ಆರು ತಿಂಗಳ ಬಳಿಕ ಶ್ರೀ ಕೃಷ್ಣನ ದರ್ಶನ ಪಡೆದ ಭಕ್ತ ಸಮೂಹ   

ಉಡುಪಿ: ಕೋವಿಡ್-19 ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದ ಕಾರಣ ಕಳೆದ ಆರು ತಿಂಗಳಿಂದ ಮುಚ್ಚಿದ್ದ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ದೊರೆತಿದೆ. ಪ್ರವೇಶ ಕಲ್ಪಿಸಿದ ಮೊದಲ ದಿನವೆ ಸುಮಾರು 500ಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ.​ ​​
ದೇವರ ದರ್ಶನಕ್ಕೆ ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಲಾದ ವಿಶೇಷ ದಾರಿಯನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥರು, ಅದಮಾರು ​ಹಿರಿಯ ಯತಿ  ​ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರೊಂದಿಗೆ ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
​ಸೋಮವಾರದಿಂದ ಭಕ್ತಾದಿಗಳಿಗೆ  ಮಧ್ಯಾಹ್ನ 2 ಘಂಟೆಯಿಂದ 5 ರ ತನಕ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ.​ ​ಆದರೆ ಸದ್ಯ ಭೋಜನ ವ್ಯವಸ್ಥೆಯನ್ನು  ಆರಂಭಿಸುವ ಯಾವುದೇ ಸೂಚನೆಗಳಿಲ್ಲ. ಬೇರೆ​ಲ್ಲಾ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನವನ್ನು ಮಹಾದ್ವಾರದ ಮೂಲಕ  ಪಡೆದರೆ, ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯ ಮೂಲಕ ನೋಡುವುದು ವಿಶೇಷ. ಆದರೀಗ ​ಕೋವಿಡ್ ​ಮುಂಜಾಗೃತಾ ಕ್ರಮವಾಗಿ ಶ್ರೀಕೃಷ್ಣನನ್ನು ತೀರ್ಥ ಮಂಟಪದ ಬಳಿಯಲ್ಲಿ ನೋಡುವಂತೆ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಲಾಕ್ ಡೌನ್ ನ ಆರು ತಿಂಗಳಲ್ಲಿ ಪರ್ಯಾಯ ಮಠಾಧೀಶರಾದ ಈಶಪ್ರೀಯ ತೀರ್ಥರು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕೃಷ್ಣ ಮಠದ ಭೋಜನ ಶಾಲೆ, ಬಡಗು ಮಳಿಗೆಗೆ ಪಾರಂಪರಿಕ ನೈಸರ್ಗಿಕ ಬಣ್ಣವನ್ನು ಬಳಿಯಲಾಗಿದೆ. ದರ್ಶನಕ್ಕೆ ತೆರಳುವ ಮಾರ್ಗವನ್ನು ಬದಲಾಯಿಸಲಾಗಿದ್ದು, ರಾಜಾಂಗಣ ಪ್ರವೇಶ ಮಾಡಿ ಅಲ್ಲಿಂದ ಭೋಜನ ಶಾಲೆಯ ಮೇಲೆರಿ ಅಲ್ಲಿ ಕೃಷ್ಣ ಮಠದ ಒಳ ಪ್ರವೇಶ ಮಾಡು​ವ ವ್ಯವಸ್ಥೆ ಮಾಡಲಾಗಿದೆ. ಹೊಸ ಮಾರ್ಗದಲ್ಲಿ ಸಾಗಿದರೆ ಮೇಲ್ಭಾಗದಲ್ಲಿ ​ಪಲಿಮಾರು ಶ್ರೀಗಳು ​​ನಿರ್ಮಿಸಿದ ಸ್ವರ್ಣ ಗೋಪುರವನ್ನು ನೋಡಲು ಭಕ್ತರಿಗೆ ಅವಕಾಶ​ ಸಿಗಲಿದೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply