ತೀವ್ರ ಸಂಕಷ್ಟದಲ್ಲಿದ್ದಾರೆ ಖಾಸಗಿ ಬಸ್ ಮಾಲೀಕರು; ಸರ್ಕಾರ ನೆರವಿಗೆ ಮುಂದಾಗಬೇಕು – ಖಾಸಗಿ ಬಸ್ ಮಾಲೀಕರ ಒಕ್ಕೂಟ

ಉಡುಪಿ: ಲಾಕ್ಡೌನ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ 6 ತಿಂಗಳ ತೆರಿಗೆ ರಿಯಾಯಿತಿ ನೀಡಬೇಕು ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಒತ್ತಾಯಿಸಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಿದ್ದಕ್ಕೆ ಪ್ರತಿಯಾಗಿ ಸರ್ಕಾರ ಕೆ ಎಸ್ ಆರ್ ಟಿ ಸಿಗೆ ಇದುವರೆಗೂ ರೂ 2,400 ಕೋಟಿ ಅನುದಾನ ನೀಡಿದೆ. ಖಾಸಗಿ ಬಸ್ ಗಳು ಕೂಡ ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಸುವವರಿಗೆ ರಿಯಾಯಿತಿ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಸಿಗುತ್ತಿಲ್ಲ. ಪರ್ಯಾಯವಾಗಿ 6 ತಿಂಗಳ ತೆರಿಗೆ ವಿನಾಯಿತಿ ನೀಡಿದರೆ ಅನುಕೂಲವಾಗಲಿದೆ ಎಂದರು.

ಬಸ್ ಮಾಲೀಕರಿಗೆ ಡೀಸೆಲ್ ಬೆಲೆ ಹೆಚ್ಚಳದಿಂದ ದೊಡ್ಡ ಆರ್ಥಿಕ ಹೊರ ಬಿದ್ದಿದೆ. ಲಾಕ್ಡೌನ್ ಹಾಗೂ ಬಸ್ ಗಳಲ್ಲಿ ಆಸನಗಳ ಸಾಮರ್ಥ್ಯದ ಶೇ 50ರಷ್ಟು ಸೀಟು ಮಾತ್ರ ಭರ್ತಿಗೆ ಅವಕಾಶ ಇರುವುದರಿಂದ ನಷ್ಟದ ಕಾರಣಕ್ಕೆ ಬಸ್ ಗಳು ರಸ್ತೆಗಿಳಿದಿಲ್ಲ. ನಿಯಮಗಳಂತೆ ಬಸ್ ಓಡಿಸಿದರೆ ಡೀಸೆಲ್ ವೆಚ್ಚವೂ ಸಿಗುವುದಿಲ್ಲ ಎಂದು ಸಮಸ್ಯೆ ತೋಡಿಕೊಂಡರು.ಬಸ್ ಓಡಿಸಬೇಕಾದರೆ ವಿಮಾ ಮೊತ್ತ, ದುರಸ್ತಿ ವೆಚ್ಚ ಸೇರಿದಂತೆ ಕನಿಷ್ಠ ರೂ 1 ಲಕ್ಷ ಅಗತ್ಯವಿದೆ. 

ಕೊರೋನಾ ಸೋಂಕಿನ ಭೀತಿಯಿಂದ ಸಾರ್ವಜನಿಕರು ಬಸ್ ಪ್ರಯಾಣಕ್ಕೆ ಹಿಂಜರಿಯುತ್ತಿದ್ದಾರೆ.ಬಸ್ ಮಾಲೀಕರ ಸಮಸ್ಯೆ ಬಗೆಹರಿಸುವ ಸಂಬಂಧ ಶೀಘ್ರ ಸಾರಿಗೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್ ಮಾಲೀಕರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಕುಯಿಲಾಡಿ ಸುರೇಶ್ ನಾಯಕ್ ಕೇಳಿಕೊಂಡರು.

 
 
 
 
 
 
 
 
 
 
 

Leave a Reply