Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಇಂದು ಶ್ರೀವೇದವ್ಯಾಸದೇವರ ಅವತಾರದ ದಿನ

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ ।ಹೃದ್ಯಾಯ ಶುದ್ಧ ವಿದ್ಯಾಯ ಮಧ್ವಾಯ ಚ ನಮೋ ನಮಃ ।।

ಲೋಕೋದ್ಧಾರಕ್ಕಾಗಿ, ಜ್ಞಾನದಾಹಿಗಳಿಗೆ ಮೋಕ್ಷಕಲ್ಪಿಸುವ ಉದ್ದೇಶದಿಂದ. ವೈಶಾಖ ಮಾಸ ಶುದ್ಧ ತ್ರಯೋದಶಿಯಂದು ಶ್ರೀ ಮಹಾವಿಷ್ಣು ಶ್ರೀವೇದವ್ಯಾಸರಾಗಿ ಅವತಾರ ತಾಳಿದ ದಿನ.

   ಶ್ರೀಪರಾಶರ ಮಹರ್ಷಿ ಹಾಗೂ ಮತ್ಸ್ಯಗಂಧಿ (ಸತ್ಯವತಿ) ದೇವಿಯ ಸುಪುತ್ರರಾಗಿ ಈಗಿನ ಉತ್ತರಪ್ರದೇಶದ ಜಲುವಾ ಜಿಲ್ಲೆಯಲ್ಲಿ ಕಲ್ಪಿ ಎಂಬ ಸ್ಥಳದಲ್ಲಿ ಯಮುನಾ ನದಿಯ ಮಧ್ಯದಲ್ಲಿದ್ದ ದ್ವೀಪದಲ್ಲಿ ಜನಿಸಿದರು.   

    ಹುಟ್ಟಿದಾಗ ಕಪ್ಪು ಬಣ್ಣ ಹೊಂದಿದ್ದ ಕಾರಣ ‘ಕೃಷ್ಣ’ ಎಂದು ಕರೆಯಲಾಯಿತು.

 ದ್ವೀಪದಲ್ಲಿ ಜನಿಸಿದ್ದರಿಂದ ‘ದ್ವೈಪಾಯನ’ ಎನ್ನಲಾಯಿತು. ಕೊನೆಗೆ “ಕೃಷ್ಣ-ದ್ವೈಪಾಯನ” ಎಂಬ ಹೆಸರು ಇವರಿಗೆ ಬಂತು.

   ಸಕಲಗುಣಗಳ ಸಹಿತ ಎಲ್ಲ ವಿದ್ಯೆಗಳನ್ನು ಕಲಿತ ಈ ಮಹಾನುಭಾವರು ಒಟ್ಟಾಗಿದ್ದ ಅಪೌರುಷೇಯವೆನಿಸಿದ್ದ, ಬೆಟ್ಟದಂತೆ ಅಗಾಧವಾಗಿದ್ದ “ವೇದ” ಸಂಪುಟವನ್ನು ವಿಭಜಿಸಿದರು. 

   ವೇದದಲ್ಲಿ ಬದುಕಲು ಬೇಕಾದ ಜ್ಞಾನ, ಜೀವನದಲ್ಲಿ ಇರಬೇಕಾದ ರೀತಿ, ಕಲಿಯಬೇಕಾದ ವಿದ್ಯೆಗಳು, ಸಂಗೀತ, ತಾಂತ್ರಿಕತೆ ವಿದ್ಯೆಗಳು ಒಟ್ಟಾಗಿ ಅಡಕವಾಗಿದ್ದವು. ಇವು ಸರಿಯಾದ ರೀತಿಯಲ್ಲಿ ಸುಲಭವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವೇದ ಸಂಪುಟವನ್ನು ವಿಭಜಿಸಿ, ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂಬ ನಾಲ್ಕು ಭಾಗ ಮಾಡಿದರು. ಹಾಗಾಗಿ ಇವರಿಗೆ “ವೇದವ್ಯಾಸ” ಎಂಬ ಹೆಸರು ಬಂತು.

   ನಂತರ ಅವರ ಶಿಷ್ಯರಲ್ಲಿ ಪ್ರತಿಭಾವಂತರಾಗಿದ್ದ ಪೈಲನನ್ನು ಋಗ್ವೇದದಲ್ಲಿ, ವೈಶಂಪಾಯನನನ್ನು ಯಜುರ್ವೇದದಲ್ಲಿ, ಜೈಮಿನಿಯನ್ನು ಸಾಮವೇದದಲ್ಲಿ, ಸುಮಂತನನ್ನು ಅಥರ್ವಣ ವೇದದಲ್ಲಿ ನಿಷ್ಣಾತರನ್ನಾಗಿಸಿದರು. ಇವರ ಮೂಲಕ ಭರತ ಖಂಡದಲ್ಲಿ ವೇದಗಳ ಪ್ರಸಾರ ಮಾಡಿಸಿದರು.

