ತನ್ನ ವೈಫಲ್ಯ ಮರೆ ಮಾಚಲು ಕಾಂಗ್ರೆಸ್ ನಡೆಸಿದ ಸುಳ್ಳಿನ ಜಾತ್ರೆ ಈ ಪಾದಯಾತ್ರೆ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯ ಅನುಷ್ಠಾನದ ಬಗ್ಗೆ ಯಾವುದೇ ಆಸಕ್ತಿ ವಹಿಸದೇ ವೃಥಾ ಕಾಲಹರಣ ಮಾಡಿರುವ ಕಾಂಗ್ರೆಸ್ ಕೇವಲ ತನ್ನ ವೈಫಲ್ಯವನ್ನು ಮರೆಮಾಚಲು ನಡೆಸಿರುವುದು ಮಾತ್ರ ಸುಳ್ಳಿನ ಜಾತ್ರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾಂಗ್ರೆಸ್ ಕೃಷ್ಣೆ ವಿಚಾರದಲ್ಲಿ ನಾಟಕೀಯ ಪಾದಯಾತ್ರೆ ನಡೆಸಿ ಉತ್ತರ ಕರ್ನಾಟಕದ ಜನತೆಗೆ ಮಂಕು ಬೂದಿ ಎರಚಿದನ್ನು ರಾಜ್ಯದ ಜನತೆ ಮರೆತಿಲ್ಲ. ಇದರ ಮುಂದುವರಿದ ಭಾಗವಾಗಿ ಇದೀಗ ಕಾವೇರಿ ನೀರಿಗೆ ಮೇಕೆದಾಟು ಹೆಸರಲ್ಲಿ ಕಾಂಗ್ರೆಸ್ ನಡೆಸಿರುವುದು ಸ್ವಯಂ ಹಿತಾಸಕ್ತಿಯ ರಾಜಕೀಯ ಮೇಲಾಟವಲ್ಲದೆ ಮತ್ತೇನಿಲ್ಲ.

ಕೋವಿಡ್ ಸೋಂಕಿನ ತೀವ್ರತೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೇ ಜನತೆಯ ಆರೋಗ್ಯದ ಹಿತವನ್ನು ನಿರ್ಲಕ್ಷಿಸಿ ಕೇವಲ ಮೋಜು ಮಸ್ತಿಯ ನಡುವೆ ತೂರಾಡುವಿಕೆಯೊಂದಿಗೆ ನಡೆದ ಸುಳ್ಳಿನ ಜಾತ್ರೆಯ ಚಿತ್ರಣದಿಂದ ರಾಜ್ಯದ ಜನತೆಗೆ ದೊರೆತಿರುವುದು ಪುಕ್ಕಟೆ ಮನೋರಂಜನೆ ಮಾತ್ರ.

ರಾಜ್ಯದಲ್ಲಿ ಕೋವಿಡ್ ಸೋಂಕಿನ ತೀವ್ರತೆಯ ಸನ್ನಿವೇಶದಲ್ಲಿ ಕಾಂಗ್ರೆಸ್ ನಾಯಕರ ಸ್ವಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ರಾಜಕೀಯ ಉದ್ದೇಶದ ಪಾದಯಾತ್ರೆಗೆ ಉಚ್ಛ ನ್ಯಾಯಾಲಯ ಛೀಮಾರಿ ಹಾಕಿರುವ ಬೆನ್ನಲ್ಲೇ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಪಾದಯಾತ್ರೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕಾನೂನಾತ್ಮಕ ನಿರ್ದೇಶನವನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೊನೆಗೂ ಪಾದಯಾತ್ರೆ ರದ್ದಾಗಿದೆ.

