ಬಹುಮುಖ ಪ್ರತಿಭೆಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ


1200 ವರ್ಷ ಇತಿಹಾಸ ಹೊಂದಿರುವ ಮತ್ತು ಶಂಕರಾಚಾರ್ಯರ ಶಿಷ್ಯತ್ವ ಹೊಂದಿ ಜನ ಪ್ರಿಯವಾಗಿರುವ ಎಡನೀರು ಮಠದ ಸ್ವಾಮೀಜಿಯವರು ತಮ್ಮ 79 ನೆಯ ವಯಸ್ಸಿಗೆ ಆಧ್ಯಾತ್ಮದ ಯಾತ್ರೆ ಮುಗಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಸಮೀಪದ ಎಡನೀರು ಮಠದ ಯತಿ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಭಾರತೀಯ ಕಲೆ, ಸಾಹಿತ್ಯ, ಯಕ್ಷಗಾನ, ಸಂಸ್ಕೃತಿ, ಸಮಾಜ ಸೇವೆ ಮತ್ತು ಮಾನವೀಯ ಸೇವೆಗಳಿಂದ ಪ್ರಸಿದ್ಧಿ ಪಡೆದವರು.

ಕೇವಲ 19ನೆಯ ವರ್ಷಕ್ಕೆ ಕಾವಿ ತೊಟ್ಟು ಸನ್ಯಾಸಿ ದೀಕ್ಷೆ ಪಡೆದ ಕೇಶವಾನಂದ ಭಾರತೀ ಸ್ವಾಮೀಜಿ ಹಲವಾರು ಶಾಲೆ, ಗೋ ಶಾಲೆ, ಕಾಲೇಜು, ಕಲಾ ತಂಡ, ಕೃಷಿ ತೋಟಗಳನ್ನು ಅಭಿವೃದ್ಧಿಪಡಿಸಿದರು. ಅವರು ಪ್ರತೀ ನಿತ್ಯವೂ ಗೋ ಪೂಜೆ ಮಾಡುತ್ತಿದ್ದರು.

ಅಲ್ಲಿನ ಉತ್ಸವಗಳು ಬಹು ಪ್ರಸಿದ್ಧ. ಜನರು ಅವರನ್ನು ಉತ್ಸವ ಪ್ರಿಯ ಎಂದು ಕರೆದರು.
ಇಪ್ಪತ್ತು ವರ್ಷ ಎಡನೀರು ಗೋಪಾಲಕೃಷ್ಣ ಯಕ್ಷಗಾನ ಮೇಳವನ್ನು ಮುನ್ನಡೆಸಿದ ಸ್ವಾಮೀಜಿ ತಾವೇ ಸ್ವತಃ ಭಾಗವತಿಕೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅವರು ಹರಿಕಥೆಯನ್ನು ಮಾಡುತ್ತಿದ್ದರು. ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು.

ಎಡನೀರಿನಲ್ಲಿ ದಶಕಗಳಿಂದ ಅವರು ನಡೆಸುತ್ತಿದ್ದ ಯಕ್ಷಗಾನ ಸಪ್ತಾಹ, ತಾಳ ಮದ್ದಲೆ ಸಪ್ತಾಹ, ಹರಿಕಥಾ ಸಪ್ತಾಹ ಇವುಗಳು ಭಾರೀ ಜನ ಮನ್ನಣೆ ಗಳಿಸಿದ್ದವು. ನೂರಾರು ಸಂಗೀತ, ನೃತ್ಯ ಕಲಾವಿದರನ್ನು ಅವರು ಎಡನೀರು ಮಠಕ್ಕೆ ಕರೆಸಿ ಕಾರ್ಯ ಕ್ರಮದ ವ್ಯವಸ್ಥೆ ಮಾಡುತ್ತಿದ್ದರು.

ಸ್ವಾಮಿಗಳು ಸ್ವತಃ ಮೊದಲ ಆಸನದಲ್ಲಿ ಬಂದು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದರು. ಕಲಾವಿದರಿಗೆ ಉತ್ತಮ ಸಂಭಾವನೆ ಕೊಟ್ಟು ಸನ್ಮಾನ ಮಾಡಿ ಕಳುಹಿಸುತ್ತಿದ್ದರು. ಕಲೆಯನ್ನು ಗಡಿನಾಡಿನಲ್ಲಿ ಉಳಿಸಿ, ಬೆಳೆಸಿದ ಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಸ್ವಾಮಿಗಳನ್ನು ನಾವು ಬಹುಕಾಲ ನೆನಪಿಸಿಕೊಳ್ಳಲು ನೂರಾರು ಕಾರಣಗಳು ಇದ್ದರೂ ಒಂದು ಕಾರಣಕ್ಕೆ ನಾವು ಅವರಿಗೆ ಹೆಚ್ಚು ಋಣಿಯಾಗಿರಬೇಕು. ಅದು ಎಪ್ಪತ್ತರ ದಶಕ.

ಸ್ವಾಮೀಜಿಗೂ ಆಗ ಬಿಸಿರಕ್ತ. ಆಗ ಸಂವಿಧಾನಕ್ಕೆ ತಿದ್ದುಪಡಿ ತಂದು ಕೇಂದ್ರ ಸರಕಾರ ಎಡನೀರು ಮಠದ ಆಸ್ತಿ ಪಾಸ್ತಿ ಗಳನ್ನು ಸ್ವಾಧೀನ ಪಡಿಸಿಕೊಳ್ಳುವ ನೋಟಿಸ್ ನೀಡಿತು. ಮಠಕ್ಕೆ ಇದ್ದ ಆದಾಯದ ಮೂಲವೇ ಅದರ ಆಸ್ತಿಗಳು. ನಾಗರಿಕರು ಆಸ್ತಿಯನ್ನು ಹೊಂದುವುದು ಅವರ ನಾಗರಿಕ ಹಕ್ಕು ಹೌದೇ ಅಲ್ಲವೇ ಎಂಬ ವಿಷಯದ ಮೇಲೆ ಸ್ವಾಮೀಜಿ ಸುಪ್ರೀಂ ಕೋರ್ಟಿನವರೆಗೆ ಹೋಗಿ ಫೈಟ್ ಮಾಡಿದರು.

ಒಬ್ಬರು ಕಾವಿ ತೊಟ್ಟ ವಿರಕ್ತ ಸ್ವಾಮೀಜಿ ಕೋರ್ಟಿನ ಮೆಟ್ಟಿಲು ಏರಿದ ಅಪರೂಪದ ಪ್ರಕರಣ ಇದಾಗಿತ್ತು! ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಸರಕಾರಗಳು ತಮ್ಮ ಮೂಗಿನ ನೇರಕ್ಕೆ ಭಾರತದ ಸಂವಿಧಾನವನ್ನು ತಿದ್ದು ಪಡಿ ಮಾಡುವ ಪರಿಪಾಠವನ್ನು ಇಟ್ಟು ಕೊಂಡಿದ್ದವು. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಚರ್ಚೆ ಮಾಡಿ ಕೋರಂ ಇಲ್ಲದಿದ್ದರೂ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಚಾಳಿ ಸರಕಾರಕ್ಕೆ ಇದ್ದಿತು!

ಅಂದು ಬಹಳ ಸದ್ದು ಮಾಡಿದ ಕೇಸನ್ನು
‘ಕೇಶವಾನಂದ ಭಾರತೀ ಶ್ರೀಪಾದಂಗಳವರು ವರ್ಸಸ್ ಕೇರಳ ಸರಕಾರ ಕೇಸ್’ ಎಂದು ಕರೆಯಲಾಯಿತು. ಖ್ಯಾತ ನ್ಯಾಯವಾದಿ ನಾನೀಫಾಲ್ಕಿವಾಲ ಅವರು ಸ್ವಾಮೀಜಿ ಯವರ ಪರವಾಗಿ ವಾದಿಸಿದರು.ಅಂತಿಮ ವಾಗಿ ಸುಪ್ರೀಂ ಕೋರ್ಟ್ ಸ್ವಾಮಿ ಗಳ ಪರವಾಗಿ ತೀರ್ಪು ಕೊಟ್ಟಿತು. 7:6 ಬಹು ಮತದಲ್ಲಿ ನ್ಯಾಯಾಂಗ ಪೀಠವು ತೀರ್ಪನ್ನು ಕೊಟ್ಟಿತು.

ಎಷ್ಟೋ ಬಾರಿ ಸಂವಿಧಾನದ ಮೂಲ ಆಶಯಕ್ಕೆ ತೊಂದರೆ ಆಗುತ್ತಿತ್ತು. ಆದರೆ ಈ ಕೇಸ್ ಕೋರ್ಟಲ್ಲಿ ವಿಚಾರಣೆಗೆ ಬಂದಾಗ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ ವಾಗಿ ಮಾಡುತ್ತಿದ್ದ ತಿದ್ದುಪಡಿಯ ವಿಷಯವು ಚರ್ಚೆಗೆ ಬಂದಿತು. 1972ರ ಅಕ್ಟೋಬರ್ 31ರಿಂದ 1973 ಏಪ್ರಿಲ್ 24ರ ವರೆಗೆ 68 ದಿನಗಳ ವಾದ- ಪ್ರತಿವಾದವನ್ನು 13 ನ್ಯಾಯಮೂರ್ತಿಗಳ ಪೀಠವು ತಾಳ್ಮೆಯಿಂದ ಆಲಿಸಿತು.

ಕಾರ್ಕಳದವರೆ ಆದ ಜಸ್ಟಿಸ್ ಕೆ.ಎಸ್. ಹೆಗ್ಡೆಯವರು ಸ್ವಾಮಿಯವರ ಪರವಾಗಿ ನಿಂತಿದ್ದರು. ಈ ತೀರ್ಪನ್ನು ‘ಕೇಶವಾನಂದ ಭಾರತೀ ತೀರ್ಪು’ ಎಂದೇ ಸುಪ್ರೀಂ ಕೋರ್ಟ್ ಕರೆಯಿತು! ಈಗಲೂ ಕಾನೂನು ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕದಲ್ಲಿ ಈ ಕೇಸ್ ರಾರಾಜಿ ಸುತ್ತಿದೆ.ಆ ತೀರ್ಪಿನ ಸಾರಾಂಶ ಏನೆಂದರೆ- ಕೇಂದ್ರ ಸರಕಾರ ಉಭಯ ಸದನಗಳಲ್ಲಿ ಚರ್ಚೆ ಮಾಡಿ ಬಹುಮತದಿಂದ ಸಂವಿ ಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ತಿದ್ದುಪಡಿ ಮಾಡುವ ಹಾಗಿಲ್ಲ.

ಉಭಯ ಸದನಗಳಲ್ಲಿ ಸ್ವೀಕೃತಿ ಪಡೆದರೂ ನಂತರ ನ್ಯಾಯಿಕ ಸಮಿತಿಯ ಎದುರು ಚರ್ಚೆಗೆ ಬರಬೇಕು. ಆಗ ನ್ಯಾಯಿಕ ಸಮಿತಿಗೆ ಆ ತಿದ್ದುಪಡಿಯು ‘ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ‘ ಎಂದನ್ನಿಸಿದರೆ ಅದು ಸಂವಿಧಾನದ ಆ ತಿದ್ದುಪಡಿಯನ್ನು ರದ್ದು ಪಡಿಸುವ ಅಧಿಕಾರವನ್ನು ಹೊಂದಿದೆ!
ಈ ತೀರ್ಪು ಭಾರತದ ನ್ಯಾಯಾಂಗ ಇತಿಹಾಸ ದಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ತೀರ್ಪು ಎಂದು ಕರೆಸಿಕೊಂಡಿದೆ.

ಆದರೂ ಮುಂದಿನ ವರ್ಷಗಳಲ್ಲಿ ಕೇಂದ್ರ ಸರಕಾರ ಆ ತೀರ್ಪಿನ ವಿರುದ್ಧವಾಗಿ ಹಲವು ತಿದ್ದುಪಡಿಯನ್ನು ತಂದ ಕೆಟ್ಟ ಉದಾಹರ ಣೆಗಳೂ ನಡೆದವು! ಏನಿದ್ದರೂ ಒಬ್ಬ ಕಾವಿ ತೊಟ್ಟ ವಿರಕ್ತ ಸ್ವಾಮೀಜಿ ತನ್ನ ಹಕ್ಕುಗಳಿಗಾಗಿ ನ್ಯಾಯಾಂಗ ಹೋರಾಟ ವನ್ನು ಮಾಡಿದ ಮತ್ತು ನಿರಂಕುಶ ಪ್ರಭುತ್ವದ ಕೇಂದ್ರ ಸರ ಕಾರಕ್ಕೆ ಪಾಠ ಕಲಿಸಿದ ಕಾರಣಕ್ಕೆ ಎಡನೀರು ಸ್ವಾಮೀಜಿಯವರು ನಮಗೆ ಇಂದಿಗೂ ಪ್ರಾಥ ಸ್ಮರಣೀಯ ಆಗುತ್ತಾರೆ.


ಅವರು ಹಚ್ಚಿದ ಬೆಳಕು ನಮ್ಮನ್ನು ಕೈ ಹಿಡಿದು ಮುಂದೆ ನಡೆಸಲಿ. ☑ ಬರಹ – ರಾಜೇಂದ್ರ ಭಟ್ ಕೆ.

 
 
 
 
 
 
 
 
 
 
 

Leave a Reply