ಅಂದಿನ ಕಾಂಗ್ರೆಸ್ಸಿಗೂ ಇಂದಿನ ನಕಲಿ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ: ಕುಯಿಲಾಡಿ ಸುರೇಶ್ ನಾಯಕ್

ಮಹಾತ್ಮಾ ಗಾಂಧೀಜಿ ಹಾಗೂ ಮಹಾನ್ ರಾಷ್ಟ್ರ ಭಕ್ತರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶವಾಸಿಗಳ ಜೊತೆಗೆ ಬೆಂಬಲಿಸಿದ ಅಂದಿನ ರಾಜಕೀಯ ರಹಿತ ಮೂಲ ಕಾಂಗ್ರೆಸ್ಸಿಗೂ ಇಂದಿನ ನಕಲಿ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ವಿರುದ್ಧ ಅಪಪ್ರಚಾರದ ಗೀಳಿನಿಂದ ಕಾಂಗ್ರೆಸ್ ಅಸಂಬದ್ಧ ಹೇಳಿಕೆಯಲ್ಲಿ ತೊಡಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಅಸಂಖ್ಯಾತ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿಶ್ರಮ, ತ್ಯಾಗ ಹಾಗೂ ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯಾ‌ನಂತರ ಕಾಂಗ್ರೆಸ್ಸ್ ಪಕ್ಷವನ್ನು ಬರ್ಕಾಸ್ತುಗೊಳಿಸಬೇಕು ಎಂದು ಮಹಾತ್ಮಾ ಗಾಂಧೀಜಿಯವರು ತಾಕೀತು ಮಾಡಿದ್ದರು. ಆದರೆ ಅಧಿಕಾರದ ಲಾಲಸೆಯಿಂದ ಗಾಂಧೀಜಿ ಇಚ್ಛೆಗೆ ತಿಲಾಂಜಲಿಯನ್ನಿತ್ತು ದುರುದ್ದೇಶಪೂರ್ವಕವಾಗಿ ಅದೇ ಹೆಸರಿನಲ್ಲಿ ಪಕ್ಷವನ್ನು ಮುಂದುವರಿಸಿಕೊಂಡು ಬಂದು ಕೇವಲ ನಕಲಿ ಗಾಂಧಿ ಪರಿವಾರದ ಹಿತಕ್ಕಾಗಿ ದೇಶ ಹಿತವನ್ನು ಮುಡಿಪಾಗಿಟ್ಟು ಸುದೀರ್ಘ ಅವಧಿಗೆ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ದುರಾಡಳಿತ ನಡೆಸಿರುವುದು ಇಂದಿನ ನಕಲಿ ಕಾಂಗ್ರೆಸ್ಸಿನ ನೈಜ ಕರಾಳ ಇತಿಹಾಸ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ‌ ಕರೆಯಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಐತಿಹಾಸಿಕ‌ ಕ್ಷಣಗಳನ್ನು ದೇಶವಾಸಿಗಳು ಆಗಸ್ಟ್ 13ರ ಮುಂಜಾನೆಯಿಂದ ಆಗಸ್ಟ್ 15ರ ಸಂಜೆಯವರೆಗೆ ಪ್ರತೀ‌ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸುವ ‘ಹರ್ ಘರ್ ತಿರಂಗಾ’ ಅಭಿಯಾನದ ಮೂಲಕ ಸಂಭ್ರಮಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆಯಂತೆ ರಾಷ್ಟ್ರಾದ್ಯಂತ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅಭಿಯಾನವನ್ನು ಯಶಸ್ವಿಗೊಳಿಸಲು, ಜಿಲ್ಲೆಯಾದ್ಯಂತ ‘ಹರ್ ಘರ್ ತಿರಂಗಾ’ ಹಾಗೂ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ರಾಷ್ಟ್ರ ಧ್ವಜದ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಎಳ್ಳಷ್ಟೂ ಗೌರವವಿಲ್ಲ.‌ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರ ಧ್ವಜದ ಬಣ್ಣ ಯಾವುದೆಂದು ತಿಳಿದಿದ್ದರೂ ಮಾಜಿ ಸಿ.ಎಂ. ಸಿದ್ಧರಾಮಯ್ಯ ಉದ್ದೇಶಪೂರ್ವಕವಾಗಿಯೇ ರಾಷ್ಟ್ರ ಧ್ವಜದ ಬಣ್ಣ ಕೆಂಪು, ಬಿಳಿ, ಹಸಿರು ಎನ್ನುತ್ತಾ ತನ್ನ ಆಶಾಡಭೂತಿತನದ ಪರಮಾವಧಿಯನ್ನು ಪ್ರದರ್ಶಿಸಿ, ತ್ರಿವರ್ಣ ಧ್ವಜವನ್ನು ಅವಮಾನಿಸಿರುವುದು ಖಂಡನೀಯ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಅದ್ದೂರಿಯಾಗಿ ನಡೆಯಲಿರುವ ‘ಹರ್ ಘರ್ ತಿರಂಗಾ’ ಅಭಿಯಾನದಿಂದ ಕಂಗೆಟ್ಟಿರುವ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ದುರ್ವರ್ತನೆ ಅವರ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.

ಬಿಜೆಪಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿಲ್ಲ ಎನ್ನುವ ಸಿದ್ಧರಾಮಯ್ಯ ಮೊದಲು ತನ್ನ ಕುಟುಂಬದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹುತಾತ್ಮರಾದವರ ಬಗ್ಗೆ ಮಾಹಿತಿ ನೀಡಲಿ. ಇತ್ತ ಕಾಂಗ್ರೆಸ್ ನಾಯಕರೂ ತಾವೇ ಸ್ವತಃ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ದೊರಕಿಸಿಕೊಟ್ಟಂತೆ ವರ್ತಿಸುತ್ತಾ ದೇಶದ ಅಸ್ಮಿತೆಯಾಗಿರುವ ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ ವಿಚಾರದಲ್ಲೂ ರಾಜಕೀಯ ಬೇಳೆ ಬೇಯಿಸಲು ಹರಸಾಹಸಪಡುತ್ತಿರುವುದು ಶೋಚನೀಯ. ರಾಜ್ಯದ ಜನತೆ ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿನ‌ ದೇಶ ವಿರೋಧಿ ಮನಸ್ಥಿತಿಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply