ಬಾಗಿಲನು ತೆರೆದು ಸೇವೆಯನು ತಕೋ ಕೃಷ್ಣಾ….. ಕೃಷ್ಣಾ

ಕೃಷ್ಣ ಮಠಕ್ಕೆ ಸೆ.28ರಿಂದ ಪ್ರವೇಶ: ಷರತ್ತುಗಳು ಅನ್ವಯ
ಉಡುಪಿ: ಉಡುಪಿಯ ಕೃಷ್ಣ ಮಠಕ್ಕೆ ಕೊರೋನಾ ಕಾರಣದಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು.ಇದೀಗ ಸೆಪ್ಟೆಂಬರ್ 28 ರಿಂದ ಹಲವು ಷರತ್ತುಗಳೊಂದಿಗೆ ಪ್ರವೇಶ ಕಲ್ಪಿಸಲಾಗುವುದು  ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಅವರು ತಿಳಿಸಿದ್ದಾರೆ.​ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪಾಲನೆಯ ನಿಟ್ಟಿನಲ್ಲಿ ಮಾರ್ಚ್ 22ರಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಅನಂತರ ಸರಕಾರ ಮುಜರಾಯಿ ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಿತ್ತು. ಶ್ರೀಕೃಷ್ಣ ಮಠಕ್ಕೆ ಪ್ರವೇಶ ಇಲ್ಲದ ಕಾರಣ ಹೊರಗಿನ ಕನಕನ ಕಿಂಡಿಯ ಮೂಲಕವೇ  ದರ್ಶನ​ ಮಾಡಬೇಕಾಗಿತ್ತು,  ಈ ಎಲ್ಲಾ ಕಾರಣ ಗಳಿಂದ ಶ್ರೀಮಠವು ಜನರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಕೃಷ್ಣ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿತ್ತು.​ 

ಸದ್ಯ  ಕೇಂದ್ರ ಸರ್ಕಾರವು ಸೆ.21ರ ನಂತರ ಕೆಲವು ಮಾರ್ಗಸೂಚಿಗಳನ್ನು ಸಡಿಲಗೊಳಿಸಲಿರುವ ಕಾರಣ ಕೆಲವೊಂದು ನಿಬಂಧನೆ ಗಳನ್ನಿರಿಸಿ  ಶ್ರೀಕೃಷ್ಣ ಮಠದಲ್ಲಿ ಸ್ಥಳೀಯರಿಗೆ ಮತ್ತು ಬೇರೆ ಊರಿನ ಭಕ್ತರಿಗೂ  ದೇವರ ದರ್ಶನ ಸಿಗಲಿ ಎಂದು ಸೆಪ್ಟೆಂಬರ್ 28 ರಿಂದ ಪ್ರವೇಶದ ಅವಕಾಶ ಮಾಡಿಕೊಡಲಾಗುವುದು.​ ಈ ನಿರ್ಧಾರವನ್ನು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಪರ್ಯಾಯ ಶ್ರೀ  ಈಶಪ್ರಿಯತೀರ್ಥ ಶ್ರೀಪಾದರು  ಕೈಗೊಂಡಿದ್ದಾರೆ.  

 ಮಠಕ್ಕೆ ಆಗಮಿಸುವ ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವಾರು ನಿಯಮಗಳನ್ನು  ಈ ಕೆಳಗಿನಂತೆ ಮಠವು ರೂಪಿಸಿದೆ ಎಂದಿದ್ದಾರೆ.​ 
1.ಭಕ್ತರ ಪ್ರವೇಶಕ್ಕೆ ಅಪರಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶ. 2.ಶ್ರೀಕೃಷ್ಣ ಮಠಕ್ಕೆ ಬರುವ ಸ್ಥಳೀಯ ಹಾಗೂ ಬೇರೆ ಊರಿನ ಭಕ್ತರು ಕಡ್ಡಾಯವಾಗಿ ರಾಜಾಂಗಣದ ಬಳಿಯಲ್ಲಿರುವ  ಉತ್ತರ ದ್ವಾರದ​ಲ್ಲಿ ​ ಪ್ರವೇಶ ಮಾಡ ಬೇಕು. ಆ ಮೂಲಕ  ಭೋಜನಶಾಲೆಯ ಮೇಲಿನಿಂದ ಸಾಗಿ ಗರುಡ ದೇವರ ಬಳಿ ಕೆಳಗಿಳಿದು ದೇವರದರ್ಶನ ಮಾಡಿ ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ಸಾಗಿ ಅಲ್ಲಿಂದಲೇ ನಿರ್ಗಮಿಸಬೇಕು.

3. ಪ್ರಸ್ತುತ ಎಲ್ಲಾ ಊರ-ಪರವೂರ ಭಕ್ತರು ಉತ್ತರ ದ್ವಾರದಿಂದ ಪ್ರವೇಶಿಸಿ ಸಹಕರಿಸಬೇಕಾಗಿ ವಿನಂತಿ.​ 4. ಸ್ಥಳೀಯ ಭಕ್ತರು ಮುಂದಿನ ದಿನಗಳಲ್ಲಿ ರಥ ಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯಲ್ಲಿ  ಸೇವಾ ಕಚೇರಿ ಬಳಿ ಮುಂದೆ ಸಾಗಿ ಅಲ್ಲಿಂದ ಶ್ರೀಕೃಷ್ಣ ಮಠದಲ್ಲಿ ಪ್ರವೇಶಿಸಿ ದರ್ಶನ ಪಡೆಯಬಹುದು.​ 5.ಭದ್ರತಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಈ ಮೇಲಿನ ಮಾರ್ಗದಲ್ಲಿ (ಪ್ರವೇಶ ದ್ವಾರ 10) ಪ್ರವೇಶಬಯಸುವ ಸ್ಥಳೀಯ ಭಕ್ತರು ಶ್ರೀಕೃಷ್ಣ ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆಯಬೇಕು. ಇಲ್ಲವೇ ರಾಜಾಂಗಣದ ಉತ್ತರ ದ್ವಾರದ ಮೂಲಕ (ಯಾತ್ರಾರ್ಥಿಗಳಿಗೆ ಕಲ್ಪಿಸುವ ಮಾರ್ಗದಲ್ಲಿ) ಸಾಗಿ ದರ್ಶನ ಪಡೆಯಬಹುದು. 6.ಶ್ರೀಕೃಷ್ಣ ಮಠದಲ್ಲಿ ಸೇವೆಗಳು ಅವಕಾಶವಿದ್ದು, ಭಗವದ್ಭಕ್ತರು ಸೇವಾ ಕೌಂಟರ್ ನಲ್ಲಿ ಪ್ರಸಾದವನ್ನು ಸ್ವೀಕರಿಸಬಹುದು. 7.ಪ್ರಸ್ತುತ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವ ಭಕ್ತರು ಮಠದ ಆವರಣದಲ್ಲಿ ಮಂತ್ರ, ಪಾರಾಯಣ ಗಳನ್ನು ಅಥವಾ ಯಾವುದೇ ಶಬ್ದ ಉಚ್ಛಾರಣೆ ಮಾಡಬಾರದು. ಭಕ್ತರು ಮೌನವಾಗಿ​ರ ಬೇಕು  8.ಭಕ್ತರು ಮಠದ ಆವರಣದಲ್ಲಿ ​ಒಬ್ಬರೊನ್ನೊಬ್ಬರು ​ಮುಟ್ಟುವುದೇ ಮೊದಲಾದ ಕಾರ್ಯಚಟುವಟಿಕೆಗಳನ್ನು ಮಾಡಬಾರದು.

9. ದರ್ಶನ ಮಾಡುವಾಗ ಇತರ ಭಕ್ತರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.​ 10.ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.​ 11.ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳ ಬೇಕು.​ 12 .ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದು, ಅದನ್ನು ಬಳಸಿಕೊಳ್ಳಬೇಕು.​ 13.ಭದ್ರತಾ ಸಿಬ್ಬಂದಿಗಳು ಸೂಚಿಸುವ ನಿಯಮಗಳನ್ನು ಪಾಲಿಸಬೇಕು.​ 14.ಹಿರಿಯ ನಾಗರಿಕರು ಹಾಗೂ ಮಕ್ಕಳು ಮಠಕ್ಕೆ ಬಾರದಿರುವುದು ಮತ್ತು ಮನೆಯಲ್ಲಿದ್ದು ಪ್ರಾರ್ಥನೆ ಸಲ್ಲಿಸುವುದು ಉತ್ತಮ.

15.ಭೋಜನ ಪ್ರಸಾದವನ್ನು ಪರಿಸ್ಥಿತಿಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು.​ ತೀರ್ಥ ಪ್ರಸಾದವನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು.​ 16. ಶ್ರೀಕೃಷ್ಣ ಮಠದ ಒಳಗೆ ತುಪ್ಪ, ಎಳ್ಳೆಣ್ಣೆ ದೀಪಗಳನ್ನು ಬೆಳಗುವ ಬದಲು ಶ್ರೀಮಠದ ಕೌಂಟರಿನಲ್ಲಿ ಸಿಗುವ ಶುದ್ಧ ಎಳ್ಳನ್ನು ಪಡೆದು ಒಪ್ಪಿಸಬೇಕಾಗಿ ವಿನಂತಿ. ಭಕ್ತರು ನೀಡಿದ ಶುದ್ಧ ಎಳ್ಳಿನಿಂದ ತಯಾರಿಸಿದ ಎಣ್ಣೆಯನ್ನು ಋತ್ವಿಜರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದೀಪಗಳು ಬಳಸುತ್ತಾರೆ.

ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಯಲ್ಲಿದ್ದು ಪ್ರಾರ್ಥನೆ ಸಲ್ಲಿಸುವುದು ತುಂಬಾ ಒಳ್ಳೆಯದು ಎಂಬುದು ಪರ್ಯಾಯ ಶ್ರೀಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶಯವಾಗಿದೆ ಎಂದರು.​ ಶ್ರೀಕೃಷ್ಣ ಮಠದಲ್ಲಿ ಹೊಸದಾಗಿ ನಿರ್ಮಿಸಿದ ಆಗಮನ ಮತ್ತು ನಿರ್ಗಮನ ದಾರಿಗಳನ್ನು ಸ್ಥಳೀಯ ಭಕ್ತರು ವೀಕ್ಷಿಸಬಹುದು ಮತ್ತು “ಈ ಮಾರ್ಗಗಳಲ್ಲಿ ಪ್ರವೇಶಿಸಿದರೆ ಗರುಡ ಮುಖ್ಯಪ್ರಾಣ ದೇವರಿಗೆ ಪ್ರದಕ್ಷಿಣೆ ಸಲ್ಲಿಸಿದಂತಾಗುತ್ತದೆ ಎಂದಿದ್ದಾರೆ.

 ಈ ಪತ್ರಿಕಾಗೋಷ್ಠಿಯಲ್ಲಿ ​ ​ಯಶ್‌ಪಾಲ್ ಸುವರ್ಣ,   ದಿನೇಶ್ ಪುತ್ರನ್, ಹೈಟೆಕ್ ಪ್ರದೀಪ್ ರಾವ್ ​​ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply