ಇಂದು ಸೋಂದಾ ಕ್ಷೇತ್ರದ ಶ್ರೀವಾದಿರಾಜ ತೀರ್ಥ ರ ಜನ್ಮದಿನ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

*ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |*
*ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||*

  • ಇಂದು ಸೋಂದಾ ಕ್ಷೇತ್ರದ ಶ್ರೀವಾದಿರಾಜ ತೀರ್ಥ ರ ಜನ್ಮದಿನ.

ಈ ಕನ್ನಡ ನಾಡಿ ನ ಸುಗಂಧದ ಮಣ್ಣಿನಲ್ಲಿ 120 ವರ್ಷಗಳ ಕಾಲ ನಡೆದಾಡಿ ಶ್ರೀಹಂಸನಾಮಕ ಪರಮಾತ್ಮನ ಪರಂಪರೆಯ ಶ್ರೀಮಧ್ವಾಚಾರ್ಯ ಪ್ರಣೀತ, ದ್ವೈತಮತ ಸಾಮ್ರಾಜ್ಯ ಸಿಂಹಾಸನ ದಲ್ಲಿ ಮೆರೆದ ಶ್ರೀವಾದಿರಾಜ ತೀರ್ಥರ ಜನ್ಮದಿನ.

ಕು೦ದಾಪುರ ಸಮೀಪದ ಹೂವಿನಕೆರೆಯಲ್ಲಿದ್ದ ಶ್ರೀರಾಮಾಚಾರ್ಯ ಮತ್ತು ಶ್ರೀಮತಿ ಸರಸ್ವತಿ ದೇವಿ ದಂಪತಿಗೆ ಅನೇಕ ಕಾಲ ಮಕ್ಕಳಿರಲಿಲ್ಲ. ಇದೇ ವೇಳೆ ಕುಂಬಾಸಿ (ಆನೆಗುಡ್ಡೆ)ಯಲ್ಲಿ ಚಾತುರ್ಮಾಸ ವ್ರತದಲ್ಲಿದ್ದ ಉಡುಪಿಯ ಈಗಿನ ಸೋಂದೆ(ಸ್ವಾದಿ) ಮಠದ ಯತಿ ಶ್ರೀವಾಗೀಶ ತೀರ್ಥರ ಬಳಿ ತೆರಳಿ ಮನದ ನೋವನ್ನು ನಿವೇದಿಸಿಕೊಂಡರು.

ಶ್ರೀಹರಿಯನ್ನು ಪ್ರಾರ್ಥಿಸಿದ ಯತಿಗಳು ನಿಮಗೆ ಸುಪುತ್ರ ಜನಿಸಲಿದ್ದಾನೆ, ಆದರೆ ನೀವು ಆ ಮಗುವನ್ನು ಮಠಕ್ಕೆ ನೀಡುಬೇಕೆಂದು ಸೂಚಿಸಿ ದಂಪತಿಗೆ ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.

ಸಂತಾನವಾಗುವುದೆಂಬ ಸಂತೋಷ ಒಂದೆಡೆ ಯಾದರೆ, ಮಗುವನ್ನು ಮಠಕ್ಕೆ ನೀಡಬೇಕಲ್ಲಾ ಎಂಬ ದುಗುಡ ಮತ್ತೊಂದೆಡೆ. ಈ ತುಮುಲ ವನ್ನು ಗಮನಿಸಿದ ಶ್ರೀಗಳು ಮನೆಯೊಳಗೆ ಮಗು ಜನಿಸಿದರೆ ನಿಮಗೆ, ಹೊರಗೆ ಜನಿಸಿದರೆ ಮಠಕ್ಕೆ ಕೊಡಿ ಎಂದು ಸಮಾಧಾನ ಮಾಡಿ ಕಳುಹಿಸಿದರು.

ಶ್ರೀಹರಿಯ ಕರುಣೆಯಿಂದ ಸರಸ್ವತಿದೇವಿ ಗರ್ಭಿಣಿಯಾದಳು. ಮೊದಲೇ ಸಂಧಿಗ್ದ ಪರಿಸ್ಥಿತಿಯಲ್ಲಿದ್ದ ರಾಮಾಚಾರ್ಯರು ಹೆರಿಗೆ ದಿನ ಹತ್ತಿರ ಬರುತ್ತಿದ್ದಂತೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಹೋಗದಂತೆ ಬಹು ಎಚ್ಚರಿಕೆಯಿಂದ ಪತ್ನಿಯನ್ನು ನೋಡಿ ಕೊಳ್ಳುತ್ತಿದ್ದರು. ಆದರೆ ವಿಧಿ ನಿರ್ಣಯವೇ ಅಂತಿಮವಲ್ಲವೇ. ಶಾರ್ವರಿನಾಮ ಸಂವತ್ಸರ ಶುದ್ಧ ದ್ವಾದಶಿಯಂದು (ಕ್ರಿ. ಶ. 1480) ಆಚಾರ್ಯರು ದ್ವಾದಶಿ ಪಾರಣೆಯಲ್ಲಿದ್ದರು.

ತುಂಬು ಗರ್ಭಿಣಿ ಸರಸ್ವತಿ ದೇವಿ ಊಟಕ್ಕೆ ಬಡಿಸುತ್ತಿದ್ದರು. ಆ ಸಮಯದಲ್ಲೇ ಮನೆ ಮುಂದಿನ ಗದ್ದೆಯಲ್ಲಿ ದನವೊಂದು ಬೆಳೆದ ಫಸಲನ್ನು ತಿನ್ನುತ್ತಿತ್ತು. ಅದನ್ನು ಓಡಿಸಲೆಂದು ಸರಸ್ವತಿ ದೇವಿ ಗದ್ದೆಗೆ ಇಳಿಯುತ್ತಿದ್ದಂತೆ, ದನ ವೇನೋ ಓಡಿ ಹೋಯಿತು. ಆದರೆ ಸರಸ್ವತಿ ದೇವಿಗೆ ಕೂಡಲೇ ಹೊಟ್ಟೆ ನೋವು ಕಾಣಿಸಿ ಕೊಂಡು, ಕ್ಷಣಾರ್ಧದಲ್ಲೇ ಅಲ್ಲಿಯೇ ಹೆರಿಗೆ ಯಾಯಿತು.

ಮಗುವನ್ನು ಮನೆಗೆ ತಂದು ಆರೈಕೆ ಮಾಡಿ, ಮಠಕ್ಕೆ ಕೊಡಬೇಕಲ್ಲವೇ ಎಂಬ ಆತಂಕ ದಿಂದಲೇ ಜನಿಸಿದ ಸುಪುತ್ರನಿಗೆ ಸೊಂದೆ ಮಠದ ಪಟ್ಟದ ದೇವರಾದ “ಶ್ರೀಭೂ ವರಾಹ ಸ್ವಾಮಿ”ಯ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿದರು.

ಬಾಲಕನಾಗಿರುವಾಗಲೇ ವಿಶೇಷ ಪ್ರತಿಭೆ ಹೊಂದಿದ್ದ “ಭೂ ವರಾಹ” ತನ್ನ ಸಹಪಾಠಿ ಗಳು ಅಚ್ಚರಿ ಪಡುವಂತೆ ವಿದ್ಯೆ ಗಳಿಸಿದ. ರಾಮಾಚಾರ್ಯ ದಂಪತಿಗೆ ಸಂತಾನವಾದ ಸುದ್ದಿ ತಿಳಿದ ಯತಿಗಳು ಖುಷಿಪಟ್ಟರು.

ಸುಂದರ ಚಂದಿರನಂತೆ ಬೆಳೆಯುತ್ತಿದ್ದ ಸುಸಂಸ್ಕೃತ ವಟುವನ್ನು ಮಠಕ್ಕೆ ದಾನ ಪಡೆದ ಶ್ರೀವಾಗೀಶ ತೀರ್ಥರು, 8 ನೇ ವಯಸ್ಸಿಗೆ ಮಗುವಿಗೆ ತುರ್ಯಾಶ್ರಮ(ಸನ್ಯಾಸ) ದೀಕ್ಷೆ ನೀಡಿ ದ್ವೈತ ಸಿದ್ಧಾಂತವನ್ನು ಉಪದೇಶಿಸಿ “ಶ್ರೀವಾದಿ ರಾಜ ತೀರ್ಥ” ಎಂಬ ಅಭಿದಾನ ನೀಡಿ ಹರಸಿದರು. ಶ್ರೀವಾದಿರಾಜರು ಉಡುಪಿಯ ಶ್ರೀ ಮಠದ 20 ನೇ ಯತಿಗಳಾದರು.

ಇವರಲ್ಲಿದ್ದ ಭಕ್ತಿಗೆ ಮೆಚ್ಚಿ ಒಂದು ದಿನ ಬೆಳಗಿನ ಜಾವದಲ್ಲಿ ಶ್ರೀಹಯವದನ ದೇವರು ಕನಸಿನಲ್ಲಿ ದರ್ಶನವಿತ್ತು ಅನುಗ್ರಹಿಸಿದರು. ಪುಳಕಿತರಾಗಿ ಶ್ರೀಹಯವದನನನ್ನು ಸ್ತೋತ್ರ ಮಾಡಿ, ಅಂದಿನಿಂದ ಶ್ರೀ ಹಯವದನನ ಅ೦ಕಿತದಲ್ಲಿ ಕೃತಿಗಳನ್ನು ರಚಿಸಿದರು. ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿ ಕನ್ನಡದಲ್ಲಿ ಸರಳವಾಗಿ ತಿಳಿಸುವ ಯತ್ನ ಮಾಡಿದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರ ತರ್ಕಬದ್ಧವಾದ ವಾಗ್ವೈಖರಿಯನ್ನು ಮೆಚ್ಚಿ ವಿಜಯನಗರ ಸಾಮ್ರಾಜ್ಯದರಸ ಶ್ರೀಕೃಷ್ಣದೇವರಾಯ “ಪ್ರಸಂಗಾಭರಣ ತೀರ್ಥ” ಎಂಬ ಬಿರುದು ನೀಡಿ ಗೌರವಿಸಿದ್ದ.

ಉಡುಪಿಯಲ್ಲಿ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದ ಅಷ್ಟಮಠಗಳ ಯತಿಗಳಿಂದ ಶ್ರೀಕೃಷ್ಣನನ್ನು ಪೂಜಿಸುವ ಪರ್ಯಾಯ ಎರಡು ತಿಂಗಳಿಗೊಮ್ಮೆ ನಡೆಯುತ್ತಿತ್ತು. ಮಠಗಳ ದುಃಸ್ಥಿತಿಯನ್ನು ಕಂಡ ಶ್ರೀವಾದಿರಾಜರು ಪರ್ಯಾಯದ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸಿದರು.

ಶ್ರೀಕೃಷ್ಣ ಕನಕದಾಸರಿಗೆ ಒಲಿದು ದರ್ಶನವಿತ್ತ ಗೋಡೆಯ ಬಿರುಕನ್ನೇ ‘ಕನಕನ ಕಿಂಡಿ’ ಎಂದು ಕರೆದರಲ್ಲದೇ, ಮೊದಲು ಈ ಕಿಂಡಿಯ ಮೂಲಕವೇ ದೇವರ ‘ಧೂಳಿ ದರ್ಶನ’ ಮಾಡಿ ನಂತರ ಒಳಗಡೆ ತೆರಳಿ ಶ್ರೀಕೃಷ್ಣನನ್ನು ನೊಡ ಬೇಕು ಎಂಬ ನಿಯಮ ಜಾರಿಗೆ ತಂದ ಮಹಾನುಭಾವರು.

ಶ್ರೀವಾದಿರಾಜರ ಪರ್ಯಾಯ ಕಾಲದಲ್ಲಿ ಭಕ್ತ ಶ್ರೇಷ್ಠರಾದ ಶ್ರೀಕನಕದಾಸರು ಉಡುಪಿಗೆ ದಯಮಾಡಿಸಿದ್ದರು. ಶ್ರೀವ್ಯಾಸತೀರ್ಥ (ರಾಯ) ರೊಡನೆ ಕನಕದಾಸರನ್ನು ನೋಡಿದ್ದ ಶ್ರೀವಾದಿ ರಾಜರು ದಾಸರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಶ್ರೀ ಕೃಷ್ಣ ಮಠದ ಪಕ್ಕದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಕನಕದಾಸರು ಕೃಷ್ಣ ದೇವರ ಅಂತರಂಗ ಭಕ್ತರೆಂದು ಅರಿತು, ಸದಾ ಅವರಿಗೆ ಶ್ರೀಕೃಷ್ಣನ ದರ್ಶನವಾಗಲೆಂದು ಗೋಡೆಯಲ್ಲಿ ಕಿಟಕಿ ಮಾಡಿಸಿದ್ದರು.

ಶ್ರೀಕನಕದಾಸರು ಭಕ್ತಿಯಿಂದ ಕರಟ(ಮದ್ರಾಸು ತೆಂಗಿನ ಚಿಪ್ಪು)ದಲ್ಲಿ ತುಂಬಿದ ಗಂಜಿಯನ್ನು ಶ್ರೀಕೃಷ್ಣ ದೇವರಿಗೆ ಮಾನಸ ಪೂಜೆಯ ಮೂಲಕ ಸಮರ್ಪಣೆ ಮಾಡುತ್ತಿದ್ದರು. ಭಗವಂತನಲ್ಲಿ ಸಂತರಿಗೆ ಇದ್ದ ಭಕ್ತಿಯ ನೆನಪಿಗಾಗಿ ಕೃಷ್ಣನಿಗೆ ನಿತ್ಯವೂ ಗಂಜಿ ನೈವೇದ್ಯ ಮಾಡುವ ಕ್ರಮವನ್ನು ಜಾರಿಗೆ ತಂದಿದ್ದರು.

ಇಂದಿಗೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೇವರಿಗೆ ಗಂಜಿ ನೈವೇದ್ಯ ಮಾಡಲಾಗುತ್ತದೆ.

ನಿತ್ಯ ದೇವರ ಪೂಜೆಯಲ್ಲಿ ವೇದಮಂತ್ರಗಳ ಜತೆ, ಕನ್ನಡದ ಹಾಡುಗಳನ್ನು ಹಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಶ್ರೀಕೃಷ್ಣನ ಮುಂದೆ ದಾಸರ ಕೃತಿಗಳನ್ನು ಸ್ವತಃ ತಾವೇ ಹಾಡುತ್ತಾ ದೇವರ ನಿರ್ಮಾಲ್ಯದ ತಟ್ಟೆಯನ್ನು ತಲೆಯ ಮೇಲಿಟ್ಟುಕೊಂಡು ಕುಣಿಯುತ್ತಿದ್ದರು.

ಇಂದಿಗೂ ಘಟ್ಟ(ಕರಾವಳಿ)ದ ಕೆಳಗಿನ ಮಠ ಗಳಲ್ಲಿ ಏಕಾದಶಿಯಂದು ದೇವರ ನಿರ್ಮಾಲ್ಯದ ತಟ್ಟೆಯನ್ನು ತಲೆಯ ಮೇಲಿಟ್ಟುಕೊಂಡು *ಢಂಗೂರವಾ ಸಾರಿ ಹರಿಯ* ಎಂಬ ಕೃತಿ ಯನ್ನು ಹಾಡುತ್ತಾ ಹೆಜ್ಜೆ ಹಾಕಿ ಶ್ರೀಹರಿಯನ್ನು ಸ್ತುತಿಸುವುದನ್ನು ಇಂದಿಗೂ ಕಾಣಬಹುದು.

ಉಡುಪಿ ಪೇಜಾವರ ಮಠದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ತಮ್ಮ 89 ನೇ ವಯಸ್ಸಿ ನಲ್ಲೂ ಅನಾರೋಗ್ಯದ ಮಧ್ಯೆಯೂ ಈ ಪರಿಪಾಟವನ್ನು ನಡೆಸುತ್ತಿದ್ದುದನ್ನು ಇಲ್ಲಿ ಸ್ಮರಿಸ ಬಹುದು.

ಭರತಖಂಡವನ್ನು ನಾಲ್ಕು ಬಾರಿ ಸಂಚಾರ ಮಾಡಿ ತೀರ್ಥ ಕ್ಷೇತ್ರಗಳ ಮಹಿಮೆ ಕುರಿತು “ತೀರ್ಥ ಪ್ರಬಂಧ” ರಚಿಸಿದರು. “ರುಕ್ಮಿಣೀಶ ವಿಜಯ”, “ಲಕ್ಷಾಲಂಕಾರ”( ವಾದಿರಾಜರು ಪ್ರಯಾಗದಲ್ಲಿ ಬ್ರಹ್ಮದೇವರ ಸಂಧ್ಯಾ ಮಂಟಪದಲ್ಲಿ ಧ್ಯಾನದಲ್ಲಿದ್ದಾಗ ಶ್ರೀವೇದ ವ್ಯಾಸರು ದರ್ಶನವಿತ್ತು, ಅವರ ತಾಯಿ ಹರಕೆಯನ್ನು ನೆನಪಿಸಿದರು.

ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರುತ್ತದೆ ಎಂಬ ಸಲಹೆ ನೀಡಿದರು. ಆಗ ಮಹಾಭಾರತಕ್ಕೆ ಬರೆದ ಟೀಕೆ). ವೈಕುಂಠ ವರ್ಣನೆ, ಸ್ವಪ್ನಗದ್ಯ, ಲಕ್ಷ್ಮಿ ಶೋಭಾನೆ, ಕೀಚಕ ವಧೆ, ಕೇಶವನಾಮ ಮತ್ತಿತರ ಮಹೋನ್ನತ ಕೃತಿಗಳನ್ನು ರಚಿಸಿದರು.

ಇವರ ಸಾಮಾಜಿಕ ಸಾಮರಸ್ಯವನ್ನರಿತ ಸ್ವರ್ಣಕಾರರಾದ ವಿಶ್ವಕರ್ಮ ಬ್ರಾಹ್ಮಣರು, ಗೋವೆಯ ದೈವಜ್ಞ ಬ್ರಾಹ್ಮಣರು ರಾಜರ ಶಿಷ್ಯರಾದುದು ವಿಶೇಷ. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ವಿಶೇಷ ತತ್ವಜ್ಞಾನ ಹೊಂದಿದ್ದ ರಾಜರಿಗೆ ಮಹಾರಾಜರೇ ಸೇವೆ ಮಾಡುತ್ತಿದ್ದರು.

ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ಇವರು ಸೇರಿದಂತೆ ಅನೇಕ ಸಾಮಂತರು “ಷಡ್ದರ್ಶನ ಷಣ್ಮುಖ”, “ಸರ್ವಜ್ಞಕಲ್ಪ”, “ಕವಿಕುಲತಿಲಕ” ಮುಂತಾದ ಬಿರುದು ನೀಡಿ ಗೌರವಿಸಿದ್ದಾರೆ.

“ಕುಡುಮ” ಎಂದು ಕರೆಯುತ್ತಿದ್ದ ಕ್ಷೇತ್ರದಲ್ಲಿ ಶ್ರೀಮಂಜುನಾಥಸ್ವಾಮಿಯನ್ನು ಆಗಮೋಕ್ತ ವಾಗಿ ಪ್ರತಿಷ್ಠಾಪನೆ ಮಾಡಿದರು. ಅಲ್ಲಿನ ಹೆಗ್ಗಡೆಯವರಾದ ಶ್ರೀದೇವರಾಜ ಹೆಗ್ಗಡೆಯವರ ಪ್ರೀತಿಗೆ ಒಲಿದು ಕುಡುಮವನ್ನು ‘ಧರ್ಮಸ್ಥಳ’ ಎಂಬ ಕೀರ್ತಿ ಕ್ಷೇತ್ರ ಮಾಡಿದರು.

ಬದರಿಕಾಶ್ರಮದಲ್ಲಿದ್ದ ತ್ರಿವಿಕ್ರಮದೇವರ ಮೂರ್ತಿ ಯನ್ನು ಭೂತರಾಜರ ಮೂಲಕ ತರಿಸಿ ಪುಣ್ಯಕ್ಷೇತ್ರ ಸೋಂದೆ(ಸ್ವಾದಿ)ಯಲ್ಲಿ ಪ್ರತಿಷ್ಠಾಪಿಸಿದರು.

ಶ್ರೀವಾದಿರಾಜರು ಅವರ ಉಪಾಸ್ಯಮೂರುತಿ ಶ್ರೀಹಯವದನ ದೇವರಿಗೆ ಕಡಲೆ ಬೆಲ್ಲದ ಮಡ್ಡಿಯನ್ನು ನಿವೇದಿಸಿ, ಉಚ್ಛಿಷ್ಟವನ್ನು ಸ್ವೀಕರಿಸುತ್ತಿದ್ದರು. ಇದನ್ನು ಕಂಡ ಕೆಲ ಕಿಡಿ ಗೇಡಿಗಳು ಪರೀಕ್ಷಿಸಲು ಹಾಗೂ ಅಸೂಯೆ ಯಿಂದ ಕಡಲೆ ಮಡ್ಡಿಯಲ್ಲಿ ವಿಷ ಬೆರೆಸಿದರು.

ಇದನ್ನರಿಯದ ರಾಜರು ಸಮರ್ಪಿಸಿದ ನೈವೇದ್ಯವನ್ನು ದಿವ್ಯವಾದ ಅಶ್ವ(ಕುದುರೆ) ರೂಪದಲ್ಲಿ ಬಂದ ಹಯಗ್ರೀವ ಸಂಪೂರ್ಣವಾಗಿ ತಿಂದುಕೊಂಡ. ಇದನ್ನು ಕಂಡ ರಾಜರು ಸೋಜಿಗದಿಂದ ತಮ್ಮ ಉಪಾಸ್ಯ ಮೂರ್ತಿಯತ್ತ ನೋಡಿದಾಗ ಆ ದಿವ್ಯಾಶ್ವ ಸ್ವರೂಪದ ಹಯಗ್ರೀವ ದೇವರ ಕೊರಳು ನೀಲಿ ಬಣ್ಣಕ್ಕೆ ತಿರುಗಿತ್ತು. ಶ್ರೀಹರಿ ವಾದಿರಾಜರ ಜೀವ ಉಳಿಸಿದ್ದ, ಅಂದಿನಿಂದ ಕಡಲೆ ಮಡ್ಡಿಗೆ “ಹಯಗ್ರೀವ” ಎಂದು ಹೆಸರುಬಂತು.

ಹಯಗ್ರೀವ ಇಂದಿಗೂ ಮಾಧ್ವರ ಮನೆಯಲ್ಲಿ ವಿಶೇಷ ರುಚಿಯಿಂದ ಮಾಡಲಾಗುತ್ತದೆ.

ಪೋಷ್ಠೀಶ ವಿಗ್ರಹ ಎಂಬ ಕೃತಿಯನ್ನು ಖರಪುಟ (ಕುದುರೆಹೆಜ್ಜೆ) ಧಾಟಿಯಲ್ಲಿ ರಚಿಸಿದ್ದಾರೆ. ಪಾಲಾಯಾಚ್ಯುತ ಎಂಬ ಕೃತಿಯನ್ನು ಎಲ್ಲ ಮಠಗಳಲ್ಲಿ ಪೂಜೆಯ ವೇಳೆ ಪಠಿಸುವ ವಾಡಿಕೆಯಿದೆ.

ಒಮ್ಮೆ ಮಟ್ಟಿ ಗ್ರಾಮದಲ್ಲಿ ವಾತಾವರಣದಲ್ಲಿ ಏರುಪೇರಾಯಿತು, ಬೆಳೆಗಳು ನಶಿಸುತ್ತಿದ್ದವು. ಅಲ್ಲಿನ ಜನ ಗುರುಗಳನ್ನು ಭೇಟಿಯಾದಾಗ ಗುರುಗಳು ಅಂದಿನ ಕಾಲದಲ್ಲಿ ನಿಷೇಧವೆನಿಸಿದ್ದ ಗುಳ್ಳ(ಗುಂಡು ಬದನೆ)ದ ಬೀಜವನ್ನು ಅವರಿಗೆ ಕೊಟ್ಟರು.

ಉತ್ತಮವಾಗಿ ಬೆಳೆದ ಗಿಡಗಳು ನೀಡಿದ ಫಸಲನ್ನು ತಂದ ಗ್ರಾಮಸ್ಥರು ವಾದಿರಾಜರಿಗೆ ಒಪ್ಪಿಸಿದರು. ಆ ಗುಳ್ಳದಿಂದ ರುಚಿಯಾದ ಹುಳಿ ಮಾಡಿಸಿ, ಶ್ರೀಕೃಷ್ಣನಿಗೆ ಸಮರ್ಪಿಸಿದರು.

ಅಂದಿನಿಂದ ಇಂದಿನವರೆಗೂ ಉಡುಪಿ ಮಠ ದಲ್ಲಿ ಗುಳ್ಳ ಬಳಕೆಯಾಗುತ್ತಲೇ ಇದೆ. ಈಗ ಈ ಮಟ್ಟಿ ಗುಳ್ಳ ವಿಶ್ವವ್ಯಾಪಿ ಹೆಸರುವಾಸಿಯಾಗಿದೆ.

ಇಂತಹ ಅಭೂತಪೂರ್ವ ಸಾಧನೆಗೈದ ಯತಿ ಗಳು 112 ವರ್ಷ ಸನ್ಯಾಸಿ ಜೀವನ ನಡೆಸಿ, ಉಡುಪಿಯಲ್ಲಿ 4 ಬಾರಿ ಪರ್ಯಾಯವನ್ನು ಪೂರೈಸಿದರು. 5 ನೇ ಪರ್ಯಾಯವನ್ನು ಅವರ ಉತ್ತರಾಧಿಕಾರಿ ವೇದವೇದ್ಯರಿಗೆ ಬಿಟ್ಟು ಕೊಟ್ಟರು.

ನಂತರ ಸೋದೆಗೆ ತೆರಳಿ ಅಲ್ಲಿಯೇ 5 ನೇ ಪರ್ಯಾಯ ನಡೆಸಿದರು. 120 ವರ್ಷ ತುಂಬು ಜೀವನ ನಡೆಸಿದ ಮಹಾಮಹಿಮರಾದ ಶ್ರೀವಾದಿರಾಜರು ಕ್ರಿ. ಶ. 1600 ನೇ ಶಾರ್ವರಿ ನಾಮ ಸಂವತ್ಸರ ಫಾಲ್ಗುಣ ಬಹುಳ ತದಿಗೆ ಸಶರೀರರಾಗಿ ಅವರೇ ನಿರ್ಮಾಣ ಮಾಡಿಸಿದ್ದ ಪಂಚ ವೃಂದಾವನವನ್ನು ಸಶರೀರರಾಗಿ ಪ್ರವೇಶಿಸಿದರು.

ಇಂತಹ ಮಹಾಮಹಿಮರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ. ಅವಕಾಶ, ಅನುಕೂಲ ಇದ್ದವರು ಸೋಂದಾ ಕ್ಷೇತ್ರಕ್ಕೆ ಭೇಟಿ ನೀಡಿ. ಮಳೆಗಾದಲ್ಲಿ ಈ ಕ್ಷೇತ್ರ ಭೂರಮೇ (ಸ್ವರ್ಗ).

*ಕಾಮಧೇನು ಯಥಾ ಪೂರ್ವಂ ಸರ್ವಾಭೀಷ್ಟಫಲಪ್ರದಾ |*
*ತಥಾ ಕಲೌ ವಾದಿರಾಜಃಶ್ರೀಪಾದೋ ಅಭೀಷ್ಟದಃ ಸತಾಮ್||*

🙏ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

 
 
 
 
 
 
 
 
 
 
 

Leave a Reply