ತೆಂಕನಿಡಿಯೂರಿನಲ್ಲಿ ವಿಕಾಸ-೨೦೨೨ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

ತೆಂಕನಿಡಿಯೂರು: ತೆಂಕನಿಡಿಯೂರಿನ ಬಾಲ ಸಂಸ್ಕಾರ ಕೇಂದ್ರದವರು ಶ್ರೀ ಕಾಳಿಕಾಂಬಾ ಭಜನಾ ಸಂಘ (ರಿ.) ಮತ್ತು ಶ್ರೀ ದೇವಿ ಮಹಿಳಾ ಮಂಡಳಿ ಇವರ ಸಹಕಾರದಲ್ಲಿ ನಡೆಸುತ್ತಿರುವ ವಿಕಾಸ-೨೦೨೨ ಮಕ್ಕಳ ಬೇಸಿಗೆ ಶಿಬಿರವನ್ನು ಮಣಿಪಾಲ ಮಾಹೆಯ ಡಾ. ಪ್ರತಿಮ ಜಯಪ್ರಕಾಶ್ ಇವರು ಉದ್ಘಾಟಿಸಿದರು. ನಂತರ ಮಾತನಾಡಿದ ಡಾ. ಪ್ರತಿಮ ಜಯಪ್ರಕಾಶ್ ಇವರು “ಕೊರೊನಾ ವಿಪತ್ತಿನಿಂದ ತತ್ತರಿಸಿದ ನಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಇಂತಹ ಬೇಸಿಗೆ ಶಿಬಿರಗಳು ಅತೀ ಅಗತ್ಯವಾಗಿವೆ. ನಮ್ಮ ಆಲೋಚನೆ ಹಾಗೂ ಚಿಂತನೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ; ಹಾಗಾಗಿ ಧನಾತ್ಮಕ ಚಿಂತನೆಗಳನ್ನು ಮಾಡುತ್ತಿರಬೇಕು. ವಿದ್ಯಾರ್ಥಿ ಶಿಬಿರದ ಸದುಪಯೋಗವನ್ನು ಎಲ್ಲಾ ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು” ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಶ್ರೀ ಟಿ. ಕೃಷ್ಣ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಶೀಲಾ ವಾದಿರಾಜ ಆಚಾರ್ಯ ಹಾಗೂ ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಶ್ರೀ ಪ್ರದೀಪ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಷ್ಮಾ ರಾಜೇಶ ಆಚಾರ್ಯ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀ ಪ್ರದೀಪ ಆಚಾರ್ಯ ಸ್ವಾಗತಿಸಿ ಶ್ರೀಮತಿ ಶಶಿಕಲಾ ಭಾಸ್ಕರ ಆಚಾರ್ಯ ವಂದಿಸಿದರು. ಶ್ರೀ ಉದಯ ಜೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮೇ 08 ರವರೆಗೆ ನಡೆಯುವ ಬೇಸಿಗೆ ಶಿಬಿರದಲ್ಲಿ 50 ಶಿಬಿರಾರ್ಥಿಗಳಿದ್ದು, ಚಿತ್ರಕಲೆ,ರಂಗ ತರಬೇತಿ, ಹಾಡು, ನೃತ್ಯ, ಕೊಲಾಜ್, ಗ್ರೀಟಿಂಗ್ ತಯಾರಿ, ಕ್ರಾಫ್ಟ್, ಫೇಸ್ ಪೈಂಟ್, ಸ್ಪರ್ಧಾತ್ಮಕ ಪರೀಕ್ಷೆಗಳು, ರಸಪ್ರಶ್ನೆ, ಮಾನವ ಸಂಪನ್ಮೂಲ ತರಬೇತಿ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನಡೆಯಲಿರುವುದು.

 
 
 
 
 
 
 
 
 
 
 

Leave a Reply