ಕೊರಗಜ್ಜನನ್ನು ಸ್ತುತಿಸಿದ ಬಾಲಕನ ಕುರಿತು ಕೆಲವು ವಿಶೇಷತೆಗಳು ಇಲ್ಲಿವೆ  

ಉಡುಪಿ: ಬಾಲಕನೊಬ್ಬ ಕೊರಗಜ್ಜನನ್ನು ಸ್ತುತಿಸಿದ ವಿಡಿಯೊ ದ.ಕ., ಉಡುಪಿ ಸೇರಿ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾಲಕ ಹಾಡಿದ್ದ ಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಇದೀಗ ಆ ಬಾಲಕನ ಕುರಿತು ಅನೇಕ. ಅಚ್ಚರಿಯ ವಿಷಯಗಳು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು- ಹೆಬ್ರಿ ನಡುವಿನ ಮೂಜೂರು ಸಮೀಪದ ನಿವಾಸಿ ಪೂವಪ್ಪ-ಲೋಲಾಕ್ಷಿ ದಂಪತಿಗಳ ಒಂದು ಹೆಣ್ಣು ಎರಡು ಗಂಡು ಮಕ್ಕಳಲ್ಲಿ ಹಾಡು ಹಾಡಿದಾತ ಕೊನೆಯ ಪುತ್ರ. ಇವನ ಹೆಸರು ಕಾರ್ತಿಕ್. ಐದು ವರ್ಷದವರೆಗೆ ಈತನಿಗೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಮನೆಯವರು ಮಣಿಪಾಲ, ಮಂಗಳೂರು ಅಲ್ಲದೆ ಹಲವಾರು ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯತ್ನ ಫಲಿಸಲಿಲ್ಲ.

ಕೊನೆಗೆ ದೈವ ದೇವರುಗಳ ಸೇವೆಯನ್ನೂ ಮಾಡಿಸಿ ಕಂಗಾಲಾದರು. ಆದರೆ ಅಚ್ಚರಿಯೆಂಬಂತೆ ಕಳೆದೆರಡು ವರ್ಷಗಳಿಂದ ಈತ ನಡೆದಾಡಲು ಪ್ರಾರಂಭಿಸಿದ್ದಾನೆ. ಕಾರ್ತಿಕ್ ಕೊರಗಜ್ಜನ ಮೇಲೆ ಅಪಾರವಾದ ದೈವಭಕ್ತಿ ಹೊಂದಿದ್ದು, ಕೊರಗಜ್ಜನ ಹಾಡುಗಳನ್ನು ಬಾಯಿಪಾಠ ಮಾಡಿ ಸದಾ ಹಾಡುತ್ತಿರುತ್ತಾನೆ ಎಂದು ಮನೆಯವರು ಹೇಳುತ್ತಾರೆ.

ಕೊರಗಜ್ಜನ ಕೃಪೆ ಇವನ ಮೇಲಿದೆ ಎಂದು ಮನೆಯವರು ನಂಬಿದ್ದು, ಆದ್ದರಿಂದಲೇ ಆತ ನಡೆಯುವಂತಾಗಿ, ಹಾಡನ್ನು ಹಾಡು ವಂತಾಗಿದೆ ಎಂಬುದು ಅವರ ನಂಬಿಕೆಯಾಗಿದೆ. ಕೊರಗಜ್ಜನ ಹಾಡನ್ನು ತನ್ಮಯತೆಯಿಂದ, ಉಚ್ಚ ಸ್ಥಾಯಿಯಲ್ಲಿ ಹಾಡಲು ಪ್ರಯತ್ನಿ ಸುವ ಈತ ಯಾವುದೇ ರೀತಿಯ ಸಂಗೀತ ತರಬೇತಿ ಪಡೆದಿಲ್ಲ ಎಂಬುದು ವಿಶೇಷ.

ಇನ್ನು ತುಳುನಾಡಿನ ನಂಬಿಕೆಯಂತೆ, ಮುಗ್ದ ಮನಸ್ಸಿನಿಂದ ಸ್ತುತಿಸಿದರೆ ಕೊರಗಜ್ಜ ಒಲಿಯುತ್ತಾನೆ ಎನ್ನುವುದನ್ನು ನಿಜ ಎನಿಸುವಂತೆ ಈ ಕಾರ್ತಿಕ್ ಬದುಕಿನಲ್ಲಿ ಬದಲಾವಣೆಗಳಾಗಿವೆ. ಆದರೂ ಕಾರ್ತಿಕ್ ಕುಟುಂಬ ಮಾತ್ರ ತೀವ್ರ ಬಡತನದಲ್ಲಿದ್ದು, ಈತನ ಅಣ್ಣ ಹಾಗೂ ತಂದೆಯ ಕೂಲಿ ಕೆಲಸದಿಂದ ಬಂದ ಅತೀ ಕಮ್ಮಿ ಹಣದಲ್ಲಿ ಜೀವನ ನಿರ್ವಹಣೆ ಸಾಗುತ್ತಿದೆ. ಈಗಾಗಲೇ ಕಾರ್ತಿಕ್ ನ ಆರೋಗ್ಯ ಪಾಲನೆಗಾಗಿ ಕುಟುಂಬ ಸಾಲ ಮಾಡಿದ್ದು, ದೈನಂದಿನ ಜೀವನಕ್ಕಾಗಿ ಕಷ್ಟಪಡುತ್ತಿದೆ.

ಈ ಕುಟುಂಬಕ್ಕೆ ಸರಕಾರ ಹಾಗೂ ಸಂಘ-ಸಂಸ್ಥೆಗಳು ಸಹಾಯಹಸ್ತ ನೀಡಿ ಪ್ರೋತ್ಸಾಹಿಸಿದಲ್ಲಿ ಈತನ ಕುಟುಂಬಕ್ಕೆ ಸಹಕಾರಿ ಯಾಗುತ್ತದೆ. ಬಾಲಕನಿಗೆ ಸಹಾಯ ಮಾಡುವ ಇಚ್ಛೆಯುಳ್ಳವರು ಆತನನ್ನು (7022145910) ಸಂಪರ್ಕಿಸಬಹುದು. ಅವನು ಮುಂದೆ ಉತ್ತಮ ಗಾಯಕನಾಗಲು ಸಹಾಯವಾಗಲಿದೆ.

 
 
 
 
 
 
 
 
 
 
 

Leave a Reply