ಮೈಸೂರಿನ ಅರಮನೆ ಒಳಾಂಗಣದಲ್ಲಿ ಚಿತ್ರೀಕರಣಕ್ಕೆ ಮತ್ತೆ ಗ್ರೀನ್ ಸಿಗ್ನಲ್

ಬೆಂಗಳೂರು : ಮೈಸೂರಿನ ಸುಪ್ರಸಿದ್ದ ಅರಮನೆಯ ಒಳಾಂಗಣ ಚಿತ್ರೀಕರಣಕ್ಕೆ ಈ ಹಿಂದೆ ಇದ್ದ ನಿಷೇಧವನ್ನು ರಾಜ್ಯಸರ್ಕಾರ ತೆರವುಗೊಳಿಸಿದೆ.

ಅರಮನೆ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಮತ್ತು ಐಎಎಸ್ ಅಧಿಕಾರಿ ಪುತ್ರನ ಪ್ರೀ – ವೆಡ್ಡಿಂಗ್ ಫೋಟೋ ಶೂಟ್ ಪ್ರಕರಣದಲ್ಲಿ ಯಾವುದೇ ಲೋಪವಿಲ್ಲದ ಕಾರಣ ಪ್ರಕರಣ ಕೈಬಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಅರಮನೆಯ ಒಳಾಂಗಣದಲ್ಲಿ ಫ್ಲ್ಯಾಶ್ ಇಲ್ಲದೇ ಛಾಯಾ ಚಿತ್ರ ತೆಗೆಯಲು ಮತ್ತು ವಿಡಿಯೋ ಚಿತ್ರೀಕರಣಕ್ಕೆ ಸಚಿವ ಸಂಪುಟ ಓಕೆ ಎಂದಿದ್ದು, ಇತರೆ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅರಮನೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಅರಮನೆ ಆಡಳಿತ ಮಂಡಳಿಯು, ಸರಕಾರ ಮತ್ತು ಪಾರಂಪರಿಕ ನಿಯಮಗಳಿಗೆ ಅನುಸಾರವಾಗಿ ಕಿತ್ತು ಹೋಗಿದ್ದ ಅರಮನೆ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಮಾಡುವ ಕಾಮಗಾರಿಯನ್ನು ಖ್ಯಾತ ಗಂಜೀಫಾ ಕಲಾವಿದ ರಘುಪತಿ ಭಟ್ ಗೆ ನೀಡಲಾಗಿತ್ತು. ಈ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

2015ರಲ್ಲಿ ಐಎಎಸ್ ಅಧಿಕಾರಿ ನಂದಕುಮಾರ್ ರ ಪುತ್ರನ ಪ್ರೀ- ವೆಡ್ಡಿಂಗ್ ಫೋಟೋ ಶೂಟ್ ಅನ್ನು ಅರಮನೆಯ ಒಳಾಂಗಣದಲ್ಲಿ ನಡೆಸಿದ ವಿಡಿಯೋ ಸಾಮಾಜಿಕ ಜಲ ತಾಣದಲ್ಲಿ ವೈರಲ್ ಆಗಿತ್ತು. ಸರಕಾರ ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇಳಿತ್ತು. ಈಗ ಇವೆರಡೂ ಪ್ರಕರಣಗಳನ್ನು ಸಚಿವ ಸಂಪುಟ ಕೈಬಿಡಲು ತೀರ್ಮಾನಿಸಿದೆ.

 
 
 
 
 
 
 
 
 

Leave a Reply