ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ

ಮೈಸೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ಹಾಗೂ ಸಾವಿಗೀಡಾಗುತ್ತಿರುವವ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮತ್ತು ಪ್ರವಾಹ ಪರಿಸ್ಥಿತಿಯ ಕಾರಣದಿಂದಾಗಿ ಈ ಬಾರಿ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿ ಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ಈ ವಿಷಯ ತಿಳಿಸಿದರು.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಆಗಮಿಸಿದ ಅವರು, ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಸರಳವಾಗಿ ದಸರಾವನ್ನು ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ ಯಾವ ರೀತಿ ಸರಳವಾಗಿ ಆಚರಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸಿಲ್ಲ, ಶೀಘ್ರದಲ್ಲೇ ದಸರಾ ಹೈಪವರ್ ಕಮಿಟಿಯ ಸಭೆ ಸೇರಿ, ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾಗಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಇದರಿಂದಾಗಿ ಅಂತರ್ಜಲ ಬತ್ತಿ ಹೋಗು ವುದು ತಪ್ಪಿದೆ. ವರುಣನ ಕೃಪೆಯಿಂದಾಗಿ ನಿರೀಕ್ಷೆಗೂ ಮೀರಿ ಒಳ್ಳೆ ಬೆಳೆಯನ್ನು ಕಾಣುತ್ತಿದ್ದೇವೆ, ಪ್ರತಿ ವರ್ಷ ವರುಣನ ಕೃಪೆ ಇದೇ ರೀತಿ ಮುಂದುವರಿಯಲಿ, ಜನ ಸಮೃದ್ಧಿಯಿಂದ ಇರುವಂತಹ ಕಾಲ ಬರಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ, ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತಿತರರು ಇದ್ದರು

 
 
 
 
 
 
 
 
 
 
 

Leave a Reply