ಭಗವಂತನ ‘ಧರ್ಮಾವತಾರ’~ಕೃಷ್ಣನೆಂಬ ‘ಬೆರಗು’

​ಸೌರ ಶ್ರೀಕೃಷ್ಣಾಷ್ಟಮಿ‌| ಧರ್ಮವೇ ಭಗವಂತ . ಭಗವಂತನೇ ಧರ್ಮ. ಧರ್ಮ ಭಗವಂತನಾಗುವುದು . ಧರ್ಮದಲ್ಲಿ ಭಗವಂತ ಸಂಭವಿಸುವುದು. ಭಗವಂತನಲ್ಲಿ ಅವಿನಾಭಾವವಾಗಿ ಧರ್ಮವಿರುವುದು . ಅದು ಪ್ರಕಟಗೊಳ್ಳುವುದು – ದರ್ಶನ ಸಾಧ್ಯವಾಗುವುದು. ಈ ನಿರೂಪಣೆಯ ಸಾಕಾರವಾಗಿ ಮೂಡಿ ಬರುತ್ತದೆ ಒಂದು ‘ಬೆರಗು’ ….ಅದೇ ಕೃಷ್ಣ .

ಲಾಲಿತ್ಯ – ಲಾವಣ್ಯಗಳ ಆಕರ್ಷಕ‌ ರೂಪದಿಂದ ಜಗತ್ತನ್ನು‌ ಗೆಲಿದವನಾಗಿ, ಮನುಕುಲದ ಪ್ರಿಯಬಂಧುವಾಗಿ, ಚಾಣಾಕ್ಷ ಸೂತ್ರಧಾರನಾಗಿ,  ಮಲ್ಲಯುದ್ಧ ಪ್ರವೀಣನಾಗಿ , ರಾಜಕೀಯ ಮುತ್ಸದ್ಧಿಯಾಗಿ, ಗೀತಾಚಾರ್ಯನಾಗಿ ಭಾರತೀಯರ ಆರಾಧ್ಯನಾದ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ, ಕಾಲದ ಅಗತ್ಯವಾಗಿ, ಸಜ್ಜನರ ನಿರೀಕ್ಷೆಯಾಗಿ ನೆರವೇರುತ್ತದೆ. ಋಷಿಮುನಿಗಳ ಪ್ರಾರ್ಥನೆ, ಶುಭ ಪ್ರತೀಕ್ಷೆ ಹುಸಿಯಾಗದೇ ‘ಧರ್ಮ’ವಾಗಿ ಆವಿರ್ಭವಿಸುತ್ತಾನೆ ಕೃಷ್ಣ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಅವತಾರಗಳು ಕ್ಷಣದಲ್ಲಿ ನಡೆದು ಧರ್ಮವನ್ನು ಉದ್ಧರಿಸಿ ಮೂಲದಲ್ಲಿ‌ ಸೇರಿಹೋಗುತ್ತದೆ.

ವಾಮನಾವತಾರ ಏಕೋದ್ದೇಶದಿಂದ ನಡೆದು‌ ಪಾತಾಳ ಸೇರಿಹೋಗುತ್ತದೆ .ಭಾರ್ಗವರಾಮನಾಗಿ‌ ಆಯುಧ ಗ್ರಹಣ ನಿಷಿದ್ಧವಾಗಿದ್ದರೂ ಸಂದರ್ಭದ ಅನಿವಾರ್ಯವಾಗಿ ಕ್ಷತ್ರಿಯ ಸಂಹಾರವಾಗುತ್ತದೆ. ಇಲ್ಲಿ ಧರ್ಮ ಸ್ಥಾಪನೆಯೇ ಪರಮಲಕ್ಷ್ಯವಾಗಿ ನಿರ್ವಹಿಸಲ್ಪಡುತ್ತದೆ. ಬಹುಶಃ ಆಕಾಲಕ್ಕೆ ಅದೇ ಮಾನ್ಯತೆಯ‌ ಮೌಲ್ಯವಾಗಿದ್ದಿರಬೇಕು.

ಆದರೆ ಕೃಷ್ಣಾವತಾರದ ಸಂದರ್ಭ ಮಾತ್ರ ವಿಶಿಷ್ಟ , ವಿಭಿನ್ನ . ಲೋಕೋತ್ತರ ಹಿತ ಸಾಧನೆ ,ಯಾರದ್ದು ಯಾರಿಗೆ ಸಲ್ಲಬೇಕು ಎಂಬ ಲೋಕಧರ್ಮೀ ನ್ಯಾಯದ ಅನುಷ್ಠಾನ ,ದುರ್ಬಲರಿಗೆ ,ಸಜ್ಜನರಿಗೆ ಬಲವಾಗುವ ,ಅಶಕ್ತರಿಗೆ ಶಕ್ತಿಯಾಗುವ, ಸರ್ವರಿಗೂ ಸಾಮಾಜಿಕ‌‌ ನ್ಯಾಯ ಒದಗಿಸುವ ಸದುದ್ದೇಶದೊಂದಿಗೆ ಕಾರ್ಯಪ್ರವೃತ್ತನಾಗುವ ಸಂಕಲ್ಪ ಸ್ವೀಕರಿಸಿದವ ‘ವಾಸುದೇವ – ಕೃಷ್ಣ’ . ಸಂದರ್ಭದ ಅನಿವಾರ್ಯತೆಯನ್ನು ಬಳಸಿಕೊಂಡು ಕುಬ್ಜೆಯ ವಕ್ರತೆಯನ್ನು ತಿದ್ದಿ ಸೃಷ್ಟಿಯನ್ನೆ ಸರಿಪಡಿಸಬಲ್ಲೆ ಎಂಬ ಸಂದೇಶವನ್ನು ಕೊಡುತ್ತಾನೆ 

‌ ಯಾರು ಹೇಳಿದರು‌ ಕೃಷ್ಣನಿಗೆ ನೀನು ಮನುಕುಲದ ಉದ್ಧಾರಕನಾಗು, ಯುಗ ಪ್ರವರ್ತಕನಾಗು, ಧರ್ಮಸಂಸ್ಥಾಪಕನಾಗು ಎಂದು.  ಆದರೆ ಕೃಷ್ಣ , ಆ ಕರ್ತವ್ಯ ತನ್ನದೆಂದು ,ತನ್ನ ಜವಾಬ್ದಾರಿ ಎಂದು ಪರಿಭಾವಿಸಿಕೊಂಡು ದ್ವಾಪರದ ಅಂತ್ಯದಲ್ಲಿ‌ ಮಹತ್ಕಾರ್ಯ ಸಾಧಸಿಯೇಬಿಟ್ಟ, ಅಗತ್ಯವಿದ್ದವರಿಗೆ ‘ಹೀಗೆಯೇ’ ಮಾಡು ಎಂದು ನಿರ್ದೇಶಿಸಿದ .ಧರ್ಮವನ್ನು ಸ್ಥಾಪಿಸಿ‌ ಧರ್ಮಸಂಸ್ಥಾಪನಾಚಾರ್ಯನಾದ. ಶ್ರುತಿ – ಸ್ಮೃತಿಗಳು ಹೇಳುವಂತೆ ಅವನೇ ಭಗವಂತ.

ತಾನು ವಿಶ್ವವ್ಯಾಪಕನಿದ್ದೇನೆ  ಪರಿಪೂರ್ಣನಿದ್ದೇನೆ ಎಲ್ಲವೂ ನಾನೇ, ಎಲ್ಲ ಶ್ರೇಷ್ಠ ವಾದುವುಗಳಲ್ಲಿ‌ ನಾನಿದ್ದೇನೆ ಅಥವಾ ಅದು‌ ನಾನೇ‌ ಆಗಿರುತ್ತೇನೆ . ಯಾವುದು ಯಾರಿಗೆ ಯಾವ ಕಾಲದಲ್ಲಿ ಧರ್ಮವೋ ಅದನ್ನು ಮಾಡು ,ಅದೇ ನಿನಗೆ ಧರ್ಮ ಮುಂತಾದ ವ್ಯಾಖ್ಯಾನವನ್ನು ಬೋಧಿಸುತ್ತಾ ಮಾನವ ಬದುಕಿನ ಸುಂದರ ಅನುಕರಣೀಯ ಸಿದ್ಧಾಂತವು ವಾಚ್ಯವಾಗುವಂತೆ “ವಿರಾಡ್ – ದರ್ಶನ”ದ ಮೂಲಕ ಪ್ರಕಟಗೊಳ್ಳುತ್ತಾನೆ. 

ಹಸ್ತಿನಾವತಿಯ ಚಕ್ರವರ್ತಿ ಪೀಠ ಪ್ರಶ್ನಾರ್ಹವಾಗಬಾರದು, ಅದು ಚಂದ್ರವಂಶೀಯರಿಗೆ ಸಲ್ಲತಕ್ಕದು ಎಂಬ ಕಾಲಧರ್ಮವನ್ನು ಪ್ರತಿಪಾದಿಸಿದ. ಆದರೆ ಹಸ್ತಿನೆಯಲ್ಲಿ ದಾಯಾದ್ಯ ಕಲಹವೇರ್ಪಟ್ಟಾಗ ಧರ್ಮ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿ ಸರ್ವಪ್ರಯತ್ನೇನ ಧರ್ಮರಾಯಾದಿ ಪಾಂಡವರಿಗೆ ಹಸ್ತಿನಾವತಿಯ ಚಕ್ರವರ್ತಿ ಪೀಠ ದೊರೆಯುವಂತೆ ಮಾಡುತ್ತಾನೆ ಕೃಷ್ಣ. ಕೊನೆಗೂ ತಾನು ನಿರ್ಲಿಪ್ತನಾಗಿಯೇ ಅರಸೊತ್ತಿಗೆ ,ಚಕ್ರವರ್ತಿಪೀಠವನ್ನು ತಿರಸ್ಕರಿಸುತ್ತಾನೆ. ಬಹಳ ಹಿಂದೆ ನೂತನವಾಗಿ ಭರತವರ್ಷದ ಐವತ್ತಾರಕ್ಕೆ ಹೊರತಾಗಿ ಐವತ್ತೇಳನೇದ್ದಾಗಿ‌ ಕಟ್ಟಿದ ದ್ವಾರಾವತಿಗೆ ಅಣ್ಣ ಬಲರಾಮನಲ್ಲವೇ ಅರಸ .ಯಾದವರಿಗೆ ರಾಜತ್ವ ಇದೆ ಎಂಬುದನ್ನು ಸ್ಥಾಪಿಸಿದ ….ಇದು ಕೃಷ್ಣ.ಲಾಲಿತ್ಯದಿಂದ ಅರಳುತ್ತದೆ: ಭಾರತೀಯ “ಧರ್ಮ – ತತ್ತ್ವಜ್ಞಾನ”ವು ಲಾಲಿತ್ಯದಿಂದ ಅರಳುವುದು ಬಹಳ ವಿರಳ. ಆದರೆ ಕೃಷ್ಣನ ಸಂದರ್ಭದಲ್ಲಿ ಮಾತ್ರ ಅರಳಿ ಘಮಘಮಿಸುತ್ತದೆ .ಇದು ಪ್ರೀತಿಯ ಕಣ್ಣು ಕುಕ್ಕುವ ಸೊಬಗಿನಿಂದ ಸಂಭ್ರಮಿಸುತ್ತದೆ. ಪ್ರೇಮ ಕತೆಗಳಿಗೆ ಹೊಸತೊಂದು ಕೋಮಲತೆ ಬರುತ್ತದೆ .ಕೃಷ್ಣನ ಬಾಲ್ಯ ಮರೆಯಲಾಗದ ಸಂಗತಿ ಇವತ್ತಿಗೂ ಪ್ರತಿಯೊಂದು ಭಾರತೀಯನ‌ ಮನೆಯಲ್ಲಿ ಈ ಬಾಲ್ಯ ಕುಣಿಯುತ್ತಲೇ ಇದೆ .ಆಡಿದ ರಾಸಕ್ರೀಡೆ ಕೃಷ್ಣ – ಗೋಪಿಕೆಯರ ವಿನೋದ ನೃತ್ಯ ಶ್ರೇಷ್ಠವಾಗಿಯೇ ನಿಲ್ಲುತ್ತದೆ. ಆಕ್ಷೇಪಾರ್ಹವಾಗುವುದೇ ಇಲ್ಲ, ರಂಜನೀಯ ಸಂದರ್ಭವಾಗುತ್ತದೆ.

ಸೀರೆಕದ್ದ – ಅಕ್ಷಯಾಂಬರ ಕೊಟ್ಟ: ಬಾಲ್ಯದಲ್ಲೊಮ್ಮೆ ತುಂಟಕೃಷ್ಣ ಗೋಪಿಕೆಯರ ಸೀರೆ ಕದ್ದು ಮರ ಏರಿ ಕುಳಿತು ಒಂದು ಅಪಕೀರ್ತಿಗೆ ಪಾತ್ರನಾಗುತ್ತಾನೆ. ವಾಸುದೇವನಾಗಿ ಬೆಳೆದಾಗ ದ್ರೌಪದಿಗೆ ಅಕ್ಷಯಾಂಬರವಿತ್ತು ಮಾನ – ಪ್ರಾಣ ಉಳಿಸಿ ಆಪತ್ಬಂಧುವಾಗಿ ಮೆರೆಯುತ್ತಾನೆ. ಸೀರೆಕದ್ದ ದೋಷದಿಂದ ಮುಕ್ತನಾಗುತ್ತಾನೆ‌. ಬಹುಶಃ ಅಕ್ಷಯಾಂಬರದ ಕೊಡುಗೆಯಲ್ಲಿ‌ ಈ ಭಾವವಿರಬಹುದು. ಹೀಗೆ ಬಾಲ್ಯದ ಪ್ರತಿಯೊಂದು ಬಾಲ್ಯ ಸಹಜವಾದ ಪ್ರಮಾದಗಳಿಗೂ ಬದುಕಿನುದ್ದಕ್ಕೂ ತಕ್ಕುದಾಗಿ ವರ್ತಿಸಿ, ಉತ್ತರಿಸುತ್ತಾ ಮನುಕುಲದ ಪ್ರಿಯ ಬಂಧುವಾಗುತ್ತಾನೆ .

ಅಷ್ಟಮಿ – ಅಟ್ಟೆಮಿ ಪೇರರ್ಘ್ಯೆ: ಅಷ್ಟಮಿ ದಿನದಂದು ಉಪವಾಸವಿದ್ದು ರಾತ್ರಿ ಚಂದ್ರೋದಯವಾಗುವ ( ತಿಂಗೊಲು ಮೂಡ್ನಗ) ಮುಹೂರ್ತದಲ್ಲಿ ಸ್ನಾನಮಾಡಿ ಮನೆ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಹಾಲು ಎರೆಯುವ ,ಬಿಲ್ವಪತ್ರೆ ಅರ್ಪಿಸುವ ‘ಪೇರರ್ಘ್ಯೆ’ ಬಿಡುವ ಕ್ರಮವಿದೆ .ಅರ್ಘ್ಯೆ ಪ್ರದಾನ ಎಂದರೆ “ಅಡಿಗೆ ಬುಡ್ಪುನು”.ಅಷ್ಟಮಿದ ‘ಉಡಾರಿಗೆ’ ಎಂಬುದು ಅಷ್ಟಮಿಯ ವಿಶೇಷ ತಿಂಡಿ .

ಅರ್ಘ್ಯ ಪ್ರದಾನ: ಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿಯ ದಿನ‌ಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ವಿವಿಧ ಭಕ್ಷ್ಯ ,ಉಂಡೆ , ಚಕ್ಕುಲಿ,ಕಡುಬು ಮುಂತಾದುವುಗಳನ್ನು ಮನೆ ದೇವರಿಗೆ ಸಮರ್ಪಿಸಿ ಪೂಜೆಮಾಡುವುದು. ಕೃಷ್ಣ, ಬಲರಾಮ, ವಸುದೇವ, ದೇವಕಿ‌, ನಂದಗೋಪ , ಯಶೋದಾ, ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ನೀರು ತುಂಬಿ ದೇವರಿಗೆ ( ಶಾಲಗ್ರಾಮ ಒಂದಕ್ಕೆ) ಅರ್ಘ್ಯ ಸಮರ್ಪಿಸುವುದು.

ಬಳಿಕ ತುಳಸಿಕಟ್ಟೆಯ ಮುಂಭಾಗ ಒಡೆದ ತೆಂಗಿನಕಾಯಿಯನ್ನು ( ತೆಂಗಿನ ಗಂಡು ಭಾಗದಲ್ಲಿ ಸುಲಿದ ಬಾಳೆಹಣ್ಣು ಇರಿಸಿ ಅರ್ಘ್ಯ ಅರ್ಪಿಸುವ ಕ್ರಮವೂ ಇದೆ) ಇರಿಸಿ ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ಹಾಲು ತುಂಬಿಸಿ ರೋಹಿಣೀ ಸಹಿತ ಚಂದ್ರನಿಗೆ ಅರ್ಘ್ಯವನ್ನು ಸಮರ್ಪಿಸುವುದು . ಸೌರಮಾನ , ಚಂದ್ರಮಾನ ಪದ್ಧತಿಗಳಿಗನುಗುಣವಾಗಿ ಅರ್ಘ್ಯ ಪ್ರದಾನ ನೆರವೇರುತ್ತದೆ. ಈ ಆಚರಣೆಯಲ್ಲಿ ಪಾಠಾಂತರಗಳಿವೆ. 

ವಿಟ್ಲ ಪಿಂಡಿ ; ಮಸುರ್ಡಿಕೆ – ಮೊಸರು ಕುಡಿಕೆ : ವಿಠಲನ ಪಿಂಡಿ ‘ವಿಟ್ಲಪಿಂಡಿ’ . ಪಿಂಡಿ ಎಂದರೆ ‘ಗಂಟು’. ವಿಠಲನಲ್ಲಿ ಇದ್ದುದು ಅಥವಾ ವಿಠಲನಿಗಾಗಿ ತಂದದ್ದು – ಬಂದದ್ದು .ಉಂಡೆ ,ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು .ಈ ಗಂಟನ್ನು ಇಟ್ಟುಕೊಂಡು ಅದನ್ನು ನನಗೆ ,ನನಗೆ ಎಂದು ಪಡೆಯಲು ಆಡುವ ಮಕ್ಕಳಾಟವೇ ವಿಟ್ಲಪಿಂಡಿ. ‘ವಿಠಲ’ ಎಂಬ ಹೆಸರಿನ ಕೃಷ್ಣನು ಗೋಪಾಲರೊಂದಿಗೆ – ಗೋಪಿಯರೊಂದಿಗೆ ಆಡಿದ ಆಟಗಳೇ “ಕೃಷ್ಣ ಲೀಲೆ” . ಅದನ್ನು ಉತ್ಸವೆಂದು ಸುಂದರ ಸ್ಮರಣೆಯಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ ಕೃಷ್ಣ ಲೀಲೋತ್ಸವ. 

ಗೋಪಿಯರ ಕಣ್ಣುತಪ್ಪಿಸಿ ಗೋಪರ ಮನೆ ಹೊಕ್ಕು ಹಾಲು, ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಕೆಳಗೆಬಿದ್ದು ಮಡಕೆಗಳು ಪುಡಿಯಾದಾಗ ಮೊಸರಿನ ಕುಡಿಕೆ ಪುಡಿಯಾಗುತ್ತದೆ. ಎತ್ತರದಲ್ಲಿ ತೂಗಿಸಿಡುವ ಹಾಲು-ಮೊಸರಿನ ಕುಡಿಕೆಗಳಿಗೆ ಕಲ್ಲಿನಿಂದ ಹೊಡೆದು ಅಥವಾ ಕೋಲಿನಿಂದ ರಂಧ್ರಮಾಡಿ ಅದರಿಂದ ಇಳಿಯುವ ಹಾಲಿಗೊ ಮೊಸರಿಗೊ ಬಾಯಿಕೊಟ್ಟು ಕುಡಿಯುವ ಕೃಷ್ಣ ಚೇಷ್ಟೆಗಳ ‘ಮೊಸರುಕುಡಿಕೆ’ಯ ಅಣಕನ್ನು ಅಥವಾ ಮರುಪ್ರದರ್ಶನವೇ ನಾವಿಂದು ಕಾಣುವ ‘ಕೃಷ್ಣಲೀಲೋತ್ಸವ’.

 
 
 
 
 
 
 

Leave a Reply