ಉಚ್ಚಿಲ ಮಹಾಲಕ್ಷ್ಮೀ ದೇವಳದ ನೂತನ ಗರ್ಭಗುಡಿ ಶಿಲಾನ್ಯಾಸ

ಉಚ್ಚಿಲ : ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಸಕಲವನ್ನೂ ಸಾಧಿಸಬಹುದು. ಅದಕ್ಕೆ ಮೊಗವೀರ ಸಮುದಾಯದವರ ಸಂಘಟನಾತ್ಮಕ ಚಟುವಟಿಕೆಗಳೇ ಸಾಕ್ಷಿ. ಒಗ್ಗಟ್ಟಿಗೆ ಈ ಜನಾಂಗ ಹೆಸರುವಾಸಿ ಎಂದು ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಣ್ಣಿಸಿದರು.

ದ. ಕ. ಮೊಗವೀರ ಮಹಾಜನ ಸಂಘ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ ಜೀರ್ಣೋದ್ಧಾರ ಸಮಿತಿ ನೇತೃತ್ವದಲ್ಲಿ ಸುಮಾರು 32 ಕೋ. ರೂ. ವೆಚ್ಚದಲ್ಲಿ ಉದ್ದೇಶಿಸಲಾದ ದೇವಳದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಭಾನುವಾರ ನೂತನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ನಾವು ಬೇರೆ ದೇಶಗಳಿಗೆ ರಫ್ತು ಮಾಡುವಂತೆ ಶ್ರೀ ಮಹಾಲಕ್ಷ್ಮೀ ಅನುಗ್ರಹಿಸಲಿ. ಆ ಮೂಲಕ ಆತ್ಮನಿರ್ಭರ ಯೋಜನೆ ಸಾಕಾರಗೊಂಡು ಭಾರತ ವಿಶ್ವಕ್ಕೇ ಅಗ್ರಸ್ಥಾನಿಯಾಗಲಿ ಎಂದು ಶ್ರೀಗಳು ಆಶಿಸಿದರು.

ಪೂರ್ವನಿಗದಿಯಂತೆ ಭವ್ಯ ದೇಗಲ ಸಕಾಲದಲ್ಲಿ ನಿರ್ಮಾಣಗೊಳ್ಳಲಿ. ಭಗವದ್ಭಕ್ತರು ನಿತ್ಯ ದೇಗುಲಕ್ಕೆ ಭೇಟಿ ನೀಡುವಂತಾಗಲಿ ಎಂದರು.

ದೇವಳದ ತಂತ್ರಿ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಭಗವದ್ಭಕ್ತರ ಜಯಘೋಷದ ನಡುವೆ ಶ್ರೀಗಳು ನೂತನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿದರು.

ದೇವಳದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ| ಜಿ. ಶಂಕರ್, ದೇವಳದ ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಅಂಬಲಪಾಡಿ ದೇವಳ ಕ್ಷೇತ್ರಾಧಿಕಾರಿ ಡಾ. ವಿಜಯ ಬಲ್ಲಾಳ್, ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಗಂಗಾ ಮತಸ್ಥ ಸಂಘದ ಅಧ್ಯಕ್ಷ ಬಿ. ಮೌಲಾಲಿ, ದ. ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಅರ್ಚಕ ವೆಂಕಟರಮಣ ಉಪಾಧ್ಯಾಯ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್ ಮೊದಲಾದವರಿದ್ದರು.

ಧಾರ್ಮಿಕ ಸಭೆ

ಸಮಗ್ರವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ, ಸಮಸ್ತ ಹಿಂದೂ ಸಮಾಜದ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳಲಿ. ಎಲ್ಲಾ ಸಮಾಜದವರನ್ನೂ ಒಗ್ಗೂಡಿಸುವ ಧರ್ಮ ಚಾವಡಿಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ. ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಮಹಾಲಕ್ಷ್ಮಿ ದೇವಳ ಗರ್ಭಗುಡಿ ಶಿಲಾನ್ಯಾಸ ಸಮಾರಂಭದ ಬಳಿಕ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ದೇವಳದ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ 10 ಕೋ. ರೂ. ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದ ನಳಿನ್, ಮೊಗವೀರ ಸಮಾಜವನ್ನು ಪರಿಶಿಷ್ಟ ವರ್ಗ (ಎಸ್.ಟಿ)ಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಮುದಾಯದವರ ಸಮರ್ಪಣಾ ಮನೋಭಾವ, ಶ್ರದ್ಧಾಭಕ್ತಿಯ ಸೇವೆಯೊಂದಿಗೆ ದೇವಳ ಶೀಘ್ರ ನಿರ್ಮಾಣಗೊಂಡು ಪುಣ್ಯಕ್ಷೇತ್ರವಾಗಿ ಮೂಡಿಬರಲಿ. ಜೊತೆಗೆ ಪ್ರವಾಸಿ ತಾಣವಾಗಿಯೂ ಗುರುತಿಸುವಂತಾಗಲಿ ಎಂದರು. ಮಹಿಳಾ ಸಬಲೀಕರಣಕ್ಕೆ ಮೊಗವೀರ ಮಹಿಳೆಯರು ಜ್ವಲಂತ ಉದಾಹರಣೆ ಎಂದರು.

ರಾಜ್ಯ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 4,500 ಕೋ. ರೂ.ಗಳ ಬೃಹತ್ ಯೋಜನೆ ಹಮ್ಮಿಕೊಂಡಿದ್ದು, ಆ ಮೂಲಕ ಬಂದರು ಬೀಚ್ ಸಹಿತ ಮೂಲಭೂತ ಸೌಕರ್ಯಗಳಿಗೆ ಒತ್ತುನೀಡಲು ನಿರ್ಧರಿಸಲಾಗಿದೆ. ಶೀಘ್ರವೇ ಯೋಜನೆ ಜಾರಿಯಾಗಲಿದೆ ಎಂದರು. ಉಚ್ಚಿಲ ದೇವಳದ ಅಭಿವೃದ್ಧಿಗೆ 10 ಕೋ. ರೂ. ನೀಡಲು ಮುಖ್ಯಮಂತ್ರಿ ಈಗಾಗಲೇ ನಿರ್ಧರಿಸಿದ್ದು, ಶೀಘ್ರ ಮಂಜೂರಾತಿ ದೊರೆಯಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ| ಜಿ. ಶಂಕರ್, ಮೊಗವೀರ ಸಮಾಜದ ಬಹು ದೊಡ್ಡ ಬೇಡಿಕೆಯಾದ ಸಮಾಜವನ್ನು ಎಸ್.ಟಿ. ವರ್ಗಕ್ಕೆ ಸೇರಿಸುವ ಪ್ರಕ್ರಿಯೆಗೆ ಜನಪ್ರತಿನಿಧಿಗಳು ಬದ್ಧರಾಗಬೇಕು. ಅದೇ ರೀತಿ ಶೈಕ್ಷಣಿಕ ಕೇಂದ್ರವಾಗಿ ಮೂಡಿಬರಲಿರುವ ಉಚ್ಚಿಲ ದೇವಳದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಅನುದಾನ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಸಮಗ್ರ ಮೊಗವೀರರ ಒಗ್ಗೂಡುವಿಕೆಯೊಂದಿಗೆ ದೇವಳ ಜೀರ್ಣೋದ್ಧಾರಗೊಳ್ಳಲಿದೆ ಎಂದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ, ಬಾರ್ಕೂರು ಬೆಣ್ಣೆಕುದ್ರು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ರಾಜ್ಯ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ಬಿ. ಮೌಲಾಲಿ, ಕೆ.ಎಫ್.ಡಿ.ಸಿ. ಅಧ್ಯಕ್ಷ ನಿತಿನ್ ಕುಮಾರ್, ಮುಂಬೈ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೆ. ಎಲ್. ಬಂಗೇರ, ದೇವಳದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಬೆಂಗಳೂರು ಮೊಗವೀರ ಸಂಘ ಅಧ್ಯಕ್ಷ ಚೇತನ್ ಜಿ., ಮುಂಬೈ ಮೊಗವೀರ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸದಾನಂದ ಕೋಟ್ಯಾನ್, ಮುಂಬೈ ಮೊಗವೀರ ವ್ಯವಸ್ಥಾಪಕ ಮಂಡಳಿ ಟ್ರಸ್ಟಿ ಅಜಿತ್ ಸುವರ್ಣ, ಕನರ್ಾಟಕ ಪರ್ಸಿನ್ ಮೀನುಗಾರರ ಸಂಘ ಅಧ್ಯಕ್ಷ ಶಶಿಕುಮಾರ್ ಮೆಂಡನ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಶಾಖಾಧ್ಯಕ್ಷ ಕೆ. ಕೆ. ಕಾಂಚನ್, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಿವರಾಮ್ ಕೆ. ಎಮ್., ಬಾರ್ಕೂರು ವಲಯ ಅಧ್ಯಕ್ಷ ಸತೀಶ್ ಅಮೀನ್, ಕಾಪು- ಸುರತ್ಕಲ್ ವಲಯ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ದ. ಕ. ಮೊಗವೀರ ಯುವ ವೇದಿಕೆ ಅಧ್ಯಕ್ಷ ಜಗದೀಶ್ ಬಂಗೇರ, ಮೊಗವೀರ ಹಿತಸಾಧನಾ ವೇದಿಕೆ ಅಧ್ಯಕ್ಷ ಪುಷ್ಪರಾಜ್ ಕೋಟ್ಯಾನ್, ದ. ಕ. ಮೊಗವೀರ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ಶ್ರೀದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ದ. ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್. ಸಾಲ್ಯಾನ್, ಉದ್ಯಮಿ ಯು. ಗಣೇಶ್ ಉದ್ಯಾವರ ಅಭ್ಯಾಗತರಾಗಿದ್ದರು.

ದ. ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿ, ಚಂದ್ರೇಶ್ ಪಿತ್ರೋಡಿ ನಿರೂಪಿಸಿದರು.

ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಶುಭ ಸೂಚಕ ಎಂಬಂತೆ ಉಚ್ಚಿಲ ಪ್ರದೇಶವೂ ಸೇರಿದಂತೆ ಉಡುಪಿಯ ಹಲವೆಡೆ ಮಳೆಯಾಗಿರುವುದು ಕ್ಷೇತ್ರದ ಕಾರಣೀಕತೆಯನ್ನು ಸೂಚಿಸುತ್ತದೆ ಎಂದು ಭಾವುಕ ಭಕ್ತರು ಭಾವಿಸಿದರು. ದೇವತೆಗಳು ಪ್ರಸನ್ನರಾದರೆ ಮಳೆಯ ರೂಪದಲ್ಲಿ ತಮ್ಮ ಸಂತಸ ವ್ಯಕ್ತಪಡಿಸುತ್ತಾರೆ ಎಂಬುದು ನಂಬಿಕೆಯಾಗಿದ್ದು, ಉಚ್ಚಿಲ ಮಹಾಲಕ್ಷ್ಮಿ ದೇವಳ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮ ದೇವಪ್ರೀತಿಗೆ ಸಾಕ್ಷಿಯಾಯಿತು ಎಂಬುದು ಭಕ್ತ ಸಮೂಹದ ಭಾವನೆ.

 
 
 
 
 
 
 
 
 
 
 

Leave a Reply