ವಿಧಿತ ~ ದಿನೇಶ ಉಪ್ಪೂರ

ಆವತ್ತು ಎಂದಿನಂತೆ ಆಫೀಸ್ ಗೆ ಮನೆಯಿಂದ ಹೊರಟು ಸಂತೇಕಟ್ಟೆಯಲ್ಲಿ ನನ್ನ ಸ್ಕೂಟರನ್ನು ಬಾಲಣ್ಣನ ಬೀಡಾ ಅಂಗಡಿಯ ಎದುರಿನ ವಿಶಾಲ ಜಾಗದ ಬದಿಯಲ್ಲಿ ನಿಲ್ಲಿಸಿದೆ. ಒಳಗಿನಿಂದಲೇ ತಲೆಯನ್ನು ಹೊರಗೆ ಹಾಕಿ ನಮಸ್ಕಾರ ಎಂದು ಬಾಲಣ್ಣ ಹಲ್ಲು ಕಿರಿದ.

ನಾನು ಅದು ಸಾರ್ವಜನಿಕ ಸ್ಥಳವಾದರೂ ಅವನ ಅಂಗಡಿಯ ಬದಿಯಲ್ಲೇ ಸ್ಕೂಟರ್ ನಿಲ್ಲಿಸುವುದರಿಂದ ಸೌಜನ್ಯ ದಿಂದ ನಕ್ಕು ‘ಬರುತ್ತೇನೆ’ ಎಂದು ಕೈಬೀಸಿ ಹೇಳಿ, ಆಗತಾನೆ ರಭಸದಿಂದ ಬಂದು ನಿಂತ ಎಕ್ಸ್ ಪ್ರೆಸ್ ಬಸ್ಸನ್ನು ನೋಡಿ ಓಡಿಹೋಗಿ ಹತ್ತಿದೆ. ಬಸ್ ಹತ್ತಿ ಸೀಟು ಹಿಡಿದು ಕುಳಿತು ಒಮ್ಮೆ ಸುತ್ತ ಕಣ್ಣಾಡಿಸಿ, ಹತ್ತಿರ ಬಂದ ಪರಿಚಿತ ಕಂಡಕ್ಟರ್ ನ ಮುಖನೋಡಿ ನಕ್ಕು, ಹಣಕೊಟ್ಟು ಟಿಕೆಟ್ ಪಡೆದೆ.

ಬಸ್ಸಿನಲ್ಲಿ ಸುಮಾರು ಮುಕ್ಕಾಲು ಗಂಟೆಯ ಪ್ರಯಾಣ. ಸುಮ್ಮನೆ ಕುಳಿತಾಗ ಆಫೀಸ್ ನಲ್ಲಿ ಅಂದು ಗಮನಿಸ ಬೇಕಾದ ಕೆಲಸಗಳನ್ನು ಒಮ್ಮೆ ಮೆಲುಕು ಹಾಕುವುದು ನನ್ನ ಅಭ್ಯಾಸ. ಅಂದು ನಮ್ಮ ಅಟೆಂಡರ್ ಒಬ್ಬಳ ಎನ್ ಕ್ವೆರಿ ಇತ್ತು. ಅವಳ ಹೆಸರು ಗೀತಾ. ತೀರ ಕಪ್ಪು ಬಣ್ಣದ ಕುಳ್ಳಗಿನ ಆದರೆ ಲಕ್ಷಣದ ಹುಡುಗಿ. ಅವಳ ತಂದೆ, ಒಬ್ಬ ಲೈನ್ ಮೆನ್ ಆಗಿದ್ದು ವಿಪರೀತ ಕುಡಿತದ ಅಭ್ಯಾಸದಿಂದ ಹೊಟ್ಟೆಯಲ್ಲಿ ಬೇನೆಯಿಂದ ತೀರಿಕೊಂಡಿದ್ದ.

ಸರ್ವಿಸ್ ನಲ್ಲಿ ಇರುವಾಗಲೇ ತೀರಿಹೋಗಿದ್ದರಿಂದ ಅವನ ಹೆಂಡತಿಗೋ ಅಥವಾ ಮಕ್ಕಳಲ್ಲಿ ಒಬ್ಬರಿಗೋ ಅನು ಕಂಪದಲ್ಲಿ ಕೆಲಸ ದೊರೆಯುವ ಅವಕಾಶ ನಮ್ಮಲ್ಲಿ ಇತ್ತು. ಹಾಗೆ ಅವನ ಮಗಳಾದ ಈ ಗೀತಾಳಿಗೆ ಕೆಲಸ ವಾಗಿತ್ತು. ಅವಳ ವಿದ್ಯಾರ್ಹತೆಯ ಪ್ರಕಾರ ನಮ್ಮ ಕಚೇರಿಯಲ್ಲಿ ಅಟೆಂಡರ್ ಕೆಲಸ, ಒಂದೆರಡು ವರ್ಷ ಚೆನ್ನಾಗಿಯೇ ಕೆಲಸ ಮಾಡಿದ ಅವಳು ಎಲ್ಲರ ಮೆಚ್ಚುಗೆ ಪಡೆದಿದ್ದಳು. ಅವಳ ಬಂಧುಗಳಲ್ಲಿಯೇ ಒಬ್ಬರನ್ನು ಮದುವೆ ಆದಳು.

ಆದರೆ ಆ ನಂತರ ಅವಳ ಚರ್ಯೆಯೆ ಬದಲಾಯಿತು. ಕೆಲಸದಲ್ಲಿ ಶ್ರದ್ಧೆ ಕಡಿಮೆಯಾಯಿತು. ಆಫೀಸ್ ಗೆ ತಡವಾಗಿ ಬರುವುದು. ಹೊತ್ತಿಗೆ ಮೊದಲೇ ಹೇಳದೆಕೇಳದೇ ಹೋಗುವುದು ಮಾಡತೊಡಗಿದಳು. ತಡವಾಗಿ ಬಂದಾಗ ಕರೆದು ವಿಚಾರಿಸಿದರೆ ಏನೇನೋ ಕಾರಣಗಳನ್ನು ಹೇಳುತ್ತಿದ್ದಳು. ಮೊದಮೊದಲು ಸಹಿಸಿಕೊಂಡರೂ ಅವಳಿಗೆ ಅದೇ ಅಭ್ಯಾಸವಾಗಿ ಅವಳ ಸಂಬಳವು ಕಡಿತವಾಗತೊಡಗಿತು.

ಒಮ್ಮೆ ಒಂದು ವಾರ ಅವಳು ಬರಲೇ ಇಲ್ಲ. ನೋಟೀಸು ಕೊಟ್ಟಮೇಲೆ ಓಡಿ ಬಂದಳು. ಸ್ವಲ್ಪ ದಿನ ಸರಿ ಯಾಗಿದ್ದಳು. ಮತ್ತೆ ಗೈರು ಹಾಜರಾದಳು. ಕರೆದು ಕಾರಣ ಕೇಳಿದರೂ ಅವಳು ಸರಿಯಾಗಿ ಉತ್ತರ ಕೊಡಲಿಲ್ಲ. ಸುಮ್ಮನೆ ತಲೆಯನ್ನು ತಗ್ಗಿಸಿ, ನಿಲ್ಲುತ್ತಿದ್ದಳು. ಅಳುತ್ತಿದ್ದಳು.

ಮತ್ತೆ ಮತ್ತೆ ಅದೇ ಅಭ್ಯಾಸವಾಗಿ ನಾಪತ್ತೆಯಾದಾಗ ನಿಯಮದಂತೆ ಇಲಾಖಾ ವಿಚಾರಣೆಗೆ ಅವಳನ್ನು ಗುರಿಪಡಿಸಿ ಶಿಕ್ಷೆಗೂ ಒಳಪಡಿಸಬೇಕಾಯಿತು. ಆದರೂ ಅವಳು ಸುಧಾರಿಸದಿದ್ದಾಗ ಅವಳಿಗೆ ಅಂತಿಮವಾಗಿ ನೋಟಿಸ್ ಕೊಟ್ಟು ಅವಳ ಹೇಳಿಕೆ ಪಡೆದು ಕೆಲಸದಿಂದ ತೆಗೆದುಹಾಕಲು ನಿಶ್ಚಯಿಸಿ, ಇಂದು ಅದರ ಕೊನೆಯ ವಿಚಾರಣೆಗೆ ದಿನ ಗೊತ್ತು ಮಾಡಲಾಗಿತ್ತು.

ಕುಂದಾಪುರದಲ್ಲಿ ಇಳಿದು ನನಗಾಗಿ ಕಾಯುತ್ತಿದ್ದ ಆಫೀಸ್ ವಾಹನದಲ್ಲಿ ಕಚೇರಿಗೆ ತಲುಪಿ, ನನ್ನ ಚೇಂಬರಿನಲ್ಲಿ ಕುಳಿತು ಸ್ವಲ್ಪಹೊತ್ತು ಸುಧಾರಿಸಿಕೊಂಡು ನಾನು ಸಿದ್ಧನಾದೆ. ನನ್ನ ಪಿ.ಎ.ಗೆ ಕಡತದೊಂಡಿಗೆ ಬರಲು ಹೇಳಿ ಆ ಅಟೆಂಡರ್ ಳನ್ನು ಕರೆಸಲು ಹೇಳಿದೆ. ಆಗಲೇ ಮೇಲಿನ ಕಚೇರಿಯಿಂದ ಒಬ್ಬ ಹಿರಿಯ ಅಧಿಕಾರಿಗಳು ಮತ್ತು ವಿಚಾರಣಾಧಿಕಾರಿಗಳು ಮಂಡನಾಧಿಕಾರಿಗಳು ಬಂದು ಕುಳಿತು ಸಿದ್ಧರಾದರು.

ವಿಚಾರಣೆ ಶುರುವಾಯಿತು. ಅವಳ ಹೇಳಿಕೆಯನ್ನೂ ಪಡೆದುದಾಯಿತು. ಆದರೆ ಅದು ಎಂದಿನಂತೆ ತೃಪ್ತಿಕರ ವಾಗಿಲ್ಲವಾದ್ದರಿಂದ ಅವಳನ್ನು ಕೆಲಸದಿಂದ ತೆಗೆದು ಹಾಕುವುದೆಂದೇ ತೀರ್ಮಾನ ಮಾಡಿದೆವು.

ಆ ವಿಷಯ ಗೊತ್ತಾಗಿ ಅವಳು ಅಳುತ್ತಾ ಬಂದು ನನ್ನ ಕಾಲು ಹಿಡಿದು ” ಒಂದು ಅವಕಾಶ ಕೊಡಿ” ಎಂದು ಗೋಗರೆದು ಬೇಡಿಕೊಂಡಳು. ಆದರೆ ಅವಳಿಗೆ ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟಿದ್ದು ಅವಳು ಸುಧಾರಿಸದೆ ಇರುವುದರಿಂದಲೇ ಪ್ರಕರಣ ಈ ಹಂತಕ್ಕೆ ಬಂದಿತ್ತು. ಅವಳು ಸಾಕಷ್ಟು ಸಲ ಹೀಗೆಯೇ ಅತ್ತು ಕಣ್ಣೀರು ಹಾಕಿದ್ದಳು. ನಾವು ಕನಿಕರಿಸುವ ಪ್ರಶ್ನೆಯೇ ಇರಲಿಲ್ಲ. ಅಂದು ಕೊನೆಯ ಬಾರಿ ಅವಳು ಅತ್ತು ಕರೆದು ಹೊರಟು ಹೋದಳು. ಕಾಲ ಸರಿದು ಹೋಯಿತು.

ಒಮ್ಮೆ ನಮ್ಮ ಮನೆಯ ತೆಂಗಿನ ಗಿಡಗಳ ಬುಡಕ್ಕೆ ಮಾಡಲು, ತೋಟವನ್ನು ಸ್ವಚ್ಛ ಮಾಡಲು ಒಬ್ಬ ಕೂಲಿ ಬೇಕಿತ್ತು. ಒಂದು ಬೆಳಿಗ್ಗೆ ಅಂಬಾಗಿಲಿಗೆ ಬಸ್ ನಿಲ್ದಾಣಕ್ಕೆ ಹೋಗಿ ನೋಡಿದೆ. ಅಲ್ಲಿ ಕೂಲಿಯವರು ಒಂದೆಡೆ ಗುಂಪು ಗುಂಪಾಗಿ ಕುಳಿತು ಯಾರಾದರೂ ಕೆಲಸಕ್ಕೆ ಕರೆಯುತ್ತಾರಾ ಎಂದು ಕಾಯುತ್ತಾ ಇರುತ್ತಾರೆ. ಅವರಲ್ಲಿ ಕೆಲವರು ಹತ್ತಿರ ಬಂದು ಮೊದಲೇ ಕೂಲಿ ಮಾತಾಡಿ ಇಷ್ಟುಕೊಟ್ಟರೆ ಮಾತ್ರಾ ಬರುತ್ತೇವೆ ಅನ್ನುತ್ತಾರೆ.

ಆದರೆ ನಾನು ದೂರದಲ್ಲಿ ಕುಳಿತ ಒಬ್ಬನನ್ನು ಕರೆದೆ. ಸ್ವಲ್ಪ ಜಬರ ದಸ್ತಿನಿಂದ ನಾನು ಐನೂರು ಮಾತ್ರಾ ಕೊಡುವುದು ಮತ್ತೆ ತಕರಾರು ತೆಗೆಯಬಾರದು ಬರುತ್ತೀಯ? ಎಂದೆ. ಆಗ ಆರು ನೂರಕ್ಕೆ ಕಡಿಮೆಯಾದರೆ ಯಾರೂ ಬರುತ್ತಿರಲಿಲ್ಲ. ನನಗೆ, ಕೆಲಸದ ಅವಶ್ಯಕತೆ ಇದ್ದವರು ಬಂದೇ ಬರುತ್ತಾರೆ ಎಂದಿತ್ತು. ಮತ್ತೆ ಒಳ್ಳೆಯ ಕೆಲಸ ಮಾಡಿದರೆ ನಾನೂ ಆರುನೂರೇ ಕೊಟ್ಟು ಕಳಿಸುವುದು. ಅವನು ತಕರಾರು ಮಾಡದೆ ಸುಮ್ಮನೇ ಸ್ಕೂಟರ್ ಹತ್ತಿದ.

ಬೆಳಿಗ್ಗೆಯಿಂದ ಸಂಜೆಯವರೆಗೂ ಹೇಳಿದ ಕೆಲಸವನ್ನೆಲ್ಲ ಮಾಡಿದ. ಮಾತು ಇಲ್ಲ ಕತೆಯೂ ಇಲ್ಲ . ನಾನು ಕೇಳಿದ್ದಕ್ಕೆ ಉತ್ತರ ಕೊಡುತ್ತಿದ್ದ. ಸಂಜೆ, ಹಣವನ್ನು ಕೊಡುವಾಗ ನಿನ್ನ ಹೆಸರೇನು? ಮನೆಯೆಲ್ಲಿ? ಎಂದು ವಿಚಾರಿಸಿದೆ. ಅವನು, ” ತುಂಬಾ ಕಷ್ಟ ಸ್ವಾಮಿ. ಮನೆಯಲ್ಲಿ ಹಾಸಿಗೆ ಹಿಡಿದ ವಯಸ್ಸಾದ ತಾಯಿ, ಮಂಡೆ ಸರಿಯಿಲ್ಲದ ಹೆಂಡತಿ ಇಬ್ಬರನ್ನೂ ನೋಡಿಕೊಳ್ಳಬೇಕು ಸರ್. ಅವಳಿಗೆ ಮೊದ್ಲು ಗವರ್ನಮೆಂಟ್ ಕೆಲಸ ಇದ್ದಿತ್ತು. ಅದು ಹೋಯ್ತು. ಹಾಗೆ ಅನ್ನುವಾಗಲೇ ಕಣ್ಣಿನಲ್ಲಿ ನೀರು ತುಂಬಿಕೊಂಡ.

ನನಗೆ ಏಕೋ ಪಕ್ಕನೆ ನಮ್ಮ ಆಫೀಸ್ನಲ್ಲಿ ಇದ್ದಿದ್ದ ಅಟೆಂಡರ್ ಳ ನೆನಪಾಯಿತು. “ನಿನ್ನ ಹೆಂಡತಿಯ ಹೆಸರೇನಪ್ಪ” ಅಂದೆ. ಅವನು “ಗೀತಾ” ಎಂದು ಕಣ್ಣಿನ ನೀರನ್ನು ಒರೆಸಿಕೊಂಡು, ” ಬರ್ತೇನೆ ಸರ್. ಮತ್ತೆ ಕೆಲಸ ಇದ್ರೆ ಹೇಳಿ” ಎಂದು ಹೇಳಿ ಹೊರಟುಬಿಟ್ಟ. ನಾನು ಮೂಕನಾಗಿ ಅವನು ಹೋಗುತ್ತಿರುವುದನ್ನೇ ನೋಡುತ್ತಾ ನಿಂತೆ.

 
 
 
 
 
 
 
 
 
 
 

Leave a Reply