   ಇವುಗಳ ಜತೆ ಮನುಷ್ಯ ಪಾಪ ಕರ್ಮಗಳನ್ನು ಮಾಡದೆ, ಉತ್ತಮ ನಡತೆಯೊಂದಿಗೆ ಸುಖ ಸಂಸಾರ ನಡೆಸಲಿ ಎಂಬ ಉದ್ದೇಶದಿಂದ ಮೋಕ್ಷ ಮಾರ್ಗದಾಯಕವಾದ ೧೮ ಪುರಾಣಗಳನ್ನು ರಚಿಸಿದರು.

  ಗಣಪತಿಯ ಮೂಲಕ ಶ್ರೀಮನ್ಮಹಾಭಾರತವನ್ನು ಬರೆಸಿದರಲ್ಲದೇ, ಭಾಗವತ ಎಂಬ ಭಗವಂತನ ಭಕ್ತಿಸಾರವುಳ್ಳ ಮಹಾನ್ ಕೃತಿಯನ್ನು ರಚಿಸಿ ತಮ್ಮ ಸುಪುತ್ರ ಶುಕಾಚಾರ್ಯರಿಗೆ ಬೋಧಿಸಿದರು.

 

  ಬ್ರಹ್ಮ ಸೂತ್ರವನ್ನು ಬರೆದು ಜಿಜ್ಞಾಸುಗಳಿಗೆ ಉಪಕರಿಸಿದರು. ಕೊನೆಗೆ ಬದರಿ(ಎಳಚಿ, ಬೋರೆ) ವೃಕ್ಷಗಳಿಂದ ಕೂಡಿದ್ದ ಬದರೀಕ್ಷೇತ್ರದಲ್ಲಿ ಆಶ್ರಮ‌ ನಿರ್ಮಿಸಿ ಅಲ್ಲಿ ನೆಲೆಸಿದರು. ಇದರಿಂದ ಇವರಿಗೆ ಬಾದರಾಯಣ ಎಂಬ ಹೆಸರು ಬಂತು.

 ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿರುವ ಶ್ರೀವೇದವ್ಯಾಸರು ದ್ವಾಪರ ಯುಗದವರು, ಅಂದಿನಿಂದ ಇಂದಿನವರೆಗೂ ಬದರಿಕಾಶ್ರಮದಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತದೆ. 

  

ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ೭೦೦ ವರ್ಷಗಳಿಗೂ ಹಿಂದೆ ಮೂಲ ಬದರಿಗೆ ಭೇಟಿ ನೀಡಿ ಶ್ರೀ ವೇದವ್ಯಾಸ ದೇವರನ್ನು ದರ್ಶನಮಾಡಿದ್ದರು. ಅಲ್ಲಿಂದ ಬಂದು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದರು. ನಂತರ ಮತ್ತೊಮ್ನೆ ಬದರಿಗೆ ತೆರಳಿ ಶ್ರೀವೇದವ್ಯಾಸರಿಗೆ ಭಾಷ್ಯ ರಚನೆಯನ್ನು ಸಮರ್ಪಿಸಿದರು. 

ಸಂತುಷ್ಟರಾದ ವ್ಯಾಸರು, ತಮ್ಮ ಮುಷ್ಟಿಯಿಂದ ಪವಿತ್ರವಾದ ಮಣ್ಣನ್ನು ವಿಶೇಷವಾದ ಶಿಲಾರೂಪವಾಗಿ ಪರಿವರ್ತಿಸಿ ಶ್ರೀಮದಾಚಾರ್ಯರಿಗೆ ನೀಡಿದರು. ಇವುಗಳನ್ನು ವ್ಯಾಸಮುಷ್ಟಿ ಎಂದು ಕರೆಯಲಾಗುತ್ತದೆ. ಆಚಾರ್ಯರ ಪರಂಪರೆಯ ಹಲವಾರು ಮಠಗಳಲ್ಲಿ ಈಗಲೂ ನಿತ್ಯ ಪೂಜೆಗೊಳ್ಳುವ ವ್ಯಾಸ ಮುಷ್ಟಿಗಳನ್ನು ದರ್ಶನ ಮಾಡಬಹುದು.

ದೀನರ ಉದ್ಧಾರಕ್ಕಾಗಿ ಧರೆಯಲ್ಲವತರಿಸಿದ ಈ ಮಹಾನುಭಾವರು ನಮ್ಮಲ್ಲಿನ ಅಜ್ಞಾನ ತೊಲಗಿಸಿ ಸುಜ್ಞಾನ ಕರುಣಿಸುವಂತೆ ಪ್ರಾರ್ಥಿಸೋಣ.

ಜಯತಿ ಪರಾಶರ ಸೂನು: 

ಸತ್ಯವತೀ ಹೃದಯ ನಂದನೋ ವ್ಯಾಸಃ ।

ಯಸ್ಯಾಸ್ಯ ಕಮಲಗಲಿತಂ ವಾಙ್ಞಯ –

ಮಮೃತಂ ಸತ್ಯಂ ಜಗತ್ ಪಿಬತಿ||

ಶ್ರೀಶ ಚರಣಾರಾಧಕ:

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ

ಆನೇಕಲ್.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!