ಕಡಿಯಾಳಿ ಮಹಿಷಮರ್ದಿನಿ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ

ಉಡುಪಿ: ಸಾವಿರಾರು ಭಕ್ತರ ನಡುವೆ, ಮಂತ್ರ ಘೋಷಗಳೊಂದಿಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಿಗೆ ಬುಧವಾರ ಅದ್ದೂರಿಯ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು .
ಪವಿತ್ರ ಜಲ, ವಿವಿಧ ಗಿಡಮೂಲಿಕೆಗಳ ಕಷಾಯ, ಅಷ್ಟಗಂಧಾದಿಗಳು ಇತ್ಯಾದಿಗಳಿಂದ ಪರಿವೇಷ್ಟಿತವಾದ ಬೆಳ್ಳಿ- ತಾಮ್ರದ ಸಹಸ್ರ ಕಲಶಗಳ ಅಭಿಷೇಕ ಬೆಳ್ಳಂಬೆಳಗ್ಗೆಯೇ ಆರಂಭಗೊಂಡಿದ್ದು, ಸುಮುಹೂರ್ತದಲ್ಲಿ ಬ್ರಹ್ಮಕುಂಭದ ಮಹಾಭಿಷೇಕ ನೆರವೇರಿಸುವ ಮೂಲಕ ಮಹಿಷಮರ್ದಿನಿಯ ಮೂಲ ಬಿಂಬದಲ್ಲಿ ಮತ್ತಷ್ಟು ಚೈತನ್ಯ ಶಕ್ತಿ ಸಂಚಯವಾಯಿತು. ಜೊತೆಗೆ ಹಾಲು ಜೇನು ಮೊಸರು ತುಪ್ಪ ಸಕ್ಕರೆ ಯುಕ್ತವಾದ ಪಂಚಾಮೃತ ಅಭಿಷೇಕ, ಎಳನೀರಿನ ಸ್ನಾನ ಇತ್ಯಾದಿಗಳನ್ನೂ ನಡೆಸಲಾಯಿತು.
ದೇವಳದ ಶಿಖರದಲ್ಲಿರಿಸಿದ ಸುವರ್ಣ ಕಲಶಗಳಿಗೂ ಮಹಾಭಿಷೇಕ ನಡೆಸುವ‌ ಮೂಲಕ ವೈಭವದ ಕುಂಭಾ ಭಿಷೇಕ ಸುಸಂಪನ್ನಗೊಂಡಿತು. ಈ‌ ಅಪೂರ್ವ ಕ್ಷಣಕ್ಕಾಗಿಯೇ ಚಾತಕಪಕ್ಷಿಯಂತೆ ಕಾತರದಿಂದಿದ್ದ ಭಕ್ತ ಗಡಣ ಮಹಾಪರ್ವಕ್ಕೆ ಸಾಕ್ಷಿಗಳಾದರು. ಶ್ರೀದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮಹಾಪೂಜೆಯ ಬಳಿಕ ಪಲ್ಲಪೂಜೆ ನಡೆದು ಭಕ್ತ ಸಮೂಹಕ್ಕೆ ದೇವಿಯ ಪ್ರಸಾದ ರೂಪವಾಗಿ ಭೂರಿಭೋಜ‌ದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಾಸಕ ರಘುಪತಿ ಭಟ್, ಅಧ್ಯಕ್ಷ ನಾಗೇಶ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ‌ಕಿಣಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಡಾ. ರವಿರಾಜ ಅಚಾರ್ಯ , ಸದಸ್ಯ ಮಂಜುನಾಥ ಹೆಬ್ಬಾರ್ ಮೊದಲಾದವರಿದ್ದರು. ಪಾಡಿಗಾರು ಶ್ರೀನಿವಾಸ ತಂತ್ರಿ ಧಾರ್ಮಿಕ ವಿಧಿಗಳನ್ನು ನಡೆಸಿದರು.
 
 
 
 
 
 
 
 
 

Leave a Reply