ಖ್ಯಾತ ಸ್ಯಾಕ್ಸೋಫೋನ್ ವಾದಕಿ ಸುಜಾತಾ ದೇವಾಡಿಗ ನೇಣಿಗೆ ಶರಣು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಮಹಿಳಾ ಸ್ಯಾಕ್ರೋಫೋನ್ ವಾದಕಿ ಸುಜಾತಾ ದೇವಾಡಿಗ (31)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ( ಮೇ 17) ಸಂಜೆ ನಡೆದಿದೆ. ಮಂಗಳೂರಿನ ಹೊರವಲಯದ ಶಕ್ತಿನಗರದ ಎಸ್.ಎಸ್.ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಅವರು ಅಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಮಂಗಳವಾರ ಕಾರ್ಯಕ್ರಮ ನೀಡಲು ತೆರಳಿದ ಅವರು ಮಧ್ಯಾಹ್ನ ಅದನ್ನು ಮುಗಿಸಿ ಮನೆಗೆ ವಾಪಸ್ಸು ಬಂದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮನೆಯವರೊಡನೆ ತಲೆನೋವು ಎಂದು ಹೇಳಿ ತನ್ನ ಕೊಠಡಿಗೆ ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಫ್ಯಾನ್ ನ ಕುಣಿಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

ರಾತ್ರಿ 8.30 ಆದರೂ ಕೋಣೆಯಿಂದ ಹೊರಗೆ ಬಾರದಿದ್ದುದನ್ನು ಕಂಡು ಪತಿ ನಿತಿನ್ ಕಿಟಕಿಯಿಂದ ನೋಡಿದಾಗ ಸುಜಾತರವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

ಮೂಲ್ಕಿ ಎಸ್ ವಿಟಿ ಬಳಿಯ ನಿವಾಸಿಯಾಗಿದ್ದ ಅವರು ವಿವಾಹದ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದರು. ಉತ್ತಮ ಸ್ಯಾಕ್ಸೋಪೋನ್‌ ಕಲಾವಿದೆಯಾಗಿದ್ದ ಅವರಿಗೆ ಕೊರೊನಾ ಲಾಕ್‌ ಡೌನ್‌ ಬಳಿಕ ಕಾರ್ಯಕ್ರಮಗಳು ಹೆಚ್ಚು ಸಿಗುತ್ತಿರಲಿಲ್ಲ. ಹೀಗಾಗಿ ದುಡಿಮೆ ಕಡಿಮೆಯಾಗಿ ಇದು ಮನೆಯ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿತ್ತು. ಇದು ಅವರನ್ನು ಮಾನಸಿಕವಾಗಿ ಖಿನ್ನರನ್ನಾಗಿಸಿತ್ತು ಎಂದು ಹೇಳಲಾಗುತ್ತಿದೆ. ಹಾಗಿದ್ದೂ ಸಾವಿಗೆ ನಿಖರ ಕಾರಣ ಪೊಲೀಸ್‌ ತನಿಖೆಯಿಂದ ಹೊರ ಬರಬೇಕಿದೆ.

 
 
 
 
 
 
 
 
 
 
 

Leave a Reply