“”ಪಾತ್ರದಾರಿ ಯಾಗುವುದು ಸುಲಭ ಪಾತ್ರವಾಗುವುದು ಕಷ್ಟ” ಯಕ್ಷ  ರಂಗಾಯಣದಲ್ಲಿ ಅಂಬಾತನಯ ಮುದ್ರಾಡಿ

  ‘ ನಾಟಕದ ಉದ್ದೇಶ ಉಪದೇಶವಲ್ಲ, ಪ್ರೇಕ್ಷಕರು  ಅರ್ಥೈಸುವ ರೀತಿಯಿಂದ ಅವನ ಅನುಭವಕ್ಕೆ ಅದು ಬರುತ್ತದೆ. ನಾಟಕದಲ್ಲಿ ಪಾತ್ರದಾರಿಯಾಗುವುದು ಸುಲಭ ಆದರೆ ಪಾತ್ರವಾಗುವುದು ಕಷ್ಟ.  ನಾಟಕದಿಂದಾಗಿ ಸಮಾಜವನ್ನು ತಿದ್ದುವ ಕೆಲಸವಾಗಲಿ ಎಂದು ಹಿರಿಯ ವಿದ್ವಾಂಸರಾದ ಅಂಬಾತನಯ ಮುದ್ರಾಡಿ ಯವರು ಹೇಳಿದರು.
  ಅವರು ಕಾರ್ಕಳ ಯಕ್ಷ ರಂಗಾಯಣದ ವತಿಯಿಂದ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ  ನಡೆಯುತ್ತಿರುವ ರಂಗ ಕಾರ್ಯಾಗಾರವನ್ನು ಉದ್ಘಾಟಿಸಿ  ಮಾತನಾಡಿದರು.

      ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಎ.ಕೋಟ್ಯಾನ್ ರವರು ‘ಒಂದು ನಾಟಕದ ಪ್ರಭಾವದಿಂದಾಗಿ ತನ್ನ ಜೀವನದಲ್ಲಿ ಪರಿವರ್ತನೆಯನ್ನು ಕಂಡುಕೊಂಡು ವಿಶ್ವಮಾನ್ಯರಾದ ಮಹಾತ್ಮ ಗಾಂಧೀಜಿಯವರ ಬಗ್ಗೆ ಮಾತನಾಡುತ್ತಾ, ಸ್ಪಂದನಾಶೀಲ ಪ್ರೇಕ್ಷಕರು, ಕಷ್ಟವನ್ನು  ಜೀರ್ಣಿಸಿಕೊಳ್ಳುವ ನಿರ್ದೇಶಕರು, ಹೊಸ ಚಿಂತನೆಯ ರಂಗಕರ್ಮಿಗಳಿಂದಾಗಿ ನಾಟಕಗಳು ಇಂದಿಗೂ ಸಮಾಜವನ್ನು ತಿದ್ದುವ ಕೆಲಸಗಳನ್ನು ಮಾಡುತ್ತಿವೆ. ನಾಟಕಕ್ಕೆಂದೂ ಅಳಿವಿಲ್ಲ’ ಎಂದರು.


 

  ಸಮಾರಂಭದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯಅತಿಥಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯೆ ಪೂರ್ಣಿಮಾ ಸುರೇಶ್ ರವರು ಮಾತನಾಡುತ್ತಾ’ ನಾಟಕಗಳು ಮನಸ್ಸಿನ ಕೊಳೆಯನ್ನು ತೊಳೆಯುವಂತಹುದು. ನಾಟಕವು ಎಲ್ಲಾ ಕಲೆಗಳನ್ನು ಒಳಗೊಂಡಿದೆ ‘ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ’ ರಂಗಭೂಮಿ  ಕಟ್ಟುವುದನ್ನು ಕಲಿಸುತ್ತದೆ ಒಡೆಯುವುದನ್ನಲ್ಲ’ ಎನ್ನುತ್ತಾ ‘ಸಾಂಸ್ಕೃತಿಕವಾಗಿ ತೊಡಗಿಸಿಕೊಂಡವರಿಂದ ದೇಶಕ್ಕೆ ಎಂದೂ ಅಪಾಯವಿಲ್ಲ.ಕೋಟಿ ಚೆನ್ನಯ ಥೀಂ ಪಾರ್ಕ್ ಇನ್ನು ಮುಂದೆ ಸಾಂಸ್ಕೃತಿಕ ಕೇಂದ್ರವಾಗಲಿದೆ’ ಎಂದರು.
       ಶಿಬಿರಾರ್ಥಿ ಕಲಾವಿದರ ಆಶಯ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ  ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕ ವಸಂತ ಎಂ. ಕಾರ್ಯಕ್ರಮ ನಿರೂಪಿಸಿದರು. ರಮಿತಾ ಶೈಲೆಂದರ್ ರಾವ್ ವಂದಿಸಿದರು.

ಅಮರಕ್ರಾಂತಿ-ರೈತ ದಂಗೆ 1837
—————————————-
ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ
ಸಚಿವ ಸುನಿಲ್ ಕುಮಾರ್ ರವರ  ಅಮೃತ ಭಾರತಿಗೆ ಕನ್ನಡದಾರತಿ ಪರಿಕಲ್ಪನೆಯಂತೆ, ಬ್ರಿಟಿಷರ ವಿರುದ್ಧ 1837ರಲ್ಲಿ ನಡೆದ  ಅಮರ ಕ್ರಾಂತಿ ಸ್ವಾತಂತ್ರ್ಯ ಚಳುವಳಿ ಮತ್ತು ರೈತ ದಂಗೆಯನ್ನು ಆಧಾರವಾಗಿಟ್ಟುಕೊಂಡು ಯಕ್ಷ ರಂಗಾಯಣದಲ್ಲಿ ಈಗಾಗಲೇ ದಿನಪೂರ್ತಿ ನಾಟಕದ ತಾಲೀಮು ನಡೆಯುತ್ತಿದೆ. ಡಾ| ಪ್ರಭಾಕರ ಶಿಶಿಲರು ರಚಿಸಿದ ಈ ನಾಟಕವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸುತ್ತಿದ್ದಾರೆ.
ನೀನಾಸಂ ಪದವೀಧರರು ಹಾಗೂ ಸ್ಥಳೀಯರು ಸೇರಿದಂತೆ 15 ಜನ ಕಲಾವಿದರು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.
ಮುಂದಿನ ವಾರ ಇದರ ಮೊದಲ ಪ್ರದರ್ಶನ ನಡೆದು ಮುಂದೆ ರಾಜ್ಯಾಂದ್ಯಂತ ಇದರ ಪ್ರದರ್ಶನ ನಡೆಯಲಿದೆ.

 
 
 
 
 
 
 
 
 
 
 

Leave a Reply