ತೀರ್ಪು ಒಪ್ಪಿಕೊಂಡಿದ್ದೇವೆ~ ಡಿ.ಕೆ.ಶಿವಕುಮಾರ್

​​ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರ ಕೊಟ್ಟ ತೀರ್ಪನ್ನು ನಾವು ಗೌರವಯುತವಾಗಿ ಒಪ್ಪುತ್ತೇವೆ.  ಪಕ್ಷದ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ನಾನು ಹೊರುತ್ತೇನೆಯೇ ಹೊರತು,  ಬೇರೆಯವರ ಮೇಲೆ ಹಾಕುವುದಿಲ್ಲ.  ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.​ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಬಂದಿದೆ. ಮತದಾರರು ಕೊಟ್ಟ ತೀರ್ಪನ್ನು ನಾವು ಬಹಳ ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಮತದಾರರ ತೀರ್ಪು ಪ್ರಶ್ನೆ ಮಾಡುವುದಿಲ್ಲ. ಈ ಫಲಿತಾಂಶ ಹೇಗಾಯಿತು, ಯಾಕಾಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಕೂತು ಚರ್ಚೆ ಮಾಡುತ್ತೇವೆ. ಎಲ್ಲಿ ಏನೇನು ಸರಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತೇವೆ.

ಈ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ನಾನಾಗಲಿ, ಪಕ್ಷವಾಗಲಿ ಹಿಂಜರಿಯುವ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಶೇ.15ರಷ್ಟು ಅನುಕೂಲವಾಗುವ ಅನುಭವ ನಮಗಿದೆ.​ ನಾವೂ ಹಿಂದೆ ಬಳ್ಳಾರಿ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಯಲ್ಲಿ ಗೆದ್ದರೂ ನಂತರ ಚುನಾವಣೆಯಲ್ಲಿ ಸೋತಿದ್ದೆವು. ಹೀಗಾಗಿ ಯಾರೂ ಬೇಸರವಾಗುವುದು ಬೇಡ ಅಂತಾ ಹೇಳಲು ಬಯಸುತ್ತೇನೆ. ಈ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕಾರ್ಯಕರ್ತರು ಹಾಗೂ ರಾಜ್ಯದ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದಾರೆ.

ನಮ್ಮ ರಾಜರಾಜೇಶ್ವರಿ ನಗರದಲ್ಲಿ ಇಷ್ಟು ಅಂತರ ನಿರೀಕ್ಷೆ ಮಾಡಿರಲಿಲ್ಲ. ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿಂದ ಕೆಲವು ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಬರಬಹುದು ಎಂದು ಭಾವಿಸಿದ್ದೆ. ಭವಿಷ್ಯದ ಲೆಕ್ಕಾಚಾರದೊಂದಿಗೆ ನಾವು ನಮ್ಮ ಅಭ್ಯರ್ಥಿಯನ್ನು ಸೂಚಿಸಿದ್ದೆವು. ಒಳ್ಳೆಯ ಅಭ್ಯರ್ಥಿಗೆ ಜನ ಕೂಡ ಸಹಕಾರ ನೀಡಿದ್ದಾರೆ. ಕುಸುಮಾ ಅವರು ಉತ್ತಮ ಹೋರಾಟ ಮಾಡಿದ್ದಾರೆ.

ನಮಗೆ ಸಿಕ್ಕಿರುವ ಮತ ಕೇವಲ ನಮ್ಮ ಪಕ್ಷದ ಮತ ಮಾತ್ರ ಅಲ್ಲ. ಬೇರೆ ಪಕ್ಷದ ಮತದಾರರು ಮತ ಹಾಕಿದ್ದಾರೆ. ಅವರು ಕೊಟ್ಟ ತೀರ್ಪನ್ನು ನಾವು ಒಪ್ಪುತ್ತೇವೆ.​ ಶಿರಾದಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಅಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಮ್ಮ ಪಕ್ಷದ ಎಲ್ಲ ಮುಖಂಡರು ನಿರೀಕ್ಷಿಸಿದ್ದೆವು. ಅಲ್ಲಿ ಬಿಜೆಪಿಗೆ ಹೊಸದಾಗಿ ಅಷ್ಟು ಮತ ಹೋಗಿರುವುದು ಅಚ್ಚರಿ ತಂದಿದೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಹೇಗೆ ಪಡೆಯುವುದು, ಕ್ಷೇತ್ರಕ್ಕಾಗಿ ಹೇಗೆ ದುಡಿಯಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದರು.​​

 
 
 
 
 
 
 
 
 
 
 

Leave a Reply