ಶತಮಾನೋತ್ಸವ ಸಂಭ್ರಮ: ಸಾಸ್ತಾನ ಚರ್ಚಿನಲ್ಲಿ ಮೃತ ಆತ್ಮಗಳಿಗೆ ಸದ್ಗತಿ ಕೋರಿ ಪ್ರಾರ್ಥನೆ

ಕೋಟ: ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಆಚರಣೆಯ ಪ್ರಯುಕ್ತ ದೇವಾಲಯದಲ್ಲಿ ಕಳೆದ ನೂರು ವರ್ಷಗಳಲ್ಲಿ ತಮ್ಮ ಸೇವೆಯನ್ನು ನೀಡಿ ದೈವಾಧೀನರಾದ ಎಲ್ಲಾ ಮೃತ ಬಂಧುಗಳನ್ನು ನೆನಪಿಸಿ ಶನಿವಾರ ಪ್ರಾರ್ಥನೆ ಸಲ್ಲಿಸಲಾಯಿತು.ಚರ್ಚಿನಲ್ಲಿಯೇ ಹುಟ್ಟಿ ಪ್ರಸ್ತುತ ಗೋವಾ ರಾಜ್ಯದಲ್ಲಿ ಧರ್ಮಗುರುಗಳಾಗಿ ಸೇವೆ ನೀಡುತ್ತಿರುವ ವಂ|ಸ್ಟೀವನ್ ಡಿಸೋಜಾ ಅವರು ಪವಿತ್ರ ಬಲಿಪೂಜೆಯನ್ನು ಸಲ್ಲಿಸಿ ಮೃತ ಆತ್ಮಗಳಿಗೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಸಂದೇಶದಲ್ಲಿ ಅವರು ಕ್ರೈಸ್ತ ಧರ್ಮಸಭೆ ಮೃತರಿಗೆ ಪುನರುತ್ಥಾನವಿದೆ ಎಂಬ ಸತ್ಯವನ್ನು ವಿಶ್ವಾಸಿಸುತ್ತಿದ್ದು ಈ ನಿಟ್ಟಿನಲ್ಲಿ ಮೃತ ಆತ್ಮಗಳ ಸದ್ಗತಿಗಾಗಿ ಸದಾ ತನ್ನ ಪ್ರಾರ್ಥನೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಸಾಸ್ತಾನ ಧರ್ಮಕೇಂದ್ರದಲ್ಲಿ ಈವರೆಗೆ ಸೇವೆ ಸಲ್ಲಿಸಿದ ಹಲವಾರು ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಎಲ್ಲಾ ಕ್ರೈಸ್ತ ವಿಶ್ವಾಸಿಗಳಿಗೆ ಸದ್ಗತಿ ಲಭಿಸಲಿ ಎಂದು ಹಾರೈಸಿದರು.ಬಲಿಪೂಜೆಯ ಬಳಿಕ ಚರ್ಚಿನ ಧಫನ ಭೂಮಿಗೆ ಭೇಟಿ ನೀಡಿ ಮೃತ ಆತ್ಮಗಳ ಸದ್ಗತಿಗಾಗಿ ವಿಶೇಷ ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು ಮತ್ತು ದಫನ ಭೂಮಿಯನ್ನು ಪವಿತ್ರ ಜಲ ಪ್ರೋಕ್ಷಣೆಯ ಮೂಲಕ ಸಮಾಧಿ ಗಳನ್ನು ಪವಿತ್ರೀಕರಿಸಲಾಯಿತು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಜಾನ್ ವಾಲ್ಟರ್ ಮೆಂಡೊನ್ಸಾ, ಅತಿಥಿ ಧರ್ಮಗುರು ಗಳಾದ ವಂ|ಜಾನ್ ಲೂವಿಸ್, ವಂ|ದೀಪಕ್ ಫುರ್ಟಾಡೊ, ಪಾಲನಾ ಸಮಿತಿಯ ಕಾರ್ಯದರ್ಶಿ ಲೂವಿಸ್ ಡಿಸೋಜಾ, 18 ಆಯೋಗಗಳ ಸಂಯೋಜಕಿ ಜೆನೆಟ್ ಬಾಂಜ್, ಶತಮಾನೋತ್ಸವ ಆಚರಣಾ ಸಮಿತಿಯ ಸಂಚಾಲಕರಾದ ಡೆರಿಕ್ ಡಿಸೋಜಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply