ಇಂದಿನಿಂದ ಕಾಂತಾರ ಸಿನಿಮಾದ ಅಬ್ಬರ ಪ್ರಾರಂಭ!

ಕರಾವಳಿಯ ಸೊಗಡು, ಕಂಬಳದ ಓಟ ಹಾಗೂ ಸಿನಿಮಾದ ಮೇಕಿಂಗ್ ನಿಂದಲೇ ಭಾರೀ ಸದ್ದು ಮಾಡುತ್ತಿರುವ ಸಿನಿಮಾವೇ ಕಾಂತಾರ. ಇನ್ನೇನು ಸಿನಿ ರಸಿಕರ ಅಂಗಳಕ್ಕೆ ಸೆ.30 ರಂದು ದಾಪುಗಾಲು ಇಡಲು ಸಜ್ಜಾಗಿದೆ. ಈ ಸಿನಿಮಾದ ಟ್ರೈಲರ್, ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಬಗ್ಗೆ ಇದ್ದ ಕುತೂಹಲ ಇಮ್ಮಡಿಯಾಗಿರುವುದಂತೂ ಸತ್ಯ.

ಈ ಸಿನಿಮಾದ ಟ್ರೈಲರ್ ವೀಕ್ಷಿಸಿದಾಗ ಖಂಡಿತಾವಾಗಲೂ ಈ ಸಿನಿಮಾ ನಾಯಕ ಹಾಗೂ ವಿಲನ್ ಮಧ್ಯೆ ಮಾತ್ರ ನಡೆಯುವ ಕಥೆ ಅಲ್ಲ, ಇನ್ನೂ ಸಾಕಷ್ಟು ಅಂಶಗಳು, ದೈವದ ಕುತೂಹಲ, ಕಾಡಿನ ರೋಚಕತೆ ಇನ್ನೂ ಹಲವು ವಿಷಯಗಳು ಅಡಕವಾದಂತೆ ಕಾಣುತ್ತದೆ. ಇದೆಲ್ಲದುರ ಜೊತೆಗೆ ಎಲ್ಲರ ಮನಸ್ಸಲ್ಲಿ ಮೂಡುವ ಒಂದು ಕೌತಕವೇ ಈ ಸಿನಿಮಾದ ಹೆಸರು. ಈ ಸಿನಿಮಾ ಹೆಸರೇ ಒಂದು ರೀತಿಯ ಕುತೂಹಲ ಹುಟ್ಟಿಸುತ್ತಿದೆ. ಹಾಗಿದ್ದರೆ ‘ಕಾಂತಾರ’ ಎಂದರೆ ಅರ್ಥವೇನು? ಈ ಹೆಸರನ್ನೇ ಸಿನಿಮಾಕ್ಕೆ ಇಡುವಂತೆ ಸಲಹೆ ನೀಡಿದ್ದು ಯಾರು? 

ಕಾಂತ ಎಂದರೆ ಪತಿ ಅಥವಾ ಪ್ರಿಯಕರ ಎಂಬ ಅರ್ಥವಿದೆ. ಕರಾವಳಿ ಭಾಗದಲ್ಲಿ ‘ಕಂಡಿತಾ’ ಎಂಬುದಕ್ಕೆ ‘ಕಾಂತಾ’ ಎಂದು ಹೇಳುತ್ತಾರೆ. ಆದರೆ ‘ಕಾಂತಾರ’ ಸಿನಿಮಾದ ಹೆಸರಿಗೂ ಇದಕ್ಕೂ ಸಂಬಂಧವಿಲ್ಲ. ಇಲ್ಲಿ ಕಾಂತಾರ ಎಂಬ ಶಬ್ದಕ್ಕೆ ರೋಚಕ ಅರ್ಥವಿದೆ. ಹೌದು ‘ಕಾಂತಾರ’ ಎಂದರೆ ಕಾಡು ಅದೂ ಕೇವಲ ಕಾಡಲ್ಲ ನಿಗೂಢಗಳನ್ನು ಒಳಗೊಂಡಿರುವ ಕಾಡು ಎಂದು. ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ‘ಮಿಸ್ಟೀರಿಯಸ್ ಫಾರೆಸ್ಟ್’ ಎಂದು ಅರ್ಥ.

