Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಸೆ. 26ರಿಂದ ಅ. 5: ಉಚ್ಚಿಲ ದಸರಾ ಉತ್ಸವ​ದ ಸಡಗರ

ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಶ್ರೀಮತಿ ಶಾಲಿನಿ ನಾಡೋಜ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪಿಸಲಾಗುವುದು. ಈ ಬಾರಿಯ ದಸರಾ ಉತ್ಸವ ಸಹಿತ ದೇವಳದ ಕಾರ್ಯಕ್ರಮಗಳು ಹಾಗೂ ಶುಭಕಾರ್ಯಕ್ರಮಗಳನ್ನು ನಡೆಸಲು ಪೂರಕವಾಗಿ ಸುಮಾರು 1.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ​ ​ಶ್ರೀಮತಿ ಶಾಲಿನಿ ನಾಡೋಜ ಡಾ| ಜಿ. ಶಂಕರ್ ತೆರೆದ ಸಭಾಂಗಣವನ್ನು ಸೆ. 26ರಂದು ಬೆಳಿಗ್ಗೆ 9.05ರ ಸುಮುಹೂರ್ತದಲ್ಲಿ ಸಮಾಜ ಬಾಂಧವರ ಉಪಸಿತ್ಥಿಯಲ್ಲಿ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸುವರು.​ ಸೆ. 26ರಂದು ಬೆಳಿಗ್ಗೆ 9.30ಕ್ಕೆ ನವದುರ್ಗೆಯರು ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.


ಮಹೋತ್ಸವದ ಹತ್ತು ದಿನಗಳ ಕಾಲ ದಿನವೂ ಚಂಡಿಕಾ ಹೋಮ ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆ ವರೆಗೆ ನಡೆ ಯಲಿದೆ. ಮಧ್ಯಾಹ್ನ 12.30ರಿಂದ ಅಪರಾಹ್ನ 3ರ ವರೆಗೆ ದಿನವೂ ಅನ್ನಸಂತರ್ಪಣೆ ಇದ್ದು, ದಿನವಹಿ ಸುಮಾರು 25 ಸಾವಿರ ಮಂದಿಯನ್ನು ನಿರೀಕ್ಷಿಸಲಾಗಿದೆ.​ 
ಇಸ್ಕಾನ್ ಸಂಸ್ಥೆಯವರು ಶ್ರೀದೇವಳದಲ್ಲಿಯೇ ಸಿದ್ಧಪಡಿಸುವ ವಿಶೇಷ ಪ್ರಸಾದವನ್ನು ಸಾರ್ವಜನಿಕ ಭಕ್ತಾದಿಗಳಿಗೆ ಪ್ರತಿದಿನ ಸಂಜೆ 6ರಿಂದ ವಿತರಿಸಲಾಗುವುದು.

ಪ್ರತಿದಿನ ಬೆಳಿಗ್ಗೆ 10ರಿಂದ ಅಪರಾಹ್ನ 4ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಮಹಾ ಲಕ್ಷ್ಮೀ ದೇವಸ್ಥಾನದಲ್ಲಿ ಪ್ರತೀ ದಿನ ಸಂಜೆ 7.30ರಿಂದ ರಾತ್ರಿ 9ರ ವರೆಗೆ ಕಲ್ಪೋಕ್ತ ಪೂಜೆ, ನವದುರ್ಗೆಯರು ಮತ್ತು ಶ್ರೀ ಶಾರದಾದೇವಿಯ ವಿಗ್ರಹಗಳಿಗೆ ತ್ರಿಕಾಲ ಪೂಜೆ ನಡೆಯಲಿದೆ ಎಂದು ಡಾ| ಜಿ. ಶಂಕರ್ ವಿವರಿಸಿದರು.

ಸೆ. 26ರಿಂದ ಅ. 4ರ ವರೆಗೆ ಪ್ರತೀದಿನ ಸಂಜೆ ಗಂಟೆ 6ರಿಂದ ರಾತ್ರಿ 8ರ ವರೆಗೆ ಮಂಗಳೂರು ಕದ್ರಿ ನೃತ್ಯಭಾರತಿ ಕಲಾವಿದ ರಿಂದ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ, ಸೆ. 30ರಂದು ಸಂಜೆ 4ರಿಂದ 5ರ ವರೆಗೆ ಮಣಿಪಾಲ ಪವನ ಬಿ. ಆಚಾರ್ ಬಳಗದವರಿಂದ ಶತವೀಣಾವಲ್ಲರಿ ಏಕಕಾಲದಲ್ಲಿ 101 ವೀಣೆಗಳ ವಾದನ ಕಾರ್ಯಕ್ರಮ ನಡೆಯಲಿದೆ.

ದೇವಸ್ಥಾನದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ತಂಭವರೆಗೆ ಝಗಮಗಿಸುವ ಭವ್ಯ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಸೆ. 24ರಂದು ರಾತ್ರಿ 7 ಗಂಟೆಗೆ ಶ್ರೀ ದೇವಸ್ಥಾನದಲ್ಲಿ ಉದ್ಘಾಟಿಸಲಾಗುವುದು.​ ಅ. 5 ವಿಜಯ ದಶಮಿಯಂದು ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳ ಶೋಭಾಯಾತ್ರೆ ವೈಭವದಿಂದ ನಡೆಯಲಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುವ ಶೋಭಾಯಾತ್ರೆ ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಟು ಎರ್ಮಾಳು, ಪಡುಬಿದ್ರಿ, ಹೆಜಮಾಡಿ ಟೋಲ್ ಗೇಟ್ ವರೆಗೆ ಸಾಗಿ ಅಲ್ಲಿಂದ ವಾಪಸು ಪುನಃ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿಯಿಂದ ಕಾಪು ದೀಪಸ್ತಂಭ ವರೆಗೆ ಸುಮಾರು 26 ಕಿ. ಮೀ. ಕ್ರಮಿಸಿ ಸಮುದ್ರದಲ್ಲಿ ಜಲಸ್ತಂಭನಗೊಳ್ಳಲಿದೆ.

ಅ. 5ರಂದು ಅಪರಾಹ್ನ 3 ಹೊರಡುವ ವಿಗ್ರಹ ವಿಸರ್ಜನಾ ಶೋಭಾಯಾತ್ರೆಯಲ್ಲಿ ಹುಲಿವೇಷಗಳ ಅಬ್ಬರ, ವಿವಿಧ ವೇಷ ಭೂಷಣಗಳ ಸಡಗರ ಹೆಚ್ಚಿನ ಮೆರುಗು ನೀಡಲಿದೆ.ಶೋಭಾಯಾತ್ರೆಯಲ್ಲಿ ದಶ ವಿಗ್ರಹಗಳನ್ನೊಳಗೊಂಡ 10 ವಿಶೇಷ ಟ್ಯಾಬ್ಲೊ ಗಳೊಂದಿಗೆ ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿವೇಷಗಳ ಟ್ಯಾಬ್ಲೊ ಸೇರಿದಂತೆ ಸುಮಾರು 100ಕ್ಕೂ ಅಧಿಕ ಟ್ಯಾಬ್ಲೊಗಳನ್ನೊಳಗೊಂಡ ಶೋಭಾಯಾತ್ರೆ ಕರಾವಳಿಯ ಇತಿಹಾಸದಲ್ಲಿಯೇ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿ ಬರುವ ವಿಶ್ವಾಸವಿದೆ.

ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಕೊಪ್ಪಲಂಗಡಿ ಕ್ರಾಸ್ ಮತ್ತು ಕಾಪು ಬೀಚ್ ಗಳಲ್ಲಿ ಸಂಗೀತ ರಸಮಂಜರಿ ಮತ್ತು ಮನೋರಂಜನ ಕಾರ್ಯಕ್ರಮ ನಡೆಯಲಿದೆ.​ ಕಾಶಿಯ ಗಂಗಾನದಿ ತಟದಲ್ಲಿ ನಡೆಯುವ ಬೃಹತ್ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಧೂಪಾರತಿ ಮತ್ತು ರಥಾರತಿಗಳ ಗಂಗಾರತಿ ಬೆಳಗುವ ಮೂಲಕ ಮಹಾಮಂಗಳಾರತಿ ನಡೆಯಲಿದೆ.​ ವಿಗ್ರಹಗಳ ಜಲಸ್ತಂಭನ ಪೂರ್ವದಲ್ಲಿ ಸಹಸ್ರ ಮಹಿಳೆಯರಿಂದ ಕಾಪು ಸಮುದ್ರ ತೀರದಲ್ಲಿ ಸಾಮೂಹಿಕ ಮಂಗಳಾರತಿ ನೆರವೇರಲಿದೆ.

ದಶ ವಿಗ್ರಹಗಳನ್ನು ಮಲ್ಪೆ ಸೈಂಟ್ ಮೇರಿಸ್ ದ್ವೀಪಗಳಿಗೆ ತೆರಳುವ ವಿಶೇಷ ಬೋಟುಗಳಲ್ಲಿ ಸಮುದ್ರದಲ್ಲಿ ಕೊಂಡೊಯ್ಯ ಲಾಗುವುದು. ವಿಶೇಷ ದೀಪದ ವ್ಯವಸ್ಥೆಯೊಂದಿಗೆ ಅತ್ಯಂತ ವಿಶಿಷ್ಟವಾಗಿ ಜಲಸ್ತಂಭನಗೊಳಿಸಲಾಗುವುದು. ಕಾರ್ಯಕ್ರಮ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದ್ದು, ಮಂಗಳೂರಿನಿಂದ ಶೀರೂರು ವರೆಗಿನ ಸಮಸ್ತ ಮೊಗವೀರ ಬಾಂಧವರ ಸಹಕಾರ ಹಾಗೂ ಸರ್ಕಾರದ ಅನುದಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಶೋಭಾಯಾತ್ರೆ ಸಾಗುವ ಮಾರ್ಗದ ಎಲ್ಲಾ ಅಂಗಡಿಗಳು, ಮಳಿಗೆಗಳು ಮತ್ತು ಮನೆಯವರು ತಮ್ಮ ತಮ್ಮ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಉಚ್ಚಿಲ ದಸರಾವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಮತ್ತು ಎಲ್ಲಾ ಭಕ್ತರು 10 ದಿನಗಳ ಕಾಲ ನಡೆಯುವ ಉಚ್ಚಿಲ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರಾರಾಗುವಂತೆ ಡಾ| ಜಿ. ಶಂಕರ್ ವಿನಂತಿಸಿದರು.

ಸುದ್ದಿಗೋಷ್ಟಿಯಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶ್ರೀದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಕ್ಷೇತ್ರಾಧ್ಯಕ್ಷ ವಾಸುದೇವ ಸಾಲ್ಯಾನ್, ಮಹಾಜನ ಸಂಘ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕಾಂಚನ್, ಮಹಿಳಾ ಘಟಕ ಅಧ್ಯಕ್ಷೆ ಅಪ್ಪಿ ಸಾಲ್ಯಾನ್, ಮಹೋತ್ಸವ ಸಮಿತಿ ಪದಾಧಿಕಾರಿ ಗಳಾದ ಸತೀಶ ಅಮೀನ್ ಪಡುಕರೆ ಮತ್ತು ಶಂಕರ್ ಸಾಲ್ಯಾನ್ ಇದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!