Janardhan Kodavoor/ Team KaravaliXpress
28.6 C
Udupi
Sunday, August 1, 2021

ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷ ಪರಿಹಾರಧನ ಚಕ್ ವಿತರಣೆ

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ದಿನಾಂಕ 21-11-2020 ರಂದು ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ – 2020 ಕಾರ್ಯಕ್ರಮದಲ್ಲಿ ಉಡುಪಿ ಮಲ್ಪೆ ಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ “ಸುವರ್ಣ ತ್ರಿಭುಜ” ಬೋಟ್ ನಲ್ಲಿದ್ದ 7 ಜನ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷದ ಪರಿಹಾರದ ಚೆಕ್ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ವಿವರಿಸಿದರು.

ಕಳೆದ 2018ರ ಡಿಸೆಂಬರ್ ತಿಂಗಳಲ್ಲಿ ಉಡುಪಿಯ ಮಲ್ಪೆ ಬಂದರಿನಿಂದ ಮಾಲಕರ ಸಹಿತ ಏಳು ಜನ ಮೀನುಗಾರರಿದ್ದ “ಸುವರ್ಣ ತ್ರಿಭುಜ” ಬೋಟ್ ಮರಳಿ ವಾಪಸ್ ಬಾರದೆ ನಾಪತ್ತೆಯಾಗಿತ್ತು. ಉನ್ನತಮಟ್ಟದಲ್ಲಿ ಪ್ರಯತ್ನಿಸಿ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲಾಗಿತ್ತು.

ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ 7 ಜನ ಮೀನುಗಾರರ ಕುಟುಂಬ ಅವರನ್ನೇ ಅವಲಂಬಿಸಿರುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಇವರ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ ರೂ. 10 ಲಕ್ಷ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಅವರು ಮಾನ್ಯ ಮುಖ್ಯಮಂತ್ರಿಯವರನ್ನು ವಿನಂತಿಸಿರುವಂತೆ ಈ ಪರಿಹಾರದ ಮೊತ್ತವನ್ನು ಬಿಡುಗಡೆ ಗೊಳಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮತ್ಸ್ಯ ಸಂಪದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿ ಮತ್ಸ್ಯಸಿರಿ, ಸಾಗರೋತ್ಪನ್ನ ಖಾದ್ಯಗಳ ಬಿಡುಗಡೆ ಮಾಡಿದರು.

ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್, ಶಾಸಕ ಕುಮಾರ್ ಬಂಗಾರಪ್ಪ, ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ  ರಾಜೇಂದ್ರ ಕುಮಾರ್ ಕಟಾರಿಯಾ, ನಿರ್ದೇಶಕ ರಾಮಾಚಾರ್ಯ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!