ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ದ ಕಾರ್ಯಾಚರಣೆಗೆ ಇಳಿದ ಉಡುಪಿ ಡಿಸಿ

ಉಡುಪಿ: ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಜಾರಿ ಮಾಡಿರುವ ಲಾಕ್ ಡೌನ್ ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸೂಚಿಸಿರುವ ಅವಧಿಯ ನಂತರವೂ ಸಾರ್ವಜನಿಕರು ಓಡಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಇಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ವತಃ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು. 

ಇಂದು ಮುಂಜಾನೆ ನಗರದ ಸಿಟಿ ಬಸ್‌ ನಿಲ್ದಾಣ, ಕೋರ್ಟ್ ರೋಡ್, ಮಸೀದಿ ರಸ್ತೆ, ಮಲ್ಪೆ ಮುಖ್ಯರಸ್ತೆಗೆ ಏಕಾಏಕಿ ಭೇಟಿ ನೀಡಿದ ಜಿಲ್ಲಾಧಿಕಾರಿ ನಗರದಲ್ಲಿ ತೆರೆದುಕೊಂಡಿದ್ದ ಬೇಕರಿ ಮತ್ತು ಐಸ್ ಕ್ರೀಂ ಪಾರ್ಲರ್ ಗಳಿಗೆ ತೆರೆಯಲು ಅವಕಾಶ ಇರುವುದಿಲ್ಲ ಎಂದು ಸೂಚಿಸಿ ನೀಡಿ ಈ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸುವಂತೆ ತಿಳಿಸಿದರು.

ನಗರದಲ್ಲಿ ಬಹುತೇಕ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗಿದ್ದು, ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಲಾಯಿತು. ಅಲ್ಲದೆ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ಜನರನ್ನು ಚದುರಿಸಿದ್ದು,‌ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಅಲರ್ಟ್ ಮಾಡಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆ ಯಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.ಅಲ್ಲದೆ ಅಗತ್ಯ ವಸ್ತುಗಳ ಖರೀದಿಗೆ ಮನೆಯ ಸಮೀಪದ ಅಂಗಡಿ ತೆರಳಿ ಸಾಮಾಗ್ರಿಗಳನ್ನು ಖರೀದಿಸಬೇಕು‌ ಇಲ್ಲವಾದಲ್ಲಿ ವಾಹನ ಸೀಝ್ ಮಾಡುವುದಾಗಿ ನಿನ್ನೆಯೇ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದರು.ಅದರ ಹೊರತಾಗಿಯೂ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸುವ ಸಲುವಾಗಿ ಇಂದು ಜಿಲ್ಲಾಧಿಕಾರಿ ಧಿಡೀರ್ ಕಾರ್ಯಾಚರಣೆ ಗೆ ನಡೆಸಿದ್ದಾರೆ.

ಇದರೊಂದಿಗೆ ಕರಾವಳಿ ಜಂಕ್ಷನ್ ಬಳಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಾಹನ ತಪಾಸಣೆ ನಡೆಸಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.

 
 
 
 
 
 
 
 
 
 
 

Leave a Reply