ವಿಮಾನದಲ್ಲೇ ಅರೆ ಬೆತ್ತಲೆ ಓಡಾಡಿದ ಮಹಿಳೆ

ಮುಂಬೈ: ಇಟಲಿಯ ಮಹಿಳೆಯೊಬ್ಬರು ವಿಸ್ತಾರಾ ಏರ್ಲೈನ್ಸ್ ವಿಮಾನದ ಸಿಬ್ಬಂದಿ‌ ಮೇಲೆ ಹಲ್ಲೆ‌ ನಡೆಸಿದ್ದು, ವಾಚಾಮಗೋಚರವಾಗಿ ನಿಂದಿಸಿ ರಾದ್ಧಾಂತ ನಡೆಸಿದ ಬಳಿಕ ವಿಮಾನದಲ್ಲೇ ಬಟ್ಟೆ ಬಿಚ್ಚಿ ಭಾಗಶಃ ಬೆತ್ತಲೆ ಓಡಾಡಿದ ಘಟನೆ ನಡೆದಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಸೋಮವಾರ ಮುಂಜಾನೆ 2.03ಕ್ಕೆ ವಿಸ್ತಾರಾ ಏರ್‌ಲೈನ್ಸ್ ವಿಮಾನವು ಅಬುಧಾಬಿಯಿಂದ ಟೇಕಾಫ್ ಆದ ನಂತರ ಈ ಘಟನೆ ನಡೆದಿದೆ.ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ 4:50ಕ್ಕೆ ವಿಮಾನ ಇಳಿದಾಗ ಆಕೆಯನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ವಿಮಾನ ಸಿಬ್ಬಂದಿ ತಿಳಿಸಿದ್ದಾರೆ.

ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದರೂ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳುವುದಾಗಿ ಆಕೆ ಹಠ ಮಾಡಿದ್ದಾಳೆ ಎನ್ನಲಾಗಿದೆ. ಗಲಾಟೆ ಬಳಿಕ ಅವಳು ತನ್ನ ಬಟ್ಟೆಗಳನ್ನು ತೆಗೆದು ಭಾಗಶಃ ಬೆತ್ತಲೆ ಸ್ಥಿತಿಯಲ್ಲಿ ವಿಮಾನದಲ್ಲಿ ಓಡಾಡಿದ್ದಾಳೆ ಎಂದು ಸಿಬ್ಬಂದಿ‌ ಹೇಳಿದ್ದಾರೆ.ಅಬುಧಾಬಿ-ಮುಂಬೈ ವಿಮಾನದಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ವಿಸ್ತಾರಾ ಏರ್‌ಲೈನ್ಸ್ ಸಿಬ್ಬಂದಿ ಲಬತ್ ಖಾನ್ ದೂರು ನೀಡಿದ ನಂತರ ಇಟಲಿಯ 45 ವರ್ಷದ ಮಹಿಳೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆಯು ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಸಿ ಉಗುಳಿದ್ದಾಳೆ ಮತ್ತು ಸಿಬ್ಬಂದಿಯೊಂದಿಗೆ ಜಗಳವಾಡಿದ್ದು, ನಂತರ ವಿಮಾನದಲ್ಲಿ ತನ್ನ ಬಟ್ಟೆಗಳನ್ನು ಬಿಚ್ಚಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 
 
 
 
 
 
 
 
 

Leave a Reply