ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ :ಜೂನ್.21 ರಿಂದ ಮದುವೆ ಮಂಟಪ, ಮಾಲ್, ರೆಸ್ಟೋರೆಂಟ್ ಓಪನ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳಲಿದೆ. ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು ,ಶಾಪಿಂಗ್ ಕಾಂಪ್ಲೆಕ್ಸ್’ನ್ನು ಜೂನ್.21 ರಿಂದ ಪುನರಾರಂಭಿಸಬಹುದು. ಆದರೆ ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. 

ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಅನ್’ಲಾಕ್ 2 ಹಂತದಲ್ಲಿ ರೆಸ್ಟೋರೆಂಟ್, ಮಾಲ್, ಕಟಿಂಗ್ ಶಾಪ್, ಸಲೂನ್, ಸ್ಪಾ, ಮದುವೆ ಮಂಟಪಗಳನ್ನು ತೆರೆಯಬಹುದು. ಆದರೆ, ಶೇ.50ರಷ್ಟು ಜನರು ಸೇರುವಂತೆ ಸೂಚಿಸಬೇಕು. ಅಲ್ಲದೆ, ಅನ್ಲಾಕ್ 2.0 ಮತ್ತು 3.0 ರ ನಡುವೆ ಎರಡು ವಾರಗಳ ಅಂತರ ಇರುವಂತೆಯೂ ಸೂಚಿಸಿದೆ. ಈ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದ್ದು, ಎರಡರ ನಡುವೆ 2 ವಾರಗಳ ಅಂತರ ಇರಬೇಕೆಂದು ಸರ್ಕಾರಕ್ಕೆ ತಿಳಿಸಿದೆ. ಅನ್ಲಾಕ್ 3.0ಗೂ ಮೊದಲೂ ಆಕ್ಸಿಜನ್ ಹಾಸಿಗೆಗಳು ಶೇ.60ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳನ್ನು ಪರಿಶೀಲನೆ ನಡೆಸಬೇಕೆಂದು ತಿಳಿಸಿದೆ. 

ಜೂನ್ ಕೊನೆಯವರೆಗೂ ನೈಟ್ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ರಾಲಿ, ಧರಣಿ, ಜಾತ್ರೆ ಹಾಗೂ ಹಬ್ಬಗಳ ಮೇಲೆ ನಿರ್ಬಂಧ ಹೇರಬೇಕು. ಜೂನ್.21ರಿಂದ 2ನೇ ಹಂತದ ಅನ್’ಲಾಕ್ ಆರಂಭವಾಗಲಿದ್ದು, ಜುಲೈ.5 ರಿಂದ ಮೂರನೇ ಹಂತದ ಅನ್’ಲಾಕ್ ಆರಂಭ ವಾಗಲಿದೆ. ಪರಿಸ್ಥಿತಿಗೆ ಅನುಸರಿಸಿ ಜನರ ಓಡಾಟಕ್ಕೆ ಅವಕಾಶ ನೀಡಬೇಕು. ಅನ್’ಲಾಕ್ 3ನೇ ಹಂತದಲ್ಲಿ ಜಿಮ್, ಯೋಗಾ ಕೇಂದ್ರ, ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರಗಳು, ಸ್ಫೋರ್ಟ್ಸ್ ಕ್ಲಬ್, ಕ್ಲಬ್ ಹೌಸ್, ಸಾರ್ವಜನಿಕ ಶೌಚಾಲಯ ಆರಂಭಿಸಬೇಕು. ನೈಟ್ ಕರ್ಫ್ಯೂ, ಶಾಲಾ ಕಾಲೇಜುಗಳು ಪುನರಾರಂಭ ಕುರಿತು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ. 

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿಎನ್.ಮಂಜುನಾಥ್ ಮಾತನಾಡಿ, ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸದೇ ಹೋದಲ್ಲಿ ಮತ್ತೆ ಹಿಂದಿನ ಪರಿಸ್ಥಿತಿ ಮರುಕಳಿಸಲಿದೆ. ಮಾಲ್, ಶಾಪಿಂಗ್ ಮಾಲ್ ಹಾಗೂ ಮಾರುಕಟ್ಟೆಗಳನ್ನು ತೆರೆಯುವ ಕುರಿತು ಮರುಚಿಂತನೆ ನಡೆಸಬೇಕು.ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವುದು ಕಂಡು ಬರುತ್ತಿದ್ದರೆ ಮಾತ್ರ ಇವುಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply