ವಾಗ್ಯುದ್ಧ, ಕೈ ಕೈ ಮಿಲಾಯಿಸುವಿಕೆ, ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾದ ವಿಧಾನ ಪರಿಷತ್ 

ಬೆಂಗಳೂರು: ವಿಧಾನ ಪರಿಷತ್ ಇಂದು ಅಕ್ಷರಶಃ ರಣಾಂಗಣವಾಗಿದ್ದು, ಸಭಾಪತಿ ವಿಷಯದಲ್ಲಿ ಕಾಂಗ್ರೆಸ್ – ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧ, ಕೈ ಕೈ ಮಿಲಾಯಿಸುವಿಕೆ, ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು.

ಬೆಳಗ್ಗೆ 11.10ರ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು. 

ಬಿಜೆಪಿ ಸದಸ್ಯರು ಮತ್ತೆ ಅವರನ್ನು ಕರೆತಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರನ್ನು ಸಭಾಪತಿ ಪೀಠದಲ್ಲಿ ಕಾಂಗ್ರೆಸ್ ಸದಸ್ಯರು ಕುಳ್ಳಿರಿಸಿ ಅವರ ಸುತ್ತಲೂ ನಿಂತುಕೊಂಡರು.

ಸಭಾಪತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆಯ ಬಗ್ಗೆ ಮೊದಲು ಪ್ರಸ್ತಾಪವಾಗಬೇಕು ಎಂದು ಜೆಡಿಎಸ್- ಬಿಜೆಪಿ ಸದಸ್ಯರು ಒತ್ತಾಯಿಸಿ ಘೋಷಣೆ ಕೂಗಿದರು. ಕಡಿಮೆ ಸಂಖ್ಯೆಯಲ್ಲಿದ್ದ ಮಾರ್ಷಲ್ ಗಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪಕ್ಕೆ ಆಗಮಿಸಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

 
 
 
 
 
 
 
 
 
 
 

Leave a Reply