ಕಾಂಗ್ರೆಸ್ ಕೇವಲ ಶಂಕುಸ್ಥಾಪನೆಗೆ ಸೀಮಿತಗೊಳಿಸಿದ್ದ ಅನೇಕ ಯೋಜನೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಜನಪರ ಆಡಳಿತವನ್ನು ನೀಡುತ್ತಿರುವ ಬಿಜೆಪಿ ಮಾತ್ರ ಮೇಕೆದಾಟು ಯೋಜನೆಯನ್ನು ಸಂಪೂರ್ಣಗೊಳಿಸುವ ಬದ್ಧತೆ ಮತ್ತು ಇಚ್ಛಾ ಶಕ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಪ್ರಕ್ರಿಯೆ ಹಾಗೂ ಇನ್ನಿತರ ಅಡೆತಡೆಗಳ ನಿವಾರಣೆಯ ಬಳಿಕ ಸದ್ರಿ ಯೋಜನೆಯ ಅನುಷ್ಠಾನವು ವೇಗ ಪಡೆಯಲಿರುವುದು ನಿಶ್ಚಿತ ಎಂದು ಕುಯಿಲಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದ ಕಾಂಗ್ರೆಸ್ ಸುಳ್ಳಿನ ಸರಮಾಲೆಯೊಂದಿಗೆ ನಡೆಸಿದ ಪಾದಯಾತ್ರೆಯು ತನ್ನ ತಪ್ಪನ್ನು ಮುಚ್ಚಿಡಲು ತಾನೇ ನಡೆಸಿದ ನಾಟಕ ಎಂಬುದು ಈಗ ಜಗಜ್ಜಾಹೀರಾಗಿದೆ. ರಾಜ್ಯ ಸರಕಾರದ ಕಾನೂನು ನಿಯಮಾವಳಿ, ಮುಖ್ಯ ಮಂತ್ರಿ ಮತ್ತು ಸಚಿವರ ಮನವಿಯನ್ನು ದಿಕ್ಕರಿಸಿ, ಸಂವಿಧಾನಕ್ಕೆ ಅಗೌರವ ತೋರುವ ರೀತಿಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಇತರರಿಗೆ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಸೋಂಕು ತಗಲಿದೆ ಎನ್ನಲಾಗಿದ್ದು, ಇದು ಕೊರೋನಾ ಪಸರಿಸುವ ಜಾತ್ರೆಯಾಗಿ ಪರಿಣಮಿಸಿರುವುದು ಶೋಚನೀಯ.

ಮೊಂಡು ಹಠವನ್ನು ಸಡಿಲಿಸಿ, ವಿವಿಧ ಕಾರಣಗಳನ್ನು ನೀಡಿ ಪಾದಯಾತ್ರೆಯನ್ನು ರದ್ದುಗೊಳಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಮಾತ್ರ ಮುಖಭಂಗ ಅನುಭವಿಸಿದ್ದು ವಾಸ್ತವವಾದರೂ, ಈ ಪ್ರಕ್ರಿಯೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಮೇಕೆದಾಟು ಯೋಜನೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿರುವ ತಮಿಳುನಾಡಿನ ಕಾಂಗ್ರೆಸ್ ಬೆಂಬಲಿತ ಸ್ಟಾಲಿನ್ ಸರಕಾರದ ಮನ ಒಲಿಸುವ ಗೋಜಿಗೆ ಹೋಗದೇ ಸುಮ್ಮನಿದ್ದ ಕಾಂಗ್ರೆಸ್ ರಾಜ್ಯದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸಿ ಕೇವಲ ರಾಜಕೀಯ ಅಸ್ತಿತ್ವಕ್ಕಾಗಿಯೇ ಈ ಪಾದಯಾತ್ರೆ ಪ್ರಹಸನವನ್ನು ನಡೆಸಿರುವುದು ಎಂಬ ಸತ್ಯವನ್ನು ಅರಿಯದಷ್ಟು ರಾಜ್ಯದ ಜನತೆ ಮೂರ್ಖರಲ್ಲ.

ಮೇಕೆದಾಟು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಅನಗತ್ಯ ಗೊಂದಲ ಸೃಷ್ಟಿಸಿ ಅರಾಜಕತೆ ಉಂಟುಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಸೂಕ್ತ ಸಂದರ್ಭದಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply