ಶತಾಯುಷಿ ವಿದ್ವಾಂಸರಿಂದ ಕೊರೊನಾ ಮುಕ್ತಿಗೆ ಚತುಃ ಸಂಹಿತಾಯಾಗದ ಸಂಕಲ್ಪ

ಹಳೆಯಂಗಡಿ: ಕೊರೊನಾ ಕಂಡು ಕೇಳರಿಯದ ವಿಪತ್ತು ನಷ್ಟವನ್ನು ತಂದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇದರ ಮುಕ್ತಿಗಾಗಿ ಪ್ರಪಂಚಾದ್ಯಂತ ಅಸಂಖ್ಯ ಜನ ಅವರವರ ತಿಳುವಳಿಕೆ ಸಾಮರ್ಥ್ಯಕ್ಕೆ ಅನುಸಾರವಾಗಿ ಹಗಲಿರುಳೆನ್ನದೆ ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ.

ಹಾಗೆಯೇ ಇಲ್ಲೊಬ್ಬ ಪರಮಸಾತ್ವಿಕ ಶತಾಯುಷಿ ವೈದಿಕರು ಕೊರೊನಾ ಮುಕ್ತಿ ಮತ್ತು ಜಗತ್ತಿನ ಕ್ಷೇಮಕ್ಕಾಗಿ ಅತ್ಯಂತ,ಶ್ರದ್ಧೆ ಪರಿಶ್ರಮಗಳಿಂದ ಕೂಡಿದ ಚತುಃ ಸಂಹಿತಾಯಾಗವನ್ನು ಸಂಕಲ್ಪಸಿ ಆಶ್ಚರ್ಯಕ್ಕೀಡು ಮಾಡಿದ್ದಾರೆ.

ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ತಮ್ಕ ನಿವಾಸದಲ್ಲಿ ಈ ಯಾಗವನ್ನು ಸದ್ದಿದಲ್ಲದೇ ಕಳೆದ ಅನೇಕ ದಿನಗಳಿಂದ ನಡೆಸುತ್ತಿರುವವರು ಸ್ವತಃ ಚತುರ್ವೇದ ಪಾರಂಗತರಾದ102 ರ ಹರೆಯದ ವೈದಿಕ ಅಂಗಡಿಮಾರು ಕೃಷ್ಣ ಭಟ್ಟರು.ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ತಂದೆಯವರಾಗಿರುವ ಭಟ್ಟರು ತಮ್ಮ ಅಪಾರವಾದ ಜೀವನಶ್ರದ್ಧೆಯಿಂದ ಮಾದರಿ ಬದುಕು ನಡೆಸುತ್ತಿರುವವರು. ಸ್ವಂತಕ್ಕಾಗಿ ಅಲ್ಪ ಪರಾರ್ಥಕ್ಕಾಗಿ ಅಪಾರ ಎಂಬ ನೈಜ ನೆಲೆಯಲ್ಲಿ ವೈದಿಕ ಜೀವನವನ್ನು ನಡೆಸಿಕೊಂಡು ಬರುತ್ತಿರುವವರು . 

ತನ್ನ ಅರಿವಿನ ನೆಲೆಯಲ್ಲಿ ಋಕ್ ಯಜು ಸಾಮ ಹಾಗೂ ಅಥರ್ವವೇದಗಳೆಂಬ ನಾಲ್ಕೂ ವೇದಗಳ ಯಾಗವನ್ನು ಸಂಕಲ್ಪಿಸಿ ತಾನೇ ಸ್ವತಃ ಯಾಜ್ಞಿಕರಾಗಿ ಯಾಗ ನೆರೆವೇರಿಸುತ್ತಾ ಲೋಕಕ್ಷೇಮಕ್ಕಾಗಿ ವೇದಪುರುಷನಲ್ಲಿ ( ಭಗವಂತನಲ್ಲಿ) ಪ್ರಾರ್ಥಿಸುತ್ತಿದ್ದಾರೆ.ಕಳೆದ ಅನೇಕ ದಿನಗಳಿಂದ ತನ್ನ ಸ್ವಗೃಹದಲ್ಲೇ ವಿದ್ವಾಂಸರೂ ಆಗಿರುವ ಪುತ್ರರು ಹಾಗೂ ಇತರೆ ಕೆಲವು ವಿದ್ವಾಂಸರ ಸಹಕಾರದೊಂದಿಗೆ ಈ ಚತುಃ ಸಂಹಿತಾಯಾಗ ಪ್ರಾರಂಭಿಸಿದ ಭಟ್ಟರು ಈಗಾಗಲೇ ಋಕ್ ಮತ್ತು ಯಜುಃಸಂಹಿತಾ ಯಾಗಗಳನ್ನು ಸಂಪನ್ನಗೊಳಿಸಿದ್ದಾರೆ .

ಇದೀಗ ವೈಶಾಖ ಬಹುಳ ಪಂಚಮಿಯಂದು ಭಾನುವಾರ ಸಾಮ ಸಂಹಿತಾಯಾಗವನ್ನು ಪ್ರಾರಂಭಿಸಲಾಗಿದ್ದು ಐದು ದಿನಗಳ ಕಾಲ ನಡೆಯಲಿದೆ.1198 ಅಪೂರ್ವ ಮಂತ್ರಗಳನ್ನು ಒಳಗೊಂಡಿರುವ ಸಾಮವೇದವನ್ನು ಗಾನರೂಪದಲ್ಲಿ ಪಠಿಸುವುದರಿಂದ ದಿನಕ್ಕೆ ಸುಮಾರು ಇನ್ನೂರರಷ್ಟು ಮಂತ್ರಗಳ ಆಹುತಿಯನ್ನು ಯಜ್ಞಮುಖೇನ‌ ಅರ್ಪಿಸಲಾಗುತ್ತಿದೆ.

ಲಾಕ್ ಡೌನ್ ಇರುವ ಕಾರಣ ಯಾವ ಆಡಂಬರವೂ ಇಲ್ಲದೇ ಕೊರೊನಾ ನಿರ್ಬಂಧಗಳನ್ನು ಪಾಲಿಸಿಕೊಂಡು ಕೇವಲ ಬೆರಳೆಣಿಕೆಯ ವಿದ್ವಾಂಸರನ್ನು ಮಾತ್ರ ಸೇರಿಸಿಕೊಂಡು ಅನುಷ್ಠಾನಕ್ಕೆ ಹೆಚ್ಚು ಒತ್ತು ಕೊಡುವ ಈ ಕರ್ತವ್ಯವನ್ನು ನೆರವೇರಿಸಲಾಗುತ್ತಿದೆ.ಈ ಯಾಗ ಮುಗಿದ ಬಳಿಕ ಅಥರ್ವಸಂಹಿತಾಯಾಗವನ್ನೂ ನಡೆಸಿ ಭಗವದರ್ಪಣಗೊಳಿಸಿ ಲೋಕಕ್ಷೇಮ ಕರುಣಿಸುವಂತೆ ಪ್ರಾರ್ಥಿಸಲಾಗುವುದು ಎಂದು ಭಟ್ಟರ ಸುಪುತ್ರ ವಿದ್ವಾನ್ ವಿಶ್ವೇಶ ಭಟ್ ತಿಳಿಸಿದ್ದಾರೆ .

ಸಂಪರ್ಕ ಸಂಖ್ಯೆ: ವಿದ್ವಾನ್ ವಿಶ್ವೇಶ ಭಟ್ ಪಕ್ಷಿಕೆರೆ 94486 27578. ಮಧ್ಯಾಹ್ನ 4 ರಿಂದ 5.30 ರ ವರೆಗೆ ಮಾತ್ರ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply