ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ – ಪುನಃಪ್ರತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ

ಪಚ್ಚೆ ಕಾನನದ ಕವಚ ತೊಟ್ಟ ಸಿಂಹ ಗಾಂಭೀರ್ಯದ ಮಲಯ ಪರ್ವತದ ಬುಡದಲ್ಲಿರುವ ಹತ್ತಾರು ಊರುಗಳ ಗೊಂಚಲು ನಮ್ಮ ಕಾರ್ಕಳ ಸೀಮೆ . ಅನೇಕ ರಾಜವಂಶಗಳ ಆಳ್ವಿಕೆ ಕಂಡು ಕಲಾ ಶ್ರೀಮಂತಿಕೆಗೆ ಮೇರು ಕಳಸವಾಗಿ ಮೆರೆದ ಕಾರ್ಕಳವನ್ನು ಶಕ್ತಿದೇವತೆಯಾಗಿ ಪೊರೆದವಳು ಮಾರಿಯಮ್ಮ.

ಸೈವ ಕಾಲೇ ಮಹಾಮಾರಿ ಸೈವ ಸೃಷ್ಟಿರ್ಭವತ್ಯಜಾ
ಸ್ಥಿತಿಂ ಕರೋತಿ ಭೂತಾನಾಂ ಸೈವ ಕಾಲೇ ಸನಾತನಿ

ಪ್ರಳಯಕಾಲದಲ್ಲಿ ಮಹಾಮಾರಿ ಆಗಿ ಕಾಣಿಸಿಕೊಳ್ಳುವ ಆ ಮಹಾಮಾತೆ ಸೃಷ್ಟಿಕಾಲದಲ್ಲಿ ತಾನೆ ಜಗತ್ತಾಗುತ್ತಾಳೆ. ಸ್ಥಿತಿ ಕಾಲಕ್ಕೆ ಸಮಸ್ತ ಜೀವರಾಶಿಗಳನ್ನು ಆ ಮಾತೃಶಕ್ತಿಯೇ ಮತ್ತೆ ಪೊರೆಯುತ್ತಾಳೆ.

ರಾಜವಂಶಗಳು ಯುದ್ಧಕಾಲದಲ್ಲಿ ತಮ್ಮ ಸೇನೆಯ ರಕ್ಷಣೆಗೆ ನಾಡಿನ ಗಡಿ ರಕ್ಷಣೆಗೆ ಶಕ್ತಿ ದೇವತೆಯ ಆರಾಧನೆ ಮಾಡುತ್ತಿದ್ದರು. ದೈವಾರಾಧನೆಯನ್ನು ನೆಚ್ಚಿಕೊಂಡಿದ್ದ ತುಳುನಾಡಿಗೆ ಶಕ್ತಿದೇವತೆಯ ಪ್ರವೇಶವಾಗಿದ್ದು ವಿಜಯನಗರದ ಅರಸರ ಕಾಲದಲ್ಲಿ.

ವಿಜಯನಗರ ಕಾಲದಲ್ಲಿ ತಿಗಳರು ರಾಮ ಕ್ಷತ್ರಿಯರು ರಣವೀರರು ಮರಾಠರು ಹೀಗೆ ಅನೇಕ ಯೋಧ ಜನಾಂಗಗಳ ವಲಸೆ ಕಾರ್ಕಳಕ್ಕಾಯಿತು. ಶಕ್ತಿ ಆರಾಧಕರಾಗಿದ್ದ ರಾಮಕ್ಷತ್ರಿಯ ವಂಶದವರು ಇಲ್ಲಿ ಮಾರಿಯ ಆರಾಧನೆಯನ್ನು ಆರಂಭಿಸಿದ ಐತಿಹ್ಯವಿದೆ. ಕೆಳದಿ ನೃಪವಿಜಯ ಬರೆದ ಲಿಂಗಣ್ಣ ಕವಿಯ ಉಲ್ಲೇಖದಂತೆ 1743 ರಲ್ಲಿ ಕಾಪು ಕಡಲ ದಂಡೆಯಲ್ಲಿ ಮನೋಹರ ಗಡ ಎಂಬ ಕೋಟೆ ರಚನೆಯಾಯಿತು. ಮಲ್ಲಾರು ಬೈಲೂರು ಕಾರ್ಕಳ ಮೊದಲಾದ ಕಡೆಗಳಲ್ಲಿ ಕೋಟೆ ಕಾಯಲು ದಂಡು ಮತ್ತು ದಂಡಿನ ತಲೆ ಕಾಯಲು ಒಂದು ಶಕ್ತಿದೇವತೆಯಾಗಿ ಮಾರಿ ಉಪಾಸನೆ ನಡೆದು ಬಂತು.

ಏಳುನಾಡು ಹೆಗ್ಗಡೆಯ ಕಾಲದಲ್ಲಿ ಮಾಳದ ಕೋಟೆ ಮತ್ತು ಕಾರ್ಕಳ ನಗರದ ಕೋಟೆ ನಿರ್ಮಾಣವಾಗಿ ಅಲ್ಲಿ ಕೋಟೆ ಆಂಜನೇಯನನ್ನು ಸ್ಥಾಪಿಸಿದ ಬಗ್ಗೆ ಉಲ್ಲೇಖಗಳಿವೆ. ಉಗ್ರಾಣ ಶಸ್ತ್ರಾಗಾರ ಮತ್ತು ಮದ್ದಿನಮನೆ ಈ ಕೋಟೆಯ ಒಳಭಾಗದಲ್ಲಿರುತ್ತಿತ್ತು ಏಳುನಾಡು ಹೆಗ್ಗಡೆ, ಭೈರವರಸರು, ಕೆಳದಿ ನಾಯಕರು, ಮೈಸೂರು ಸುಲ್ತಾನರು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಕಂಡ ಈ ಕೋಟೆ ಅನೇಕ ಯುದ್ಧ ರಕ್ತಪಾತಗಳಿಗೆ ಸಾಕ್ಷಿಯಾಗಿದೆ. ನಾಡಿಗೆ ಒದಗಿದ ಎಲ್ಲ ಗಂಡಾಂತರಗಳಿಗೆ ಎದೆಯೊಡ್ಡುತ್ತಿದ್ದ ಬಿಚ್ಚುಗತ್ತಿಯ ಬಂಟರು ಕೋಟೆಯ ಶಕ್ತಿದೇವತೆ ಮಾರಿಯಮ್ಮನ ಉಪಾಸನೆ ಮಾಡಿ ರಕ್ತತರ್ಪಣ ನೀಡಿ ರಣರಂಗಕ್ಕೆ ಧುಮುಕುತ್ತಿದ್ದರು.

ಹಿಂದೆ 8 ಮಾಗಣೆಯ ಜನರು ಸೇರಿ ಒಂದು ಮಾಗಣೆಗೆ 4ರಂತೆ ಒಟ್ಟು 32 ಕೋಣಗಳನ್ನು ಬಲಿ ನೀಡುತ್ತಿದ್ದರು. ಪೂರ್ವ ಆಚಾರದಂತೆ ಬಲಿಗೆ ಬಳಸುವ ಎಂಟು ಕತ್ತಿಗಳನ್ನು ಇಂದಿಗೂ ಕ್ಷೇತ್ರಕ್ಕೆ ತಂದು ಪೂಜಿಸಲಾಗುತ್ತದೆ. ಒಟ್ಟು 19 ಜಾತಿಯ ಜನರು ಸೇರಿ ಅಮ್ಮನ ಮಾರಿ ಪೂಜಾ ಮಹೋತ್ಸವವನ್ನು ಸಂಪ್ರದಾಯಬದ್ಧವಾಗಿ ಸಂಪನ್ನ ಗೊಳಿಸುತ್ತಾರೆ. 60ರ ದಶಕದಲ್ಲಿ ದೇಶಾದ್ಯಂತ ಪ್ರಾಣಿ ಬಲಿ ನಿಷೇಧವಾದ ಹಿನ್ನೆಲೆಯಲ್ಲಿ ಈಗ ಕ್ಷೇತ್ರದಲ್ಲಿ ಈ ಆಚರಣೆ ನಿಂತಿದೆ. ಬಲಿಪ್ರಧಾನವಾದ ಮಾರಿ ಆರಾಧನೆ ಈಗ ಸಾತ್ವಿಕ ರೂಪ ಪಡೆದಿದೆ. ಆದರೆ ಮಾರಿ ಆರಾಧನೆಯ ಮೂಲಸ್ವರೂಪವಾಗಿರುವ ಉಚ್ಚಂಗಿ ಅಮ್ಮನಿಗೆ ಇಂದಿಗೂ ಕುಲಾಚಾರ ಪದ್ಧತಿಯಲ್ಲಿ ಮಧ್ಯಮಾಂಸಾದಿಗಳಿಂದ ಸೇವೆ ನಡೆಯುತ್ತದೆ.
ಕಾಲದ ಪ್ರವಾಹಕ್ಕೆ ಸಿಲುಕಿ ರಾಜವಂಶಗಳು ಕಳೆದುಹೋದರೂ ಈ ಶಕ್ತಿ ದೇವತೆ ಮಾತ್ರ ಸ್ಥಿರವಾಗಿ ನಿಂತು ಭಕ್ತರ ಕಷ್ಟಕಳೆದು ಇಷ್ಟಾರ್ಥ ಸಿದ್ಧಿಸುತ್ತಿದ್ದಾಳೆ. ಪರ್ವಕಾಲದಲ್ಲಿ ನಡೆಯುವ ಅಮ್ಮನ ಸಂದರ್ಶನ ಸೇವೆಯಲ್ಲಿ ಭಕ್ತರ ಕಷ್ಟಗಳನ್ನು ಕೇಳಿ ತಾಯಿ ಪರಿಹಾರ ಸೂಚಿಸುತ್ತಾಳೆ. ಹಿಂದೆ ಇಲ್ಲಿ ಮೊಳೆ ಇರುವ ಪಾದುಕೆಯನ್ನು ತೊಟ್ಟು ದರ್ಶನ ಸೇವೆ ನಡೆಯುತ್ತಿತ್ತು. ಶಿಷ್ಟ ಜನಪದ ಶೈಲಿಯ ಮಾರಿ ಆರಾಧನೆ ಕಾರ್ಕಳದಲ್ಲಿ ಇಂದಿಗೂ ಮೂಲಸ್ವರೂಪದಲ್ಲಿ ಉಳಿದುಕೊಂಡಿರುವುದು ವಿಶೇಷ.

ನಂಬಿದ ಭಕ್ತರ ಪಾಲಿಗೆ ಅನುಗ್ರಹ ಮೂರ್ತಿಯಾಗಿರುವ ಮಾರಿಯಮ್ಮನ ಕರುಣಾ ವೃಷ್ಠಿಗೆ ನಿತ್ಯವೂ ಪಾತ್ರರಾದ ಭಕ್ತರು ನಾವು.

ಅನೇಕ ತಲೆಮಾರುಗಳ ಬಳಿಕ ಕಾರ್ಕಳದ ಪುರಜನರ ಪಾಲಿಗೆ ಆ ಮಹಾಮಾತೆಯ ಆಲಯ ನಿರ್ಮಾಣದ ಅತುಲ್ಯ ಯೋಗ ಲಭಿಸಿದ್ದು,ತನು-ಮನ-ಧನ ಸಹಕಾರದಿಂದ ಈ ಮಹಾಕಾರ್ಯವನ್ನು ಯಶಸ್ವಿಗೊಳಿಸಲು ಸಾವಿರಾರು ಕೈಗಳು ದುಡಿದಿದ್ದು ಇದೆಲ್ಲದರ ಫಲವಾಗಿ ಭವ್ಯ ದೇಗುಲ ಮೈದಾಳಿ ನಿಂತಿದೆ. ಬನ್ನಿ ಆ ಮಹಾ ಮಾಯೆಯ ಬ್ರಹ್ಮ ಕಳಶೋತ್ಸವ ವನ್ನು ಚಂದಗಾಣಿಸೋಣ.

ಮುತ್ತು ರತ್ನ ಹವಳಹಾರ ಧರಿಸಿ ಸಂಪಿಗೆ ವರ್ಣದ ಮೈ ಕಾಂತಿಯಿಂದ ಶೋಭಿಸುತ್ತಾ ಭದ್ರಾಸನದಲ್ಲಿ ಕುಳಿತು ರಾಜಸ ಪ್ರಭೆಯಲ್ಲಿ ಸಮಷ್ಟಿಯನ್ನು ಸಂರಕ್ಷಿಸುತ್ತಾ ಬಂದಿರುವ ಮಹಾಮಾತೆ ಸರ್ವರಿಗೂ ಸನ್ಮಂಗಳ ಉಂಟುಮಾಡಲಿ

ಜೈ ಮಹಾಕಾಲ್

 
 
 
 
 
 
 
 
 

Leave a Reply