ಬೆಂಗಳೂರು: ವಕೀಲರ ವೇಷದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದ ಬನಶಂಕರಿಯ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಇಬ್ಬರನ್ನು ಇಂದು ಸ್ಥಳ ಮಹಜರಿಗೆ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಖದೀಮರಿಗೆ ಗುಂಡೇಟು ಕೊಟ್ಟು ಹೆಡೆಮುರಿ ಕಟ್ಟಿದ್ದಾರೆ.
ಮಹೇಶ್, ನವೀನ್ ಗುಂಡೇಟು ತಿಂದ ಆರೋಪಿಗಳು. ಪಿಎಸ್ಐ ಚಂದನ್ ಕಾಳೆ, ಎಎಸ್ಐ ಲಕ್ಷ್ಮಣ್ ಚಾರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಂಧಿತ ಆರೋಪಿಗಳು ಲಕ್ಕಸಂದ್ರ ನಿವಾಸಿಯಾಗಿದ್ದ ಫೈನಾನ್ಸಿಯರ್ ಮದನ್ನನ್ನು ಜುಲೈ 2 ರಂದು ಬನಶಂಕರಿ ದೇವಾಲಯ ಮುಂದೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.
ಕೃತ್ಯ ಎಸಗಿ ಮೂರು ದಿನಗಳ ಬಳಿಕ ನಿನ್ನೆ ವಕೀಲರ ಡ್ರೆಸ್ನಲ್ಲಿ ನಗರದ 37ನೇ ಎಸಿಎಂಎಂ ನ್ಯಾಯಾಲಯ ಮುಂದೆ ಶರಣಾಗಿದ್ದರು.ಕೋವಿಡ್ ನಿಯಮಗಳಂತೆ ಕೋರ್ಟ್ ಪ್ರವೇಶಕ್ಕೆ ನಿಷೇಧ ಇರುವ ಹಿನ್ನೆಲೆ ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಿನ್ನೆ ವಿಚಾರಣೆಗೆ ಒಳಪಡಿಸಿ ಇಂದು ತಲಘಟ್ಟಪುರದ ತುರಹಳ್ಳಿ ಅರಣ್ಯದ ಬಳಿ ಬಿಸಾಡಿದ್ದ ಮಾರಕಾಸ್ತ್ರ ಜಪ್ತಿಮಾಡಿಕೊಳ್ಳಲು ಮಹೇಶ್ ಹಾಗೂ ನವೀನ್ ನನ್ನು ಕರೆದೊಯ್ಯಲಾಗಿತ್ತು.
ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಸಿದ್ದವಾಗಿದ್ದರು. ತಪ್ಪಿಸಿಕೊಳ್ಳದಂತೆ ಇನ್ಸ್ಪೆಕ್ಟರ್ ಸುದರ್ಶನ್ ಎಚ್ಚರಿಕೆ ಕೊಟ್ಟು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ವೇಳೆ ಆರೋಪಿಗಳ ಬಲಗಾಲಿಗೆ ಶೂಟ್ ಮಾಡಿ ಅವರನ್ನು ವಶಕ್ಕೆ ಪಡೆಯಲಾಗಿದೆ.