ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 74ನೇ ಸೇನಾ ದಿನಾಚರಣೆ

ಶಿರ್ವ: ಈ ದಿನಗಳಲ್ಲಿ ರಾಷ್ಟ್ರದ ಭದ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ಯುವ ನಾಗರಿಕನ ಕರ್ತವ್ಯವಾಗಿದೆ. ರಾಷ್ಟ್ರೀಯ ಆಸ್ತಿಗಳು, ನೈಸರ್ಗಿಕ ಸಂಪನ್ಮೂಲಗಳು, ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಇಂದು ನಾವು ಸಶಸ್ತ್ರ ಪಡೆಗಳನ್ನು ಹೆಚ್ಚಿಸಬೇಕಾಗಿದೆ.

ಸೇನೆ ತನ್ನ ನೆಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಪ್ರಜೆಗಳು ಮತ್ತು ಸರ್ಕಾರ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿ ರಾಷ್ಟ್ರದ ಪ್ರಗತಿಗೆ ಕೈಜೋಡಿಸಬೇಕಾಗಿರುವುದು ಇಂದು ಅತಿ ಅಗತ್ಯವಾಗಿದೆ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್.ಸಿ.ಸಿ ಭೂಯುವ ಸೇನಾ ದಳದಿಂದ ಏರ್ಪಡಿಸಿದ 74ನೇ ಸೇನಾದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಕೆಮುಂಡೆಲ್ ನ ಆಧ್ಯಾ ಫೌಂಡೇಶನ್ ಸೀನಿಯರ್ ಡೈರೆಕ್ಟರ್ ರಾಕೇಶ್ ಅಜಿಲ ಮಾತನಾಡಿದರು.

ಯುವಕರಲ್ಲಿ ದೇಶಭಕ್ತಿ,ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವ ಗುಣಗಳನ್ನು ಹೆಚ್ಚಿಸುವಲ್ಲಿ ಎನ್.ಸಿ.ಸಿ ಸಹಾಯಕಾರಿಯಾಗುತ್ತದೆ.ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಪಡೆದು ಇತರರಿಗೆ ಮಾದರಿಯಾಗಬೇಕು ಹಾಗು ತಮ್ಮ ಅಮೂಲ್ಯ ಕೊಡುಗೆಯನ್ನು ಈ ದೇಶಕ್ಕೆ ನೀಡಬೇಕೆಂದು ಕಿವಿಮಾತು ಹೇಳಿದರು.

ಮಾತೃಭೂಮಿಯ ರಕ್ಷಣೆ ಮತ್ತು ರಾಷ್ಟ್ರದ ಅಖಂಡತೆಯನ್ನು ಕಾಪಾಡಲು ಎಲ್ಲವನ್ನೂ ತ್ಯಜಿಸಿ, ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ವೀರ ಯೋಧರಿಗೆ ನಮನಗಳನ್ನು ಸಲ್ಲಿಸುತ್ತಾ ಹಾಗೆ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸಿದ ಸೇನೆಯ ವೀರ ಸೈನಿಕರನ್ನು ಗೌರವಿಸ ಬೇಕಾಗಿರೋದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು. 

ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ಕ್ಯಾಡೆಟ್ ರಿಯಾ ಸೆರೆನಾ ಡಿಸೋಜಾ ವಿವರಿಸಿದರು.ಕಂಪನಿ ಸರ್ಜೆಂಟ್ ಕ್ವಾರ್ಟರ್ ಮಾಸ್ಟರ್ ಮೋಹಿತ ಎನ್ ಸಾಲಿಯಾನ್ ದೇಶಭಕ್ತಿ ಗೀತೆ ವನ್ನು ಹಾಡಿ ನೆರೆದವರನ್ನು ಪ್ರೇರೇಪಿಸಿದರು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಅಧ್ಯಾಪಕ ವೃಂದ,ಆಡಳಿತ ಸಿಬ್ಬಂದಿ, ಎಲ್ಲಾ ಕ್ಯಾಡೆಟ್ ಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಲಾನ್ಸ್ ಕಾರ್ಪೋರಲ್ ಧೀರಜ್ ಆಚಾರ್ಯ, ಕ್ಯಾಡೆಟ್ ಅನುಪ್ ನಾಯಕ್, ದೀಪಕ್ ಮತ್ತಿತರರು ಸಹಕರಿಸಿದರು. ಕೆಡೆಟ್ ನವ್ಯ ಮತ್ತು ಬಳಗ ಪ್ರಾರ್ಥಿಸಿದರು.ಸಾರ್ಜೆಂಟ್ ನಿವೇದಿತಾ ರೆಬೆಲ್ಲೋ ಎಲ್ಲರನ್ನು ಸ್ವಾಗತಿಸಿ,ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ ವಂದಿಸಿ, ಕ್ಯಾಡೆಟ್ ಎಲ್ರುಷಾ ಮಿಲಿನಾ ಡೇಸ ಕಾರ್ಯಕ್ರಮವನ್ನು ಸಂಯೋಜಿಸಿದರು. 

 
 
 
 
 
 
 
 
 
 
 

Leave a Reply