲಿದ್ದ ಮಣ್ಣನ್ನು ಹೆಕ್ಕಿ ಗಬಕ್ಕನೆ ತಿಂದು ಬಿಡುವನು. ಇದನ್ನು ಕಂಡ ಯಶೋದೆಯು ಓಡೋಡಿ ಬಂದು ಬಾಯನ್ನು ತೆರೆಯುವಂತೆ ಗದರಿಸುವಳು. ಪುಟ್ಟಕೃಷ್ಣ ಬಾಯ್ತೆರೆಯುವನು. ಶ್ರೀಕೃಷ್ಣನ ಬಾಯೊಳಗೆ ಬ್ರಹ್ಮಾಂಡವನ್ನೇ ಕಾಣುವ ಯೋಗವನ್ನು ಶ್ರೀಕೃಷ್ಣನು ಯಶೋದೆಗೆ ಅನುಗ್ರಹಿಸುವನು. ಯಶೋದೆಯ ಪ್ರೀತಿ ವಾತ್ಸಲ್ಯವನ್ನು ಪ್ರತಿಕ್ಷಣದಲ್ಲೂ ಅನುಭವಿ ಸುತಿದ್ದ ಶ್ರೀಕೃಷ್ಣ ತನ್ನ ಮಾತೆಗೆ ಕಿರುಕಾಣಿಕೆಯಾಗಿ ಈ ಸೌಭಾಗ್ಯವನ್ನು ಕರುಣಿಸುವನು. ಏಕೆಂದರೆ ಕೃಷ್ಣಾವತಾರ ಕಾಲದಲ್ಲಿ ದೇವಕಿಗೆ ಕೃಷ್ಣನ ಮೂಲರೂಪದ ದರ್ಶನವನ್ನು ಕರುಣಿಸಿದ ಕೃಷ್ಣನು ಮಾತೆ ಯಶೋದೆಗೂ ಕೂಡಾ ಅದನ್ನೇ ಅನುಗ್ರಹಿಸುವನು. ಮಾತೃಭಕ್ತಿಯಲ್ಲಿ ನಿಷ್ಪಕ್ಷಧೋರಣೆ ಇಲ್ಲಿ ವ್ಯಕ್ತವಾಗುತ್ತದೆ.
ಬಾಲಕೃಷ್ಣನು ಕುಮಾರನಾಗುತ್ತಿದ್ದಂತೆ ಆತನ ಸೌಂದರ್ಯವನ್ನು ಕಂಡ ಗೋಪಿಕಾಸ್ತ್ರೀಯರಿಗೆ ಪ್ರತೀಕ್ಷಣವೂ ಶ್ರೀಕೃಷ್ಣನದೇ ಧ್ಯಾನ. ಎಲ್ಲರಿಗೂ ಶ್ರೀಕೃಷ್ಣನನ್ನೇ ಪತಿಯನ್ನಾಗಿ ಪಡೆಯಬೇಕೆಂಬ ಉತ್ಕಟ ಇಚ್ಚೆ. ಆದರೆ ಒಬ್ಬರು ಇನ್ನೊಬ್ಬರಿಗೆ ಮನದಾಳದ ಆಸೆ ಹೇಳಲಾಗದಂತಹ ಪರಿಸ್ಥಿತಿ. ಊರ ಹಿರಿಯರೊಬ್ಬರ ಸಲಹೆಯಂತೆ “ಕಾತ್ಯಾಯಿನೀ” ವ್ರತಾಚರಣೆಯಿಂದ ಮನಸ್ಸಂಕಲ್ಪ ಸಿದ್ಧಿಯಾಗುವುದೆಂದು ತಿಳಿದ ಗೋಪಿಕಾಸ್ತ್ರೀಯರು “ಕಾತ್ಯಾ ಯನೀ”ವ್ರತದಲ್ಲಿ ತೊಡಗುವರು. ಈ ಸಂದರ್ಭದಲ್ಲಿ ಶ್ರೀಕೃಷ್ಣನು ಗೋಪಿಕಾ ವಸ್ತ್ರ್ತ್ರಾಪಹರಣ ನಡೆಸು ವನು. ಗೋಪಿಕೆಯರು ಶ್ರೀಕೃಷ್ಣನ ಈ ನಡತೆಯ ಬಗ್ಗೆ ಸಿಟ್ಟಾದಾಗ ಕೃಷ್ಣನು ವೃತನಿಯಮಗಳನ್ನು ಕಾಯಾ ವಾಚಾ ಮನಸಾ ಅರಿತು ಆಚರಿಸಿ ನಿಮ್ಮ ಉದ್ದೇಶ್ಯ ಫಲಪ್ರದವಾಗುವುದು ಎನ್ನುವನು. ಶ್ರೀಕೃಷ್ಣನ ಆಜ್ಞೆಯನ್ನು ಪರಿಪಾಲಿಸಿ ದ ಗೋಪಿಕಾಸ್ತ್ರೀಯರ ಆಸೆಗಳು ಈಡೇರುವುದು. 

ಮಥುರಾಧೀಶ ಕಂಸನ ಆಹ್ವಾನದಂತೆ ಬಿಲ್ಲ ಹಬ್ಬಕ್ಕೆ ಶ್ರೀಕೃಷ್ಣನು ತೆರೆಳುವ ಸಂದರ್ಭದಲ್ಲಿ ತ್ರಿವಕ್ರೆಯಾದ ಕುಬ್ಜೆ ಎಂಬ ಹೆಣ್ಣಿನ ವಿಕಲಾಂಗತೆಯನ್ನು ದೂರಮಾಡಿ ಆಕೆ ನೀಡಿದ ಶ್ರೀಗಂಧವನ್ನು ಪ್ರೀತಿಯಿಂದ  ಸ್ವೀಕರಿಸುವನು. ಮುಂದೆ ಬಿಲ್ಲಹಬ್ಬದಲ್ಲಿ ಪಾಲ್ಗೊಂಡು ಕಂಸನ ಪಡೆಯ ಜೊತೆಗೆ ಉಗ್ರಕಾಳಗದಲ್ಲಿ ತೊಡಗಿ ಅವರನ್ನು ಸದೆ ಬಡಿದು ಕಂಸನನ್ನು ಸಂಹರಿಸುವ ಶ್ರೀಕೃಷ್ಣ ನೇರವಾಗಿ ಕಂಸನ ಕಾರಾಗ್ರಹಕ್ಕೆ ತೆರಳಿ ಮಾತಾಪಿತರನ್ನು ಬಂದ ಮುಕ್ತ ಗೊಳಿಸಿ ಮನೆಗೆ ಕರೆತರುವನು.ನರಕಾಸುರನೆಂಬ ದೈತ್ಯನು ಹದಿನಾರು ಸಾವಿರ ಸ್ತ್ರೀಯರನ್ನು ಕಾರಾಗೃಹದಲ್ಲಿರಿಸುವ ವಿಚಾರ ತಿಳಿದು ಶ್ರೀಕೃಷ್ಣ ಆತನೊಡನೆ ಘೋರ ಕಾಳಗ ನಡೆಸಿ,ಸಂಹರಿಸಿ ಸೆರೆಯಲ್ಲಿದ್ದ ಸ್ತ್ರೀಯರನ್ನು ಬಂಧ ಮುಕ್ತಗೊಳಿಸುವನು.

ಹಸ್ತಿನಾವತಿಯಲ್ಲಿ ಜೂಜಿನ ಮೋಜಿಗೆ ದ್ರೌಪದಿಯನ್ನು ಒತ್ತೆ ಇಟ್ಟಾಗ ತುಂಬಿದ ಸಭೆಯಲ್ಲಿ ದುಶ್ಯಾಸನನು ದ್ರೌಪದಿ ಯ ವಸ್ತ್ರಾಪಹರಣಕ್ಕೆ ಮುಂದಾಗುತ್ತೇನೆ. ತತ್‍ಕ್ಷಣ ಅದೃಶ್ಯರೂಪದಲ್ಲಿ ಕೃಷ್ಣನು ಅಕ್ಷಯಾಂಭರ ನೀಡಿ ದ್ರೌಪದಿಯ ಮಾನ ರಕ್ಷಿಸುವನು. ಸಂಕಷ್ಟದಲ್ಲಿರುವ ಸಹೋದರಿಗೆ ಸಕಾಲದಲ್ಲಿ ನೆರವು ನೀಡುವ ಶ್ರೀ ಕೃಷ್ಣ ನಿಜಾರ್ಥದಲ್ಲಿ ಸಹೋದರನೆನಿಸಿಕೊಳ್ಳುತ್ತಾನೆ.

ಮಹಾಭಾರತ ಯುದ್ದಾಂತ್ಯದಲ್ಲಿ ಅಶ್ವತ್ಥಾಮನು ಪಾಂಡವರ ವಂಶನಾಶಕ್ಕಾಗಿ ಗರ್ಭಿಣಿ ಸ್ತ್ರೀ ಉತ್ತರೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗುತ್ತಾನೆ. ಶ್ರೀಕೃಷ್ಣನು ಅಶ್ವತ್ಥಾಮನಲ್ಲಿ ಅಸ್ತ್ರ ಹಿಂಪಡೆಯುವಂತೆ ಪರಿಪರಿ ಯಾಗಿ ಕೇಳಿದರೂ ಒಲ್ಲದ ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವನು. ಧರ್ಮಸಮ್ಮತವಲ್ಲದ ಯುದ್ಧ ನೀತಿಯಲ್ಲಿ ತೊಡಗಿದ ಅಶ್ವತ್ಥಾಮನ ಮೇಲೆ ಶ್ರೀ ಕೃಷ್ಣ ಕ್ರುದ್ಧನಾಗುತ್ತಾನೆ. ಉತ್ತರೆಯ ಗರ್ಭದ ರಕ್ಷಣೆಗಾಗಿ ತತ್‍ಕ್ಷಣ ಮೂಲರೂಪವನ್ನು ತಳೆದು ಉತ್ತರೆಯ ದೇಹವನ್ನು ಪ್ರವೇಶಿಸಿ ಆಕೆಯ ಗರ್ಭವನ್ನು ರಕ್ಷಿಸುವವನು. ಅಶ್ವತ್ಥಾಮನ ಬ್ರಹ್ಮಾಸ್ರ ವಿಫಲವಾಗುತ್ತದೆ. ಮುಗ್ಧ ಗರ್ಭಿಣಿ ಸ್ತ್ರೀ ಮೇಲೆ ಅಶ್ವತ್ಥಾಮನು ಬ್ರಹ್ಮಾಸ್ತ್ರ ಪ್ರಯೋಗಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಉಗ್ರರೂಪ ತಾಳಿದ ಶ್ರೀ ಕೃಷ್ಣ ಆತನಿಗೆ ಶಾಪ ನೀಡುತ್ತಾನೆ.

ಮಗನಾಗಿ ಮಾತೃವಾತ್ಸಲ್ಯ ಪರಿಪಾಲಿಸಿ, ಸಹೋದರತೆಯಲ್ಲಿ ವಚನಬದ್ಧತೆಯನ್ನು ಪ್ರದರ್ಶಿಸಿ, ಅಬಲೆಯರ ಬದುಕಿಗೆ ಆಶ್ರಯಧಾತನಾಗಿ, ವಿಕಲಚೇತನಕೆ ಚೈತನ್ಯ ನೀಡಿ, ಭ್ರೂಣಹತ್ಯೆಯ ವಿರುದ್ಧ ಸಮರಸಾರುವ ಶ್ರೀಕೃಷ್ಣನು ವನಿತಾಶ್ರಯಧಾತನೆಂದು ಸರ್ವತ್ರ ಪ್ರಶಂಸನೀಯನಾಗುತ್ತಾನೆ.

ಇದೀಗ ನವರಾತ್ರಿಯ ಪರ್ವಕಾಲ ಸಾಗುತ್ತಿದೆ. ಭಗವಂತನು ವೈವಿಧ್ಯಮಯ ಲಕ್ಷ್ಮೀರೂಪ ಧರಿಸಿ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಿದ ಅನೇಕ ಪೌರಾಣಿಕ ಘಟನೆಗಳು ಪ್ರಕಟಗೊಂಡ  ಪ್ರಸನ್ನಕಾಲವಿದು. ಈ ಮೂಲಕ ಭಗವಂತನು ಮತ್ತೊಮ್ಮೆ ನಾರೀಶಕ್ತಿಯ ಅಪಾರ ಮಹಾತ್ಮೆಯನ್ನು ಪ್ರಕಟಪಡಿಸಿ ಮತ್ತೊಮ್ಮೆ ಸ್ತ್ರೀಪ್ರೇಮವನ್ನು ಮೆರೆಸಿ ಸಮಸ್ತ ಸ್ತ್ರೀ ಸಮುದಾಯಕ್ಕೆ ಅಭಯ ಕರುಣಿಸಿದ ಕಾಲವಿದು.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ:.. ಎಂಬ  ಶಾಸ್ತ್ರವಚನವನ್ನು ನೀಡಿದ ಭಾರತ ದೇಶದಲ್ಲಿಂದು ಹೆಣ್ಣು ಮಕ್ಕಳ ಮೇಲಿನ ಧಾಳಿ, ಹೆಣ್ಣುಮಕ್ಕಳ ಮಾರಾಟ, ಭ್ರೂಣ ಹತ್ಯೆ, ಹೆಣ್ಣು ಶಿಶುವಿನ ಹತ್ಯೆ, ವರದಕ್ಷಿಣೆ ಪಿಡುಗುಗಳು ಕ್ಯಾನ್ಸರ್‍ನಂತೆ ಹಬ್ಬಿ ನಾಗರಿಕ ಸಮಾಜವನ್ನು ಕಂಗೆಡಿಸುತ್ತಿದೆ. ಮುಖ್ಯವಾಗಿ ಯುವ ಜನಾಂಗದ ನೈತಿಕೆಯನ್ನು ಬಲಪಡಿಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ತ್ರೀ ಪ್ರೇಮಕ್ಕೆ ಜ್ವಲಂತ ನಿದರ್ಶನ ವಾಗುವ ಶ್ರೀಕೃಷ್ಣನ ಆದರ್ಶವನ್ನು ಅರಿತು ನಿತ್ಯಜೀವನದಲ್ಲಿ ಅನುಷ್ಠಾನಗೊಳಿಸಿದಲ್ಲಿ ಸ್ವಸ್ಥ ಸಮಾಜವನ್ನು ನಿರ್ಮಿಸಿ ನೈತಿಕ ಅಧ:ಪತನದ ಸಮಸ್ಯೆಯನ್ನು ನಿಸ್ಸಂಶಯವಾಗಿ ನೀಗಿಸಬಹುದು.

 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!