ರೋಹಿಣಿ ಸಿಂಧೂರಿ ಕಿರುಕುಳಕ್ಕೆ ಐಎಎಸ್​ ಹುದ್ದೆಗೇ ರಾಜೀನಾಮೆ ಕೊಟ್ಟ ಐಎಎಸ್​ ಅಧಿಕಾರಿ ಶಿಲ್ಪಾನಾಗ್​

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಜನಪತ್ರಿನಿಧಿಗಳ ಸಮರ ತಾರಕಕ್ಕೇರಿದ ಬೆನ್ನಲ್ಲೇ ಮೈಸೂರಿನಲ್ಲಿ ಮತ್ತೊಂದು ಮಹತ್ವ ಬೆಳವಣಿಗೆ ನಡೆದಿದೆ. ಜಿಲ್ಲೆಯಲ್ಲಿ ಭೂ ಅಕ್ರಮದ ವಾಸನೆ ಬಡಿಯುತ್ತಿದ್ದು, ಈ ಕಡತವನ್ನ ಜಿಲ್ಲಾಧಿಕಾರಿ ಕೈಗೆತ್ತಿಕೊಂಡದ್ದೇ ಈ ರಾದ್ದಾಂತಕ್ಕೆ ಕಾರಣ ಎಂಬ ಮಾತು ಕೇಳಿಬಂದಿತ್ತು. ಇಷ್ಟೆಲ್ಲ ಬೆಳವಣಿಗೆ ನಡುವೆ ಮಹಾನಗರ ಪಾಲಿಕೆ ಆಯುಕ್ತೆ, ಐಎಎಸ್​ ಅಧಿಕಾರಿ ಶಿಲ್ಪಾನಾಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ಮೂಲಕ ಸಿಂಧೂರಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಅತ್ಯಂತ ಜನಾನುರಾಗಿ ಅಧಿಕಾರಿ ಎನಿಸಿಕೊಂಡಿದ್ದ ಶಿಲ್ಪಾನಾಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಬಗ್ಗೆ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ತುಂಬಾ ನೋವಿನಲ್ಲೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ನಿರಂತರ ಕಿರುಕುಳದಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. 

ನಗರ ಪಾಲಿಕೆ ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲವೆಂದು ಬಿಂಬಿಸುವ ಕೆಲಸ ಜಿಲ್ಲಾಧಿಕಾರಿಯಿಂದ ನಡೆಯುತ್ತಿದೆ. ದಿನನಿತ್ಯ ವರದಿಗಳನ್ನು ಪಡೆದು ಅಧಿಕಾರಿಗಳಿಗೆ ಹಿಂಸೆ ನೀಡಲಾಗುತ್ತಿದೆ. ಯಾವುದೇ ಜಿಲ್ಲೆಗೆ ಇಂಥ ರೀತಿಯ ಜಿಲ್ಲಾಧಿಕಾರಿ ಸಿಗಬಾರದು ಎಂದು ಬೇಸರ ಹೊರಹಾಕಿದರು.

ವೈಯಕ್ತಿಕ ಧ್ವೇಷ ಇದ್ದರೆ ತೀರಿಸಿಕೊಳ್ಳಲಲಿ. ಮೈಸೂರು ನಗರದ ಜನತೆಗೆ ತೊಂದರೆ ಕೊಡುವುದು ಬೇಡ. ನನಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಉಸಿರು ಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಐಎಎಸ್ ಹುದ್ದೆಗೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಿಲ್ಪಾನಾಗ್​ ಭಾವುಕರಾದರು.

ವೈಯಕ್ತಿಕ ಧ್ವೇಷಕ್ಕೆ ಮೈಸೂರನ್ನು ಬಲಿ ಪಡೆಯಬೇಡಿ. ನಗರದಲ್ಲಿ ಕೋವಿಡ್ ಮುಕ್ತಗೊಳಿಸಲು ಉತ್ತಮ ಕೆಲಸ ಕಾರ್ಯ ನಡೆಯುತ್ತಿದೆ. ವಾರ್ಡ್ ಲೆವಲ್ ಕಮಿಟಿ ರಚಿಸಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಸಿಎಸ್ ಆರ್ ನಿಧಿಯಡಿಯಲ್ಲಿಯೇ ನಾವು ಕೋವಿಡ್ ಮಿತ್ರಕ್ಕೆ 16 ಸಾವಿರ ಮೆಡಿಕಲ್ ಕಿಟ್ ಖರೀದಿಸಿದ್ದೇವೆ. ಅದಲ್ಲದೆ, ಮುಡಾ ಹಾಗೂ ನಗರ ಪಾಲಿಕೆಯ ಅನುದಾನವನ್ನುಕೂಡ ಔಷಧ ಖರೀದಿಗೆ ಬಳಕೆ ಮಾಡಿದ್ದೇವೆ. ನಮಗೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ನೆರವು ದೊರೆತ್ತಿಲ್ಲ ಎಂದರು.

ಅವರು ನನ್ನ ಮೇಲೆ ಹಠ, ಹಗೆತನ ಏತಕ್ಕೆ ಸಾಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಷ್ಟೊಂದು ತಾಳ್ಮೆ, ಸೌಮ್ಯವಾಗಿ ಇರುವ ನನಗೆ ಸಹಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಅಂದರೆ ಕಿರುಕುಳ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀನು, ಹೋಗು ಬಾ ಅಂತ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ಅಧಿಕಾರಿಗಳನ್ನು ಕೇವಲವಾಗಿ ಮಾತಾಡಿಸುತ್ತಿದ್ದಾರೆ. 

4.30 ರಿಂದ ರಾತ್ರಿ 7.30ವರೆಗೆ ಸಭೆ ನಡೆಸುತ್ತಾರೆ. ಯಾವುದೇ ಅಜಂಡಾ ಇಲ್ಲದೆ ಸಭೆ ಮಾಡುತ್ತಾರೆ. ನಾನೇ ಸುಪ್ರಿಂ ಅನ್ನೋ ರೀತಿಯಲ್ಲಿ ಮಾತನಾಡುತ್ತಾರೆ. ಯಾವ ರೀತಿ ಸೋಂಕು ಕಡಿಮೆ ಮಾಡಬೇಕು ಹಾಗೂ ಸಾವಿನ ಪ್ರಮಾಣ ತಡೆಯಬೇಕೆಂಬ ಕುರಿತು ಅವರು ಯೋಜನೆ ರೂಪಿಸುತ್ತಿಲ್ಲ. 
ಮೈಸೂರು ನಗರ ನನಗೆ ತುಂಬಾ ಇಷ್ಟ. ಆದರೆ, ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮದು ಕೂಡ ಪ್ರತ್ಯೇಕವಾದ ಸಂಸ್ಥೆ. ನಾನು ಕನ್ನಡದವಳಾದರೂ ಇಂಥದ್ದೇ ಜಾಗದಲ್ಲಿ ಪೋಸ್ಟಿಂಗ್ ಬೇಕೆಂದು ಎಲ್ಲೂ ಕೇಳಲಿಲ್ಲ ಎಂದು ಶಿಲ್ಪಾನಾಗ್​ ಹೇಳಿದರು.
 
 
 
 
 
 
 
 
 
 
 

Leave a Reply