Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

|| ಅವ್ವೆ – ನೆಲದವ್ವೆ – ಜಗದವ್ವೆ || ನವರಾತ್ರಿ~4~ಕೆ.ಎಲ್.ಕುಂಡಂತಾಯ

ನಭದಿಂದ ಇಳೆಗೆ ಮಳೆ .ಮಳೆಯಿಂದ ಬೆಳೆ . ಬೆಳೆಯಿಂದ ಅನ್ನ .ಅನ್ನದಿಂದ ಚಿತ್ತ . ಚಿತ್ತದಿಂದ ಬದುಕು ; ಇದು ನಿರಂತರ .ಈ ನೈರಂತರ್ಯದಲ್ಲಿದೆ ನೈಜ ಸತ್ಯ .ಈ ಸತ್ಯವೇ ಮನುಕುಲ ಮೊದಲು ಉಚ್ಚರಿಸಿದ ಶಬ್ದ “ಅಮ್ಮಾ….”. ಇವಳು ನಮ್ಮ “ಅವ್ವೆ” . ಇವಳಿಂದ “ನೆಲದವ್ವೆ” . ನೆಲದವ್ವೆಯಿಂದ “ಜಗದವ್ವೆ” .ಇದು ‘ಲಲಿತೆ’ಯಾವ ‘ಜಗನ್ಮಾತೆ’ಯ ದರ್ಶನ.

ಲಾಲಿತ್ಯಪೂರ್ಣವಾದುದು ಮಾತ್ರ ಆತ್ಮೀಯವಾಗುತ್ತದೆ .ಈ ಆತ್ಮೀಯತೆಯ ಹರವಿನಲ್ಲಿ , ಭಾವಗಳ ತುಮುಲದಲ್ಲಿ ಕೇಳುವ ಅನುರಣವೇ ಅಮ್ಮಾ..ಎಂಬ ಪ್ರಣವ ಸದೃಶವಾದ ನಾದ .ಇದು ಸಹಸ್ರ ಬೀಜಾಕ್ಷರಗಳಿಗೂ ಹೆಚ್ಚಿನದ್ದು .ಸದಾ ಅನುರಣಿಸುವ ಸ್ತುತಿ , ಸ್ಪೂರ್ತಿಯ ರವ .

ಹೊಕ್ಕುಳಬಳ್ಳಿ ಕಡಿಯದೆ ಪ್ರಾಪಂಚಿಕ ಬದುಕಿಲ್ಲ .ಆದರೆ ತುಂಡರಿಸಲಾಗದ ಅಥವಾ ಕಳಚಿಕೊಳ್ಳಲಾಗದ ಬಳ್ಳಿ ನಮ್ಮನ್ನು ಬಂಧಿಸಿರುತ್ತದೆ ‌.ಅದೇ ಭಾವನಾತ್ಮಕ ಸಂಬಂಧದ ನಂಟು . ತಾಯಿಯೊಂದಿಗೆ ಮಾತ್ರ ಬೆಸೆದಿರುವ “ದಿವ್ಯ ಅನುಭೂತಿ” .ತಾಯಿಯ ಮಡಿಲಲ್ಲಿ‌ ಕುಳಿತು ವಿಸ್ಮಯಗಳನ್ನು ಕಾಣುತ್ತಾ ಎದ್ದು ನಿಲ್ಲುವುದು ನೆಲದಲ್ಲಿ .ಆರಂಭದಲ್ಲಿ ಬೇಕು ತಾಯಿಯ ಆಸರೆ .ತಪ್ಪು ಹೆಜ್ಜೆಗಳನ್ನು ದೃಢವಾಗಿಸುತ್ತಾ ಅಮ್ಮನನ್ನು ಮತ್ತು ನೆಲವನ್ನು ಪೂರ್ತಿ‌ ತಿಳಿಯಲು ಬೇಕು ತಾಯಿಯ ಸೆರಗಿನ‌ ಆಧಾರ .ತಾಯಿಯ ಸೆರಗು ಹಿಡಿಯುತ್ತಾ ಅನುಸರಿಸುವ ಸಹಜ ಕ್ರಿಯೆಯಲ್ಲಿ‌ ಜಗತ್ತನ್ನು ಕಾಣುವ ಉತ್ಸಾಹವಿರುತ್ತದೆ ,
ಆನಂದವಿರುತ್ತದೆ . ಅದು ಅವರ್ಣನೀಯವಾಗಿರುತ್ತದೆ .

ಮೊದಲು ಅವ್ವೆ ,ಅವ್ವೆಯಿಂದ ನೆಲದವ್ವೆ ,ನೆಲದವ್ವೆಯಿಂದ ಜಗದವ್ವೆ ಎಂಬ ಈ ಚಿಂತನೆ ಅವ್ವೆಯಿಂದ ಮಣ್ಣಿನ ಪೂರ್ಣಾನುಭವ .ಬಳಿಕ ನಮ್ಮ ಅಮ್ಮನೇ ನೆಲದ ಅಮ್ಮನಾಗುವುದು ,ನಮ್ಮನ್ನು ಪಾಲಿಸಿದ – ಪೋಷಿಸಿದ ತಾಯಿ ನಮ್ಮನ್ನು ಕ್ರಿಯಾಶೀಲರನ್ನಾಗಿಸುವುದು ನೆಲದಲ್ಲಿ . ನೆಲ ತಾಯಿಯಂತೆಯೇ ಆಧಾರವಾಗುತ್ತದೆ ,ಅನ್ನ ಕೊಡುತ್ತದೆ . ಹೊಟ್ಟೆ ತುಂಬ ಉಂಡು ಆಕಾಶ ನೋಡುತ್ತಾ ಅಂಗಾತ ಮಲಗಿದಾಗ ಈ ಎರಡೂ ಅವ್ವೆಯರಿಗಿಂತ ವಿಶ್ವನಿಯಾಮಕ ಜನನಿ ಬೇರೊಬ್ಬಳಿದ್ದಾಳೆ ಅನ್ನಿಸುತ್ತದೆ .ಇದು ‘ಜಗದವ್ವೆ’ಯ ಅರಿವು .

ಲೌಕಿಕ ಅಮ್ಮನಲ್ಲಿರುವ ಅಲೌಕಿಕ‌ ಜಗನ್ಮಾತೆಯನ್ನು ಅರಿತು ಆರಾಧಿಸುವುದು ಶರನ್ನವರಾತ್ರಿಯ ಆಶಯ .ಮಧು – ಕೈಟಭರ ವಧಾನಂತರದಲ್ಲಿ ಮೇದಿನಿಯ ನಿರ್ಮಾಣಕ್ಕೆ ವಿಷ್ಣುವಿನ ನೇತ್ರ , ಮುಖ , ಮೂಗು , ಬಾಹು ,ಹೃದಯಗಳಿಂದ ಹೊರಟ ಶಕ್ತಿಯು “ಮಹಾಕಾಳಿ” ಎಂದು ಬ್ರಹ್ಮನಿಂದ ಸ್ತುತಿಸಲ್ಪಡುತ್ತದೆ .
ಮಹಿಷಾಸುರನ ವಧೆಗೆ ಬ್ರಹ್ಮ ,ವಿಷ್ಣು , ಮಹೇಶ್ವರ ,ಇಂದ್ರಾದಿ ಸುಮನಸರ ಶರೀರದಿಂದ ಹೊರಟ ತೇಜಸ್ಸುಗಳು‌ ಒಂದಾಗಿ ಇಡೀ ಲೋಕವನ್ನೆ ವ್ಯಾಪಿಸಿ‌ ನಿನಾದವಾಗಿ – ಪ್ರಣವವಾಗಿ , ತೇಜೋರೂಪವಾಗಿ ,ಕೊನೆಗೆ ಸ್ತ್ರೀ ರೂಪದಿಂದ ಪ್ರತ್ಯಕ್ಚವಾದಾಗ ಆ ತಾಯಿ ಜಗದವ್ವೆಯಾಗಿ ಜಗತ್ತನ್ನು‌ ರಕ್ಷಿಸಿದ ವಿಧಾನವು ಶಕ್ರಾದಿಗಳ ಸ್ತುತಿಯಿಂದ ವೇದ್ಯವಾಗುತ್ತದೆ . ಮಹಿಷ ವಧಾನಂತರದಲ್ಲಿ ಶಕ್ರರು ಅಷ್ಟಭುಜದ ಅಮ್ಮನನ್ನು ಸ್ತುತಿಸುತ್ತಾರೆ .ಇದು ಸಪ್ತಶತಿಯ ನಾಲ್ಕನೇ ಅಧ್ಯಾಯ. ಅದೇ ಶಕ್ರಾದಿಸ್ತುತಿ .

ಒಂಬತ್ತು ದಿನಗಳ ಕಾಲ ಮೂರ್ತಿಯಲ್ಲಿ ,ಕಲಶದಲ್ಲಿ , ಸ್ವಸ್ತಿಕೆಯಲ್ಲಿ , ಮಂಡಲ ಮಧ್ಯದಲ್ಲಿ , ಅಗ್ನಿಮಧ್ಯದಲ್ಲಿ , ಸನ್ನಿಹಿತಳಾಗಿ ವಿವಿಧರೀತಿಯಲ್ಲಿ ಪೂಜೆಗೊಳ್ಳುವ ಅಮ್ಮಾ…ಮನುಕುಲಕ್ಕೆ ಸರ್ವಮಂಗಲವನ್ನು , ರಕ್ಷಣೆಯನ್ನು‌ ಅನುಗ್ರಹಿಸು ಎಂಬುದು ಪ್ರಾರ್ಥನೆ.

• ಕೆ.ಎಲ್.ಕುಂಡಂತಾಯ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!