ಶ್ರೀವರಸಿದ್ಧಿ ವಿನಾಯಕ ವ್ರತ ~ ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್

ಭಾದ್ರಪದ ಮಾಸ ಶುಕ್ಲ ಚೌತಿಯಂದು ದೇಶಾದ್ಯಂತ ಮತ, ಪಂಥ ಮರೆತು ಆಚರಿಸುವ ಹಬ್ಬ, ಅದೇ ಗಣಪನ ಹಬ್ಬ. ಸಕಲ ವಿಘ್ನ ಹರನಾದ ಗಣಪತಿಯಲ್ಲಿ ಶ್ರೀವಿಶ್ವಂಭರ ಸ್ವರೂಪಿಯಾದ ಭಗವಂತನನ್ನು ಅನುಸಂಧಾನ ಮಾಡಿ ಪೂಜಿಸಿದರೆ ಸಕಲವೂ ಸಿದ್ಧಿಯಾಗುತ್ತದೆ.

ಮನೋನಿಯಾಮಕರಾದ ಶ್ರೀಮಹಾರುದ್ರದೇವರು ಹಾಗೂ ಮತಿ ಪ್ರೇರಕಳಾದ ಶ್ರೀಪಾರ್ವತಿ ದೇವಿಯರ ಮುದ್ದು ಕುವರ ಗಣಪನನ್ನು ಯಥಾಮತಿ ಪೂಜಿಸಿ, ಅರ್ಚಿಸಿದರೆ ಅನಂತ ಗುಣಗಳ ಗಡಣ ಗರುಡಗಮನ ಕೈವಲ್ಯಮೂರ್ತಿ ಕರುಣಿಸುವನು ಎಂದು ದಾಸರಾದಿಯಾಗಿ ಋಷಿಗಳು ಕೊಂಡಾಡಿದ್ದಾರೆ. ಇಂತಹ ಗಣಪನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಆದಿಪೂಜ್ಯೋ ವಿನಾಯಕಃ, ವಿಘ್ನಾನಿ ಹರಂತು ಸುರನಾಯಕ ಎಂದು ಕರೆಯಲಾಗುವ ಗಣಪನನ್ನು ಎಲ್ಲ ವ್ರತಗಳಿಗಿಂತ ಮೊದಲು ಪೂಜಿಸಿ ಪ್ರಾರ್ಥಿಸುವುದು ಕ್ರಮ. ಮೊದಲ ಪೂಜೆ ಸ್ವೀಕರಿಸುವ ಗಣಗಳ ಒಡೆಯ ಎಲ್ಲ ವಿಘ್ನಗಳನ್ನು ನಿವಾರಿಸಿ, ವ್ರತವಷ್ಟೇ ಅಲ್ಲದೆ ಎಲ್ಲ ಕೆಲಸಗಳಲ್ಲಿ ನಿರ್ವಿಘ್ನತೆಯನ್ನು ಕರುಣಿಸುತ್ತಾನೆ. ಇಂತಹ ಗಣಪನ ಹುಟ್ಟು ಹೇಗೆ ಎಂಬುದನ್ನು ಅರಿಯೋಣ.

ಮೊದಲಿಗೆ ಗಣಪ ಎಂದರೆ ಏನು?.

ಗಣಪತಿಯನ್ನು ಬಿಡಿಸಿದಾಗ ಗಣ ಎಂದರೆ ತತ್ವ, ಪತಿ ಎಂದರೆ ಪ್ರಭುತ್ವ, ಜಗತ್ತಿನಲ್ಲಿರುವ ಕೆಲ ಮೂಲತತ್ವಗಳ ಅಧಿಪತಿ.

ಗಜಮುಖ: ಗ ಎಂದರೆ ಗತಿ,ಜ ಎಂದರೆ ಜನ್ಮ. ಯಾರಿಂದ ಈ ಜಗತ್ತು ಹುಟ್ಟಿ, ಯಾರಕಡೆ ಸಾಗಿ, ಯಾರಲ್ಲಿ ಲಯವಾಗುತ್ತದೆಯೋ ಅಂತಹ ಭಗವಂತ ಗಜಮುಖ ಸ್ವರೂಪದ ವಿಶ್ವಂಭರಮೂರ್ತಿ ಎಂದಾಗುತ್ತದೆ.

ಇಂತಹ ಗಣಪ ಶಿವಪುರಾಣದ ಪ್ರಕಾರ ಪಾರ್ವತಿ ದೇವಿಯು ದೇಹದ ಕೊಳೆಯನ್ನು ಮಣ್ಣಿನೊಂದಿಗೆ ಸೇರಿಸಿ ಸೃಜಿಸಿದ ಒಂದು ಸುಂದರ ಶಿಶುರೂಪ. ಈ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿದ್ದೇವೆ. ಹಾಗೆಯೇ *ಬ್ರಹ್ಮ ವೈವರ್ತ ಪುರಾಣ* ದ ಪ್ರಕಾರ ಗಣಪನ *ಹುಟ್ಟು* ವಿಶೇಷವಾಗಿದೆ.

ಶ್ರೀರುದ್ರದೇವರ ಅಣತಿಯಂತೆ ಪಾರ್ವತಿ ದೇವಿಯು ಒಂದು ವರ್ಷ ಕಾಲ ಪುಣ್ಯಕ ವ್ರತ ವನ್ನು ಆಚರಿಸುತ್ತಾಳೆ. ನಂತರ ದೇವಿಯು ಸುಂದರ ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನ ನಾಮಕರಣಕ್ಕೆ ಎಲ್ಲ ದೇವತೆಗಳನ್ನು ಆಹ್ವಾನಿಸುತ್ತಾರೆ. ಸುದ್ದಿ ತಿಳಿದು ಈ ಸಮಾರಂಭಕ್ಕೆ ಶನಿ ಯು ಆಗಮಿಸುತ್ತಾನೆ. ಎಲ್ಲರೂ ಮಗುವನ್ನು ವೀಕ್ಷಿಸಿ ಹರಸಲೆಂದು ಬಂದಾಗ ಶನಿದೃಷ್ಟಿ ತಾಗಿ ಮಗುವಿನ ಶಿರಸ್ಸು ಕತ್ತರಿಸಿಹೋಗಿ ಮಗು ಸತ್ತು ಹೋಗುತ್ತದೆ. ಇದನ್ನು ಗಮನಿಸಿ ಪಾರ್ವತಿದೇವಿ ರೋಧಿಸುತ್ತಾಳೆ. ಸುಂದರ ಸಮಾರಂಭ *ಸೂತಕ* ದ ಮನೆಯಾದುದನ್ನು ಗಮನಿಸಿದ ಮಹಾವಿಷ್ಣು ಗರುಡನನ್ನೇರಿ ಪುಷ್ಪ ಭದ್ರ ನದಿಯ ದಂಡೆಗೆ ಬರುತ್ತಾನೆ. ಅಲ್ಲಿ, ದೂರ್ವಾಸರ ಶಾಪಕ್ಕೆ ಗುರಿಯಾಗಿ ಮೋಕ್ಷಕ್ಕಾಗಿ ವಿಷ್ಣುವನ್ನೇ ಎದುರು ನೋಡುತ್ತಿದ್ದ ಆನೆ ಯ ತಲೆಯನ್ನು ತನ್ನ ಸುದರ್ಶನ ಚಕ್ರದಿಂದ ಕಡಿದು ತಂದು ಮಗುವಿಗೆ ಜೋಡಿಸುತ್ತಾನೆ. ನಂತರ ಈ ಮಗುವಿಗೆ ಗಜಮುಖ ಎಂಬ ಹೆಸರಾಗುತ್ತದೆ.
ಬ್ರಹ್ಮಾಂಡ ಪುರಾಣದ ಪ್ರಕಾರ ಭಂಡಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಸಲುವಾಗಿ ದೇವಿ, ಈ ಗಣಪನನ್ನು ಸೃಷ್ಟಿಸಿದಳು ಎನ್ನಲಾಗುತ್ತದೆ.
ಲಿಂಗಪುರಾಣವೂ ಶ್ರೀರುದ್ರದೇವರು ಹಾಗೂ ಪಾರ್ವತಿ ದೇವಿಯರ ಸಮ್ಮಿಲನದಿಂದ ಗಣಪತಿ ಹುಟ್ಟಿದ ಎನ್ನುತ್ತದೆ. ಗಣಪನ ಹುಟ್ಟು ಹೇಗಾದರೂ ಇರಲಿ, ಸಕಲ ಕಾರ್ಯಗಳಲ್ಲಿ ನಿರ್ವಿಘ್ನತೆಯ ಜತೆ ಸಿದ್ಧಿಯನ್ನು ಕರುಣಿಸುವ ದೇವರು ಒಲಿದರೆ ಸಾಕಲ್ಲವೇ!!.

ಇಂತಹ ಗಣಪನ ಸ್ವರೂಪ ಹಾಗೂ ಅಂಗಗಳ ಬಗ್ಗೆ ತಿಳಿಯೋಣ:

ಗಣಪನಿಗೆ ದೊಡ್ಡದಾದ, ಮೊರ(ಗೆರಸಿ)ದಂತೆ ಅಗಲವಾದ ಕಿವಿಗಳಿರುವುದರಿಂದ *ಶೂರ್ಪಕರ್ಣ* ಎನ್ನಲಾಗುತ್ತದೆ. ಇದು ಗೆರಸಿಯಿಂದ ಧಾನ್ಯವನ್ನು ಬೇರ್ಪಡಿಸುವಂತೆ, ವಿವೇಕ ಬಳಸಿ ಸತ್ಯ-ಮಿಥ್ಯ(ಸುಳ್ಳು)ಗಳ ವ್ಯತ್ಯಾಸ ಅರಿಯುವ ತತ್ವವಾಗಿದೆ. ಅಂದರೆ ಶ್ರವಣ (ಕಿವಿಯಿಂದ ಕೇಳುವುದು) ಶುದ್ಧವಾಗಿರಬೇಕು.

ದೇಹ ದೊಡ್ಡದಾದರೂ ಕಣ್ಣು ಮಾತ್ರ ಕಿರುಗಣ್ಣು. ಇದು ಶುದ್ಧಜ್ಞಾನದ ಪ್ರತೀಕ. ಜ್ಞಾನ ಪ್ರಾಪ್ತಿಗಾಗಿ ಲೌಕಿಕವಾದ ಹೊರಗಣ್ಣನ್ನು ಕಿರಿದು ಮಾಡಿ ಒಳಗಣ್ಣು ವಿಶಾಲವಾಗಿ ತೆರೆದಿರಬೇಕು ಎಂಬುದು ಇದರ ಮೂಲ.

ಹಾಗೆಯೇ ದೊಡ್ಡ ಹೊಟ್ಟೆ. ಇದು ಬ್ರಹ್ಮಾಂಡವನ್ನೇ ತನ್ನೊಳಗಿರಿಸಿಕೊಂಡ ವಿಶ್ವಂಭರ ಮೂರ್ತಿಯನ್ನು ಪ್ರತಿನಿಧಿಸುತ್ತದೆ.

ಚತುರ್ಭುಜ ಗಳು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ವಿಧದ ಪುಣ್ಯಫಲದಾಯಕಗಳನ್ನು ಪ್ರತಿಪಾದಿಸುತ್ತವೆ.

ಏಕದಂತವು ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಮಾತ್ರ ಪೂರ್ಣಜ್ಞಾನ ಪ್ರಾಪ್ತಿ ಸಾಧ್ಯ ಎಂಬುದರ ಸಂಕೇತ. ಮನೋಕಾರಕ ಚಂದ್ರನನ್ನು ದಂಡಿಸಿ ಮನಸ್ಸನ್ನು ಹತೋಟಿಯಲ್ಲಿಡುವ ಉದ್ದೇಶದಿಂದ ಏಕದಂತನಾಗಿದ್ದಾನೆ.

ಪಾಶಾಂಕುಶಧಾರಿ: ಸಕಲ ಇಂದ್ರಿಯಗಳನ್ನು ನಿಗ್ರಹಿಸಲು ಅಂಕುಶ ಹಾಗೂ ಆಸೆ ಕಟ್ಟಿಡಲು ಪಾಶವನ್ನು ಧರಿಸಿದ್ದಾನೆ.

ಸರ್ಪಕಟಿ: ಷಟ್‌ಚಕ್ರಗಳಲ್ಲಿ ಮೂಲಾಧಾರ ಚಕ್ರ ತನ್ನಲ್ಲೇ ಇದೆ ಎಂದು ಸೂಚಿಸಲು ಕುಂಡಲಿನೀಶಕ್ತಿ ಸ್ವರೂಪದ ಸರ್ಪವನ್ನು ಕಟಿಗೆ ಸುತ್ತಿದ್ದಾನೆ.

ಎರಡು ಹಸ್ತಗಳು: ಒಂದು ಹಸ್ತದಲ್ಲಿ ಮೋದಕ ಹಿಡಿದು, ಭಕ್ತರಿಗೆ ಆಮೋದ ನೀಡುವುದರ ಜತೆ ಮತ್ತೊಂದು ಹಸ್ತವನ್ನು ಅಭಯ ಮುದ್ರೆಯಲ್ಲಿ ತೋರಿ ಭಕ್ತರನ್ನು ರಕ್ಷಿಸುವ ಭರವಸೆ ನೀಡಿದ್ದಾನೆ.

ಮೂಷಕವಾಹನ: ಈತಿ(ಇಲಿ, ಕ್ರಿಮಿ, ಕೀಟ) ಬಾಧೆ ನಿವಾರಿಸುವ ಧ್ಯೋತಕವಾಗಿ ಇಲಿಯನ್ನು ದಮನಿಸಿ ತನ್ನ ವಾಹನ ಮಾಡಿಕೊಂಡಿದ್ದಾನೆ.
ಇದರ ಜತೆ ಮತ್ತಷ್ಟು ಅರಿಯೋಣ:

ಜ್ಞಾನ ಮತ್ತು ವಿವೇಕಗಳ ಅಧಿದೇವತೆಯಾಗಿ ಸಿದ್ಧಿ ಬುದ್ಧಿಯರ ಪತಿ(ಅಧಿದೇವತೆ)ಯೆನಿಸಿದ್ದಾನೆ. ಕ್ಷಿಪ್ರ ಪ್ರಸಾದ ಎಂದು ಸೂಚಿಸಲು ಲಾಭ ಮತ್ತು ಲಕ್ಷಗಳನ್ನು ಮಕ್ಕಳಾಗಿ(ಕೃಪೆ) ಹೊಂದಿದ್ದಾನೆ. ಭಕ್ತರಿಗಾಗಿ ಕಮಲದಂತಹ ಮೃದುವಾದ ಒಂದು ಪಾದ ಇಹವನ್ನೂ ಮತ್ತೊಂದು ಪಾದ ಪರಲೋಕವನ್ನು ಸೂಚಿಸುತ್ತದೆ. ಹಣೆಯ ಕೆಳ ಭಾಗದಲ್ಲಿ ತ್ರಿಶೂಲ ಆಕಾರ, ತ್ರಿಕಾಲ(ಭೂತ, ವರ್ತಮಾನ, ಭವಿಷ್ಯತ್) ಸೂಚಿಸುತ್ತದೆ. ಚೇತನ, ಚಿತ್ತ, ಅಹಂಕಾರ, ಬುದ್ಧಿ ಮನಸ್ಸು ಎಂಬ ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇದ್ರಿಯಗಳು ಪಂಚತನ್ಮಾತ್ರೆಗಳು, ಪಂಚಭೂತಗಳು ಹೀಗೆ 25 ತತ್ವಗಳಲ್ಲಿ 21ನೇ ಆಕಾಶತತ್ವದೇವತೆ ಯಾಗಿದ್ದಾನೆ. ಈ ಕಾರಣದಿಂದ 21 ಗರಿಕೆಗಳ ಅರ್ಚನಾ ಪ್ರಿಯನೀತ. ವಿಶ್ವಂಭರಮೂರ್ತಿಯ ಧರಿಸಿದಾತ.
ತನ್ನ ಕಾಂಡದಿಂದಲೇ ಜನಿಸಿ, ಒಂದು ನೂರಾಗಿ ಸಾವಿರವಾಗಬಲ್ಲ ಅನಂತ ವ್ಯಕ್ತಿತ್ವ ಸಂಕೇತವಾದ ಗರಿಕೆ ಹಾಗೂ ಕಬ್ಬುಗಳು ಗಣಪನಿಗೆ ಅತಿಪ್ರಿಯ. ಎಂದಿಗೂ ಎಂಜಲಿನಿಂದ ಹುಟ್ಟದ ತೆಂಗಿನಕಾಯಿ ಬಾಳೆಹಣ್ಣುಗಳು ಎಂದರೆ ಬಲು ಇಷ್ಟ.

ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಋಕ್ಕು ಗಣಪತಿಯ ಪೂಜೆಯ ಮುಖ್ಯಮಂತ್ರ. ಗಣಪತಿ ಶಬ್ದಕ್ಕೆ *ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿ ಎಂದೇ ಅರ್ಥೈಸಬಹುದು. ಇಂದು ಪ್ರಸಿದ್ಧವಿರುವ ಗಣಪತಿಯ ಮೂರ್ತಿಕಲ್ಪನೆ ಪುರಾಣಕಾಲದ್ದು. ಪುರಾಣಗಳಿಗೂ ಪೂರ್ವದ ಋಗ್ವೇದದಲ್ಲಿ ಆನೆಯ ಮುಖ, ಇಲಿಯ ವಾಹನ, ದೊಡ್ಡ ಹೊಟ್ಟೆ ಮುಂತಾದ ಪೌರಾಣಿಕ ಕಲ್ಪನೆಗಳಿಲ್ಲ. ಆತ ಗಣತಿ ಕೇವಲ ವಾಕ್(ಮಾತು) ಅಭಿಮಾನಿಯಾದ ದೇವರು ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲದೆ ಇಡೀ ರಾಮಾಯಣದಲ್ಲಿ ಹಾಗೂ ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ನಾಮಸ್ಮರಣೆ ಕೂಡ ಎಲ್ಲೂ ಇಲ್ಲ. ಮಹಾಕವಿ ಕಾಳಿದಾಸ ಸಹ ಗಣಪತಿಯ ಎಲ್ಲಿಯೂ ಎಲ್ಲ ರೂಪಗಳನ್ನು ವಿಶ್ಲೇಷಿಸಿಲ್ಲ. ಮಹಾಭಾರತ ಕೃತಿ ರಚನೆ ಮಾಡುವಾಗ ಭಗವಾನ್ ಶ್ರೀವೇದವ್ಯಾಸರು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡರು. ಇದಕ್ಕೂ ಮೊದಲು ಎಲ್ಲಿಯೂ ಗಣಪನ ಹೆಸರು ಕಂಡುಬಾರದು.

ಗಣಪತಿ ಅವಿವಾಹಿತ: ತಾಯಿ ಮೇಲೆ ಪ್ರೇಮದಿಂದಾಗಿ ಗಣಪ ಅವಿವಾಹಿತನಾಗಿ ಉಳಿದಿದ್ದಾನೆ. ಒಮ್ಮೆ ಬೀದಿಯಲ್ಲಿ ಆಟವಾಡುತ್ತಿದ್ದ ಬೆಕ್ಕನ್ನು ಗಾಯಗೊಳಿಸಿದ ಗಣಪ ಮನೆಗೆ ಬಂದಾಗ ತಾಯಿಯ ಶರೀರದ ಮೇಲೆ ಗಾಯವಾಗಿತ್ತು. ಏನಿದು ಎಂದಾಗ, ಇದು ನೀನು ಮಾಡಿದ ಗಾಯ ಎಂದಳು. ಇದರಿಂದ ಗಣಪನಿಗೆ ಆಶ್ಚರ್ಯವಾಯಿತು. ಆಗ ಪಾರ್ವತಿ ನಾನು ಎಲ್ಲ ಜೀವರಾಶಿಗಳಲ್ಲಿ ಅಂತರ್ಗತಳಾಗಿದ್ದೇನೆ ಎಂದಳು. ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಗಿತ್ತು. ಇದರಿಂದ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಪ್ರತಿರೂಪವೆಂದು ಜ್ಞಾನೋದಯವಾಯಿತು. ಹಾಗಾಗಿ ಮದುವೆಯನ್ನು ನಿರಾಕರಿಸಿದ ಎನ್ನಲಾಗುತ್ತದೆ.

ಭಾರತೀಯ ಆಧ್ಯಾತ್ಮ ಪ್ರಪಂಚದಲ್ಲಿ ದ್ವೈತ, ವೈಷ್ಣವ, ಶಾಸ್ತ್ರೀಯ, ಗಾಣಪತ್ಯ, ಅದ್ವೈತ, ವಿಶಿಷ್ಟಾದ್ವೈತ ಪಂಥದವರೆಂಬ ಭೇದವಿಲ್ಲದೆ ವಿಶ್ವದೆಲ್ಲೆಡೆ ಸಮಸ್ತ ಹಿಂದುಗಳಿಗೆ ಗಣಪ ಪ್ರಥಮ ವಂದ್ಯ. ಹಾಗಾಗಿಯೇ ಗಣೇಶ ಪುರಾಣದಲ್ಲಿ *ಶೈವೈತ್ವೈತೀಯರಥ ವೈಷ್ಣವೈಶ್ಯ ಶಾಕ್ತೈಶ್ಚ ಸೌರೈರಥ ಶುಭಾಶುಭೇಲೌಕಿಕ ವೈದಿಕೇಚ ತ್ವರ್ಚನೀಯಃ ಪ್ರಥಮಂ ಪ್ರಯತ್ನಾತ್‌ ಎಂದು ಶ್ರೀವೇದವ್ಯಾಸರು ಗಣೇಶನ ಹೆಗ್ಗಳಿಕೆಯನ್ನು ಸಾರಿದ್ದಾರೆ.

ಲಿಂಗಪುರಾಣ, ಸ್ಕಾಂದಪುರಾಣ, ಭವಿಷ್ಯ ಪುರಾಣ, ಅಗ್ನಿಪುರಾಣ, ನಾರದ ಪುರಾಣ, ದೇವಿ ಭಾಗವತ ಪುರಾಣ, ಬ್ರಹ್ಮ ಪುರಾಣ, ಸೌರಪುರಾಣ, ಮುದ್ಗಲಪುರಾಣ, ಗರುಡ ಪುರಾಣಗಳಲ್ಲಿ ಗಣಪತಿಯನ್ನು ವರ್ಣಿಸಲಾಗಿದೆ.

ಇಂತಹ ಗಣಪ ದುಷ್ಟಾನಾಂ ವಿಘ್ನಕರ್ತಾ ದುಷ್ಟರಿಗೆ, ದುರುಳರಿಗೆ ಲೋಕಕಂಟಕ(ರಾವಣ, ದುರ್ಯೋಧನ)ರಿಗೆ ವಿಘ್ನಕರ್ತನಾಗಿದ್ದ. ಆದರೆ ಸಜ್ಜನರಿಗೆ ಸುಚರಿತ ಸುಜನ ಸ್ತೋಮ ವಿಘ್ನಾಪಹರ್ತಾ ಧರ್ಮರಾಜ, ಶ್ರೀರಾಮ ಮತ್ತಿತರ ಸಜ್ಜನರಿಗೆ ಬಂದೊದಗುವ ವಿಘ್ನಗಳನ್ನು ಅಪಹರಿಸುತ್ತಿದ್ದ.

ಗಣೇಶ ಮೂಷಿಕ ವಾಹನನಾಗಿ ಒಳ್ಳೆಯ ಸಂದೇಶ ಸಾರಿದ್ದಾನೆ. ಸಂಸ್ಕೃತದಲ್ಲಿ ಮುಷ್ ಧಾತುವಿಗೆ ಕದಿ ಅಥವಾ ಕಳ್ಳತನ ಮಾಡು ಎಂಬ ಅರ್ಥಗಳಿವೆ. ಮೂಷಕ(ಸುಂಡಿಲಿ) ಕಳ್ಳತನದಿಂದ ಪ್ರವೇಶಿಸಿ ವಸ್ತುಗಳನ್ನು, ಧವಸ ಧಾನ್ಯಗಳನ್ನು ಒಳಗಿನಿಂದಲೇ ನಾಶಪಡಿಸುವುದು. ಹಾಗೆಯೇ ಅಹಂಕಾರ ಮೂಷಕದಂತೆ ನಮ್ಮ ಮನಸ್ಸನ್ನು ಪ್ರವೇಶಿಸಿ ನಮ್ಮಲ್ಲಿರುವ ಜ್ಞಾನವನ್ನು ನಾಶಗೊಳಿಸುತ್ತದೆ. ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗದತ್ತ ಪ್ರಚೋದಿಸುತ್ತದೆ ಎಂಬ ಸಂದೇಶವನ್ನು ಗಣೇಶನ ವಾಹನ ಮೂಷಕ ತಿಳಿಸುತ್ತದೆ. ಹಾಗಾಗಿ ಗಣಪನ ಆಶ್ರಯಿಸಿದರೆ ಅಜ್ಞಾನ ತೊಲಗಿ ಸುಜ್ಞಾನ ಸಿದ್ಧಿಯಾಗುತ್ತದೆ.

ಹದಿನೆಂಟನೆಯ ಕಕ್ಷೆಯಲ್ಲಿ ಬರುವ ಗಣಪತಿ ಇಷ್ಟೊಂದು ಪ್ರಖ್ಯಾತಿ ಪಡೆದು, ಸಿದ್ಧಿಯನ್ನು ಅನುಗ್ರಹಿಸಲು ಕಾರಣ ಅವನಲ್ಲಿರುವ ವಿಶ್ವ ಹಾಗು ತೈಜಸ ರ ಅನುಗ್ರಹದ ಜತೆಗೆ *ಪ್ರಾಣಾವೇಶ*. ಇದು ಗಣಪನನ್ನು ಇಷ್ಟೊಂದು ಪ್ರಖ್ಯಾತಗೊಳಿಸಿದೆ.

ಶ್ರೀಜಗನ್ನಾಥದಾಸರು ಹರಿಕಥಾಮೃತಸಾರ ಕೃತಿಯ ರಚನೆಯಲ್ಲಿ ತೊಡಗಿದಾಗ, ೨೭ ಸಂಧಿಗಳು ಸುಗಮವಾಗಿ ಸಾಗಿ ನಂತರ ಮುಂದುವರಿಯದೆ ನಿಂತು ಹೋಯಿತಂತೆ. ಆಗ ಅವರ ಗುರುಗಳಾದ ಶ್ರೀಗೋಪಾಲದಾಸರಲ್ಲಿ ವಿಚಾರಿಸಿದಾಗ ಶ್ರೀ ಗಣಪತಿಸ್ತೋತ್ರವನ್ನು ಕೈಬಿಟ್ಟಿರುವುದರಿಂದ ಹೀಗಾಗಿದೆ ಎಂದು ತಿಳಿಸಿದರಂತೆ. ಈ ಕಾರಣದಿಂದಾಗಿ ೨೮ನೇಯ ಸಂಧಿಯನ್ನು ಶ್ರೀ ವಿಘ್ನೇಶ್ವರಸಂಧಿ ಯೆಂದು ಕರೆದು ಗಣಪತಿಯ ಅಂತರ್ಗತ ಶ್ರೀ ವಿಶ್ವಂಭರ ಮೂರುತಿಗೆ ಅರ್ಪಿಸಿದಾಗ ಮುಂದಿನ ಕಾರ್ಯವು ನಿರ್ವಿಘ್ನವಾಗಿ ಸಾಗಿತಂತೆ.
ಕಾರಣವಿಲ್ಲದೆ ವ್ಯಾಪಾರವಿಲ್ಲ ಲೋಕದೊಳು| ಅರುಣೋದಯವಾಗದಿದ್ದರೆ ಪ್ರಕಾಶವಿಲ್ಲ ಜಗದೊಳು| ಆರಂಭದಲಿ ವಿಘ್ನೇಶ್ವರನ ಪೂಜಿಸದಿದ್ದರೆ ಜಯವಿಲ್ಲ| ನಾರಾಯಣನ ಕೃಪೆಯಿಲ್ಲದಿದ್ದರೆ ಮೋಕ್ಷವಿಲ್ಲ||
ಇಂತಹ ಸಿದ್ಧಿಪ್ರದನಾದ ಗಣಪನ್ನು ಎರಡು ರೂಪದಲ್ಲಿ ಪೂಜಿಸಬಹುದು. ಸೊಂಡಿಲು ಎಡಗಡೆಗೆ ಇದ್ದರೆ (ಚಂದ್ರ) ಶಾಂತವೆಂದು, ಬಲಗಡೆ ಇದ್ದರೆ (ಸೂರ್ಯ) ಬೆಂಕಿಯ ಸಮಾನವೆಂದು ತಿಳಿಯಬೇಕು. ಬಲಮುರಿ ಗಣಪನನ್ನು ವಿಶೇಷವಾಗಿ ಅರ್ಚಿಸದಿದ್ದರೆ ಆಪತ್ತು.
ವಿಶೇಷವೆಂದರೆ ಗಣಪತಿಯನ್ನು ಆರಾಧಿಸುವ(ಗಾಣಪತ್ಯ) ಆರು ಪಂಥಗಳಿವೆ.

1. ಮಹಾಗಣಪತಿ; 2.ಹರಿದ್ರಾ ಗಣಪತಿ; 3. ಉಚ್ಛಿಷ್ಟ ಗಣಪತಿ; 4. ನವನೀತ ಗಣಪತಿ; 5. ಸ್ವರ್ಣ ಗಣಪತಿ ಮತ್ತು 6. ಸಂತಾನ ಗಣಪತಿ. ಈ ಆರು ವಿಧಾನಗಳಲ್ಲಿ ಆವಾಹನಾಮಂತ್ರ ಹಾಗೂ ಪುಜಾ ವಿಧಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಉಚ್ಛಿಷ್ಟ ಗಣಪತಿ ಪೂಜಾವಿಧಿ ಮಾತ್ರ ಅವೈದಿಕ ಹಾಗೂ ನಿಷಿದ್ಧವಾಗಿದೆ. ವಾಮಾಚಾರಿಗಳು ಪೂಜಿಸುವ ವಿಧಾನವಿದು. ಉಚ್ಛಿಷ್ಟವೆಂದರೆ ಎಂಜಲು. ಎಂಜಲು, ಮಾಂಸ, ಮದ್ಯ, ಮೈಥುನ ಇತ್ಯಾದಿ ವಾಮಾಚಾರಗಳ ಮೂಲಕ ಗಣಪನನ್ನು ಪೂಜಿಸುತ್ತಾರೆ. ಈ ಅತಿರೇಕವನ್ನು *ರಹಸ್ಯತಾಂತ್ರಿಕ* ಪಂಥದಲ್ಲಿ ಕಾಣಬಹುದು.

ಶಾಂತರೀತಿಯ ಗಣಪನನ್ನು ಪೂಜಿಸುವುದು ಹೇಗೆ?
ಭಾದ್ರಪದ ಮಾಸದ ಚೌತಿ ದಿನ ಗಣಪನನ್ನು ಶ್ರೀವರಸಿದ್ಧಿ ವಿನಾಯಕ ಎಂದು ಕರೆದು ಪೂಜಿಸುವ ವ್ರತ ಆಚರಿಸಲಾಗುತ್ತದೆ. ಬೆಳಗ್ಗೆ ಎಂದು ಶುಚಿರ್ಭೂತರಾಗಿ ತಳಿರು ತೋರಣಗಳಿಂದ ಮನೆಯ ಬಾಗಿಲು ಹಾಗೂ ದೇವರ ಮಂಟಪವನ್ನು ಅಲಂಕರಿಸಬೇಕು. ಮಧ್ಯದಲ್ಲಿ ಮೃಣ್ಮಯ(ಮಣ್ಣಿನಿಂದ), ಹರಿದ್ರಾ(ಅರಿಸಿನ) ಅಥವಾ ಗೋಮಯ(ದೇಸಿ ತಳಿ ಹಸುವಿನ ಸಗಣಿ)ದಿಂದ ತಯಾರಿಸಿದ ಶ್ರೀಗಣಪತಿ ಮೂರ್ತಿಯನ್ನು ಇಡಬೇಕು. ಮೊದಲಿಗೆ ಪೂಜೆಗೆ ಬೇಕಾದ ಶುದ್ಧವಾದ ನೀರನ್ನು ತಂಬಿಗೆಯಲ್ಲಿ ತುಂಬಿ ಗಂಗಾದಿ ಸಕಲ ನದಿಗಳನ್ನು ಧ್ಯಾನಿಸಿ ಪೂಜಿಸಬೇಕು. ಈ ನೀರಿನಿಂದ ಗಣಪನ ಮೂರ್ತಿ, ಪೂಜಾಸಾಮಗ್ರಿಗಳು ಹಾಗೂ ತನಗೆ ಪ್ರೋಕ್ಷಣೆ ಮಾಡಿಕೊಳ್ಳಬೇಕು.

ನಂತರ ಪುಷ್ಪ, ಮಂತ್ರಾಕ್ಷತೆಯನ್ನು ಕೈಯ್ಯಲ್ಲಿಡಿದು ರಕ್ತಾಂಬರೋ ರಕ್ತತನುಃ ರಕ್ತಮಾಲ್ಯಾನುಲೇಪನ| ಲಂಬೋದರೋ ಗಜಮುಖಃ ಪಾಶಾದಂತಾಂಕುಶಾಭಯೇ| ಬಿಭ್ರದ್ಧ್ಯೇಯೋ ವಿಘ್ನಹರಃ ಕಾಮದಃ ತ್ವರಯಾ ಹ್ಯಯಮ್|| ಎಂದು ಧ್ಯಾನಿಸಿ ಪ್ರತಿಮೆಯಲ್ಲಿ ಓಂ ಕ್ಷಿಪ್ರ ಪ್ರಸಾದಾಯ ನಮಃ ಓಂ ಎಂದು ಆವಾಹನೆ ಮಾಡಬೇಕು.

ನಂತರ ಆಸನ, ಅರ್ಘ್ಯ, ಪಾದಾದಿಗಳನ್ನು ನೀಡಿ, ಪ್ರೋಕ್ಷಣೆ ಮೂಲಕ ಅಭಿಷೇಕ ಮಾಡಬೇಕು. ವಸ್ತ್ರ, ಉಪವೀತ, ಗಂಧ ಸಮರ್ಪಿಸಿ ಹೂವುಗಳಿಂದ ಅಲಂಕರಿಸಬೇಕು. ನಾನಾವಿಧವಾದ ಪತ್ರೆಗಳಿಂದ ಅರ್ಚಿಸಬೇಕು. ಶ್ರೀಹರಿಗೆ ಸಮರ್ಪಿಸಿದ ತುಳಸಿಯನ್ನು ಈ ದಿನ ಮಾತ್ರ ಗಣಪತಿಗೆ ಅರ್ಪಿಸಬಹುದು.

ಧೂಪ, ದೀಪ, ನೈವೇದ್ಯ ಸಮರ್ಪಿಸಿ ಮಂಗಳಾರತಿ ಮಾಡಿ ಗಣಪನನ್ನು ಪ್ರಾರ್ಥಿಸಬೇಕು. ನಂತರ 21 ಗರಿಕೆಗಳನ್ನು ಏರಿಸಬೇಕು. ನಮಸ್ತೇ ವಿಘ್ನಸಂಹರ್ತ್ರೇ ನಮಸ್ತೇ ವಾಂಛಿತಪ್ರದ | ನಮಸ್ತೇ ದೇವದೇವೇಶ ನಮಸ್ತೇ ಗಣನಾಯಕ || ಎಂದು ನಮಸ್ಕಾರ ಸಲ್ಲಿಸಿ ಪ್ರಾರ್ಥಿಸಬೇಕು.
ವಿಶೇಷವೆಂದರೆ ಗಣಪತಿಯ ರಾಶಿ ಕನ್ಯಾರಾಶಿಯಾಗಿದ್ದು, ಈ ರಾಶಿಗೆ ಬುಧ ಅಧಿಪತಿಯಾಗಿದ್ದಾನೆ. ಬುಧನು ಹಸಿರು ಬಣ್ಣದಲ್ಲಿರುವುದರಿಂದ ಗಣಪತಿಗೆ ಹಸಿರು ಪತ್ರೆಗಳಿಂದ ಪೂಜಿಸಬೇಕು.
ಹಾಗೆಯೇ ಗಣಪತಿಯ ರಕ್ತ ವರ್ಣ ಶರೀರದವನು. ಅಂದರೆ ಕುಜನ ಅಂಶ ಹೆಚ್ಚು ಇರುವನು. ಕುಜನು ಕೆಂಪು ಬಣ್ಣಕ್ಕೆ ಅಧಿಪತಿ. ಆದ್ದರಿಂದ ಕೆಂಪು ಬಣ್ಣದ ಹೂ, ಕೆಂಪು ಬಣ್ಣದ ಅಕ್ಷತೆ ಅರ್ಪಿಸಬೇಕು. ಕೆಂಪು ವಸ್ತ್ರ ಉಡಿಸಬೇಕು.

ತ್ವಾಂ ಗಂಧಪುಷ್ಪಧೂಪಾದ್ಯೈಃ ಅನಭ್ಯರ್ಚ ಜಗತ್ತ್ರಯೇ |
ದೇವೈರಪಿ ತಥಾನ್ಯೈಶ್ಚ ಲಬ್ಧವ್ಯಂ ನಾಸ್ತಿ ಕುತ್ರಚಿತ್ || (ಲಿಂಗ ಪುರಾಣ 105-25)
(ದೇವತೆಗಳೇ ಆಗಲಿ ಅನ್ಯರೇ ಆಗಲಿ, ಯಾರು ಗಣಪತಿಯನ್ನು ಗಂಧ, ಪುಷ್ಪ, ಧೂಪಾದಿಗಳಿಂದ ಅರ್ಚಿಸುವದಿಲ್ಲವೋ ಅವರಿಗೆ ಮೂರೂ ಲೋಕದಲ್ಲಿ ಎನೂ ಲಭಿಸುವದಿಲ್ಲ.)
ಅಸ್ಮಿನ್ನಪೂಜಿತೋ ದೇವಾಃ ಪರಪೂಜಾ ಕೃತಾ ಯದಿ |
ತದಾ ತತ್ಫಲಹಾನಿಃ ಸ್ಯಾನ್ನಾತ್ರ ಕಾರ್ಯಾಂ ವಿಚಾರಣಾ || (ಶಿವ ಪುರಾಣ, ರುದ್ರಸಂಹಿತಾ, ಕುಮಾರ ಖಂಡ 18-23,24)
(ದೇವತೆಗಳು ಹೇಳುತ್ತಾರೆ, ಮನುಷ್ಯರು ಗಣಪತಿಯ ಪೂಜೆಯನ್ನು ಮೊದಲು ಮಾಡಿ ನಂತರ ನಮ್ಮ ಪೂಜೆಯನ್ನು ಮಾಡಬೇಕು, ಅವನ ಪೂಜೆ ಮಾಡಿದರೇ ನಮ್ಮ ಪೂಜೆ ಮಾಡಿದಂತೆ. ಒಂದು ವೇಳೆ ಹೀಗೆ ಪಾಲಿಸದಿದ್ದರೆ ಆ ಪೂಜಾಫಲವು ಹಾನಿಯಾಗುವುದು. ಅಂದರೆ ಪೂಜೆ ಮಾಡಿದುದರ ಫಲವೇ ಸಿಗುವುದಿಲ್ಲ).

ಆಧುನಿಕ ಯುಗದಲ್ಲಿ ಗಣಪ: ಪುಣೆಯ ಬಳಿ ಇರುವ ಚಿಂಚವಾಡದಲ್ಲಿ ಒಂದು ಕುಟುಂಬದ ಏಳು ತಲೆಮಾರಿನ ಜನರ ಮೇಲೆ ಗಣೇಶನ ಆವೇಶವಾಗುತ್ತಿತ್ತು. ಆ ಮನುಷ್ಯರನ್ನೇ ಗಣಪತಿ ಎಂದು ಪೂಜಿಸುತ್ತಿದ್ದ ಐತಿಹಾಸಿಕ ಉಲ್ಲೇಖವಿದೆ. 1810ರಲ್ಲಿ ಏಳನೆಯ ತಲೆಮಾರಿನ ವ್ಯಕ್ತಿಗೆ ಮಕ್ಕಳಿರಲಿಲ್ಲ. ಆತ ಸತ್ತಮೇಲೂ ಆತನ ದಾಯದಿಗಳು ಈಗಲೂ ಅಲ್ಲಿ ಪೂಜ್ಯರಾಗಿದ್ದಾರೆ. ಮೊದಲನೆಯ ಗಣೇಶ ಭಕ್ತನ ಹೆಸರು ಮೋರೋಭಾ. ಔರಂಗಜೇಬ್ ಕೂಡ ಈ ಮನೆತನಕ್ಕೆ ಎಂಟು ಹಳ್ಳಿಗಳ ದತ್ತಿಯನ್ನು ನೀಡಿದ್ದ ಎನ್ನಲಾಗಿದೆ.

ಇಂತಹ ಶ್ರೀಸಿದ್ಧಿ ವಿನಾಯಕ ಅಂತರ್ಗತನಾಗಿರುವ ಶ್ರೀವಿಶ್ವಂಭರದೇವರನ್ನು ಪೂಜಿಸೋಣ, ಸಿದ್ಧಿ ಪಡೆಯೋಣ.

 
 
 
 
 
 
 
 
 
 
 

Leave a Reply