ವಿದ್ಯಾ ವಿನಯ ಸಂಪನ್ನ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ

 

ವಿದ್ಯಾ ವಿನಯ ಸಂಪನ್ನ
ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ

ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ |
ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಮ್ ||

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ 37ನೇ ಯತಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಶ್ರೀಮುಖ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ, ಪವಿತ್ರ ನಾಗರ ಪಂಚಮಿ ಶುಭದಿನದಂದು 24- 07- 1993ರಂದು ಕುಪ್ಪಾ ಶಿವಸುಬ್ರಹ್ಮಣ್ಯ ಅವಧಾನಿ ಮತ್ತು ಸೀತಾನಾಗಲಕ್ಷ್ಮೀ ದಂಪತಿಯ ಪುತ್ರರಾಗಿ ಅವತರಿಸಿದರು. ಅವರ ಪೂರ್ವಾಶ್ರಮದ ನಾಮಧೇಯ ಕುಪ್ಪಾ ವೆಂಕಟೇಶ ಪ್ರಸಾದ ಶರ್ಮ. 5ನೇ ವಯಸ್ಸಿನಲ್ಲಿ ಉಪನೀತರಾಗಿ ತಮ್ಮ ಬಾಲ್ಯ ಪಾಠವನ್ನು ಪಿತಾಮಹರಾದ ಕುಪ್ಪಾ ರಾಮಗೋಪಾಲ ವಾಜಪೇಯಾಜಿ ಬಳಿ ಮಾಡಿದರು. ನಂತರ ತಮ್ಮ ತಂದೆಯವರಿಂದ ಕೃಷ್ಣ ಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದರು. ಶ್ರೀ ಶರ್ಮರಿಗೆ ಚಿಕ್ಕ ವಯಸ್ಸಿನಲ್ಲೇ ದೈವಭಕ್ತಿ, ಗುರುಹಿರಿಯರಲ್ಲಿ ಅಪಾರ ಗೌರವ ಮತ್ತು ಲೌಕಿಕ ವ್ಯವಹಾರದಲ್ಲಿ ಅನಾಸಕ್ತಿ, ಧರ್ಮ ಮಾರ್ಗದಲ್ಲಿ ಆಸಕ್ತಿ ಮೈಗೂಡಿತ್ತು.

ಅವರ ತಂದೆಯವರ ಜೊತೆ ಭಾರತದ ಅನೇಕ ತೀರ್ಥಕ್ಷೇತ್ರಗಳ ದರ್ಶನ ಪಡೆದಿದ್ದರು. ಶೃಂಗೇರಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ತಂದೆ ಮತ್ತು ತಾತನವರ ಜೊತೆ 2006, 2008 ಮತ್ತು 2009ರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಶರ್ಮರ ಮೇಲೆ ಅಮೋಘವಾದ ಪರಿಣಾಮ ಬೀರಿತು. ಗುರುಗಳ ಸನ್ನಿಧಿಯಲ್ಲಿ ಹೆಚ್ಚಿನ ಶಾಸ್ತ್ರಾಧ್ಯಯನ ಮಾಡಬೇಕು ಎಂಬ ತಮ್ಮ ಅನಿಸಿಕೆಯನ್ನು ಗುರುಗಳಲ್ಲಿ ವಿನಂತಿಸಿದರು. ದೈವಸಂಕಲ್ಪ. ಗುರುಗಳ ಸಮ್ಮತಿ ದೊರೆಯಿತು. ಶ್ರೀಮಠದ ವಿದ್ವಾಂಸರಾದ ತಂಗಿರಾಲ ಶಿವಕುಮಾರ ಶರ್ಮ ಅವರ ಬಳಿ ಸಂಸ್ಕೃತ, ಕಾವ್ಯ, ಸಾಹಿತ್ಯ ಇತ್ಯಾದಿಗಳನ್ನು ಅಧ್ಯಯನ ಮಾಡಿದರು. ಈ ವಿದ್ಯಾರ್ಥಿಯ ಆಸಕ್ತಿ, ಪ್ರತಿಭೆ, ವಿಧೇಯತೆ ಮತ್ತು ಪ್ರತಿನಿತ್ಯ ಮಹಾಸನ್ನಿಧಾನದವರು ಮಾಡುತ್ತಿದ್ದ ಚಂದ್ರಮೌಳೇಶ್ವರ ಪೂಜೆಯ ವೇಳೆ ವೇದ ಪಠಣ ಮತ್ತು ಇತರ ಸದ್ಗುಣಗಳನ್ನು ಗಮನಿಸಿದ ಗುರುಗಳು ತಮ್ಮ ಬಿಡುವಿಲ್ಲದ ದಿನಚರಿಯಲ್ಲೂ ತಾವೇ ಶ್ರೀ ಪ್ರಸಾದ ಶರ್ಮರಿಗೆ ನ್ಯಾಯ ಮತ್ತು ತರ್ಕಶಾಸ್ತ್ರದ ಪಾಠ ಮಾಡುತ್ತಿದ್ದರು. ನಂತರ ಅನೇಕ ವಿದ್ವತ್ ಗೋಷ್ಠಿಗಳಲ್ಲಿ ಭಾಗವಹಿಸಿ ಪಂಡಿತರನ್ನು ಬೆರಗುಗೊಳಿಸಿದ ಶ್ರೀ ಪ್ರಸಾದ ಶರ್ಮರನ್ನು ಕಂಡ ಮಹಾಸನ್ನಿಧಾನಂಗಳವರು ಬಹಳ ಸಂತೋಷಪಡುತ್ತಿದ್ದರು. ನಂತರ ಶಾರದೆಯ ಪ್ರೇರಣೆಯಂತೆ ಜಯ ಸಂವತ್ಸರ ಮಾಘ ಶುದ್ಧ ತದಿಗೆ ದಿನಾಂಕ 23-01-2015ರಂದು ಸನ್ಯಾಸ ದೀಕ್ಷೆ ನೀಡಿ ಶ್ರೀ ವಿಧುಶೇಖರಭಾರತೀ ಎಂಬ ಯೋಗಪಟ್ಟ ಅನುಗ್ರಹಿಸಿದರು.

ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಜೊತೆ 2017ರಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿಜಯ ಯಾತ್ರೆ ಮಾಡಿ ನಂತರ 2018ರಲ್ಲಿ ಸ್ವತಂತ್ರವಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ವಿಜಯಯಾತ್ರೆ ಮಾಡಿ ಈಚೆಗೆ 2018- 2019ರಲ್ಲಿ ಉತ್ತರ ಕರ್ನಾಟಕದ ವಿವಿಧ ಭಾಗಗಳು ಮತ್ತು ಮಹಾರಾಷ್ಟ್ರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲ್ಲಿನ ಜನರ ಪ್ರಾರ್ಥನೆಯಂತೆ ವಿಜಯಯಾತ್ರೆ ಮಾಡಿ ಕನ್ನಡ, ತಮಿಳು ಮತ್ತು ತೆಲುಗು ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಲ್ಲಿನ ಪ್ರಾಂತ್ಯಕ್ಕೆ ಅನುಗುಣವಾಗಿ ಅನುಗ್ರಹ ಭಾಷಣ ಮಾಡಿ ಜನರನ್ನು ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತ ಮತ್ತು ಲೋಕಕ್ಷೇಮಕ್ಕಾಗಿ ನಿತ್ಯವೂ ಚಂದ್ರಮೌಳೇಶ್ವರ ಪೂಜೆ ನೆರವೇರಿಸುತ್ತಾ ಅಲ್ಲಲ್ಲಿ ನೂತನ ದೇವಾಲಯ ಪ್ರತಿಷ್ಠಾ ಕುಂಭಾಭಿಷೇಕ ಮಾಡಿ ಪಾಠಶಾಲೆಗಳ ಸ್ಥಾಪನೆ ಶಿಲಾನ್ಯಾಸಗಳನ್ನು ನೆರವೇರಿಸಿ ಅನೇಕ ಆಸ್ಪತ್ರೆಗಳ ಉದ್ಘಾಟನೆ ಇನ್ನೂ ಅನೇಕ ಸಮಾಜ ಕಾರ್ಯಕ್ರಮ ನೆರವೇರಿಸಿ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪರಮ ಅನುಗ್ರಹದಿಂದ ಮತ್ತು ಆದೇಶದಂತೆ ಎಲ್ಲೆಡೆ ಸಂಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ವೇದಶಾಸ್ತ್ರಗಳಲ್ಲಿ ನಿಷ್ಣಾತರಾಗಿ ವಿದ್ವಾಂಸರಾಗಿ ಜಗದ್ಗುರುಗಳಾಗಿ ಶೃಂಗೇರಿಗೆ ಬರುವ ಭಕ್ತಜನಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾರೆ. ಅವರ ದರ್ಶನ ಮಾತ್ರದಿಂದ ಸಮಸ್ತ ಪಾಪಗಳು ನಿವಾರಣೆಯಾಗಿ ಸಕಲ ಶ್ರೇಯಸ್ಸು ದೊರಕುತ್ತದೆ

 
 
 
 
 
 
 
 
 
 
 

Leave a Reply