ಬಂಟಕಲ್ಲು – ವೇ.ಮೂ. ಕೆ.ವೇದವ್ಯಾಸರಾಯ ಭಟ್ ನಿಧನ

ಶಿರ್ವ:-ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಹಿರಿಯ ವೈದಿಕರಾದ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್ (93ವ)  ವಯೋಸಹಜ ಅನಾರೋಗ್ಯ ದಿಂದ ಶುಕ್ರವಾರ ನಿಧನರಾದರು.  ಶ್ರೀದೇವಳದ ಪ್ರತಿಷ್ಠಾ ವರ್ಷ 1942ರಲ್ಲಿ ವೈದಿಕರಾಗಿ ಕ್ಷೇತ್ರಕ್ಕೆ ಆಗಮಿಸಿದ ಇವರು   ನಂತರ ಅಪಾರವಾದ ವೈದಿಕಜ್ಞಾನದ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ.

ಭಜನೆ, ಕೀರ್ತನ, ಹಾಡುಗಾರಿಕೆಯ ಜೊತೆಗೆ ಭಾಗವತರಾಗಿ,  ಕಲಾರಾಧಕರಾಗಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಸಂಘದ ಸ್ಥಾಪಕರಾಗಿ, ಭಜನಾಮಂಡಳಿಯ ಸ್ಥಾಪಕರಾಗಿ, ಶ್ರೀದೇವಳದ ನೂತನ ಸಭಾಭವನ “ಶ್ರೀಪೂರ್ಣಾನಂದ ಸರಸ್ವತೀ ಸಭಾಭವನ” ನಿರ್ಮಾಣ ಕಾರ್ಯದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಅಲ್ಲದೆ ಸಮಾಜದ ಆದ್ಯಗುರುಪೀಠ ಗೋವಾದ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠದ ಗುರುವರ್ಯ ಶ್ರೀಮದ್ ಸಚ್ಚಿದಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ರವರ 1976ರ ಚಾತುರ್ಮಾಸ್ಯ ಧಾರ್ಮಿಕ ಅನುಷ್ಠಾನ, ಹೀಗೆ ಹತ್ತುಹಲವು ಕ್ಷೇತ್ರ ಪರ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡವರು.  

ಪ್ರತಿಷ್ಠಿತ ಶಿರ್ವ ರೋಟರಿಯ ಸ್ಥಾಪಕ ಸದಸ್ಯರು. ಸಮಾಜದ ನೂರಾರು ವ್ಯಕ್ತಿಗಳಿಗೆ ವೈವಾಹಿಕ ನೆಂಟಸ್ತಿಕೆಯ ಮೂಲಕ ಕಂಕಣಭಾಗ್ಯ ಒದಗಿಸಿಕೊಟ್ಟವರು.  ಇವರ ಬಹುಮುಖ ಸೇವೆಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿದೆ. “ಸ್ವಾತಂತ್ರ್ಯ ಹೋರಾಟಗಾರ ಕೆ.ಎಲ್.ಶರ್ಮಾ ಪ್ರಶಸ್ತಿ” ಯಲ್ಲದೆ ಅನೇಕ ದೇವಾಲಯಗಳು, ಭಜನಾ ಮಂಡಳಿಗಳು ಸನ್ಮಾನಿಸಿವೆ. 
ಇವರು ಓರ್ವ ಪುತ್ರ, 5 ಪುತ್ರಿಯರು, ಅಪಾರ ಬಂಧುಗಳನ್ನು ಅಗಲಿದ್ದಾರೆ.
 
 
 
 
 
 
 
 
 
 
 

Leave a Reply