ಸಿನಿಮಾದ ಕತೆಗೆ ಇದು ಸೂಟ್ ಆಗುತ್ತೆ ಎಂಬ ಕಾರಣಕ್ಕೆ ರಿಷಬ್ ಶೆಟ್ಟಿ ಈ ಹೆಸರು ಸಿನಿಮಾಕ್ಕೆ ಈ ಹೆಸರು ಇಟ್ಟಿದ್ದಾರೆ. ಅಂದಹಾಗೆ ಈ ಹೆಸರನ್ನು ಇಟ್ಟಿದ್ದು ಅವರಲ್ಲ. ಅವರ ಗೆಳೆಯ.

ಸಿನಿಮಾಕ್ಕೆ ‘ಕಾಂತಾರ’ ಹೆಸರು ಸೂಚಿಸಿದ್ದು ರಿಷಬ್ ಶೆಟ್ಟಿಯ ಗೆಳೆಯ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ. ರಿಷಬ್ ಶೆಟ್ಟಿ, ‘ಕಾಂತಾರ’ ಸಿನಿಮಾದ ಕತೆಯನ್ನು ರಾಜ್ ಬಿ ಶೆಟ್ಟಿಗೆ ಹೇಳಿದಾಗ ಅವರಿಗೆ ‘ಕಾಂತಾರ’ ಎಂಬ ಹೆಸರು ಹೊಳೆಯಿತಂತೆ. ಹಾಗಾಗಿ ಅವರು ಈ ಹೆಸರು ಸೂಚಿಸಿದ್ದಾರೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಕೆಲ ದೃಶ್ಯಗಳ ನಿರ್ದೇಶನದಲ್ಲಿಯೂ ರಿಷಬ್‌ಗೆ ಸಹಾಯ ಮಾಡಿದ್ದಾರೆ. ಅಂದಹಾಗೆ ರಿಷಬ್ ಶೆಟ್ಟಿಯ ಮತ್ತೊಬ್ಬ ಆಪ್ತ ಗೆಳೆಯ, ನಟ ನಿರ್ದೇಶಕ ರಕ್ಷಿತ್ ಶೆಟ್ಟಿಯೂ ಒಂದು ಹೆಸರು ಸೂಚಿಸಿದ್ದಾರೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಈ ಕಥೆಯನ್ನು ರಕ್ಷಿತ್ ಶೆಟ್ಟಿಗೂ ಹೇಳಿದ್ದಾರೆ. ಕತೆ ಕೇಳಿದ ರಕ್ಷಿತ್ ಶೆಟ್ಟಿಗೆ ಇದು ದಂತಕತೆ ರೀತಿ ಅನಿಸಿತು. ಹಾಗಾಗಿ ಈ ಸಿನಿಮಾದ ಪಾತ್ರ ದಂತಕತೆಯ ಮಾದರಿಯಿದೆ. ಇಡೀಯ ಕತೆಯೇ ಒಂದು ದಂತಕತೆಯ ಮಾದರಿಯಲ್ಲಿದೆ ಎಂದರಂತೆ. ಅವರ ಸಲಹೆಯನ್ನೂ ಸ್ವೀಕರಿಸಿರುವ ರಿಷಬ್ ಶೆಟ್ಟಿ, ‘ಕಾಂತಾರ; ಒಂದು ದಂತಕತೆ’ ಎಂದು ಹೆಸರನ್ನು ಹೇಳಿದ್ದಾರಂತೆ.

“ಈ ಸಿನಿಮಾದಲ್ಲಿ ನಾಯಕ-ನಾಯಕಿ, ಮಾಸ್ ಇಮೇಜ್‌ಗಳು ಮುಖ್ಯವಲ್ಲ, ಸಿನಿಮಾದ ಅಂತರಾತ್ಮವೇ ಈ ಸಿನಿಮಾದ ಜೀವಾಳ. ಈ ಸಿನಿಮಾದಲ್ಲಿ ಕಥೆಯೇ ನಾಯಕ. ಹಾಗಾಗಿ ಈ ಕಥೆಯ ಭಾವವನ್ನು ಹೇಳುವ ಹೆಸರು ಮುಖ್ಯವಾಗಿ ನಮಗೆ ಬೇಕಿತ್ತು. ಕೊನೆಗೂ ಅಂಥಹಾ ಒಳ್ಳೆಯ ಹೆಸರೇ ನಮಗೆ ದೊರಕಿತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

 
 
 
 
 
 
 
 
 

Leave a Reply